ಹುಳಕಡ್ಡಿಯ ಸಮಸ್ಯೆಗೆ ಪರಿಹಾರವೇನು?
ಮೂರು ತಿಂಗಳ ಗರ್ಭಿಣಿ. ಹಲವು ದಿನಗಳಿಂದ ತೊಡೆ ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ಹುಳಕಡ್ಡಿಯ ತರಹದ ದದ್ದುಗಳಾಗಿವೆ. ವೈದ್ಯರು ಮುಲಾಮು ಕೊಟ್ಟಿದ್ದಾರೆ. ಹಚ್ಚಿದಾಗ ಕಡಿಮೆ ಆಗುತ್ತೆ. ಆದರೆ ಮತ್ತೆ ಮತ್ತೆ ಮರುಕಳಿಸುತ್ತಿದೆ. ನುಂಗಲು ಮಾತ್ರೆ ಕೊಟ್ಟಿಲ್ಲ. ಪರಿಹಾರ ತಿಳಿಸಿ ಮೇಡಂ.
ಬಹುಶಃ ನಿಮಗಾಗಿರುವುದು ಹುಳಕಡ್ಡಿ ಅಥವಾ ಶಿಲೀಂಧ್ರ ಸೋಂಕು. ಮೂರು ತಿಂಗಳ ಗರ್ಭಿಣಿ ಆಗಿರುವುದರಿಂದ ಯಾವುದೇ ಮಾತ್ರೆ ಕೊಡುವುದಿಲ್ಲ. ಅದಕ್ಕಾಗಿಯೇ ಮುಲಾಮು ಬರೆದು ಕೊಟ್ಟಿರುತ್ತಾರೆ. ಗಾಯ ಸ್ವಲ್ಪ ಗುಣವಾದ ತಕ್ಷಣ ಮುಲಾಮು ಹಚ್ಚುವುದನ್ನು ನಿಲ್ಲಿಸಿದ್ದರೆ, ಹಾಗೆ ಮಾಡಬೇಡಿ.
ಸೋಂಕು ಉಂಟುಮಾಡುವ ಕ್ರಿಮಿಯನ್ನು ನಾಶಪಡಿಸಲು ಕನಿಷ್ಠ ಆರರಿಂದ ಎಂಟು ವಾರಗಳಾದರೂ ಬೇಕು. ಅದಕ್ಕಾಗಿ ನಿರಂತರವಾಗಿ ಮುಲಾಮು ಹಚ್ಚಬೇಕು. ಹಗಲು ಹೊತ್ತಿನಲ್ಲಿ ಆ್ಯಂಟಿ ಫಂಗಲ್ ಪೌಡರ್‌ಗಳನ್ನು ಹಚ್ಚಿ. ಈ ಕ್ರಿಮಿಯು ತೇವಾಂಶದಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ದೇಹದ ಯಾವುದೇ ಭಾಗದಲ್ಲಿ ತೇವಾಂಶ ನಿಲ್ಲದಂತೆ ನೋಡಿಕೊಳ್ಳಿ.
30 ವರ್ಷ. ಮದುವೆ ನಿಶ್ಚಯವಾಗಿದೆ. ಇತ್ತೀಚೆಗೆ ತೂಕ ಹೆಚ್ಚುತ್ತಿದೆ. ಎಪ್ಪತ್ತು ಕೆ.ಜಿ. ಇದ್ದೇನೆ. ಮದುವೆಯಾದ ವರ್ಷವೇ ಮಕ್ಕಳಾಗಬೇಕೆಂಬ ಆಸೆ ಇದೆ. ತಡವಾಗಿ ಮದುವೆಯಾದವರಿಗೆ ಮಕ್ಕಳಾಗುತ್ತಿಲ್ಲ ಎಂಬ ವಿಚಾರ ನನಗೆ ಆತಂಕ ತಂದಿದೆ. ಹೇಗೆ ಮುಂಜಾಗ್ರತಾ ಕ್ರಮ ವಹಿಸಬಹುದು?
ತಾಯ್ತನದ ಬಗ್ಗೆ ಹಂಬಲ ಇರುವುದು ಒಳ್ಳೆಯದು. ಅದಕ್ಕಾಗಿ ಉತ್ತಮ ಯೋಜನೆ ಹಾಕಿಕೊಳ್ಳಿ. 30 ವರ್ಷದ ನಂತರ ಅಂಡಾಶಯದಲ್ಲಿ ಅಂಡಾಣು ಉತ್ಪತ್ತಿ ಹಾಗೂ ಅದರ ಗುಣಮಟ್ಟ ಹಾಗೂ ಅಂಡಾಶಯದ ಮೀಸಲು ಸಾಮರ್ಥ್ಯ ಕಡಿಮೆಯಾಗುತ್ತದೆ. ಹಾಗಾಗಿ ಈ ವಯಸ್ಸಿನಲ್ಲಿಯೇ ಮಗು ಪಡೆಯುವುದು ಉತ್ತಮ. ಗರ್ಭಧಾರಣೆಗೂ ಮೊದಲೇ ಸಾಕಷ್ಟು ಮುಂಜಾಗ್ರತಾ ಕ್ರಮ ಅನುಸರಿಸಿ. ಇದಕ್ಕಾಗಿ ಆಪ್ತ ಸಮಾಲೋಚನೆಗೆ ಒಳಗಾದರೆ ಒಳ್ಳೆಯದು.
ಸಮತೂಕ ಕಾಯ್ದುಕೊಳ್ಳಿ. ಗರ್ಭಧಾರಣೆಯಲ್ಲಾಗುವ ನ್ಯೂರಲ್ ಟ್ಯೂಬ್ ನ್ಯೂನತೆಯನ್ನು ತಡೆಗಟ್ಟಲು ಫೋಲಿಕ್ ಆ್ಯಸಿಡ್ ಮಾತ್ರೆಗಳನ್ನು ಗರ್ಭಧಾರಣೆಗೂ ಮೊದಲು ಆರರಿಂದ ಎಂಟು ವಾರ ಸೇವಿಸಬೇಕು. ಹಿಮೋಗ್ಲೋಬಿನ್ ಮಟ್ಟ ಕನಿಷ್ಠ 11ರಷ್ಟಿರಬೇಕು. ಮಧುಮೇಹ, ಏರು ರಕ್ತದೊತ್ತಡ, ಮೂರ್ಛೆರೋಗ, ಆಸ್ತಮಾ, ಜನ್ಮಜಾತ ಹೃದ್ರೋಗಗಳಿದ್ದರೆ, ಚಿಕಿತ್ಸೆಯಲ್ಲಿದ್ದರೆ, ವೈದ್ಯರಿಂದ ಮಾಹಿತಿ ಪಡೆದುಕೊಳ್ಳಿ. ತಂಬಾಕು, ಧೂಮಪಾನ, ಮದ್ಯಪಾನದಂಥ ದುಶ್ಚಟಗಳಿಂದ ದೂರವಿರಿ. ದೈಹಿಕ ಮತ್ತು ಮಾನಸಿಕ ಸದೃಢತೆ ಇದ್ದರೆ ಆರೋಗ್ಯವಂತ ಮಗು ಪಡೆಯಬಹುದು.
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.