ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 17 ವಿಶ್ವ ಹೈಪರ್‌ ಟೆನ್ಶನ್‌ ದಿನ | ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ?

ಅಕ್ಷರ ಗಾತ್ರ

ಆಧುನಿಕ ಜೀವನಶೈಲಿ ಹಾಗೂ ಒತ್ತಡದ ಬದುಕು ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡಕ್ಕೆ(ಹೈಪರ್‌ ಟೆನ್ಶನ್‌) ಕಾರಣ. ಈ ತೊಂದರೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಅಧಿಕ ರಕ್ತದೊತ್ತಡವನ್ನು (ಮೇ 17 ವಿಶ್ವ ಹೈಪರ್‌ ಟೆನ್ಶನ್‌ ದಿನ) ನಿಯಂತ್ರಣದಲ್ಲಿ ಇಡುವುದು ಹೇಗೆ?

ರೋಗಗಳ ಸಂಕೀರ್ಣತೆ, ಹೃದಯಾಘಾತ, ಹೃದಯದ ವೈಫಲ್ಯ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ವೈಫಲ್ಯಗಳಿಗೆ ಅಧಿಕ ರಕ್ತದೊತ್ತಡ ಒಂದು ಸಾಮಾನ್ಯ ಕಾರಣ. ಒಂದು ಅಂದಾಜಿನ ಪ್ರಕಾರ ಪ್ರತಿ ಐವರು ಭಾರತೀಯರಲ್ಲಿ ಇಬ್ಬರಿಗೆ ಈ ಅಧಿಕ ರಕ್ತದೊತ್ತಡ ಸಮಸ್ಯೆ ಕಂಡುಬರುತ್ತಿದೆ.

ಅಧಿಕ ರಕ್ತದೊತ್ತಡ ಇರುವ ಬಹುತೇಕ ರೋಗಿಗಳು ‘ಎಸೆನ್ಷಿಯಲ್’ ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ. ಅಂದರೆ, ಅಧಿಕ ರಕ್ತದೊತ್ತಡವು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಎಸೆನ್ಷಿಯಲ್ ಹೈಪರ್ ಟೆನ್ಶನ್ ವಾಸಿಯಾಗದಂತಹ ಆರೋಗ್ಯ ಸಮಸ್ಯೆ. ಇದು ಜೀವನಪರ್ಯಂತ ಇರುವಂತಹದ್ದು. ಇದನ್ನು ತಡೆಗಟ್ಟಬಹುದು. ಇದನ್ನು ನಿರ್ವಹಣೆ ಮಾಡುವುದು ಜೀವನಪರ್ಯಂತದ ಬದ್ಧತೆಯಾಗಿರಬೇಕು.

ಸೂಕ್ತವಾದ ರೀತಿಯಲ್ಲಿ ಈ ಹೈಪರ್‌ಟೆನ್ಶನ್ ಅನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಇದನ್ನು ಹೊಂದಿದವರು ನಿರ್ಲಕ್ಷ್ಯ ಮಾಡಿದರೆ ಮತ್ತು ಬಿಪಿಯನ್ನು ನಿಯಂತ್ರಣಕ್ಕೆ ತರದಿದ್ದರೆ ಕಾಲಕ್ರಮೇಣ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೃದಯಾಘಾತ, ಹೃದಯ ವೈಫಲ್ಯ, ಪಾರ್ಶ್ವವಾಯು ಅಥವಾ ಮೂತ್ರಪಿಂಡ ಸಮಸ್ಯೆಗಳಂತಹ ಸಂಕೀರ್ಣವಾದ ಸಮಸ್ಯೆಗಳು ರೋಗಿಯನ್ನು ಕಾಡುತ್ತವೆ. ರೋಗಿಯು ಈ ಸಮಸ್ಯೆಗಳ ಜತೆಯಲ್ಲಿ ಗುಣಮಟ್ಟದ ಜೀವನ ಸಾಗಿಸಲು ಹೇಗೆ ಸಾಧ್ಯ? ಸಾಮಾಜಿಕ ಮತ್ತು ಆರ್ಥಿಕವಾಗಿ ಹೊರೆಯನ್ನೂ ಹೊರಬೇಕಾಗುತ್ತದೆ. ಇದಲ್ಲದೇ, ರೋಗಿಯು ಹೈಪರ್‌ಟೆನ್ಶನ್‌ಗೆ ಮಾತ್ರವಲ್ಲದೇ ಇಂತಹ ಸಂಕೀರ್ಣ ಸಮಸ್ಯೆಗಳಿಗೂ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಸಮರ್ಪಕವಾಗಿ ಬಿಪಿಯನ್ನು ನಿಯಂತ್ರಣಕ್ಕೆ ತರುವುದು ಮೊದಲ ಆದ್ಯತೆಯಾಗಬೇಕು ಮತ್ತು ಸಂಕೀರ್ಣವಾದ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬೇಕು.

ನಿಮ್ಮ ರಕ್ತದೊತ್ತಡ (ಬಿಪಿ) ಪರೀಕ್ಷಿಸಿಕೊಳ್ಳಿ

ಹೈಪರ್‌ಟೆನ್ಶನ್ ಇರುವ ಬಹುತೇಕ ಮಂದಿಗೆ ಇದರಿಂದಾಗುವ ಸಮಸ್ಯೆಗಳ ಬಗ್ಗೆ ಅರಿವು ಇರುವುದಿಲ್ಲ. ಇದು ಅಪಾಯದ ಮುನ್ಸೂಚನೆ ಅಥವಾ ಗುಣಲಕ್ಷಣ ಎಂಬುದರ ಬಗ್ಗೆ ಅರಿವಿನ ಕೊರತೆ ಬಹುತೇಕರಿಗೆ. ಈ ಕಾರಣಕ್ಕಾಗಿಯೇ ಹೈಪರ್‌ಟೆನ್ಶನ್ ಅನ್ನು ‘ಸೈಲೆಂಟ್ ಕಿಲ್ಲರ್’ ಎಂದು ಕರೆಯಲಾಗುತ್ತದೆ. ಇದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗವೆಂದರೆ ನಿಮ್ಮ ಬಿಪಿಯನ್ನು ಪರೀಕ್ಷೆ ಮಾಡಿಕೊಳ್ಳುವುದು. ಹೀಗೆ ಪರೀಕ್ಷೆ ಮಾಡಿಕೊಂಡಾಗ ಯಾವುದಾದರೂ ಸಮಸ್ಯೆಗಳಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು. ವಯಸ್ಕರು ವರ್ಷಕ್ಕೆ ಒಮ್ಮೆಯಾದರೂ ತಮ್ಮ ಬಿಪಿಯನ್ನು ಪರೀಕ್ಷಿಸಿಕೊಳ್ಳಬೇಕು ಮತ್ತು ವಯಸ್ಸಾದಂತೆ ಆಗಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಬಿ.ಪಿ. ಎಷ್ಟಿರಬೇಕು?

ಅಮೆರಿಕದ ವೈದ್ಯಕೀಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಬಿ.ಪಿ. 130/80 ಅಥವಾ ಇದಕ್ಕಿಂತ ಹೆಚ್ಚಿದ್ದರೆ ಅದು ಅಧಿಕ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ಇದಕ್ಕಿಂತ ಕಡಿಮೆ ತರುವುದು ಚಿಕಿತ್ಸೆಯ ಉದ್ದೇಶ.

ಬಿ.ಪಿ. ನಿಯಂತ್ರಣ ಹೇಗೆ?

ಬಿ.ಪಿ.ಯನ್ನು ನೀವು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಈ ಗುರಿಯನ್ನು ತಲುಪಲು ನೀವು ಯಾವುದಾದರೂ ವೈಜ್ಞಾನಿಕ ಮಾದರಿಯನ್ನು ಅಳವಡಿಸಿಕೊಳ್ಳಿ.

ಅಧಿಕ ರಕ್ತದೊತ್ತಡ ಇರುವ ವ್ಯಕ್ತಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇದರ ಜತೆಗೆ ಬಹುತೇಕ ರೋಗಿಗಳು ಬಿ.ಪಿ.ಯನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಸೂಕ್ತ ಚಿಕಿತ್ಸೆ, ಔಷಧ ಪಡೆದುಕೊಳ್ಳುವ ಅಗತ್ಯವಿರುತ್ತದೆ. ಕಡಿಮೆ ಮಟ್ಟದ ಹೈಪರ್‌ಟೆನ್ಶನ್ ಇರುವ ರೋಗಿಗಳು ಆರಂಭಿಕ ಹಂತದಲ್ಲಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಬಿ.ಪಿ. ನಿಗದಿತ ಮಟ್ಟದಲ್ಲಿ ಇಲ್ಲದಿದ್ದರೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಿ.ಪಿ. ಮಟ್ಟವು ಅಧಿಕವಾಗಿರುವ ರೋಗಿಗಳು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವುದರ ಜತೆಗೆ ಔಷಧಗಳನ್ನೂ ಒಟ್ಟೊಟ್ಟಾಗಿಯೇ ತೆಗೆದುಕೊಳ್ಳಬೇಕಾಗುತ್ತದೆ.

ಜೀವನ ಶೈಲಿಯಲ್ಲಿ ಬದಲಾವಣೆ

1. ಆಹಾರ ಪದ್ಧತಿಯಲ್ಲಿ ಬದಲಾವಣೆಗಳು

* ಕಡಿಮೆ ಉಪ್ಪು ಸೇವಿಸಿ. ದಿನಕ್ಕೆ ಒಂದು ಟೀಸ್ಪೂನ್‌ನಷ್ಟು ಮಾತ್ರ ಉಪ್ಪನ್ನು (ಎಲ್ಲಾ ಮಾದರಿ ಆಹಾರ ಸೇರಿ) ಸೇವಿಸಿ. ಸಂಸ್ಕರಿತ ಆಹಾರ ಸೇವನೆಯನ್ನು ನಿಯಂತ್ರಿಸಿ.

* ಹೆಚ್ಚು ಪೊಟ್ಯಾಶಿಯಂ ಅಂಶದ ಆಹಾರ ಸೇವಿಸಿ: ಮೂತ್ರಪಿಂಡ ಸಮಸ್ಯೆ ಇರುವವರು ಈ ಪದಾರ್ಥಗಳಿಂದ ದೂರವಿರಬೇಕು.

* ಆರೋಗ್ಯಕರವಾದ ಆಹಾರ ಸೇವಿಸಿ: ಹಣ್ಣು, ತರಕಾರಿ, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನಂಶ ಇರುವ ಡೈರಿ ಉತ್ಪನ್ನಗಳನ್ನು ಸೇವಿಸಬೇಕು.

* ತೂಕವನ್ನು ಇಳಿಸಿ: ಸರಿಯಾದ ದೇಹದ ತೂಕವನ್ನು ಹೊಂದಿದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

* ಸೊಂಟದ ಸುತ್ತಳತೆಯನ್ನು ನಿಗದಿತ ಪ್ರಮಾಣದಲ್ಲಿರುವಂತೆ ಕಾಪಾಡಿಕೊಳ್ಳಿ (ಪುರುಷರಿಗೆ 94 ಸೆಂ.ಮೀ.ಗಿಂತ ಕಡಿಮೆ ಹಾಗೂ ಮಹಿಳೆಯರಿಗೆ 80 ಸೆಂ.ಮೀ.ಗಿಂತ ಕಡಿಮೆ).

2. ದೈಹಿಕ ವ್ಯಾಯಾಮಗಳು

ನಿಯಮಿತವಾಗಿ ಏರೋಬಿಕ್ ವ್ಯಾಯಾಮವನ್ನು ಮಾಡಿ (30 ನಿಮಿಷಗಳ ಕಾಲ ವೇಗದ ಅಥವಾ ಮಧ್ಯಮ ಪ್ರಮಾಣದ ವ್ಯಾಯಾಮ– ವಾರಕ್ಕೆ 5–7 ದಿನಗಳ ಕಾಲ).

3. ಅನಾರೋಗ್ಯಕರ ಹವ್ಯಾಸಗಳನ್ನು ಕೈಬಿಡಿ

* ಆಲ್ಕೋಹಾಲ್ ಬಳಕೆಯನ್ನು ಮಿತಗೊಳಿಸಿ: ಪುರುಷರು ವಾರಕ್ಕೆ 14 ಯೂನಿಟ್‌ಗಿಂತ ಕಡಿಮೆ ಮತ್ತು ಮಹಿಳೆಯರು 8 ಯೂನಿಟ್‌ಗಿಂತ ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದು ಉತ್ತಮ. ಬಿಂಜ್ ಪಾನೀಯವನ್ನು ಸೇವನೆ ಮಾಡುವುದನ್ನು ನಿಯಂತ್ರಿಸಿ.

* ಯಾವುದೇ ಮಾದರಿಯ ತಂಬಾಕು ಸೇವನೆಯನ್ನು ಮಾಡಬೇಡಿ.

* ಕೆಫಿನ್: ಕನಿಷ್ಠ ಪ್ರಮಾಣದಲ್ಲಿ ಕೆಫಿನ್ ಸೇವನೆಯನ್ನು ಬಳಕೆ ಮಾಡಿ.

4. ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡಿ: ಪ್ರತಿ ರಾತ್ರಿ 6–8 ಗಂಟೆಗಳವರೆಗೆ ನಿದ್ದೆ ಮಾಡಲು ಪ್ರಯತ್ನಿಸಿ.

5. ಒತ್ತಡವನ್ನು ನಿರ್ವಹಣೆ ಮಾಡಿ: ಪ್ರತಿದಿನ ಧ್ಯಾನ ಅಥವಾ ದೀರ್ಘ ಉಸಿರಾಟದ ಕ್ರಮಗಳನ್ನು ಅನುಸರಿಸಿ.

(ಲೇಖಕರು: ಕನ್ಸಲ್ಟೆಂಟ್ ಕಾರ್ಡಿಯೋಲಾಜಿಸ್ಟ್, ವಿಕ್ರಂ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT