ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಏನೆಲ್ಲ ತಿನ್ನಬಹುದು...

Last Updated 21 ಜೂನ್ 2021, 19:30 IST
ಅಕ್ಷರ ಗಾತ್ರ

ನಾವೆಲ್ಲಾ ಚಿಕ್ಕವರಿದ್ದಾಗ ಮನೆಯಲ್ಲಿ ಕೊಷ್ಟಕ ಹೇಳಿಕೊಡುತ್ತಿದ್ದರು. ಆಗ ‘ಶ್ರಾವಣ ಭಾದ್ರಪದ... ವರ್ಷಋತು...’ ಅಂತಾ ಹೇಳ್ತಾ ಇದ್ದೆವು. ಅಂದರೆ ಶ್ರಾವಣಮಾಸದಲ್ಲಿ ಮಳೆ ಬರುತ್ತದೆ, ಅದನ್ನ ಮಳೆಗಾಲ ಅಂತಾ ಕರೀತಾರೆ ಅಂತಾನೂ ಹೇಳಿಕೊಡುತ್ತಿದ್ದರು. ಆದರೆ ‘ಈಗಿನ್ನು ಜ್ಯೇಷ್ಠಮಾಸಾನೇ ಮುಗಿದಿಲ್ಲಾ, ಆಗಲೇ ಮಳೆಗಾಲಾನಾ’ ಅಂದರೆ ‘ಕಾಲ ಬದಲಾಗಿದೆ ಅಂತಾರೆ’. ಈಗಿನ ಮಕ್ಕಳಿಗೆ ಇದರ ಪರಿಚಯವೂ ಇಲ್ಲದಿರಬಹುದು; ಅದನ್ನು ಪರಿಚಯಿಸುವ ಕೆಲಸವನ್ನೂ ಮಾಡಬೇಕಿದೆ.

ಇರಲಿ, ಆದರೆ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಬರುವ ರೀತಿ ಬೇರೆ ಬೇರೆ. ಅದಕ್ಕೆ ವ್ಯವಸಾಯ ಮಾಡುವವರು ಇಂತಹ ನಕ್ಷತ್ರದಲ್ಲಿ ಮಳೆ ಬಂದರೆ ಇಷ್ಟು ದಿನ, ಹೀಗೆ ಮಳೆ ಬರತ್ತೆ ಅಂತಾ ಲೆಕ್ಕವನ್ನೂ ಇಟ್ಟುಕೊಂಡಿದ್ದರು. ಆದರೆ ಕೆಮ್ಮು ದಮ್ಮು ಅಲರ್ಜಿ ಇರುವ ಅಂತಹ ಅನೇಕರಿಗೆ ಅವರ ಕಾಯಿಲೆಗಳೇ ಕಾಲಸೂಚಕ ಅಗಿರುತ್ತಿದ್ದುದೂ ಉಂಟು. ಕೆಲವರಿಗೆ ಮಳೆಗಾಲ ಬಂದರೆ ಕಾಯಿಲೆ, ಕೆಲವರಿಗೆ ಮಳೆಗಾಲದಲ್ಲಿ ಆರಾಮ. ಇದೇಕೆ ಹೀಗೆ – ಎಂದರೆ ದೇಹದ ಮೇಲೆ ವಾತಾವರಣದ ಪರಿಣಾಮ.

ನಮ್ಮ ಹಿರಿಯರು ಮಳೆಗಾಲದ ಮಳೆನೀರನ್ನೇ ರೋಗಪರಿಹಾರಕವಾಗಿ ಉಪಯೋಗಿಸುವಷ್ಟು ಬುದ್ಧಿವಂತರಾಗಿದ್ದರು. ಅದಕ್ಕೆ ಮಳೆ ನೀರನ್ನು ಮತ್ತು ಔಷಧಸಸ್ಯಗಳನ್ನು ಉಪಯೋಗಿಸಿ ಅಣುತೈಲ ಎಂಬ ಎಣ್ಣೆಯನ್ನು ತಯಾರಿಸಿ ಮೂಗಿಗೆ ಹಾಕಿಕೊಳ್ಳುತ್ತಿದ್ದರು. ಇದರಿಂದ ಕಣ್ಣು ಕಿವಿ ಮೂಗುಗಳಲ್ಲಿ ಕಫ ಸೇರುವುದು ಕಡಿಮೆಯಾಗಿ ಸುಲಭವಾದ ಉಸಿರಾಟಕ್ಕೆ ಅನುವು ಮಾಡಿಕೊಡುತ್ತಿತ್ತು. ಅಷ್ಟೇ ಅಲ್ಲದೆ, ಬಾಲನೆರೆ ಕೂದಲು ಉದುರುವುದನ್ನೂ ಇದು ತಡೆಗಟ್ಟುತ್ತಿತ್ತು. ಈಗ ಅಮ್ಲೀಯ ಮಳೆಯೇ ಹೆಚ್ಚಾಗಿ ಮಳೆನೀರೂ ಶುದ್ಧವಲ್ಲದ ಪರಿಸ್ಥಿತಿ ಉಂಟಾಗಿದೆ. ಸದೃಢವಾದ ಇಂದ್ರಿಯಗಳು, ಚುರುಕಾದ ಬುದ್ಧಿಶಕ್ತಿ, ನೆನಪಿನ ಶಕ್ತಿಗಳಿಗೆ, ಅಣುತೈಲವು ರಾಮಬಾಣವಾಗಿರುತ್ತಿತ್ತು. ಇಂದು ನಾವು ಅನುಭವಿಸುತ್ತಿರುವ ಕೋವಿಡ್ ಎಂಬ ಜನಪದೋಧ್ವಂಸಕ ರೋಗದ ಪರಿಣಾಮಗಳನ್ನು ಎದುರಿಸಲು ಒಂದು ಸಮರ್ಥ ಸಾಧನ - ಶುದ್ಧ ಮಳೆ ನೀರಿನಿಂದ ತಯಾರಿಸಿದ ತೈಲ.

ಮಳೆಗಾಲದಲ್ಲಿ ಮಳೆ ಬಿಸಿಲುಗಳ ವ್ಯತ್ಯಾಸದಿಂದ ಸೆಖೆ, ಚಳಿ – ಎರಡೂ ಆಗುವ ಸಾಧ್ಯತೆ ಇದೆ. ಆದ್ದರಿಂದ ನಮ್ಮ ಆಹಾರ–ವಿಹಾರಗಳು ಸಮಶೀತೋಷ್ಣಗಳಾಗಿರಬೇಕು. ಈ ಕಾಲದಲ್ಲಿ ಆಹಾರದೊಡನೆ ಜೇನನ್ನು ಸೇರಿಸುವುದು ಒಳಿತು; ಎಂದರೆ ಕಾದಾರಿಸಿದ ನೀರಿಗೆ ಅಲ್ಪ ಪ್ರಮಾಣದಲ್ಲಿ ಜೇನನ್ನು ಬೆರೆಸಿ ಸೇವಿಸುವುದು ಆರೋಗ್ಯಕರ. ಮಳೆಗಾಲದಲ್ಲಿ ನಿತ್ಯಸೇವಿಸಬಹುದಾದ ಜೇನನ್ನು ಬೇರೆಲ್ಲಾ ಕಾಲದಲ್ಲಿಯೂ ವಿವೇಚನೆಯಿಂದ ಸೇವಿಸಬೇಕು. ಬಿಸಿನೀರಿಗೆ ಜೇನು ಬೆರೆಸುವುದು ಸರ್ವಾದಾ ಅಪಥ್ಯಕರವಾಗುತ್ತದೆ. ಈ ಕಾಲದಲ್ಲಿ ಒಣಗಿದ ನೆಲ್ಲಿಕಾಯಿ ಮತ್ತು ಬೀಜ ಇರುವ ಒಣ ಕಪ್ಪು ದ್ರಾಕ್ಷಿಯನ್ನು ಸಮಪ್ರಮಾಣದಲ್ಲಿ ಚೆನ್ನಾಗಿ ಅರೆದು ಕುದಿಸಿ ಶೋಧಿಸಿ ಸೇವಿಸಿವುದು ಆರೋಗ್ಯಕರ. ಕೋವಿಡ್‌ನಿಂದ ಎದುರಾಗಬಹುದಾದ ಅಡ್ಡಪರಿಣಾಮಗಳನ್ನೂ ಹೋಗಲಾಡಿಸುವ ಸಾಮರ್ಥ್ಯ ಈ ಕಷಾಯಕ್ಕಿದೆ. ಸುಸ್ತು, ಅತಿಯಾದ ಅಮ್ಲೀಯತೆ, ಅದರಿಂದುಂಟಾಗುವ ತಲೆನೋವು, ಗಂಟಲು ಕೆರೆತ – ಇತ್ಯಾದಿ ತೊಂದರೆಗಳಿಗೂ ಇದು ರಾಮಬಾಣ.

ಭತ್ತದ ಅರಳು, ದ್ರಾಕ್ಷಿ (ಒಣ ಅಥವಾ ಹಸಿ) ಜೇನು, ನೀರನ್ನು ಬೆರೆಸಿ ಅರೆದು ಅಥವಾ ಮಂಥಿನಲ್ಲಿ ಚೆನ್ನಾಗಿ ಕಡೆದು ಕುಡಿಯುವುದು ಮಳೆಗಾಲದಲ್ಲಿ ಒಂದು ಹೊಸ ರುಚಿಯಾದ ವಿಶಿಷ್ಟ ಪೇಯ. ಈ ಕಾಲದಲ್ಲಿ ಮಾಂಸ–ಮದ್ಯಗಳ ಸೇವನೆ ವರ್ಜ್ಯ. ಅದರಲ್ಲೂ ಜಲಚರ ಪ್ರಾಣಿಗಳ ಮಾಂಸ ಎಂದರೆ, ಮೀನು, ಏಡಿ, ಸಂಪೂರ್ಣ ವರ್ಜ್ಯ. ಇದು ಪರಿಸರದ ಸಮತೋಲನ, ಮನುಷ್ಯರ ಅರೋಗ್ಯ – ಎರಡಕ್ಕೂ ಹಾನಿಕರ. ಹಸಿ ತರಕಾರಿ, ಹಣ್ಣುಗಳ ಸೇವನೆ, ಸೊಪ್ಪುಗಳ ಸೇವನೆ, ಮಳೆಗಾಲದಲ್ಲಿ ಸಾಧುವಲ್ಲ. ಇದು ಮಧುಮೇಹ, ಉಬ್ಬಸ, ಕೆಮ್ಮು, ಮುಂತಾದ ರೋಗಗಳಿಗೆ ಕಾರಕವಾಗುತ್ತದೆ. ನೆನೆಸಿದ ಕಾಳುಗಳು, ಬೇಸಗೆಯಲ್ಲಿ ಬೆಳೆದು ಶೇಖರಿಸಲು ಸಾಧ್ಯವಾಗುವಂತಹ ಸೌತೆ, ಕುಂಬಳ, ಬೂದುಗುಂಬಳ, ಪುನರ್ಪುಳಿ (ಕೋಕಮ್), ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆ ಹಾಗೂ ಈ ರೀತಿಯ ಆಹಾರ ಪದಾರ್ಥಗಳನ್ನು ಆಯಾ ಪ್ರದೇಶದ ಆಹಾರಕ್ಕನುಗುಣವಾಗಿ ಈ ಕಾಲದಲ್ಲಿ ಉಪಯೋಗಿಸಬೇಕು. ಒಣ ಅಂಜೂರ, ದ್ರಾಕ್ಷಿ, ಖರ್ಜೂರ, ದಾಳಿಂಬೆ – ಇವುಗಳ ಉಪಯೋಗವೂ ಹಿತಕರವಾಗುತ್ತದೆ. ಮಳೆಗಾಲದ ಅರ್ಧದಿಂದ ನಂತರ ಪಡವಲ, ಮೆಂತ್ಯಕಾಳು, ಹೀರೆಕಾಯಿ, ಒಣ ಮೂಲಂಗಿ, ಒಣಮಾವಿನಕಾಯಿ – ಈ ರೀತಿಯಾದ ನೀರಿನಂಶ ಕಡಿಮೆ ಇರುವ ಅಥವಾ ಸ್ಪಲ್ಪ ಕಹಿ ರುಚಿಯ ತರಕಾರಿಗಳನ್ನೇ ಉಪಯೋಗಿಸಬೇಕು. ದನಿಯಾ, ಜೀರಿಗೆ, ಮೆಣಸು – ಇವನ್ನು ಉಪಯೋಗಿಸಬಹುದು, ಬಿಸಿ ನೀರನ್ನೇ ಕುಡಿಯಬೇಕು. (ಅರ್ಧ ಬಿಸಿ ಮಾಡಿದ ನೀರಲ್ಲ, ಕುದಿಸಿ ಆರುತ್ತಾ ಇರುವ ನೀರು.) ಇದಕ್ಕೆ ಶುಂಠಿ, ಶ್ರೀಗಂಧ, ಕರ್ಪೂರ, ಏಲಕ್ಕಿ, ಕೇಸರಿ – ಇವುಗಳಲ್ಲಿ ಯಾವುದಾದರೂ ಒಂದನ್ನು ಅಲ್ಪ ಪ್ರಮಾಣದಲ್ಲಿ ಸೇರಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ.

ಮಳೆಯಲ್ಲಿ ನೆನೆಯುವುದು ಸರ್ವಥಾ ನಿಷಿದ್ಧ; ನೆನೆದರೂ ಕೂಡಲೇ ಬಿಸಿನೀರಿವಲ್ಲಿ ಸ್ನಾನ ಮಾಡುವುದರಿಂದ ನೆಗಡಿ, ತಲೆನೋವು, ಮೈಕೈ ನೋವು, ಜ್ವರ ಇತ್ಯಾದಿಗಳನ್ನು ತಡೆಗಟ್ಟಬಹುದು. ಒಟ್ಟಿನಲ್ಲಿ ಆಯಾ ಕಾಲಕ್ಕೆ ಹಿತವಾದ ಆಹಾರವನ್ನು ಮಿತವಾಗಿ ಉಪಯೋಗಿಸಿ ಆರೋಗ್ಯವಂತರಾಗಿ ಬದುಕೋಣ.

ಲೇಖಕಿ: ಆಯುರ್ವೇದವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT