ಬುಧವಾರ, ಫೆಬ್ರವರಿ 1, 2023
27 °C

ಕ್ಷೇಮ ಕುಶಲ: ಹಿಂಸೆ ಎಂಬ ಕಾಯಿಲೆ

ಡಾ. ಕಿರಣ್‌ ವಿ. ಎಸ್‌. Updated:

ಅಕ್ಷರ ಗಾತ್ರ : | |

ಕಳೆದ ಕೆಲವು ದಶಕಗಳಿಂದ ಜಗತ್ತಿನ ಎಲ್ಲೆಡೆ ಹಿಂಸಾತ್ಮಕ ಮತ್ತು ಆಕ್ರಮಣಕಾರಿ ಪ್ರವೃತ್ತಿಗಳು ಹೆಚ್ಚುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳಗೊಂಡಿದೆ. ‘ಹಿಂಸೆಯೆನ್ನುವುದು ಆಕ್ರಮಣಕಾರಿ ಪ್ರವೃತ್ತಿಯ ತೀವ್ರ ಸ್ವರೂಪ’ – ಎಂದು ಮಾನಸಿಕ ತಜ್ಞರ ಅಭಿಮತ. ಇಂತಹ ಪ್ರವೃತ್ತಿಗೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆ. ಕೋಪ, ದುಃಖ, ಹತಾಶೆಗಳನ್ನು ಸರಿಯಾದ ದಾರಿಯಲ್ಲಿ ಅಭಿವ್ಯಕ್ತಗೊಳಿಸಲು ಸಾಧ್ಯವಾಗದ ಮಂದಿ ಹಿಂಸೆಗೆ ಇಳಿಯುತ್ತಾರೆ. ದೃಶ್ಯಮಾಧ್ಯಮಗಳಲ್ಲಿ ವೈಭವೀಕರಿಸುವ ಹಿಂಸೆ ಯುವಜನರಲ್ಲಿ ತಪ್ಪು ಸಂದೇಶಗಳನ್ನು ಹರಡುತ್ತದೆ. ಮನೆಯ, ನೆರೆಹೊರೆಯ ವಾತಾವರಣದಲ್ಲಿ ಪ್ರೀತಿ-ವಿಶ್ವಾಸಗಳಿಗೆ ಪ್ರತಿಯಾಗಿ ದ್ವೇಷ, ಅಸೂಯೆ, ಪ್ರತೀಕಾರಗಳ ಮನೋಭಾವಗಳು ತುಂಬಿದ್ದರೆ ಬೆಳೆಯುವ ಮಕ್ಕಳಿಗೆ ಹಿಂಸೆ ಸಹಜವೆನ್ನುವ ಭಾವನೆ ಮೂಡುತ್ತದೆ. ಋಣಾತ್ಮಕ ಆಲೋಚನೆಗಳು ಕಾಡುವವರಿಗೆ ಪ್ರತಿಯೊಂದು ಸಂಗತಿಯಲ್ಲೂ ತಪ್ಪೇ ಎದ್ದುಕಾಣುತ್ತದೆ. ಇಂತಹವರಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚು. ಇದರ ಜೊತೆಗೆ ಮದ್ಯಪಾನ, ಮಾದಕ ವಸ್ತುಗಳ ಸೇವನೆಗಳು ಮಾನಸಿಕ ನಿಯಂತ್ರಣವನ್ನು ತಗ್ಗಿಸಿ ಹಿಂಸೆಗೆ ಆಸ್ಪದವೀಯುತ್ತವೆ.

ಉದ್ದೇಶಪೂರ್ವಕವಾಗಿ ವ್ಯಕ್ತಿಗಳಿಗೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು ಹಿಂಸೆಯ ಒಂದು ಪರಿಭಾಷೆ. ಇದು ಈಚಿನ ದಿನಗಳಲ್ಲಿ ಅಧಿಕವಾಗುತ್ತಿದೆ. ಹಿಂಸೆಯ ಮಾರ್ಗದಿಂದ ತಮಗೆ ಬೇಕಾದ್ದನ್ನು ದಕ್ಕಿಸಿಕೊಳ್ಳುವ ಪ್ರಸಂಗಗಳು ವೈಯಕ್ತಿಕ ಮತ್ತು ಸಾಂಘಿಕ ಮಟ್ಟದಲ್ಲಿ ಕಾಣುತ್ತಿವೆ. ಹುನ್ನಾರ ಮಾಡಿ, ತಮಗೆ ವಿರುದ್ಧವಾಗಿರುವವರ ಜೊತೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲೂ ಹಿಂಸೆ ಬಳಕೆಯಾಗುತ್ತಿದೆ. ಹಿಂಸೆಯ ಬಳಕೆಯಿಂದ ತಾತ್ಕಾಲಿಕವಾಗಿ ಮೇಲುಗೈ ಸಾಧಿಸುವುದು; ಹಿಂಸೆಗೆ ಪ್ರತಿಯಾಗಿ ತಕ್ಕ ಶೀಘ್ರ ಶಿಕ್ಷೆಯಾಗದಿರುವುದು; ಸಾತ್ತ್ವಿಕ ಜನರು ಹಿಂಸೆಯನ್ನು ಪ್ರತಿಭಟಿಸಲಾಗದೆ ಸೋಲುವುದು; ವ್ಯವಸ್ಥೆಯು ಸಜ್ಜನರ ರಕ್ಷಣೆಗೆ ಬಾರದಿರುವುದು; ಇತರರ ಮೇಲಿನ ಹಿಂಸೆಯ ಫಲಾನುಭವಿಗಳು ದುರ್ಜನರ ಕ್ರೌರ್ಯಕ್ಕೆ ಬೆಂಬಲವಾಗಿ ನಿಲ್ಲುವುದು, ಮೊದಲಾದುವು ದಿನದಿನವೂ ಹಿಂಸೆಯ ಬಳಕೆಯನ್ನು ಹೆಚ್ಚಿಸುತ್ತಿವೆ. ಇದರ ಕಾರಣದಿಂದ ಭ್ರಮನಿರಸನಗೊಳ್ಳುವ ಸಜ್ಜನರ ಹತಾಶೆ ಸಮಾಜದ ಒಟ್ಟಾರೆ ಅಶಾಂತಿಗೆ ಕಾರಣವಾಗುತ್ತದೆ.

ಹಿಂಸಾಮಾರ್ಗವನ್ನು ಅನುಸರಿಸುವ ಅನೇಕ ಮಂದಿಗೆ ಪರ್ಯಾಯಗಳ ಅರಿವು ಇರುವುದಿಲ್ಲ. ಕ್ರೋಧ ಮಾನವಸಹಜ ಭಾವಗಳಲ್ಲಿ ಒಂದು. ಅದನ್ನು ವ್ಯಕ್ತಪಡಿಸುವ ಹಲವಾರು ಸುರಕ್ಷಿತ ವಿಧಾನಗಳಿವೆ. ಆದರೆ, ಎಷ್ಟೋ ಮಂದಿಗೆ ಇಂತಹ ಮಾರ್ಗಗಳ ಪರಿಚಯ ಇರುವುದಿಲ್ಲ. ಬಹುತೇಕ ಒಳ್ಳೆಯ ಜನರು ತುಂಬಿರುವ ಸಮಾಜಗಳಲ್ಲಿ ಹಿಂಸಾತ್ಮಕ ಮಾರ್ಗ ಅನುಸರಿಸುವ ಬೆರಳೆಣಿಕೆಯ ಮಂದಿ ಇತರರಲ್ಲಿ ಭೀತಿಯನ್ನು ಹುಟ್ಟಿಸಿ, ಅದನು ತಮ್ಮ ಕಾರ್ಯಸಾಧನೆಗೆ ಬಳಸಿಕೊಳ್ಳಬಲ್ಲರು. ಇದು ಕೂಡ ಹಿಂಸೆಯ ಪ್ರಚೋದನೆಗೆ ಸಾಧನವಾಗುತ್ತದೆ. ಈ ರೀತಿಯ ವರ್ತನೆ ಯಾವುದೇ ಪ್ರತಿರೋಧವಿಲ್ಲದೆ ಎಗ್ಗಿಲ್ಲದೆ ನಡೆದರೆ, ಅದು ಹಲವಾರು ಕಿರಿಯರಿಗೆ ಸ್ಫೂರ್ತಿಯಾಗಿ ನಿಲ್ಲುವ ಅಪಾಯವಿದೆ.

ಸಾಧಕರನ್ನು, ಹಿರಿಯರನ್ನು, ಜ್ಞಾನಿಗಳನ್ನು ಗೌರವಿಸುವ ಪರಂಪರೆ ಒಂದು ಸಮಾಜದಲ್ಲಿ ಸತತವಾಗಿ ಹರಿದು ಬರುವುದು ಒಟ್ಟಾರೆ ಸಮಷ್ಟಿಯ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಇಂತಹ ಮೌಲ್ಯಗಳು ಯಾವುದಾದರೂ ಕಾರಣದಿಂದ ನಿಂತುಹೋದರೆ, ಆಯಾ ಸಮಾಜದಲ್ಲಿ ಹಿಂಸಾತ್ಮಕ ಪ್ರವೃತ್ತಿಗಳು ಹೆಚ್ಚುವುದನ್ನು ಸಾಮಾಜಿಕ ವಿಜ್ಞಾನಿಗಳು ಗುರುತಿಸಿದ್ದಾರೆ. ಮೌಲ್ಯಗಳು ಕುಸಿಯುವುದನ್ನು ತಡೆಯುವುದು ಸಮಾಜದ ಹಿರಿಯರ, ಬಲಾಢ್ಯರ, ನಾಯಕರ ಸಾಮಾಜಿಕ ಜವಾಬ್ದಾರಿ. ಆಧುನಿಕ ಕಾಲದಲ್ಲಿ ಹಿಂಸೆಯ ಮೂಲಕವೇ ಉನ್ನತ ಸ್ಥಾನಗಳನ್ನು ಆಕ್ರಮಿಸುತ್ತಿರುವ ಪ್ರಸಂಗಗಳು ಅಧಿಕವಾಗುತ್ತಿವೆ. ಇಂತಹ ಸಮಾಜಗಳು ಸಹಜವಾಗಿಯೇ ಹಿಂಸಾತ್ಮಕ ಪ್ರವೃತ್ತಿಯನ್ನು ಅನುಸರಿಸುತ್ತವೆ. ಮೌಲ್ಯಗಳನ್ನು ಮತ್ತೆ ಸ್ಥಾಪಿಸಬಲ್ಲ ನಿಯಂತ್ರಕ ಶಕ್ತಿಗಳ ಅಭಾವ ಹೆಚ್ಚಿದಂತೆಲ್ಲ ಈ ಪ್ರವೃತ್ತಿ ಬೆಳೆಯುತ್ತಲೇ ಹೋಗುತ್ತದೆ. ‘ಕೆಟ್ಟದು ಕೆಟ್ಟದ್ದನ್ನು ಬೆಳೆಸುತ್ತದೆ’ ಎನ್ನುವ ಮಾತಿಗೆ ಪುಷ್ಟಿ ನೀಡಿದಂತಾಗುತ್ತದೆ.

ಹಿಂಸೆಯ ಪೋಷಣೆಗೆ ಕೀಳರಿಮೆಯೂ ಮತ್ತೊಂದು ಕಾರಣ. ತನ್ನ ಅರ್ಹತೆಗೆ ಸಹಜವಾಗಿ ಲಭಿಸಬೇಕಾದ ಗೌರವ, ಮರ್ಯಾದೆಗಳು ಲಭಿಸದಿದ್ದರೆ ಉದ್ಭವಿಸುವ ಕೀಳರಿಮೆ ಸಮಾಜದ ಪ್ರತಿಯಾಗಿ ಹಿಂಸಾತ್ಮಕ ಸ್ವರೂಪ ಪಡೆಯಬಹುದು. ಅಂತೆಯೇ, ಬೆಳೆಯುವ ವಯಸ್ಸಿನಲ್ಲಿ ಅನುಭವಿಸಿದ ಶೋಷಣೆ, ನಿರ್ಲಕ್ಷ್ಯಗಳು ಹಿಂಸಾತ್ಮಕ ಪ್ರವೃತ್ತಿಗೆ ದಾರಿಯಾಗಬಹುದು. ಕೆಲವು ಮುಂದುವರೆದ ದೇಶಗಳಲ್ಲಿ ಬಂದೂಕಿನಂತಹ ಶಸ್ತ್ರಗಳನ್ನು ಸರಾಗವಾಗಿ ಹೊಂದಬಹುದು. ಈ ರೀತಿಯ ಅವಕಾಶಗಳು ಹಿಂಸೆಯ ಅಭಿವ್ಯಕ್ತಿಗೆ ಸುಲಭ ದಾರಿಯಾಗುತ್ತವೆ.

ಒಮ್ಮೆ ಹಿಂಸೆಯ ಹಾದಿ ಹಿಡಿದವರಿಗೆ ನಂತರದ ಬದುಕಿನಲ್ಲಿ ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದುವುದು ಬಹಳ ಕಷ್ಟವಾಗುತ್ತದೆ. ಸಮಾಜದಿಂದ ಇದಕ್ಕೆ ಯಾವುದೇ ಪ್ರತಿರೋಧ ಬಾರದಿದ್ದರೆ ಹಿಂಸೆಯ ಪ್ರವೃತ್ತಿ ತೀವ್ರಗೊಳ್ಳುತ್ತಾ ಹೋಗುತ್ತದೆ. ಹೀಗಾಗಿ, ಈ ಮಾರ್ಗ ಹಿಡಿಯದಿರುವುದೇ ವ್ಯಕ್ತಿಗೆ ಮತ್ತು ಸಮಾಜಕ್ಕೆ ಶ್ರೇಯಸ್ಕರ. ಹಿಂಸೆಯ ದಾರಿ ಹಿಡಿದವವರನ್ನು ಶೀಘ್ರವಾಗಿ ಗುರುತಿಸಿ, ಮತ್ತೊಮ್ಮೆ ಅವರನ್ನು ಸರಿಯಾದ ಮಾರ್ಗಕ್ಕೆ ಕರೆತರುವುದು ಸಮಾಜದ ಎಲ್ಲರ ಗುರುತರ ಜವಾಬ್ದಾರಿ. ಇಂತಹವರನ್ನು ಗುರುತಿಸುವುದು ಸಮಸ್ಯಾತ್ಮಕವೇ ಆದರೂ, ಕೆಲವು ಸೂಚನೆಗಳು ಉಪಯುಕ್ತವಾಗುತ್ತವೆ.

ಹಿಂಸೆಗೆ ಇಳಿದ ಬಹುತೇಕರು ಆಯುಧಗಳನ್ನು ಹುಡುಕುತ್ತಾರೆ. ಇತರರನ್ನು ನೋಯಿಸಬಲ್ಲ ಆಯುಧಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುವವರ ಬಗ್ಗೆ ನಿಗಾ ಇರಬೇಕು. ಪ್ರಾಣಿಗಳ ಬೇಟೆಯ ಬಗ್ಗೆ ಏಕಾಏಕಿ ಆಸಕ್ತಿ ತೋರುವವರ ಬಗ್ಗೆಯೂ ಸಂಶಯಪಡುವುದು ಸೂಕ್ತ. ಮಾತಿನ ವೇಳೆ ತೀವ್ರ ಬೆದರಿಕೆ ಹಾಕುವವರು, ಇತರರನ್ನು ಹಿಂಸಿಸುವ ಯೋಜನೆಗಳನ್ನು ಚರ್ಚಿಸುವವರು ಹಿಂಸೆಗೆ ಇಳಿಯುವ ಸಾಧ್ಯತೆಗಳು ಅಧಿಕ. ಸಣ್ಣ ಪುಟ್ಟ ಸೇಡುಗಳಿಗೂ ಅಧಿಕ ಮಟ್ಟದ ಕ್ರೌರ್ಯವನ್ನು ತೋರುವವರು, ಚಿಕ್ಕ ಪ್ರತೀಕಾರಕ್ಕೆ ಕೂಡ ಅಪಾಯಕಾರಿ ಮಾರ್ಗಗಳನ್ನು ಅನುಸರಿಸುವವರಲ್ಲಿ ಹಿಂಸಾತ್ಮಕ ಪ್ರವೃತ್ತಿ ಮನೆಯಾಗಿರಬಹುದು. ಕೋಪವನ್ನು ನಿಯಂತ್ರಿಸಲಾಗದೆ ಬೆಲೆಬಾಳುವ ವಸ್ತುಗಳನ್ನು ನಾಶಮಾಡುವವರು, ತನ್ನದೋ ಪರರದ್ದೋ ಎನ್ನುವ ವಿವೇಚನೆಯಿಲ್ಲದೆ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವವರು, ಸಿಟ್ಟಿನ ಭಾವಗಳನ್ನು ಸಮರ್ಥವಾಗಿ ನಿಯಂತ್ರಿಸಲು ಶಕ್ಯವಿಲ್ಲದವರು ಹಿಂಸೆಯ ಮಾರ್ಗಕ್ಕೆ ಇಳಿಯುತ್ತಾರೆ. ಇಂತಹವರ ಬಗ್ಗೆ ಮನೆಯವರು, ಬಂಧುಗಳು, ಗೆಳೆಯರು ಹೆಚ್ಚಿನ ಗಮನ ವಹಿಸುವುದು ಮುಖ್ಯವಾಗುತ್ತದೆ.
ಈ ಹಿಂದೆ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಪುನಃ ಅದೇ ಮಾರ್ಗಕ್ಕೆ ಹಿಂದಿರುಗಲು ಹೆಚ್ಚಿನ ಉತ್ತೇಜನ ಬೇಕಿಲ್ಲ. ಅಂತಹವರನ್ನು ಬಹಳ ಎಚ್ಚರದಿಂದ ಕಾಯಬೇಕಾಗುತ್ತದೆ. ಅವರಿಗೆ ಸುಲಭವಾಗಿ ಆಯುಧಗಳು ಲಭ್ಯವಾಗದಂತೆ ನೋಡಿಕೊಳ್ಳಬೇಕು. ಏಕಾಂಗಿತನ ಅವರಲ್ಲಿ ಮತ್ತೊಮ್ಮೆ ಹಿಂಸೆಯ ಬಗ್ಗೆ ಆಲೋಚಿಸಲು ಆಸ್ಪದವೀಯುತ್ತದೆ. ಹೀಗಾಗಿ, ಅಂತಹವರನ್ನು ಯಾವುದೋ ಕೆಲಸದಲ್ಲಿ ವ್ಯಸ್ಥವಾಗಿರುವಂತೆ, ಸಾಧ್ಯವಾದಷ್ಟೂ ಅತ್ಮೀಯರೊಡನೆ ಸುತ್ತುವರೆದಿರುವಂತೆ ನೋಡಿಕೊಳ್ಳುವುದು ಸೂಕ್ತ. ಅವರ ಭೂತಕಾಲದ ಬಗ್ಗೆ ಲಘುವಾಗಿ ಮಾತನಾಡುವುದು, ಅವರ ನ್ಯೂನತೆಗಳನ್ನು ಎತ್ತಿ ತೋರುವುದು, ಅವರ ಬಗ್ಗೆ ತಿರಸ್ಕಾರ ಪ್ರದರ್ಶಿಸುವುದು ಸಲ್ಲದು.

ನಮ್ಮ ಆತ್ಮೀಯರಲ್ಲಿ ಯಾರಾದರೂ ಹಿಂಸಾತ್ಮಕ ಪ್ರವೃತ್ತಿಗೆ ಬಲಿಯಾಗುತ್ತಿದ್ದಾರೆ ಎಂದರೆ ಅದರ ಜವಾಬ್ದಾರಿ ನಮ್ಮದೇ ಆಗಬೇಕು. ಈ ಸಮಸ್ಯೆಯನ್ನು ಹೊರಗಿನಿಂದ ಯಾರೋ ಬಂದು ನಿವಾರಿಸಲಾರರು. ಇದರ ಪರಿಹಾರೋಪಾಯಗಳನ್ನು ನಾವೇ ಕಂಡುಕೊಳ್ಳಬೇಕು. ತಡ ಮಾಡಿದಷ್ಟೂ ಪರಿಸ್ಥಿತಿ ಗಂಭೀರವಾಗಬಹುದು. ಹೀಗಾಗಿ, ಪರಿಹಾರಗಳ ಚಿಂತನೆ ಮತ್ತು ಅವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಗಳು ಶೀಘ್ರವಾಗಿಯೂ ಸಮರ್ಥವಾಗಿಯೂ ಆಗಬೇಕು. ಈ ನಿಟ್ಟಿನಲ್ಲಿ ನಮ್ಮ ಸುರಕ್ಷತೆಯೂ ಮುಖ್ಯ. ಹಿಂಸೆಯ ನಶೆಯಲ್ಲಿರುವವರಿಗೆ ವಿವೇಚನೆ ಕಡಿಮೆ. ಅಂತಹವರು ಕೋಪದ ಭರದಲ್ಲಿ ಅಸಾಧುವಾದ ಕೆಲಸಗಳನ್ನು ಮಾಡಬಲ್ಲರು. ಈ ಎಚ್ಚರ ಎಲ್ಲರಲ್ಲೂ ಇರಬೇಕು. ಇಂತಹ ನಿರ್ವಹಣೆಯಲ್ಲಿ ಹೆಚ್ಚಿನ ಸಮಾನಮನಸ್ಕರು ಇರುವುದು ಕ್ಷೇಮಕರ. ಅಪಾಯಕಾರಿ ಆಯುಧಗಳು ಇರಬಹುದಾದ ಸನ್ನಿವೇಶದಲ್ಲಿ ಕಾನೂನುಪಾಲಕರ ಬೆಂಬಲ ಪಡೆಯಬೇಕು. ಹಿಂಸಾತ್ಮಕ ಪ್ರವೃತ್ತಿಯ ನಿರ್ವಹಣೆ ಮತ್ತು ನಿಗ್ರಹಕ್ಕೆ ಮಾನಸಿಕ ತಜ್ಞರು ನೆರವಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಮುಚ್ಚುಮರೆಯಿಲ್ಲದೆ ಅವರ ಸಹಾಯ ಪಡೆಯಬೇಕು. ಸ್ವಸ್ಥ ಸಮಾಜ ನಮ್ಮೆಲ್ಲರ ಜವಾಬ್ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು