ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಆತ್ಮವಿಶ್ವಾಸಕ್ಕೆ ಹತ್ತು ಸೂತ್ರಗಳು

Last Updated 20 ಸೆಪ್ಟೆಂಬರ್ 2022, 6:10 IST
ಅಕ್ಷರ ಗಾತ್ರ

ಆತ್ಮವಿಶ್ವಾಸ ಜೀವನದ ಅಗತ್ಯಗಳಲ್ಲಿ ಒಂದು. ಬದುಕಿನ ಪಯಣದಲ್ಲಿ ಮುನ್ನಡೆಯುವುದಕ್ಕಾಗಲೀ, ಸವಾಲುಗಳನ್ನು ಸ್ವೀಕರಿಸುವುದಕ್ಕಾಗಲೀ, ಗಮ್ಯಗಳನ್ನು ತಲುಪುವುದಕ್ಕಾಗಲೀ, ಮುಂದಿನ ಗುರಿಗಳನ್ನು ನಿರ್ಧರಿಸುವುದಕ್ಕಾಗಲೀ ಆತ್ಮವಿಶ್ವಾಸ ಆವಶ್ಯಕ. ಅಹಂಕಾರವನ್ನು ಆತ್ಮವಿಶ್ವಾಸವೆಂದು ಭ್ರಮಿಸುವವರು ಮತ್ತು ಆತ್ಮವಿಶ್ವಾಸದ ಕೊರತೆಯನ್ನು ವಿನಯವೆಂದು ಭಾವಿಸುವವರು ಸಾಕಷ್ಟಿದ್ದಾರೆ. ಆತ್ಮವಿಶ್ವಾಸ ಇತರರ ಮುಂದೆ ತೋರ್ಪಡಿಕೆಗಿಂತ ನಮ್ಮ ಆಂತರ್ಯಕ್ಕೆ ತಿಳಿದಿರಬೇಕಾದ ಸತ್ಯ. ಅದು ಜನ್ಮತಃ ಬರಬೇಕೆಂದೇನೂ ಇಲ್ಲ. ಆತ್ಮವಿಶ್ವಾಸವನ್ನು ಪ್ರಯತ್ನಗಳಿಂದ, ತರಬೇತಿಯಿಂದ ರೂಢಿಸಿಕೊಳ್ಳ ಬಹುದು. ಧೃಢವಾದ ಆತ್ಮವಿಶ್ವಾಸವು ಜೀವನದ ಹಾದಿಯನ್ನೇ ಬದಲಿಸಬಲ್ಲದು. ಈ ದಿಶೆಯಲ್ಲಿ ಕೆಲವು ಸೂತ್ರಗಳನ್ನು ಅನುಸರಿಸಬಹುದು.

1. ಧನಾತ್ಮಕ ಚಿಂತನೆಗಳು ಋಣಾತ್ಮಕ ಚಿಂತನೆಗಳು ಆತ್ಮವಿಶ್ವಾಸದ ಹಾದಿಯಲ್ಲಿ ತೊಡಕಾಗಬಹುದು. ಇದನ್ನು ನಿಧಾನವಾಗಿ ಧನಾತ್ಮಕವಾಗಿ ಬದಲಾಯಿಸಬೇಕು. ‘ನನ್ನಿಂದಾಗದು’ ಎನ್ನುವುದನ್ನು ‘ಪ್ರಯತ್ನಿಸುತ್ತೇನೆ’ ಎಂಬ ಹಂತಕ್ಕೆ, ‘ಸೋತುಹೋಗುತ್ತೇನೆ’ ಎಂಬ ಭಾವವನ್ನು ‘ಪ್ರಯತ್ನಿಸಿದರೆ ಸಫಲನಾಗಬಹುದು’ ಎನ್ನುವ ಸ್ಥಿತಿಗೆ ಕೊಂಡೊಯ್ಯಬೇಕು. ಪ್ರತಿದಿನವೂ ಕನಿಷ್ಠ ಒಂದು ಧನಾತ್ಮಕ ಚಿಂತನೆಯನ್ನು ಮಾಡುತ್ತೇನೆಂದು ನಿರ್ಧರಿಸಿ, ಪಾಲಿಸಬೇಕು. ಮನಸ್ಸಿನಲ್ಲಿ ಋಣಾತ್ಮಕ ಚಿಂತನೆಗಳು ಮೂಡಿದಾದ ಗಮನವನ್ನು ಬೇರೆಡೆಗೆ ಹರಿಸಬೇಕು; ಧನಾತ್ಮಕ ಚಿಂತನೆಗಳನ್ನು ಘನೀಕರಿಸಬೇಕು. ಇದರಿಂದ ಮನಸ್ಸಿನಲ್ಲಿ ಆತ್ಮವಿಶ್ವಾಸದ ಕೇಂದ್ರಬಿಂದು ಮೂಡಿದಂತಾಗುತ್ತದೆ. ಈ ಕಾಲಘಟ್ಟದಲ್ಲಿ ನಮ್ಮನ್ನು ಪ್ರೋತ್ಸಾಹಿಸುವ ಕುಟುಂಬವರ್ಗ ಮತ್ತು ಸ್ನೇಹಿತರ ಜೊತೆಯಲ್ಲಿ ಬೆರೆಯುವುದು ಒಳ್ಳೆಯ ವಿಧಾನ; ಅನಗತ್ಯ ಟೀಕಾಕಾರರಿಂದ ದೂರವಿರುವುದು ಸೂಕ್ತ.

2.ಸೋಲು-ಗೆಲುವು ಜೀವನದಲ್ಲಿ ಸೋಲು-ಗೆಲುವುಗಳು ಜೊತೆಜೊತೆಯಾಗಿಯೇ ಹೋಗುತ್ತವೆ. ಗೆಲುವುಗಳನ್ನು ಮರೆತರೂ, ಸೋಲುಗಳು ಹೆಚ್ಚು ಕಾಲ ನೆನಪಿರುತ್ತವೆ. ಮುನ್ನಡೆಯುವ ಮನಃಸ್ಥಿತಿಯವರು ಸೋಲುಗಳು ಕಲಿಸುವ ಪಾಠಗಳನ್ನು ಮಾತ್ರ ಕಾಪಿಟ್ಟುಕೊಳ್ಳುತ್ತಾರೆ. ಆದರೆ ಋಣಾತ್ಮಕ ಚಿಂತನೆಯವರು ಸೋಲಿನ ಅನಗತ್ಯ ವಿವರಗಳನ್ನು ಮರೆಯಲಾಗದೆ ಕೊರಗುತ್ತಾರೆ. ಸೋಲಿನ ಭೌತಿಕ ಕುರುಹುಗಳನ್ನು ದೃಷ್ಟಿಯಿಂದ ದೂರ ಮಾಡುವುದು ಧನಾತ್ಮಕ ಚಿಂತನೆಯಲ್ಲಿ ಪರಿಣಾಮಕಾರಿ. ಸೋಲನ್ನು ಸದಾ ನೆನಪಿಸುವ ಯಾವ್ಯಾವ ಸಂಗತಿಗಳನ್ನು ಮರೆಯಬೇಕೆಂದು ಪಟ್ಟಿ ಮಾಡುವುದು ಸಹಾಯಕ. ಸೋಲಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯಬೇಕು. ಅಂತೆಯೇ, ವಿಜಯದ ಕುರುಹುಗಳನ್ನು ಕಣ್ಣಿಗೆ ಕಾಣುವಂತೆ ಇಡುವುದು ಒಳ್ಳೆಯದು. ಆದರೆ, ಆ ಗೆಲುವಿನ ನಶೆಯಲ್ಲೇ ಉಳಿಯಬಾರದು.

3.ಬಲ-ದೌರ್ಬಲ್ಯ ಪ್ರತಿಯೊಬ್ಬರಿಗೂ ಕೆಲವು ಬಲಗಳು, ದೌರ್ಬಲ್ಯಗಳು ಇರುತ್ತವೆ. ಅವುಗಳ ಪರಿಚಯ ಇರಬೇಕು. ‘ನಮ್ಮ ಕೌಶಲಗಳ ಬಗೆ ಹೆಮ್ಮೆ ಇರಬೇಕು; ಹಮ್ಮು ಇರಬಾರದು’ ಎನ್ನುವ ಮಾತಿದೆ. ಬರವಣಿಗೆ, ನೃತ್ಯ, ಚಿತ್ರಕಲೆ, ಸಂಗೀತ, ವಾಕ್ಪಟುತ್ವ– ಹೀಗೆ ನಮ್ಮ ಬಲ ಯಾವುದೋ ಅದನ್ನು ಮತ್ತಷ್ಟು ಬಲಗೊಳಿಸುವತ್ತ ದೈನಂದಿನ ಪ್ರಯತ್ನ ಇರಬೇಕು. ಅದಕ್ಕೆ ಸಂಬಂಧಿಸಿದ ಇತರ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಆಗ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರ ಪರಿಚಯವಾಗುತ್ತದೆ. ಇದರಿಂದ ನಮ್ಮ ಕೌಶಲಕ್ಕೆ ಹೊಸ ಆಯಾಮಗಳು ದೊರೆತಂತಾಗುತ್ತದೆ. ಆ ವಿಷಯದಲ್ಲಿ ಮುಂದುವರೆದಷ್ಟೂ ಆತ್ಮವಿಶ್ವಾಸ ವೃದ್ಧಿಸುತ್ತದೆ. ಅದೇ ರೀತಿ ನಮ್ಮ ದೌರ್ಬಲ್ಯಗಳ ಪರಿಚಯವೂ ಇರಬೇಕು. ಅದನ್ನು ಪಟ್ಟಿ ಮಾಡಿ, ಒಂದೊಂದೇ ಅಂಶವನ್ನು ಬದಲಾಯಿಸಲು ನಾವು ಏನು ಮಾಡಬಹುದೆಂಬ ಆಲೋಚನೆಯೂ ದೌರ್ಬಲ್ಯಗಳ ಮೇಲೆ ನಮ್ಮ ನಿಯಂತ್ರಣವನ್ನು ಬೆಳೆಸುತ್ತದೆ. ಕೆಲವೊಮ್ಮೆ ಅಕಾರಣವಾಗಿ ನಾವು ದೌರ್ಬಲ್ಯವೆಂದು ಭಾವಿಸಿದ ಅಂಶ ಹಾಗಲ್ಲವೆಂದು ಅರಿತಾಗ ಆತ್ಮವಿಶ್ವಾಸ ಏರುತ್ತದೆ.

4. ಅಭಿನಂದನೆಯ ಸ್ವೀಕಾರ ಆತ್ಮವಿಶ್ವಾಸದ ಕೊರತೆ ಇರುವವರು ಹೊಗಳಿಕೆಯನ್ನು ಸಮಸ್ಥಿತಿಯಲ್ಲಿ ಸ್ವೀಕರಿಸಲಾರರು; ತಮಗೆ ಅಭಿನಂದನೆ ಸಲ್ಲಿಸುವವರನ್ನು ಅನುಮಾನದಿಂದಲೇ ನೋಡುತ್ತಾರೆ. ಈ ಮನಃಸ್ಥಿತಿಯಿಂದ ಹೊರಗೆ ಬರುವುದು ಸೂಕ್ತ. ನಮ್ಮ ಕುರಿತಾಗಿ ಒಳ್ಳೆಯ ಮಾತುಗಳನ್ನಾಡಿದವರಿಗೆ ನಗುಮೊಗದೊಡನೆ ಧನ್ಯವಾದಗಳನ್ನು ಹೇಳಿದರೆ ಅದನ್ನು ನೀಡಿದವರಿಗೂ ಸಾರ್ಥಕ ಎನಿಸುತ್ತದೆ. ಆತ್ಮವಿಶ್ವಾಸ ಬೆಳೆಯಲು ಇದೊಂದು ದಾರಿ. ನಮ್ಮ ಬಗ್ಗೆ ನಮಗೇ ಅನುಮಾನವಿದ್ದಾಗ ಒಳ್ಳೆಯ ಭಾವ ಮೂಡುವುದಿಲ್ಲ. ಹಾಗೆಯೇ, ಸುಳ್ಳು ಮಾತುಗಳನ್ನು ಆಡುತ್ತಾ, ನಮ್ಮಲ್ಲಿ ಇಲ್ಲದ ಗುಣಗಳನ್ನು ನಮಗೆ ಆರೋಪಿಸುವವರನ್ನು ಸಾಧ್ಯವಾದಷ್ಟೂ ದೂರ ಇಡಬೇಕು. ಇದನ್ನು ಮಾಡಲು ನಮ್ಮ ಬಲ-ದೌರ್ಬಲ್ಯಗಳ ಬಗ್ಗೆ ಸರಿಯಾದ ಅರಿವು ಇರುವುದು ಮುಖ್ಯವಾಗುತ್ತದೆ. ಇಲ್ಲವಾದರೆ ಸುಳ್ಳು ಹೊಗಳಿಕೆಯ ಹೊನ್ನಶೂಲಕ್ಕೆ ಏರಿದಂತಾಗುತ್ತದೆ.

5.ಭೀತಿ-ಆತಂಕ ಬದುಕಿನಲ್ಲಿ ಭೀತಿ, ಆತಂಕಗಳು ಸಹಜ. ನಮ್ಮ ಹಿಂಜರಿಕೆಗಳನ್ನು ಮೀರುವುದು ಬೆಳವಣಿಗೆಯ ಚಿಹ್ನೆ. ಇದು ಏಕಾಏಕಿ ಆಗುವಂಥದ್ದಲ್ಲ. ಇದಕ್ಕೆ ಸಮಯ ನೀಡಬೇಕು. ಆರಂಭದ ಹಿನ್ನಡೆಗಳಿಗೆ ಸಿದ್ಧರಾಗಿರಬೇಕು. ಈ ಹಾದಿಯಲ್ಲಿ ಗೆಲುವು ಮತ್ತು ಅನುಭವ ಎಂಬ ಎರಡು ಆಯ್ಕೆಗಳು ಇರುತ್ತವೆ. ಯಾವುದನ್ನೂ ಸೋಲು ಎಂದು ಭಾವಿಸದಿದ್ದರೆ, ಆಯಾ ಪ್ರಸಂಗದ ಅನುಭವ ನಮ್ಮನ್ನು ಮುಂದಿನ ಪ್ರಯತ್ನಕ್ಕೆ ಸಜ್ಜಾಗಿಸುತ್ತದೆ. ಕೈಯಿಟ್ಟ ಕೆಲಸ ಏಕೆ ಆಗಲಿಲ್ಲ? ನಮ್ಮ ವಿಧಾನವನ್ನು ಬದಲಾಯಿಸಿಕೊಳ್ಳಬಹುದೇ? ಕೆಲಸ ಸಾಧಿಸಲು ಯಾವ ಮಾರ್ಗಗಳಿವೆ? ಈ ಮಾರ್ಗಗಳ ಪೈಕಿ ನಮ್ಮ ವೈಯಕ್ತಿಕ ಕೌಶಲಕ್ಕೆ ಯಾವ ಹಾದಿ ಸೂಕ್ತ? ಈ ಮೊದಲಾದ ಪ್ರಶ್ನೆಗಳು ಅನುಭವದ ಮೂಲಕ ಬರುತ್ತವೆ. ಇಂತಹ ಒಳನೋಟಗಳು ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ. ಈ ನಿಟ್ಟಿನಲ್ಲಿ ಬಹಳ ತಾಳ್ಮೆ ಬೇಕು. ಆರಂಭದ ವೈಫಲ್ಯಗಳ ಬಗ್ಗೆ ಕೊರಗಿ, ದುಡುಕಿನ ನಿರ್ಧಾರ ತೆಗೆದುಕೊಳ್ಳುವ ವಿರುದ್ಧ ಮನಸ್ಸನ್ನು ಸಜ್ಜಾಗಿಸಬೇಕು.

6.ಏಕಾಗ್ರತೆಯ ಅಗತ್ಯ ಹೊಸ ಪ್ರಯತ್ನದ ಸಮಯದಲ್ಲಿ ಸಾಕಷ್ಟು ಕಾಲಾವಕಾಶಕ್ಕೆ ಎಡೆಯಿರಬೇಕು. ಹತ್ತಾರು ಕೆಲಸಗಳ ನಡುವೆ ಅರೆಮನಸ್ಕರಾಗಿ ಮಾಡುವ ಪ್ರಯತ್ನಗಳು ವಿಫಲವಾಗುವ ಸಾಧ್ಯತೆಗಳೇ ಅಧಿಕ. ಸಾಧನೆಯೆಂಬುದು ಸಮಯ ಮತ್ತು ಪ್ರಯತ್ನಗಳನ್ನು ಬಯಸುತ್ತದೆ. ಅವುಗಳನ್ನು ನೀಡಲು ಸಾಧ್ಯವಾಗದಿದ್ದರೆ, ಪ್ರಯತ್ನದಿಂದ ಪಲಾಯನ ಮಾಡದೇ, ಸೂಕ್ತವಾದ ಸಮಯಕ್ಕೆ ವರ್ಗಾಯಿಸಬೇಕು. ಸಬೂಬುಗಳಿಂದ ಇತರರನ್ನು ನಂಬಿಸಬಹುದೇ ಹೊರತು, ನಮ್ಮ ಮನಸ್ಸನ್ನಲ್ಲ. ಹಿಮ್ಮೆಟ್ಟುವ ಪ್ರಕ್ರಿಯೆ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.

7.ಹೋಲಿಕೆಯ ವೈಫಲ್ಯ ‘ಹೋಲಿಕೆ ಮಾಡಿಕೊಳ್ಳುವವರಿಗೆ ಸಂತೃಪ್ತಿಯಿಲ್ಲ’ ಎನ್ನುವ ಮಾತಿದೆ. ನೆನ್ನೆಗಿಂತ ನಾಳೆ ಚಂದವಾಗಿರಬೇಕೆಂದರೆ ನಮಗೆ ನಾವೇ ಹೋಲಿಕೆಯಾಗಬೇಕು. ಪ್ರತಿಯೊಬ್ಬರ ಜೀವನದ ಹಾದಿ, ಸವಾಲುಗಳು ವಿಭಿನ್ನ. ಹೀಗಾಗಿ, ಯಾರದ್ದೋ ಸಾಧನೆಗೆ ಮತ್ತೊಬ್ಬರ ಬೆಳವಣಿಗೆ ಹೋಲಿಕೆಯಾಗುವುದಿಲ್ಲ. ನಮಗೇನು ಬೇಕೆಂಬುದು ನಮಗೆ ತಿಳಿದಿರಬೇಕು. ಅದನ್ನು ಇತರರ ಜೊತೆಗೆ ಹೋಲಿಸುವುದು ಅರ್ಥಹೀನ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಆತ್ಮಾವಲೋಕನ ಸಹಕಾರಿ. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಮಂದಿ ತಮಗೆ ಬೇಕಾದ ವಿಷಯಗಳನ್ನು ಮಾತ್ರ ಪ್ರಸ್ತಾಪಿಸುತ್ತಾರೆ. ಅದನ್ನು ನೋಡಿ ಅವರ ಬಗ್ಗೆ ಏನೇನೋ ಕಲ್ಪಿಸಿಕೊಂಡು, ಅವರ ಹೋಲಿಕೆಯಲ್ಲಿ ನಮ್ಮ ಕೊರತೆಗಳನ್ನು ಕುರಿತು ಕೊರಗುವುದು ಹಾಸ್ಯಾಸ್ಪದವಾಗುತ್ತದೆ.

8. ತಪ್ಪುಗಳ ನಿರ್ವಹಣೆ ತಪ್ಪು ಮಾಡದವರು ಯಾರೂ ಇಲ್ಲ. ಆದರೆ ತಪ್ಪನ್ನು ನಾವು ಹೇಗೆ ನಿರ್ವಹಿಸುತ್ತೇವೆಂಬುದು ಮುಖ್ಯ. ತಪ್ಪನ್ನು ಗುರುತಿಸಿ, ನಮ್ಮ ತಪ್ಪಿನಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಅವರ ಕ್ಷಮೆ ಬೇಡಿ, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದು, ಮುಂದಿನ ಬಾರಿ ಇಂತಹ ತಪ್ಪಾಗದಂತೆ ಎಚ್ಚರ ವಹಿಸುವುದು ಆತ್ಮವಿಶ್ವಾಸದ ವೃದ್ಧಿಗೆ ಸಹಕಾರಿ. ತಪ್ಪನ್ನೇ ಕುರಿತಾಗಿ ಆಲೋಚಿಸುತ್ತಾ ಕೊರಗುವುದು ತಪ್ಪನ್ನು ಹಲವಾರು ಬಾರಿ ಮರುಕಳಿಸಿದಂತೆ. ಹಿಂದೆ ಮಾಡಿದ ತಪ್ಪು ನಮ್ಮ ಭವಿಷ್ಯದ ಸೂಚಕವಲ್ಲ. ಅದನ್ನು ಸರಿತಿದ್ದುವ ನೂರಾರು ಸಾಧ್ಯತೆಗಳು ಜೀವನದ ಉದ್ದಕ್ಕೂ ದೊರೆಯುತ್ತವೆ.

9.ಪರಿಪೂರ್ಣತೆಯೆಂಬ ಗೀಳು ಪರಿಪೂರ್ಣತೆ ಚಂದವೆನಿಸಿದರೂ ಅದು ಗೀಳಾಗಬಾರದು. ಯಾವುದೇ ಸಂಗತಿ ಗೀಳಿನ ಸ್ವರೂಪ ಪಡೆದರೆ ಹಲವಾರು ಅವಕಾಶಗಳು ಕೈತಪ್ಪಿ ಹೋಗಬಹುದು. ಮಾಡುವ ಕೆಲಸವನ್ನು ತಪ್ಪುಗಳಿಗೆ ಆಸ್ಪದವಿಲ್ಲದಂತೆ ತೃಪ್ತಿಕರವಾಗಿ ಮಾಡಿದರೆ ಸಾಕಾಗುವಾಗ ಅದಕ್ಕೆ ಪರಿಪೂರ್ಣತೆಯ ಅಗತ್ಯ ಬರುವುದಿಲ್ಲ. ಪರಿಪೂರ್ಣತೆಯ ಗೀಳು ಆತ್ಮವಿಶ್ವಾಸದ ಸಾಧನೆಗೆ ಅಡ್ಡಿಯಾಗಬಹುದು; ಕೌಟುಂಬಿಕ ಮತ್ತು ವೃತ್ತಿ ಸಂಬಂಧಗಳನ್ನು ಹದಗೆಡಿಸಬಹುದು.

10.ಕೃತಜ್ಞತೆ ನಮ್ಮ ಬೆಂಬಲಕ್ಕೆ ನಿಲ್ಲುವವರ ಬಗ್ಗೆ ಪ್ರಾಮಾಣಿಕ ಕೃತಜ್ಞತಾಭಾವ ಇರುವುದು ಮುಖ್ಯ. ಇದರಿಂದ ಮನಸ್ಸಿನ ಶಾಂತಿ
ಬೆಳೆಯುತ್ತದೆ. ಜೀವನದ ಸೊಬಗನ್ನು ಬೆಳೆಸುತ್ತಿರುವ ಸ್ನೇಹಿತರ, ಆತ್ಮೀಯರ ಪಟ್ಟಿ ಮಾಡುವುದರಿಂದ ನಮ್ಮ ನೆರವಿಗೆ ನಿಲ್ಲಬಲ್ಲವರ ಬಗ್ಗೆ ಕೃತಜ್ಞತೆ ಮೂಡುತ್ತದೆ. ಇದು ಮನಸ್ಸಿನ ಸ್ಥೈರ್ಯವನ್ನು ಹಿಗ್ಗಿಸುತ್ತದೆ. ಆತ್ಮವಿಶ್ವಾಸ ಬೆಳೆಯಲು ಇದೊಂದು ಪ್ರಮುಖ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT