ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 ಲಸಿಕೆಗಳಲ್ಲಿ ಯಾವುದು ಉತ್ತಮ? ಇದನ್ನು ಓದಿ

ಅಕ್ಷರ ಗಾತ್ರ

ಮೆಲ್ಬೋರ್ನ್‌: ಕೋವಿಡ್‌-19 ಮಹಾಮಾರಿ ವಿರುದ್ಧ ಈಗಾಗಲೇ ವಿಶ್ವದಾದ್ಯಂತ ಹತ್ತು ಹಲವು ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಭಾರತದಲ್ಲೇ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳು ಬಳಕೆಯಲ್ಲಿವೆ. ಆದರೆ ಲಸಿಕೆಗಳ ಪೈಕಿ ಯಾವ ಲಸಿಕೆ ಒಳ್ಳೆಯದು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಲಸಿಕೆಗಳ ಪೈಕಿ ಯಾವ ಲಸಿಕೆ ಉತ್ತಮ? ಪ್ರಾದೇಶಿಕವಾಗಿ ಲಭ್ಯವಿರುವ ಯಾವುದೇ ಲಸಿಕೆಯು ಕೋವಿಡ್‌ ಸೋಂಕಿನಿಂದ ರಕ್ಷಣೆ ನೀಡುತ್ತದೆಯೇ? ವಯೋಮಿತಿಗೆ ಅನುಗುಣವಾಗಿ ಲಸಿಕೆಗಳು ಪ್ರಭಾವ ಬೀರುತ್ತವೆಯೇ? ಎಂಬೆಲ್ಲ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಈ ಬಗ್ಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ 'ದಿ ಪೀಟರ್‌ ಡೊಹರ್ಟಿ ಇನ್ಸ್‌ಟಿಟ್ಯೂಟ್‌ ಫಾರ್‌ ಇನ್‌ಫೆಕ್ಷನ್‌ ಆ್ಯಂಡ್‌ ಇಮ್ಯುನಿಟಿ'ಯ ಸಂಶೋಧಕರಾದ ವೆನ್‌ ಶಿ ಲೀ ಮತ್ತು ಹ್ಯೋನ್‌ ಕ್ಷಿ ತಾನ್‌ ಉತ್ತರಿಸುವ ಪ್ರಯತ್ನ ನಡೆಸಿದ್ದಾರೆ.

ಪ್ರಸ್ತುತ ಯಾವುದು ಉತ್ತಮ ಲಸಿಕೆ ಎಂಬುದಕ್ಕಿಂತ ಲಸಿಕೆ ಲಭ್ಯತೆಯೇ ಪ್ರಮುಖ ಆಯ್ಕೆಯಾಗಿದೆ. ಲಸಿಕೆಗಳು ಯಾವುವೇ ಆಗಿರಲಿ, ವಿಶ್ವದಾದ್ಯಂತ ಎಲ್ಲರಿಗೂ ಲಭ್ಯವಾಗಬೇಕಿದೆ. ಪ್ರಸ್ತುತ ಲಭ್ಯವಿರುವ ವೈದ್ಯಕೀಯ ದತ್ತಾಂಶ ಪ್ರಕಾರ ಅಥವಾ ಆರೋಗ್ಯ ತಜ್ಞರು ಸಲಹೆ ನೀಡುವ ಲಸಿಕೆಯನ್ನು ಪಡೆಯಬಹುದು. ಯಾವ ಕೋವಿಡ್‌ ಲಸಿಕೆ ಉತ್ತಮ ಎಂಬುದಕ್ಕೆ ಬಹಳ ಸರಳವಾದ ಉತ್ತರವೆಂದರೆ ಸದ್ಯ ಯಾವ ಲಸಿಕೆ ಲಭ್ಯವಿದೆಯೋ ಆ ಲಸಿಕೆ ಉತ್ತಮ.

ಈ ಉತ್ತರ ಸಮಾಧಾನ ನೀಡದೆ ಇರಬಹುದು. ಆದರೆ ಕೋವಿಡ್‌ ಲಸಿಕೆಗಳ ಮಧ್ಯೆ ಹೋಲಿಕೆ ಮಾಡಲು ಕಷ್ಟ ಏಕೆ ಎಂಬುದಕ್ಕೆ ಉತ್ತರ ಇಲ್ಲಿದೆ.

ವೈದ್ಯಕೀಯ ಪರೀಕ್ಷೆಗಳ ಆಧಾರದಲ್ಲಿ ಯಾವ ಕೋವಿಡ್‌ ಲಸಿಕೆ ಉತ್ತಮ ಎಂದು ಹೇಳಬಹುದು ಎಂದು ನೀವು ಯೋಚಿಸಿರಬಹುದು. ಆದರೆ ವಿಶ್ವದೆಲ್ಲೆಡೆ ಲಸಿಕೆಗೆ ಅನುಮತಿ ನೀಡುವ ಮೊದಲು ಆರೋಗ್ಯ ತಜ್ಞರು ಮತ್ತು ಉನ್ನತ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಮೂರು ಪ್ರಯೋಗಗಳನ್ನು ನಡೆಸಿರುತ್ತಾರೆ. ಈ ಪ್ರಯೋಗಗಳು ಸಾಮಾನ್ಯವಾಗಿ 10 ಸಾವಿರ ಜನರ ಮೇಲೆ ನಡೆದಿರುತ್ತದೆ. ಲಸಿಕೆಯನ್ನು ಪಡೆದ ಎಷ್ಟು ಮಂದಿಗೆ ಕೋವಿಡ್‌ ಬಂದಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಪ್ಲಸಿಬೊ (ದೈಹಿಕ ಪರಿಣಾಮಕ್ಕಿಂತ ಮಾನಸಿಕ ಪರಿಣಾಮಕ್ಕಾಗಿ ನೀಡಲಾಗುವ ಔಷಧ ಅಥವಾ ಚಿಕಿತ್ಸಾ ವಿಧಾನ) ಔಷಧಿ ಪಡೆದ ಎಷ್ಟು ಮಂದಿಗೆ ಕೋವಿಡ್‌ ಬಂದಿದೆ ಎಂಬುದನ್ನು ಪರಿಗಣಿಸಲಾಗುತ್ತದೆ. ಇವೆಲ್ಲವೂ ಲಸಿಕೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಫಲಿತಾಂಶವನ್ನು ಬಹಳ ಸ್ಪಷ್ಟವಾಗಿ ನೀಡುತ್ತವೆ. ಈ ಎಲ್ಲ ಪ್ರಯೋಗಗಳಲ್ಲಿ ಉತ್ತೀರ್ಣಗೊಂಡ ಬಳಿಕ ಲಸಿಕೆಗೆ ಅನುಮತಿ ನೀಡಲಾಗುತ್ತದೆ.

ಒಂದೊಂದು ಲಸಿಕೆ ಒಂದೊಂದು ರೀತಿಯಲ್ಲಿ ಪರಿಣಾಮಕಾರಿ ಎಂಬುದು ಗೊತ್ತಿದೆ. ಫೈಜರ್‌ ಲಸಿಕೆ ಶೇಕಡಾ 95ರಷ್ಟು ಪರಿಣಾಮಕಾರಿ ಎಂದಿದೆ. ಹಾಗೆಯೇ ಅಸ್ಟ್ರಾಜೆನೆಕಾ ಶೇಕಡಾ 62-90ರಷ್ಟು ಪರಿಣಾಮಕಾರಿ ಎಂದಿದೆ. ಇದು ಡೋಸ್‌ ನೀಡುವಿಕೆ ಸಂದರ್ಭ ಪಾಲಿಸುವ ಕ್ರಮಗಳ ಮೇಲೆ ಅವಲಂಬಿತವಾಗಿದೆ. ಪ್ರಯೋಗಗಳು ವಿವಿಧ ಪ್ರದೇಶಗಳಲ್ಲಿ, ವಿವಿಧ ವಯೋಮಾನದವರಲ್ಲಿ, ವಿವಿಧ ಸಮುದಾಯದ ಮೇಲೆ ನಡೆಸಲಾಗಿರುತ್ತದೆ. ಹಾಗಾಗಿ ಲಸಿಕೆಗಳ ಪರಿಣಾಮ ಎಲ್ಲ ಕಡೆಯೂ ಸಮಾನ ಪರಿಣಾಮ ಬೀರುವುದಿಲ್ಲ.

ಲಸಿಕೆ ಪಡೆದ ಎಲ್ಲರನ್ನು ಪರಸ್ಪರ ಹೋಲಿಕೆ ಮಾಡಿ ಪರೀಕ್ಷಿಸಬಹುದು. ಇಂಗ್ಲೆಂಡ್‌ನಲ್ಲಿ ಅಸ್ಟ್ರಾಜೆನೆಕಾ ಮತ್ತು ವಲ್ನೆವಾ ಲಸಿಕೆ ನಡುವಣ ವ್ಯತ್ಯಾಸವನ್ನು ತಿಳಿಯಲು ಲಸಿಕೆ ಪಡೆದ ಎಲ್ಲರನ್ನು ಪರಸ್ಪರ ಹೋಲಿಕೆ ಮಾಡಿ ನೋಡಲಾಗುತ್ತಿದೆ, ವರ್ಷಾಂತ್ಯಕ್ಕೆ ಮೂರನೇ ಪ್ರಯೋಗದ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ.

ಸಾಮಾನ್ಯವಾಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದವರಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿಯಬಹುದು. ಆದರೆ ಪರಿಣಾಮಕಾರಿತ್ವ ತಿಳಯಬೇಕಿದ್ದರೆ ಪ್ರಯೋಗಗಳೇ ಆಗಬೇಕು. ಇಂಗ್ಲೆಂಡ್‌ನ ಇತ್ತೀಚಿನ ದತ್ತಾಂಶದ ಪ್ರಕಾರ ಫೈಜರ್‌ ಮತ್ತು ಅಸ್ಟ್ರಾಜೆನೆಕಾ ಎರಡೂ ಒಂದೇ ರೀತಿಯ ಪರಿಣಾಮಕಾರಿತ್ವವನ್ನು ತೋರಿವೆ. ಎರಡು ಲಸಿಕೆಗಳು ಕೋವಿಡ್‌-19 ಸೋಂಕಿನ ಗುಣಲಕ್ಷಣಗಳನ್ನು ಹೋಗಲಾಡಿಸುವಲ್ಲಿ, ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆಯನ್ನು ತಪ್ಪಿಸುವಲ್ಲಿ ಮತ್ತು ಸಾವು ಸಂಭವಿಸದಂತೆ ತಡೆಯುವಲ್ಲಿ ಸಫಲಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT