ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Diabetes Day | ಮಧುಮೇಹ: ಇರಲಿ ಎಚ್ಚರ

Last Updated 14 ನವೆಂಬರ್ 2022, 20:30 IST
ಅಕ್ಷರ ಗಾತ್ರ

ಪ್ರತಿ ವರ್ಷ ನವೆಂಬರ್ 14ರಂದುವಿಶ್ವ ಮಧುಮೇಹ ದಿನವನ್ನಾಗಿ ವಿಶ್ವಾದ್ಯಂತ ಆಚರಿಸುತ್ತೇವೆ. ಈ ದಿನವನ್ನು ಹೀಗೆ ಆಚರಿಸಲು ಒಂದು ಕಾರಣವೂ ಇದೆ. ಇನ್ಸುಲಿನ್ ಅನ್ನು ಕಂಡುಹಿಡಿದ ಪ್ರಾತಃಸ್ಮರಣೀಯ ಡಾ. ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನ ನವೆಂಬರ್ 14.

ಜನವರಿ 11, 1922 – ಇನ್ಸುಲಿನನ್ನು ಅನ್ವೇಷಿಸಿದ ಮಹಾದಿನ. ಆ ಮಹಾದಿನದಂದು ಟೋರಾಂಟೋದಲ್ಲಿ ಸಾವಿನ ದವಡೆಯಲ್ಲಿ ನರಳುತ್ತಿದ್ದ 14 ವರ್ಷ ವಯಸ್ಸಿನ ಲಿಯೋನಾರ್ಡ್ ಥಾಮ್‍ಸನ್ ಎಂಬ ಹದಿಹರೆಯದ ಹುಡುಗನಿಗೆ ಚುಚ್ಚುಮದ್ದಿನ ಮುಖಾಂತರಇನ್ಸುಲಿನ್ ಪ್ರಯೋಗ ಮಾಡಿದರು. ಇನ್ಸುಲಿನ್ ಚುಚ್ಚುಮದ್ದಿನಿಂದ ಥಾಮ್ಸನ್ ಮುಂದೆ 13 ವರ್ಷ ಬದುಕಿದ್ದ. ಆದರೆ ಮಧುಮೇಹದಿಂದ ಆಗುವ ತೊಡಕುಗಳ ಪರಿಣಾಮದಿಂದ ತನ್ನ 27ನೇ ವಯಸ್ಸಿನಲ್ಲಿ ಮೃತನಾದ. ಅಂದಿನಿಂದ ಇನ್ಸುಲಿನನ್ನು ‘ಜೀವರಕ್ಷಕ ಔಷಧಿ’ ಎಂದು ವಿಶ್ವದಾದ್ಯಂತ ಪರಿಗಣಿಸಲಾಯಿತು. ಈ ಮಹತ್ತರವಾದ ಸಂಶೋಧನೆಯ ವಾರ್ತೆ 1923ರ ಆಗಸ್ಟ್‌ 27ರಂದು ಜಗತ್ತಿನಾದ್ಯಂತ ಪ್ರಸಾರವಾಯಿತು. ಫ್ರೆಡರಿಕ್ ಬ್ಯಾಂಟಿಂಗ್‍ಗೆ ನೊಬೆಲ್ ಪ್ರಶಸ್ತಿಯನ್ನು ಅದೇ ವರ್ಷ ಪ್ರದಾನ ಮಾಡಲಾಯಿತು.ಬ್ಯಾಂಟಿಂಗ್ ಮಧುಮೇಹಕ್ಕೆ ಚಿಕಿತ್ಸೆಯನ್ನು ಕಂಡುಹಿಡಿಯಲು ತನ್ನ ವಿದ್ಯಾರ್ಥಿ ಚಾರ್ಲ್ಸ್‌ ಬೆಸ್ಟ್ ಎಂಬುವವರ ಸಹಾಯ ತೆಗೆದುಕೊಂಡರು. ಜೊತೆಗೆ ಜಾನ್ ಮೆಕ್ಲಾಯ್ಡ್ ಮೇಲ್ವಿಚಾರಣೆಯಲ್ಲಿ ಕೆನಡಾದ ಆಸ್ಪತ್ರೆಯಲ್ಲಿ ಸಂಶೋಧನೆಗಳನ್ನು ನಡೆಸಿದರು.

ಮಧುಮೇಹಿಗಳಲ್ಲಿ ಶೇ 30ರಷ್ಟು ಜನರಿಗೆ ಇನ್ಸುಲಿನ್ ಒಂದಲ್ಲಾ ಒಂದು ಸಮಯದಲ್ಲಿ ಬೇಕಾಗುತ್ತದೆ.

ಭಾರತ ದೇಶ ಮಧುಮೇಹಿಗಳ ರಾಜಧಾನಿ ಎಂಬ ಕುಖ್ಯಾತಿಯನ್ನು ಪಡೆದಿದೆ.ಮಾನವನು ಇಂದು ಕೃತಕ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದಾನೆ. ಯಾವುದೇ ಪ್ರಾಣಿ ಅಥವಾ ಮನುಷ್ಯನಾಗಲಿ ಪ್ರಕೃತಿ ಜನ್ಯವಾದ ಆಹಾರಗಳನ್ನೇ ತಿಂದು, ವ್ಯಾಯಾಮದಿಂದ ಬೆವರು ಸುರಿಸಿ, ಆಹಾರವನ್ನು ಅರಗಿಸಿಕೊಂಡರೆ ರೋಗಗಳ ಹಾವಳಿ ತಾನಾಗಿ ಕಡಿಮೆಯಾಗುತ್ತದೆ. ಆದರೆ ಈಗ ಸಕ್ಕರೆ ಮುಂತಾದ ಕೃತಕ ಆಹಾರಾಂಶಗಳನ್ನು ಬಳಸುವುದು ಹೆಚ್ಚಾಗಿದೆ. ಹಿಂದೆ ಆಹಾರಪದಾರ್ಥಗಳ ಅನ್ವೇಷಣೆಗಾಗಿ ಪ್ರಾಣಿಗಳಂತೆ ಮನುಷ್ಯರೂ ಓಡಾಡುತ್ತಿದ್ದರು. ನಾಗರಿಕತೆ ಬೆಳೆದ ಮೇಲೆ ಕೃತಕವಾಗಿ ಸಿದ್ಧವಾದ ಆಹಾರ ಸುಲಭವಾಗಿ ದೊರಕುತ್ತಿರುವುದರಿಂದ ಶರೀರಕ್ಕೆ ಶ್ರಮವಿಲ್ಲದೆ ಊಟ ಮಾಡುವ ಸ್ಥಿತಿಗೆ ಮನುಷ್ಯರು ತಲುಪಿದ್ದಾರೆ.

ಈ ಶ್ರಮರಹಿತ ಜೀವನಶೈಲಿಯ ಕೆಟ್ಟ ಪರಿಣಾಮಗಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿಗಳು ಸೇರಿವೆ. ನಾಲಿಗೆಯ ಚಾಪಲ್ಯದಿಂದ ಹೆಚ್ಚು ಸಕ್ಕರೆ, ಉಪ್ಪು, ಎಣ್ಣೆ ಸೇರಿರುವ ಆಹಾರವನ್ನು ತಿನ್ನುವುದು, ತಿಂದ ಆಹಾರವನ್ನು ಅರಗಿಸಲು ಬೇಕಾದಷ್ಟು ಓಡಾಟವನ್ನೂ ವ್ಯಾಯಾಮವನ್ನೂ ಮಾಡದಿರುವುದು, ಒಂದೇ ಕಡೆ ಕುಳಿತು ಕಾಲ ಕಳೆಯುವುದು, ನಡಿಗೆ ಇಲ್ಲದೆ ಸದಾ ವಾಹನವನ್ನು ಬಳಸುವುದು ಮೇದೋಜೀರಕಾಂಗದ ಇನ್ಸುಲಿನ್ ಉತ್ಪಾದನೆಯ ಶಕ್ತಿಯನ್ನು ಕುಗ್ಗಿಸುತ್ತಿದೆ. ಜೀವನಶೈಲಿಯನ್ನು ಬದಲಾಯಿಸಿಕೊಂಡರೆ, ಕೃತಕ ಆಹಾರಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದರೆ ಮಧುಮೇಹದ ಆಗಮನವನ್ನು ಮುಂದೂಡಬಹುದು.

ಅನೇಕರಲ್ಲಿ ಚಿಕಿತ್ಸೆ ಬೇಕೆ ಅಥವಾ ಬೇಡವೆ ಎಂಬ ಜಿಜ್ಞಾಸೆ ಇರುತ್ತದೆ. ಮಧುಮೇಹಕ್ಕೆ ಏಕೆ ಚಿಕಿತ್ಸೆ ಬೇಕು ಎಂದರೆ ದೇಹದಲ್ಲಿ ಮಿತಿಮೀರಿದ ಸಕ್ಕರೆ ಅಂಶ ದೇಹದಲ್ಲಿರುವ ಸಮಸ್ತ ಅಂಗಾಂಗಗಳಿಗೆ ಹಾನಿ ಮಾಡುವುದರಿಂದ ಮಾನವನಲ್ಲಿ ಹತ್ತು ಹಲವು ವ್ಯಾಧಿಗಳು ಹುಟ್ಟುತ್ತವೆ. ಆದ್ದರಿಂದ ಮಧುಮೇಹ ಪ್ರಾರಂಭವಾದಲ್ಲೇ ಚಿಕಿತ್ಸೆ ತೆಗೆದುಕೊಳ್ಳುವುದು ಲಾಭದಾಯಕ. ಸರಿಯಾದ ಮಟ್ಟದಲ್ಲಿ ರಕ್ತದಲ್ಲಿ ಗ್ಲೂಕೋಸ್ ಅಂಶವನ್ನೂ ರಕ್ತದೊತ್ತಡವನ್ನೂ ಜಿಡ್ಡಿನಂಶವನ್ನೂ ಇಟ್ಟುಕೊಂಡಿದ್ದರೆ, ಮಧುಮೇಹದಿಂದ ಆಗಬಹುದಾದ ಹತ್ತು ಹಲವು ತೊಡಕುಗಳನ್ನು ನಿವಾರಿಸಿಕೊಳ್ಳಬಹುದು. ಮಧುಮೇಹಿಗಳು ಜೀವನಶೈಲಿಯ ಕಡೆಗೆ ಗಮನ ಕೊಡುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT