ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ–ಆರೋಗ್ಯ; ಸಂಕ್ರಾಂತಿ ಸಂಭ್ರಮ

‘ಒಗ್ಗರಣೆ ಡಬ್ಬಿ‘ಯಲ್ಲಿದೆ ಆರೋಗ್ಯ–ಔಷಧ
Last Updated 7 ಜನವರಿ 2022, 19:30 IST
ಅಕ್ಷರ ಗಾತ್ರ

ಚುಮುಚುಮು ಚಳಿಗೆ ನಾಲಿಗೆಯಷ್ಟೇ ಬಿಸಿಯಾದರೆ ಸಾಲದು. ಆಹಾರ ಆರೋಗ್ಯವನ್ನು ಚೆಚ್ಚಗಾಗಿಸಬೇಕು. ಚಳಿಗಾಲದ ಬಿಸಿ, ಆಹಾರ ಪೇಯ ಏನಿರಬೇಕು? ಹೇಗಿರಬೇಕು? ಒಂದಿಷ್ಟು ಟಿಪ್ಸ್ ಇಲ್ಲಿದೆ...

***

ಸಂಭ್ರಮದ ಹಬ್ಬ ಸಂಕ್ರಾಂತಿ ಸಮೀಪಿಸುತ್ತಿದೆ. ಎಳ್ಳು, ಬೆಲ್ಲ, ಕಬ್ಬು, ಕಡಲೆಕಾಯಿ, ಅವರೆಕಾಳು ಮೆಲ್ಲುವ ಕಾಲವಿದು. ಹಬ್ಬದಲ್ಲಿ ನೆಂಟರು, ಆಪ್ತರಿಗೆ ಎಳ್ಳು–ಬೆಲ್ಲ ಹಂಚುತ್ತಾ, ಒಳ್ಳೆ ಮಾತಾಡೋಣ ಎನ್ನುತ್ತಾ ಸಂಭ್ರಮಿಸುವ ಸಮಯವಿದು.

ಹೀಗೆ ಸಂಭ್ರಮಿಸುವ ಕಾಲದಲ್ಲಿ ಕಳೆದ ಎರಡು ಸಂಕ್ರಾಂತಿಗೆ ‘ಕೋವಿಡ್‌’ ಭೀತಿ ಎದುರಾಗಿತ್ತು. ಈ ಬಾರಿಯೂ ಕೋವಿಡ್‌ನ ರೂಪಾಂತರ ತಳಿ ಓಮೈಕ್ರಾನ್ ಭೀತಿ ಹುಟ್ಟಿಸುತ್ತಿದೆ. ಈ ರೂಪಾಂತರ ವೈರಾಣುವಿನಿಂದ ನಮ್ಮನ್ನು ನಾವು ಕಾಪಾಡಿಕೊಂಡು ನಮ್ಮ ಕುಟುಂಬವನ್ನೂ ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ.

ಇದು ಶಿಶಿರ ಋತುವಿನಕಾಲ. ಬೆಳಿಗ್ಗೆ ಚಳಿ ಹೆಚ್ಚು. ಮಧ್ಯಾಹ್ನ ಬಿಸಿಲು ಹೆಚ್ಚು. ಹೊರಗಿನ ಉಷ್ಣತೆಯೊಂದಿಗೆ ದೇಹದ ಉಷ್ಣತೆ ಸೆಣಸಾಡುತ್ತಿರುತ್ತದೆ. ಈ ಸಮಯದಲ್ಲಿ ಶೀತ, ಕೆಮ್ಮು, ಗಂಟಲು ನೋವು, ಫ್ಲೂ ಜ್ವರದಂತಹ ವ್ಯಾಧಿಗಳು ಬಾಧಿಸುವುದು ಸಾಮಾನ್ಯ. ಈ ಲಕ್ಷಣಗಳು ಓಮೈಕ್ರಾನ್ ಆಗಿರಬಹುದು, ಆಗಿಲ್ಲದೆಯೋ ಇರಬಹುದು. ಆದರೆ, ಇಂಥ ಸಣ್ಣ ಪುಟ್ಟ ವ್ಯಾಧಿಗಳನ್ನು ನಮ್ಮ ಅಡುಗೆ ಮನೆಯಲ್ಲಿರುವ ‘ಒಗ್ಗರಣೆ ಡಬ್ಬಿ’ ಎಂಬ ಔಷಧದ ಖಜಾನೆಯಲ್ಲಿರುವ ಮಸಾಲೆಗಳಿಂದಲೇ ನಿವಾರಿಸಿಕೊಳ್ಳಬಹುದು.

ಹೀಗಿರಲಿ ನಿಮ್ಮ ಆಹಾರ..
ನಿತ್ಯ ತಯಾರಿಸುವ ಆಹಾರದಲ್ಲಿ ಹುಳಿ, ಸಿಹಿ, ಉಪ್ಪು ರುಚಿ/ ಅಂಶಗಳಿರುವ ಹುಣಸೆಹಣ್ಣು, ನಿಂಬೆಹಣ್ಣು, ಟೊಮೆಟೊದಂತಹ ಹಣ್ಣು–ತರಕಾರಿಗಳನ್ನು ಬಳಸಬೇಕು. ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ಹಿತಮಿತವಾಗಿ ಬಳಸಬೇಕು.

ಅನ್ನ, ಮುದ್ದೆ, ಚಪಾತಿ, ಗಂಜಿ ಯಾವುದೇ ಆಹಾರವಾಗಲಿ, ಬಿಸಿಯಾಗಿರುವಾಗಲೇ ಸೇವಿಸಬೇಕು. ತಂಗಳ ಆಹಾರ, ಫ್ರಿಜ್‌ನಲ್ಲಿಟ್ಟಿರುವ ಆಹಾರ, ಐಸ್‌ಕ್ರೀಂ ಬೇಡವೇ ಬೇಡ.

ತೊಗರಿಬೇಳೆ, ಹೆಸರುಬೇಳೆ, ಹುರಳಿಕಾಳನ್ನು ಬೇಯಿಸಿ ತೆಗೆದ ಕಟ್ಟಿನಿಂದ ತಯಾರಿಸಿದ ಸಾರು ತುಂಬಾ ಒಳ್ಳೆಯದು. ದಾಳಿಂಬೆಯ ಸಾರು, ನೆಲ್ಲಿಕಾಯಿ ಸಾರು, ನುಗ್ಗೆಸೊಪ್ಪಿನ ಸಾರು, ಬದನೆಕಾಯಿ, ಸುವರ್ಣಗೆಡ್ಡೆ, ಮೂಲಂಗಿ, ಮೆಂತ್ಯೆಸೊಪ್ಪು ಈ ಕಾಲಕ್ಕೆ ಬಹಳ ಸೂಕ್ತವಾದ ಖಾದ್ಯಗಳು.

ಇವೆಲ್ಲ ಕೇವಲ ಆಹಾರವಾಗಿ ಹಸಿವು ನೀಗಿಸುವುದು ಮಾತ್ರವಲ್ಲ, ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ರೋಗಾಣುಗಳ ವಿರುದ್ಧ ಹೋರಾಡಲು ದೇಹಕ್ಕೆ ಚೈತನ್ಯ ತುಂಬುತ್ತವೆ.

ಗೋಧಿ ಚಿತ್ರಾನ್ನ: ಗೋಧಿಯನ್ನು ಕುಟ್ಟಿ, ನುಚ್ಚು ಮಾಡಿಕೊಂಡು, ಅದನ್ನು ನೀರಿನಲ್ಲಿ ಬೇಯಿಸಿಕೊಳ್ಳಬೇಕು. ಇದಕ್ಕೆ ಒಗ್ಗರಣೆ ಹಾಕಿ, ಕಾಳುಮೆಣಸು, ಉಪ್ಪು ಹಾಕಿ ನಂತರ ನಿಂಬೆರಸ ಬೆರೆಸಿದರೆ ಗೋಧಿ ಚಿತ್ರಾನ್ನ ಸಿದ್ಧ. ಇದನ್ನು ಬಿಸಿ ಇರುವಾಗಲೇ ಸೇವಿಸಬೇಕು.

ಕೆಂಡದ ಗೋಧಿ ರೊಟ್ಟಿ:ಒಂದು ಭಾಗ ಗೋಧಿಹಿಟ್ಟಿಗೆ ಸ್ವಲ್ಪ ಕಡಲೆಹಿಟ್ಟು ಬೆರೆಸಿ. ರುಚಿಗೆ ತಕ್ಕಷ್ಟು ಓಮ, ಇಂಗು, ಉಪ್ಪು, ತುಪ್ಪ ಹಾಕಿ ಕಲೆಸಿ. ನಂತರ ಲಟ್ಟಿಸಿ, ಕೆಂಡದ ಮೇಲೆ ಸುಡಬೇಕು.

ಬಿಸಿ ಬಿಸಿ ರೊಟ್ಟಿ ಚಳಿಗೂ ಹಿತಕರ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಜೀರ್ಣಕ್ರಿಯೆ ಸುಲಭ ಮತ್ತು ಕಫ, ಕೆಮ್ಮು, ನೆಗಡಿ, ಉಬ್ಬಸವಿರುವ ರೋಗಿಗಳಿಗೆ ಉತ್ತಮ ಆಹಾರ. ಗೋಧಿ ಖಾದ್ಯಗಳ ಜೊತೆಗೆ, ಹೆಸರುಕಾಳು, ಕಡಲೆಕಾಳು, ಮಡಕೆಕಾಳು, ಅವರೆಕಾಳುಗಳಿಂದ ಉಸುಲಿ ತಯಾರಿಸಿ ಸೇವಿಸಬಹುದು.

ಜೇಷ್ಠ ಮಧು ಸೂಪ್
ಜೇಷ್ಠ ಮಧು ಸೂಪ್‌ ಬೇರೆಲ್ಲ ಸೂಪ್‌ಗಳಿಗಿಂತ ವಿಶಿಷ್ಟವಾಗಿದೆ. ಬೇಕಾದ ಸಾಮಗ್ರಿಗಳು: ಹೆಸರುಬೇಳೆ, ತೊಗರಿಬೇಳೆ – ತಲಾ ಎರಡು ಚಮಚ, ಟೊಮೆಟೊ 2, ಜೇಷ್ಠಮಧು 100 ಗ್ರಾಂ, ಉಪ್ಪು, ಬೆಲೆ, ಕಾಳುಮೆಣಸು ಪುಡಿ.

ತಯಾರಿಸುವ ವಿಧಾನ: ಜೇಷ್ಠಮಧುವನ್ನು ಜಜ್ಜಿ ಹೆಸರುಬೇಳೆ, ತೊಗರಿಬೇಳೆ ಮತ್ತು ಟೊಮೆಟೊದೊಂದಿಗೆ ಸೇರಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ಬೆಂದಿರುವ ಜೇಷ್ಠಮಧುವನ್ನು ಹಿಂಡಿ ರಸ ತೆಗೆದು, ನಾರನ್ನು ತೆಗೆದು ಹಾಕಿ. ನಂತರ ಬೆಂದಿರುವ ಎಲ್ಲ ಪದಾರ್ಥಗಳನ್ನು ರುಬ್ಬಿ, ಉಪ್ಪು, ಬೆಲ್ಲ, ಬೆರೆಸಿ ಒಲೆಯ ಮೇಲಿಟ್ಟು ಕುದಿಸಬೇಕು. ನಂತರ ಕಾಳುಮೆಣಸು ಪುಡಿ ಬೆರೆಸಿದರೆ ಜೇಷ್ಠಮಧು ಸೂಪ್ ಸಿದ್ಧ. ಇದನ್ನು ಬಿಸಿಯಾಗಿರುವಾಗಲೇ ಕುಡಿಯಬೇಕು. ಕೆಮ್ಮು, ನೆಗಡಿ, ಗಂಟಲುನೋವು, ಜ್ವರದಿಂದ ಬಳಲುವವರಿಗೆ ಇದು ಉತ್ತಮ ದ್ರವರೂಪದ ಆಹಾರ.

ಶುಂಠಿ, ತುಳಸಿಯೊಂದಿಗೆ ಬಿಸಿ ನೀರು
ವಾತಾವರಣ ಥಂಡಿ ಇರುವಾಗ ನೀರನ್ನು ಕುದಿಸಿ ಕುಡಿಯಬೇಕು. ಬರೀ ಬಿಸಿನೀರು ಕುಡಿಯುವುದು ಕೆಲವರಿಗೆ ಅಪಥ್ಯ. ಹಾಗಾಗಿ, ನೀರು ಕುದಿಯುವಾಗ ಚಿಕ್ಕದಾದ ಶುಂಠಿ ತುಂಡು ಹಾಕಿ. ಶುಂಠಿ ಬೆರೆತ ನೀರು ದೇಹದ ಉಷ್ಣತೆ ಕಾಪಾಡುತ್ತದೆ. ಅಲ್ಲದೇ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೇ ನೀರಿಗೆ ತುಳಸಿ ಎಲೆಗಳನ್ನು ಹಾಕಿದರೆ, ಇನ್ನೂ ಒಳ್ಳೆಯದು.

ಕಷಾಯದ ಪುಡಿ: ಧನಿಯಾ 100 ಗ್ರಾಂ, ಜೀರಿಗೆ 50 ಗ್ರಾಂ, ಕಾಳುಮೆಣಸು 50 ಗ್ರಾಂ, ಜೇಷ್ಠಮಧು 50 ಗ್ರಾಂ, ಹಿಪ್ಪಲಿ 50 ಗ್ರಾಂ, ದಾಲ್ಚಿನ್ನಿ 25 ಗ್ರಾಂ, ಒಣಶುಂಠಿ, ಏಲಕ್ಕಿ, ಜಾಪತ್ರೆ, ಜಾಯಿಕಾಯಿ ತಲಾ 10 ಗ್ರಾಂ. ಇವೆಲ್ಲವನ್ನೂ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಬೇಕು.

ಒಂದು ಲೋಟ ನೀರಿಗೆ ಅರ್ಧ ಚಮಚ ಈ ಪುಡಿಯನ್ನು ಬೆರೆಸಿ ಸಣ್ಣಗಿನ ಉರಿಯಲ್ಲಿ ಕಾಯಿಸಬೇಕು. ಮೂರ್ನಾಲ್ಕು ನಿಮಿಷ ಕುದಿಸಿದ ನಂತರ ಬೆಲ್ಲ ಬೆರೆಸಿ ಕುಡಿಯಬೇಕು. ಬೇಕಾದರೆ ಹಾಲನ್ನೂ ಬೆರೆಸಿಕೊಳ್ಳಬಹುದು.

ಗಿಡಮೂಲಿಕೆಗಳ ಚಹಾ
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ನಿತ್ಯ ಚಹಾ ಮಾಡುತ್ತಾರೆ. ಹೀಗೆ ಚಹಾ ತಯಾರಿಸುವಾಗ ತುಳಸಿ ಎಲೆ, ನಿಂಬೆ ಹುಲ್ಲು, ಶುಂಠಿ, ಪುದಿನ ಸೇರಿಸಿ. ಗಿಡಮೂಲಿಕೆಗಳ ಚಹಾ ದೇಹವನ್ನು ಬೆಚ್ಚಗಿಡುತ್ತದೆ. ರೋಗನಿರೋಧಕ ಶಕ್ತಿಯನ್ನೂ ನೀಡುತ್ತದೆ.

ಹೀಗೆ ಆಹಾರ ಕ್ರಮ, ಕುಡಿಯುವ ನೀರು, ಉಡುಪು, ಸ್ನಾನ ಎಲ್ಲದರಲ್ಲೂ ತುಸು ಬದಲಾವಣೆ ಮಾಡಿಕೊಂಡರೆ ಪ್ರತಿ ಮನೆಯಲ್ಲೂ ಸಂಕ್ರಾಂತಿ ಸಂಭ್ರಮದ ಜೊತೆಗೆ ಆರೋಗ್ಯಪೂರ್ಣವಾಗಿರುತ್ತದೆ. ಸಂತಸವೂ ಹೆಚ್ಚುತ್ತದೆ.

ಬೆಚ್ಚಗಿನ ಉಡುಪು, ತೈಲ ಮಜ್ಜನ
ಚಳಿಗಾಲದಲ್ಲಿ ದೇಹದೊಳಗಿನ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ, ಹೊರಭಾಗವನ್ನೂ ಬೆಚ್ಚಗಿಡಬೇಕು. ಹಾಗಾಗಿ ಮುಂಜಾನೆ, ಸಂಜೆ ವೇಳೆ ಸ್ವೆಟರ್, ಟೋಪಿ, ಗ್ಲೌಸ್, ಸಾಕ್ಸ್‌ ಹಾಕಿಕೊಳ್ಳಿ. ಮುಂಜಾನೆ ಮಂಜು ಸುರಿಯುವುದರಿಂದ ಬೆಳಗಿನ ವಾಕಿಂಗ್‌ ಅನ್ನು ಸಂಜೆಗೆ ಬದಲಿಸಿಕೊಳ್ಳಿ.

ಸ್ನಾನ ಮಾಡುವಾಗ, ಬಿಸಿ ನೀರಿಗೆ 4 ರಿಂದ 5 ಹನಿಯಷ್ಟು ನೀಲಗಿರಿ ತೈಲವನ್ನು ಬೆರೆಸಿಕೊಳ್ಳಿ. ಚಳಿಗಾಲದಲ್ಲಿ ಚರ್ಮ ಬಿರಿಯುವದರಿಂದ ವಾರಕ್ಕೊಮ್ಮೆ ಎಳ್ಳೆಣ್ಣೆ ಇಲ್ಲವೇ ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಂಡು ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಬೇಕು.

ಸುಗ್ಗೀಲಿ ಹುಗ್ಗಿ..
ಸಂಕ್ರಾಂತಿ ಸುಗ್ಗಿ ಹಬ್ಬ. ‘ಸುಗ್ಗೀಲಿ ಹುಗ್ಗಿಗೆ ಬರವೇ..’ ಎಂಬ ಮಾತಿದೆ. ಚಳಿಗಾಲದಲ್ಲಿ ಹುಗ್ಗಿಯ ಸೇವನೆ ಹಿತಕರವಾಗಿರುತ್ತದೆ. ಹೆಸರುಬೇಳೆಯ ಹುಗ್ಗಿ ದೇಹದ ಶಕ್ತಿ ಹೆಚ್ಚಿಸುವು ದಲ್ಲದೇ, ನಿಧಾನವಾಗಿ ಜೀರ್ಣವಾಗುತ್ತದೆ.

ಈ ಕಾಲದಲ್ಲಿ ರಾತ್ರಿ ದೀರ್ಘವಾಗಿರುತ್ತದೆ. ಹಗಲು ಕಡಿಮೆ ಇರುತ್ತದೆ. ಹಾಗಾಗಿ ಬೆಳಿಗ್ಗೆ ಬೇಗನೇ ಹಸಿವಾಗುವ ಕಾರಣದಿಂದ ಹುಗ್ಗಿಯ ಸೇವನೆ ರೂಢಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT