ಭಾನುವಾರ, ಜೂಲೈ 5, 2020
22 °C

ತಂಬಾಕು ವ್ಯಸನವೂ, ಕೊರೊನಾ ಸೋಂಕೂ

ಡಾ. ಸೌಮ್ಯ ಕೆ.ವಿ. Updated:

ಅಕ್ಷರ ಗಾತ್ರ : | |

prajavani

ತಂಬಾಕು ಉತ್ಪನ್ನಗಳ ಸೇವನೆ ಯಾವತ್ತೂ ಅಪಾಯಕಾರಿ. ಈ ಚಟವಿದ್ದವರಿಗೆ ಕೊರೊನಾ ಸೋಂಕು ತಗುಲಿದರೆ ಅದು ಮಾರಣಾಂತಿಕವಾಗಬಹುದು. ವಿಶ್ವ ತಂಬಾಕು ವಿರೋಧಿ ದಿನ (ನಾಳೆ)ದ ಸಂದರ್ಭದಲ್ಲಿ ಈ ಆರೋಗ್ಯ ಸಮಸ್ಯೆಗಳತ್ತ ಒಂದು ಕಿರುನೋಟ.

ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 80 ಲಕ್ಷದಷ್ಟು ಜನರು ತಂಬಾಕು ಉತ್ಪನ್ನಗಳನ್ನು ಸೇವಿಸಿ ಉಂಟಾದ ಕಾಯಿಲೆಗಳಿಂದ ಸಾಯುತ್ತಾರೆ. ಇದರಲ್ಲಿ 70 ಲಕ್ಷ ಜನರಿಗೆ ನೇರವಾಗಿ ತಂಬಾಕು ಚಟವಿದ್ದರೆ, ಉಳಿದವರು ಬೇರೆಯವರು ಸಿಗರೇಟ್‌ ಸೇದಿ ಬಿಟ್ಟ ಹೊಗೆಯಿಂದ ಪರೋಕ್ಷವಾಗಿ ತೊಂದರೆಗೊಳಗಾಗುತ್ತಿದ್ದಾರೆ. ಈಗಂತೂ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಧೂಮ
ಪಾನ ಚಟವಿದ್ದವರು ಹೆಚ್ಚಿನ ಪ್ರಮಾಣದ ಅಪಾಯಕ್ಕೆ ಸಿಲುಕಿದ್ದಾರೆ. ಧೂಮಪಾನದಿಂದ ಶ್ವಾಸಕೋಶ ದುರ್ಬಲವಾಗಿ ಇಂಥವರು ಕೋವಿಡ್‌ ಪಿಡುಗಿಗೆ ಒಳಗಾದರೆ ಸಾವು ಸಂಭವಿಸುವ ಅಪಾಯ ಅಧಿಕ.

ಸೋಂಕು ಹರಡುವುದು ಹೇಗೆ?

* ಬೀಡಿ, ಸಿಗರೇಟ್‌, ಚುಟ್ಟಾಗಳನ್ನು ಸೇದುವಾಗ ಕೈಗಳಿಂದ ಬಾಯಿಗೆ ಸೋಂಕು ಹರಡಬಹುದು.

* ಅಗಿಯುವ ತಂಬಾಕಿನಿಂದ ಬಾಯಲ್ಲಿ ಲಾಲಾರಸದ ಉತ್ಪತ್ತಿ ಅಧಿಕವಾಗಿ ಉಗಿಯಲೇಬೇಕೆಂಬ ಒತ್ತಡವಾಗುವುದರಿಂದ ಬೇರೆಯವರಿಗೆ ಹರಡಬಹುದು.

* ಚುಟ್ಟಾ, ಪೈಪ್‌ಗಳನ್ನು ಪರಸ್ಪರ ಹಂಚಿಕೊಂಡು ಸೇದುವ ಅಭ್ಯಾಸವಿದ್ದರಂತೂ ಸೋಂಕು ಹರಡುವುದು ಬೇಗ.

* ಸೋಂಕಿತ ವ್ಯಕ್ತಿ ಹೊರಬಿಟ್ಟಿರುವ ಧೂಮಪಾನದ ಹೊಗೆಯಲ್ಲೂ ಕೊರೊನಾ ವೈರಸ್‌ನ ಕಣಗಳು ಪತ್ತೆಯಾಗಿದ್ದು, ಪರೋಕ್ಷವಾಗಿ ಅದನ್ನು ಸೇವಿಸುವವರಿಗೆ ರೋಗ ಹರಡುವ ಸಾಧ್ಯತೆ ಇರುವುದರಿಂದ ಈ ಕುರಿತು ಇನ್ನೂ ಅಧ್ಯಯನಗಳು ಆಗಬೇಕಿವೆ.

ತೀವ್ರತರ ಸೋಂಕು

* ತಂಬಾಕು ವ್ಯಸನಿಗಳಲ್ಲಿ ಸಾಮಾನ್ಯವಾಗಿ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಿದ್ದು ರೋಗದ ತೀವ್ರತೆ ಹೆಚ್ಚು.

* ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುತ್ತದೆ.

* ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಇವೇ ಮುಂತಾದ ಸಮಸ್ಯೆಗಳು ಈಗಾಗಲೇ ತಂಬಾಕು ಚಟ ಇದ್ದವರಲ್ಲಿ ಹೆಚ್ಚಿರುವುದರಿಂದ ಕೋವಿಡ್ ಉಲ್ಬಣಿಸುವ ಸಾಧ್ಯತೆ ಹೆಚ್ಚು.

* ಬೀಡಿ, ಸಿಗರೇಟ್‌ ಸೇದುವವರಲ್ಲಿ ಉಸಿರಾಟ ವ್ಯೂಹದ ಒಳಪದರದ ಜೀವಕೋಶಗಳ ಸೂಕ್ಷ್ಮ ಕೂದಲುಗಳಂತಹ (ಸಿಲಿಯಾ) ರಚನೆಯು ಈಗಾಗಲೇ ಘಾಸಿಗೊಂಡಿರುವುದರಿಂದ ಹಾಗೂ ಕೆಮ್ಮು ಪ್ರತಿವರ್ತನಾ ಸಾಮರ್ಥ್ಯ (ಕಾಫ್ ರಿಫ್ಲೆಕ್ಸ್) ಕುಂಠಿತಗೊಂಡಿರುವುದರಿಂದಲೂ ಸೋಂಕು ತೀವ್ರಗೊಳ್ಳಬಹುದು.

*  ನ್ಯುಮೋನಿಯಾ, ಉಸಿರಾಟದ ತೊಂದರೆ (ರೆಸ್ಪರೇಟರಿ ಡಿಸ್ಟ್ರೆಸ್ ಸಿಂಡ್ರೋಮ್), ಸೆಪ್ಸಿಸ್‌ಗಳಿಂದ ಮಾರಣಾಂತಿಕವಾಗಬಹುದು.

ತಂಬಾಕು ಹಾಗೂ ಯುವಜನತೆ

ಸಾಂಪ್ರದಾಯಿಕ ಸೇದುವ ಹಾಗೂ ಅಗಿಯುವ ತಂಬಾಕು ಉತ್ಪನ್ನಗಳಷ್ಟೇ ಅಲ್ಲ, ಯುವಜನತೆ ಇ– ಸಿಗರೇಟ್‌- ವೇಪಿಂಗ್ ಚಟಕ್ಕೂ ದಾಸರಾಗುತ್ತಿರುವುದು ಆತಂಕಕಾರಿ. ವೇಪಿಂಗ್‌ನಿಂದ ಮೂಗು ಹಾಗೂ ಶ್ವಾಸಕೋಶಗಳಲ್ಲಿ ರೋಗ ನಿರೋಧಕ ಜೀವಕೋಶಗಳು ಕುಂಠಿತಗೊಳ್ಳುವುದು ಅಧ್ಯಯನಗಳಿಂದ ನಿರೂಪಿತವಾಗಿದೆ.

ಚಟ ಮುಕ್ತಿಗಿದು ಸಕಾಲ

* ಮಾನಸಿಕ ದೃಢ ನಿರ್ಧಾರ ಮುಖ್ಯ.

* ವೈದ್ಯಕೀಯ ಸಲಹೆ ಬೇಕು.

* ಈಗಾಗಲೇ ಅವಲಂಬಿತರಾದವರು ನಿಕೋಟಿನ್ ಬದಲೀ ಚಿಕಿತ್ಸೆ (ಗಮ್ ಅಥವಾ ಪ್ಯಾಚ್) ಮೂಲಕ ಹಂತಹಂತವಾಗಿ ಚಟಮುಕ್ತರಾಗಬಹುದು.

ತಂಬಾಕು ತ್ಯಜಿಸಿದರೆ..

* ತಂಬಾಕನ್ನು ತ್ಯಜಿಸಿದ 20 ನಿಮಿಷಗಳಲ್ಲಿ ಹೆಚ್ಚಿದ ಹೃದಯ ಬಡಿತ ಹಾಗೂ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರತೊಡಗುತ್ತದೆ.

* 12 ಗಂಟೆಗಳಲ್ಲಿ ರಕ್ತದಲ್ಲಿನ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಸಹಜ ಸ್ಥಿತಿಗೆ ಬರತೊಡಗುತ್ತದೆ.

* 2 ರಿಂದ 12 ವಾರಗಳಲ್ಲಿ ರಕ್ತ ಪರಿಚಲನೆ ಹಾಗೂ ಶ್ವಾಸಕೋಶದ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ.

(ಲೇಖಕಿ ತಜ್ಞ ವೈದ್ಯರು, ತಾಲ್ಲೂಕು ಆಸ್ಪತ್ರೆ, ಯಲ್ಲಾಪುರ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು