ಬುಧವಾರ, ಸೆಪ್ಟೆಂಬರ್ 23, 2020
27 °C

ಹೆಲ್ತ್ ಟಿಪ್ಸ್‌ | ಗರ್ಭಸ್ರಾವ: ಸೋಂಕಾದೀತು, ಜೋಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾನಗಲ್‌ ಸಮೀಪದ ಹಳ್ಳಿಯ ಪ್ರಿಯಾ (ಹೆಸರು ಬದಲಿಸಲಾಗಿದೆ)ಗೆ ತಾನು ಗರ್ಭಿಣಿಯೆಂದು ತಿಳಿದು ಬಂದಾಗ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ, ಮೂರನೇ ತಿಂಗಳಲ್ಲಿ ಏನೋ ಸಮಸ್ಯೆಯಾಗಿ ಸ್ರಾವ ಕಾಣಿಸಿಕೊಂಡಿತು. ವೈದ್ಯರಿಗೆ ಫೋನ್‌ ಮಾಡಿದಾಗ ಕೊರೊನಾ ಸೋಂಕು ಜಾಸ್ತಿ ಇರುವ ಕಾರಣ ಕ್ಲಿನಿಕ್‌ ಬಂದ್‌ ಮಾಡಿರುವುದಾಗಿ ಉತ್ತರಿಸಿದ ವೈದ್ಯರು, ಔಷಧದ ಹೆಸರೊಂದನ್ನು ಹೇಳಿ ತೆಗೆದುಕೊಳ್ಳುವಂತೆ ತಿಳಿಸಿದರು.

ಆದರೆ, ಆ ಔಷಧ ಯಾವುದೇ ಪರಿಣಾಮ ಬೀರದೆ 3–4 ದಿನಗಳಲ್ಲಿ ಆಕೆಗೆ ಗರ್ಭಪಾತವಾಯಿತು. ಸದ್ಯಕ್ಕೆ ಪ್ರಿಯಾಳಿಗೆ ಸ್ವಲ್ಪ ನಿಃಶಕ್ತಿ ಬಿಟ್ಟರೆ ಬೇರೆ ಯಾವುದೇ ತೊಂದರೆಯಿಲ್ಲ. ಆದರೆ, ಹೆಚ್ಚಿನ ರಕ್ತಸ್ರಾವ ಅಥವಾ ಸೋಂಕಾಗಿ ಆಕೆಯ ಜೀವಕ್ಕೆ ಕಂಟಕವಾಗಿದ್ದರೆ...

ಈ ಕೋವಿಡ್‌–19 ಸಂದರ್ಭದಲ್ಲಿ ಇಂತಹ ಸಮಸ್ಯೆ ಎದುರಿಸಿದ ಯುವತಿಯರೆಷ್ಟೋ! ಪಟ್ಟಣಗಳಲ್ಲಿ ಮಾತ್ರವಲ್ಲ, ದೊಡ್ಡ ನಗರಗಳಲ್ಲಿ ಕೂಡ ಇಂತಹ ತೊಂದರೆಗಳಿಗೆ ಕ್ಲಿನಿಕ್‌ಗೆ, ಆಸ್ಪತ್ರೆಗಳಿಗೆ ಭೇಟಿ ನೀಡಲು ಕಷ್ಟವಾಗುತ್ತಿದೆ. ಪ್ರಸೂತಿ ತಜ್ಞೆ ಡಾ.ಡಿ. ಸ್ನೇಹಲತಾ ಪ್ರಕಾರ, ಶೇಕಡ 20ರಷ್ಟು ಗರ್ಭಿಣಿಯರಿಗೆ ಗರ್ಭಸ್ರಾವವಾಗುವುದು ಸಾಮಾನ್ಯ. ಅಸಹಜ ಕ್ರೋಮೊಸೋಮ್‌ನಿಂದಾಗಿ ಇದು ಸಂಭವಿಸಬಹುದು. ಗರ್ಭಪಾತದಿಂದ ಉಂಟಾಗುವ ನೋವು, ಇತರ ಆರೋಗ್ಯ ಸಮಸ್ಯೆಗಳು ಹಲವು ವಾರಗಳ ಕಾಲ ಇರಬಹುದು. ಸೋಂಕಾದರೆ ಇನ್ನೂ ಕಷ್ಟ.

ಗರ್ಭಪಾತವಾದರೆ ಭ್ರೂಣದ ತುಣುಕುಗಳು ಕೆಲವೊಮ್ಮೆ ಸಹಜವಾಗಿಯೇ ಹೊರಹೋಗುತ್ತವೆ. ಕೆಲವೊಮ್ಮೆ ಮಾತ್ರೆ (ಜನನಾಂಗದ ಮೂಲಕ ತೂರಿಸುವ) ತೆಗೆದುಕೊಳ್ಳಬೇಕಾಗುತ್ತದೆ ಅಥವಾ ಡಿ ಆ್ಯಂಡ್‌ ಸಿ ಮೂಲಕ ತುಣುಕುಗಳನ್ನು ಪೂರ್ತಿಯಾಗಿ ಹೊರ ತೆಗೆಯಲಾಗುವುದು. ಇದು ವೈದ್ಯಕೀಯವಾಗಿ ಸುರಕ್ಷಿತವಾಗಿದ್ದು, ಗ್ರರ್ಭಪಾತದ ಪ್ರಕ್ರಿಯೆ ಹೆಚ್ಚು ಸಮಸ್ಯೆಯಿಲ್ಲದೇ ಪೂರ್ಣಗೊಳ್ಳುತ್ತದೆ.

ಆದರೆ, ಡಿ ಆ್ಯಂಡ್‌ ಸಿ ಮಾಡಿಸಿಕೊಳ್ಳಲು ವೈದ್ಯರು ಲಭ್ಯರಿರಬೇಕು. ಕ್ಲಿನಿಕ್‌ನಲ್ಲಿ ಸುರಕ್ಷಿತ ವಾತಾವರಣವಿರಬೇಕು. ಈಗಂತೂ ಕೊರೊನಾ ಸೋಂಕಿನ ಭಯದಿಂದಾಗಿ ಕೆಲವರು ಮನೆಯಲ್ಲೇ ನೋವು ಅನುಭವಿಸುವಂತಹ ಪರಿಸ್ಥಿತಿಯಿದೆ.

ಗರ್ಭಿಣಿಯೆಂದು ತಿಳಿದು ಬಂದಾಗ ಖುಷಿಯ ತುತ್ತತುದಿಯಲ್ಲಿರುವ ಯುವತಿಗೆ ಭ್ರೂಣವನ್ನು ಕಳೆದುಕೊಂಡಾಗ ಉಂಟಾಗುವ ಮಾನಸಿಕ, ದೈಹಿಕ ನೋವು ಹೇಳಲಸಾಧ್ಯ. ಅದರಲ್ಲೂ ಈಗಿನ ಪರಿಸ್ಥಿತಿಯಲ್ಲಿ ಇಂತಹ ನೋವಿನ ಜೊತೆ ಸರಿಯಾದ ವೈದ್ಯಕೀಯ ಸವಲತ್ತು ಸಿಗದೇ ಸೋಂಕು ಮತ್ತಿತರ ಸಮಸ್ಯೆ ಶುರುವಾದರೆ ಎಂಬ ಆತಂಕ. ಡಿ ಆ್ಯಂಡ್‌ ಸಿಯಿಂದ ಭ್ರೂಣದ ತುಣುಕುಗಳನ್ನು ಹೊರತೆಗೆದು ಸ್ವಚ್ಛಗೊಳಿಸದಿದ್ದರೆ ಗರ್ಭಾಶಯಕ್ಕೆ ಸೋಂಕು ಸಂಭವಿಸಿ, ಕೆಲವೊಮ್ಮೆ ಸಂತಾನಹೀನತೆ ಸಮಸ್ಯೆ ಎದುರಾಗಬಹುದು.

ವೈದ್ಯರು ಹೇಳಿದ ಮುನ್ನೆಚ್ಚರಿಕೆಗಳನ್ನು ಪಾಲಿಸಿ. ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿರಿ. ಅಪಾಯದ ಮುನ್ಸೂಚನೆ ಇದ್ದರೆ ಸುರಕ್ಷಿತ ಕ್ಲಿನಿಕ್‌ಗಳನ್ನು ಮೊದಲೇ ಗುರುತಿಸಿಟ್ಟುಕೊಳ್ಳಿ. ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು