ಸೋಮವಾರ, ಸೆಪ್ಟೆಂಬರ್ 26, 2022
24 °C

ಇಂದು ವಿಶ್ವ ಹೆಪಟೈಟಿಸ್‌ ದಿನ: ಹೆಪಟೈಟಿಸ್‌ ಬಗ್ಗೆ ಜಾಗೃತಿ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿ ವರ್ಷ ಜುಲೈ 28 ರಂದು, ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಹೆಪಟೈಟಿಸ್ ಯಕೃತ್ತಿನ ಉರಿಯೂತವನ್ನು ಸೂಚಿಸುತ್ತದೆ, ಇದು ಸಾಮಾನ್ಯವಾಗಿ ಹೆಪಟೋಟ್ರೋಪಿಕ್ (ಯಕೃತ್ತಿನ ನಿರ್ದಿಷ್ಟ) ವೈರಸ್‌ಗಳಾದ ಹೆಪಟೈಟಿಸ್ ಎ (ಎಚ್‌ಎವಿ), ಹೆಪಟೈಟಿಸ್ ಬಿ (ಎಚ್‌ಬಿವಿ), ಹೆಪಟೈಟಿಸ್ ಸಿ (ಎಚ್‌ಸಿವಿ), ಹೆಪಟೈಟಿಸ್ ಡಿ ಮತ್ತು ಹೆಪಟೈಟಿಸ್ ಇ (ಎಚ್‌ಇ)ಯಿಂದ ಉಂಟಾಗುತ್ತದೆ. ವೈರಸ್ ಸೋಂಕುಗಳ ಹೊರತಾಗಿ, ಹೆಪಟೈಟಿಸ್‌ನ ಇತರ ಕಾರಣಗಳಲ್ಲಿ, ಮದ್ಯಸಾರ, ಔಷಧಿಗಳು, ಸ್ವಯಂ ನಿರೋಧಕ ಶಕ್ತಿ ಮತ್ತು ಪಿತ್ತಜನಕಾಂಗದ ಕೊಬ್ಬಿನ ಕಾಯಿಲೆ ಸೇರಿವೆ. ದೀರ್ಘಾವಧಿಯಲ್ಲಿ ಯಕೃತ್ತಿನಲ್ಲಿನ ಉರಿಯೂತವು ಫೈಬ್ರೋಸಿಸ್, ಸಿರೋಸಿಸ್ ಮತ್ತು ವಿರಳವಾಗಿ ಯಕೃತ್ತಿನ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಭಾರತದಲ್ಲಿ, 100 ರಲ್ಲಿ 2 ರಿಂದ 4 ಪ್ರಕರಣಗಳು ಹೆಪಟೈಟಿಸ್ ಬಿ ರೋಗ ಇರುವುದು ಕಂಡು ಬರುತ್ತದೆ.

ಆದರೆ, ಕೇವಲ ಶೇ. 0.5-1 ಹೆಪಟೈಟಿಸ್ ಸಿ ಪ್ರಕರಣಗಳು ದಾಖಲಾಗಿವೆ.  ಹೆಪಟೈಟಿಸ್‌ನಲ್ಲಿ ಹೆಚ್ಚಾಗಿ ಭಾದಿಸುವುದೆಂರೆ ಹೆಪಟೈಟಿಸ್‌ ಬಿ ಮತ್ತು ಸಿ. ಕೆಲವರಿಗೆ ಈ ಎರಡರ ಮಧ್ಯೆ ವ್ಯತ್ಯಾಸ ಹಾಗೂ ಪರಿಣಾಮಗಳ ಬಗ್ಗೆ ಜಾಗೃತಿ ಇರುವುದರಿಲ್ಲ. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ.

ಹೆಪಟೈಟಿಸ್ ಬಿ & ಸಿ ದೀರ್ಘಕಾಲದ ಕಾಯಿಲೆಯೇ?
ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ದೀರ್ಘಾವಧಿಯ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಆದರೆ, ಹೆಪಟೈಟಿಸ್‌ ಸಿ, ಹೆಪಟೈಟಿಸ್ ಬಿ ಗಿಂತ ಹೆಚ್ಚು ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ಯಕೃತ್ತಿನ ಹಾನಿ, ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಇದೆ. ಇನ್ನು ಹೆಪಟೈಟಿಸ್‌ ಬಿ ಇದ್ದರೂ ಸಹ ದೀರ್ಘಕಾಲದ ಯಕೃತ್ತಿನ ಕಾಯಿಲೆಗೆ ಒಳಗಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಶೇ. 15 ರಿಂದ 25 ರಷ್ಟು ಜನರಲ್ಲಿ ಹೆಪಟೈಟಿಸ್‌ ತೀವ್ರತೆ ಕಂಡು ಬರಲಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ, ಒಬ್ಬ ವ್ಯಕ್ತಿ ಒಂದೇ ಬಾರಿಗೆ ಹೆಪಟೈಟಿಸ್‌ ಬಿ ಮತ್ತು ಸಿ ಎರಡನ್ನೂ ಹೊಂದಿರಬಹುದು. ಈ ರೀತಿಯ ಪ್ರಕರಣ ಅತಿ ವಿರಳವಾದರೂ, ಇಂಥ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುತ್ತದೆ.

ಹೆಪಟೈಟಿಸ್‌ಗೆ ಕಾರಣವೇನು?
ಹೆಪಟೈಟಿಸ್‌ ಹರಡುವಿಕೆಯ ಬಗ್ಗೆ ಪ್ರತಿಯೊಬ್ಬರು ಎಚ್ಚರವಹಿಸಬೇಕು. ಒಬ್ಬರು ಬಳಸಿದ ಸೂಜಿ ಮರುಬಳಕೆ ಮಾಡುವುದರಿಂದ, ಟ್ಯಾಟು ಹಾಕಿಸಲು ಬಳಸುವ ಸೂಜಿ ಮರುಬಳಕೆಯಿಂದ, ಅಸುರಕ್ಷಿತ ಲೈಂಗಿಕ ಇತಿಹಾಸ ಹೊಂದಿದ್ದರೆ ಹೆಪಟೈಟಿಸ್‌ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ, ಇಂಥ ವಿಷಯದಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು ಒಳಿತು.

ಹೆಪಟೈಟಿಸ್ ಬಿ & ಸಿ ಲಕ್ಷಣಗಳು ಇವು
ಗಾಢ ಹಳದಿ ಮೂತ್ರ, ಆಯಾಸ, ಶೀತ, ಕೀಲು ನೋವು, ವಾಕರಿಕೆ, ತೆಳು ಅಥವಾ ಗಾಢವಾದ ಮಲ, ವಾಕರಿಕೆ, ಚರ್ಮ ಅಥವಾ ಕಣ್ಣುಗಳ ಹಳದಿ (ಕಾಮಾಲೆ), ಮತ್ತು ನಿರ್ಜಲೀಕರಣವು ಸಂಭವಿಸಬಹುದಾದ ಕೆಲವು ರೋಗಲಕ್ಷಣಗಳು. ಹೆಪಟೈಟಿಸ್ ಬಿ ಹೊಂದಿರುವ ಕೆಲವು ಮಕ್ಕಳು ರೋಗದ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ.

ಹೆಪಟೈಟಿಸ್ ಬಿ ಮತ್ತು ಸಿಗೆ ಲಭ್ಯವಿರುವ ಚಿಕಿತ್ಸೆಗಳು:
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಲೋಕ ಸಾಕಷ್ಟು ಕಾಯಿಲೆಗೆ ತನ್ನದೇ ಚಿಕಿತ್ಸಾ ಕ್ರಮವನ್ನು ಕಂಡು ಹಿಡಿಯುವುದರಲ್ಲಿ ಮುಂದಿದೆ. ಅದರಲ್ಲಿ ಹೆಪಟೈಟಿಸ್‌ ಬಿ ಸಹ ಒಂದು. ಹೆಪಟೈಟಿಸ್‌ ಬಿಗೆ ವೈದ್ಯ ಲೋಕದಲ್ಲಿ ಉತ್ತಮವಾದ ಚಿಕಿತ್ಸೆ ಲಭ್ಯವಿದ್ದು, ಕಡಿಮೆ ವೆಚ್ಚದಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಸುಧಾರಿಸಿಕೊಳ್ಳಬಹುದು. ಆದರೆ, ಈ ಚಿಕಿತ್ಸೆಗಳು ದೀರ್ಘಕಾಲಿಕವಾಗಿದ್ದು, ರೋಗಿಗಳು ಇದಕ್ಕೆ ಸ್ಪಂದಿಸಬೇಕು.

ಹೆಪಟೈಟಿಸ್ ಬಿಗೆ ಈಗಾಗಲೇ ಲಸಿಕೆ ಲಭ್ಯವಿದ್ದು, ಮಕ್ಕಳಿಗೆ ಕೊಡಲಾಗುತ್ತದೆ. ಇದು ಭವಿಷ್ಯದಲ್ಲಿ ಬರಬಹುದಾದ ಹೆಪಟೈಟಿಸ್‌ ಬಿ ರೋಗ ನಿಯಂತ್ರಿಸಲು ನೆರವಾಗುತ್ತದೆ. ಆದರೆ, ಹೆಪಟೈಟಿಸ್ ಸಿಗೆ ಇದುವರೆಗೂ ಯಾವುದೇ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ, ಕೆಲವು ಮುನ್ನೆಚ್ಚರಿಕೆ ಕ್ರಮಗಳಿಂದ ಈ ಕಾಯಿಲೆಯಿಂದ ದೂರ ಇರಬಹುದು, ಅಸುರಕ್ಷಿತ ಲೈಂಗಿಕ ಕ್ರಿಯೆ, ಒಬ್ಬರು ಬಳಸಿದ ಸೂಜಿಗಳ ಮರುಬಳಕೆಯನ್ನು ತಡೆಯುವುದರಿಂದ ಹೆಪಟೈಟಿಸ್‌ ಸಿ ಬರುವುದನ್ನು ತಡೆಯಬಹುದು. ಹೆಪಟೈಟಿಸ್‌ ಸಿಗೆ ನಿಗದಿತ ಚಿಕಿತ್ಸೆ ಲಭ್ಯವಿಲ್ಲದೇ ಇರುವುದರಿಂದ ಈ ಕಾಯಿಲೆ ಬರುವುದನ್ನು ತಡೆಗಟ್ಟುವುದೇ ಇರುವ ಅಸ್ತ್ರವಾಗಿದೆ. ಜೊತೆಗೆ, ನಮ್ಮ ದೈನಂದಿನ ಜೀವನ ಶೈಲಿ, ಸೇವಿಸುವ ಆಹಾರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಸಹ ಹೆಪಟೈಟಿಸ್‌ನಿಂದ ದೂರ ಇರಲು ಸಹಕಾರಿಯಾಗುತ್ತದೆ. ಹೆಪಟೈಟಿಸ್‌ ಇತಿಹಾಸ ಹೊಂದಿರುವವರು ಧೂಮಪಾನ ಹಾಗೂ ಮದ್ಯಪಾನದಿಂದ ದೂರ ಇರುವುದು ಯಕೃತ ಆರೋಗ್ಯಕ್ಕೆ ಒಳ್ಳೆಯದು.

- ಡಾ ಬಿ ಎಸ್ ರವೀಂದ್ರ, ನಿರ್ದೇಶಕರು - ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ, ಫೋರ್ಟಿಸ್ ಆಸ್ಪತ್ರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು