ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Meditation Day | ಧ್ಯಾನಸ್ಥ ಸ್ಥಿತಿ ಅಂತರಂಗದಲ್ಲಿ ಉಳಿಸಿಕೊಳ್ಳುವ ಕಲೆ

Last Updated 20 ಮೇ 2021, 10:26 IST
ಅಕ್ಷರ ಗಾತ್ರ

ನೀವು ಜೀವನದಲ್ಲಿ ಯಾವುದರಲ್ಲಿಯಾದರೂ ಉತ್ಕೃಷ್ಟತೆಯನ್ನು ಪಡೆಯಲು ಬಯಸಿದಾಗ, ನೀವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಸತತ ಸುಧಾರಣೆಗಾಗಿ, ನಿರಂತರವಾಗಿ ಶ್ರಮಿಸುತ್ತೀರಿ. ಅದೇ ವಿಕಸನ. ಹಾಗಾದರೆ ವಿಕಸನವನ್ನು ನಾವು ಹೇಗೆ ಅರ್ಥೈಸುತ್ತೇವೆ? ವಿಜ್ಞಾನದಲ್ಲಿ ವಿಕಸನವು ಸ್ವರೂಪದಲ್ಲಿನ ಬದಲಾವಣೆಗೆ ಅನ್ವಯಿಸುತ್ತದೆ, ಇದು ನಿಜವಾಗಿಯೂ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ನಾವು ಮಾನವ ವಿಕಸನದ ಕುರಿತು ಹೇಳುವಾಗ, ನಾವು ನಮ್ಮ ಪ್ರಜ್ಞೆಯ ವಿಕಸನದ ಬಗ್ಗೆ ಮಾತನಾಡುತ್ತಿದ್ದೇವೆ.

ಮಾನವರಾದ ನಾವು ದೇಹ, ಮನಸ್ಸು ಮತ್ತು ಆತ್ಮದಿಂದ ಕೂಡಿದ್ದೇವೆ. ಭೌತಿಕ ದೇಹವು ಭೌತವಸ್ತುಗಳಾದ ರಕ್ತ-ಮಾಂಸಗಳಿಂದ ರಚಿಸಲ್ಪಟ್ಟಿದೆ. ನಾವು ಹೃದಯ ಮತ್ತು ಮನಸ್ಸು ಎಂದು ಕರೆಯುವ ಸೂಕ್ಷ್ಮ ಅಥವಾ ದಿವ್ಯ ಶರೀರವು ಚೈತನ್ಯ ಮತ್ತು ಕಂಪನದಿಂದ ಕೂಡಿದೆ. ಮೂರನೆಯದಾದ ಕಾರಣ ಶರೀರ ಅಂದರೆ ಆತ್ಮ, ನಮ್ಮ ಅಸ್ತಿತ್ವದ ಕೇಂದ್ರ ಅಥವಾ ಆಧಾರವಾಗಿದೆ.

ಈ ಜೀವನದಲ್ಲಿ ಭೌತಿಕ ದೇಹ ಹೆಚ್ಚು ವಿಕಸನಗೊಳ್ಳುವುದಿಲ್ಲ. ಆತ್ಮವೂ ಸಹ ಬದಲಾಗುವುದಿಲ್ಲ. ಹೀಗಿರುವಾಗ ನಾವು ಒಬ್ಬ ಉತ್ತಮವಾದ ವ್ಯಕ್ತಿಯಾಗಬೇಕೆಂದು ಬಯಸಿದರೆ ನಿಜವಾಗಿ ವಿಕಸನಗೊಳ್ಳುವುದು ಏನು? ಅದು ಸೂಕ್ಷ್ಮ ಶರೀರವಾದ, ಮನಸ್ಸು. ಪ್ರಜ್ಞೆಯ ವಿಕಸನದಲ್ಲಿ, ಸೂಕ್ಷ್ಮ ಶರೀರದ ಸುತ್ತಲೂ ಆವರಿಸಿರುವ ಪದರಗಳನ್ನು ತೆಗೆದುಹಾಕುವ ಮೂಲಕ ಅದನ್ನು ಶುದ್ಧೀಕರಿಸಲಾಗುತ್ತದೆ. ನಮ್ಮ ಪ್ರಜ್ಞಾಕ್ಷೇತ್ರವನ್ನು ನಾವು ವಿಕಸನಗೊಳಿಸುವುದು ಮತ್ತು ವಿಸ್ತರಿಸುವುದು ಹೀಗೆಯೆ.

ಸೂಕ್ಷ್ಮ ಶರೀರದ ನಾಲ್ಕು ಮುಖ್ಯ ಕ್ರಿಯೆಗಳಿವೆ – ಚಿತ್ತ, ಪ್ರಜ್ಞೆ; ಮನಸ್ಸು, ಆಲೋಚನೆ; ಬುದ್ಧಿ, ಬುದ್ಧಿಮತ್ತೆ; ಮತ್ತು ಅಹಂಕಾರ.
ನಮ್ಮ ಮನಸ್ಸನ್ನು ರೂಪಿಸಲು ಇವು ಒಟ್ಟಾಗಿ ಕಾರ್ಯ ಮಾಡುತ್ತವೆ. ಈ ನಾಲ್ಕರಲ್ಲಿ, ನಮ್ಮ ಗಮನ ಪ್ರಜ್ಞೆಯ ಮೇಲಿರುತ್ತದೆ ಮತ್ತು ಉಳಿದ ಮೂರೂ ಪ್ರಜ್ಞಾಕ್ಷೇತ್ರದಲ್ಲಿ ಇರುತ್ತವೆ. ಪ್ರಜ್ಞೆಯು ವರ್ಣಚಿತ್ರಕಾರನ ಕ್ಯಾನ್ವಾಸಿನಂತೆ, ಮತ್ತು ಆ ಕ್ಯಾನ್ವಾಸಿನ ಮೇಲೆ ಪ್ರತಿದಿನ ಇತರ ಮೂರು ಸೂಕ್ಷ್ಮ ದೇಹಗಳ ಆಟ ನಡೆಯುತ್ತದೆ.

ನಮ್ಮ ವಿಕಸನದ ಪರಾಕಾಷ್ಠೆಯಲ್ಲಿ ಪ್ರಜ್ಞೆ, ಆಲೋಚನೆ, ಬುದ್ಧಿಶಕ್ತಿ ಮತ್ತು ಅಹಂಗಳಿಗೆ ಏನಾಗುತ್ತದೆ? ಪ್ರಜ್ಞೆ ತಾನಾಗಿಯೇ ವಿಕಸನಗೊಳ್ಳುವುದಿಲ್ಲ, ಅದು ಇತರ ಮೂರರ ಸಹಾಯದಿಂದ ವಿಕಸನಗೊಳ್ಳುತ್ತದೆ. ಬುದ್ಧಿಶಕ್ತಿ ವಿವೇಕವಾಗಿ ವಿಕಸನಗೊಳ್ಳುತ್ತದೆ, ಆಲೋಚನೆ ಭಾವನೆಯಾಗಿ ವಿಕಸನಗೊಳ್ಳುತ್ತದೆ, ಮತ್ತು ಅಹಂ ನಿಸ್ವಾರ್ಥ ಪ್ರೀತಿಯಲ್ಲಿ ವಿಕಸನಗೊಳ್ಳುತ್ತದೆ. ಪರಿಣಾಮವಾಗಿ, ಸ್ಥಿರ, ಸಂಕುಚಿತ-ಮನಸ್ಸಿನ ಸ್ಥಿತಿಯಿಂದ ವಿಸ್ತರಣೆಗೊಂಡ ಪ್ರಜ್ಞೆಯು, ಕ್ರಿಯಾತ್ಮಕ ಮತ್ತು ಸಾರ್ವತ್ರಿಕ ಸ್ವಭಾವ ಹೊಂದಲು ಸಾಧ್ಯವಾಗುತ್ತದೆ.

-ಕಮಲೇಶ್ ಡಿ ಪಟೇಲ್
-ಕಮಲೇಶ್ ಡಿ ಪಟೇಲ್


ಇದಕ್ಕೆ ಧ್ಯಾನವು ಹೇಗೆ ಸಹಾಯ ಮಾಡುತ್ತದೆ? ಧ್ಯಾನದ ಮೂಲಕ ಸೂಕ್ಷ್ಮ ಶರೀರದಿಂದ ಅದರ ಎಲ್ಲಾ ಸಂಕೀರ್ಣತೆಗಳನ್ನು ನಿವಾರಿಸಿ, ಈ ಪರಿವರ್ತನೆಯನ್ನು ಮಾಡಲು, ಮತ್ತು ಅದರಿಂದ ಮನಸ್ಸನ್ನು ಶಾಂತಗೊಳಿಸಲು ನಮಗೆ ಸಾಧ್ಯವಾಗುತ್ತದೆ. ಪ್ರಕ್ಷುಬ್ಧ, ಅಶಾಂತ ಮನಸ್ಸು, ಆಸೆ-ಆಕಾಂಕ್ಷೆ, ಚಿಂತೆಗಳು, ಭಯಗಳು ಮತ್ತು ಚಟಗಳಿಂದ ವಿಭಿನ್ನ ದಿಶೆಗಳಲ್ಲಿ ಎಳೆಯಲ್ಪಟ್ಟು, ಚಂಡಮಾರುತದಲ್ಲಿ ಸಿಲುಕಿದ ಪ್ರಕ್ಷುಬ್ಧ ಮತ್ತು ಅಸಮತೋಲಿತ ಸಾಗರದಂತಿರುತ್ತದೆ. ಇದು ವಿವಿಧ ಕವಲುಗಳಲ್ಲಿ ಹರಡಿಕೊಂಡಿರುತ್ತದೆ, ಆದರೆ ನಿಯಂತ್ರಿತವಾದ ಸಮತೋಲಿತ ಮನಸ್ಸು ಕೇಂದ್ರೀಕೃತವಾಗಿರುತ್ತದೆ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆ. ನಾವು ಸರಿಯಾಗಿ ಧ್ಯಾನಿಸಿದಾಗ, ನಮ್ಮ ಮನಸ್ಸು ಶುದ್ಧ, ಸರಳ ಮತ್ತು ಹಗುರವಾಗಿರುತ್ತದೆ, ಇದರಿಂದ ನಮ್ಮ ಪ್ರಜ್ಞೆಯು ಸಹಜವಾಗಿಯೆ ವಿಕಸನಗೊಳ್ಳುತ್ತದೆ. ಆಗ ನಮಗೆ ನಮ್ಮ ಅಸ್ತಿತ್ವದ ಆಳವಾದ ಸ್ತರಗಳಲ್ಲಿ ಮುಳುಗಿ, ನಮ್ಮ ಆಂತರಿಕ ಸಾಮರ್ಥ್ಯವನ್ನು ಮುಕ್ತಗೊಳಿಸಲು ಸಾಧ್ಯವಾಗುತ್ತದೆ.

ನಮ್ಮ ಪ್ರಜ್ಞೆಯ ಕ್ಯಾನ್ವಾಸ್ ಹಾಳಾಗದೆ, ನವೋಲ್ಲಾಸ ಮತ್ತು ಪರಿಶುದ್ಧವಾಗಿ ಉಳಿಯಲು, ಬೆಳಗಿನ ಉತ್ತಮ ಧ್ಯಾನದ ಉಪಉತ್ಪನ್ನವಾದ ಆ ಧ್ಯಾನಸ್ಥ ಸ್ಥಿತಿಯನ್ನು ದಿನವಿಡೀ ನಮ್ಮೊಂದಿಗೆ ಉಳಿಸಿಕೊಳ್ಳುವ ಕಲೆಯನ್ನು ನಾವು ಕರಗತ ಮಾಡಿಕೊಳ್ಳುತ್ತೇವೆ. ಆನಂತರ, ನಮ್ಮ ಆಂತರಿಕ ಶಾಂತಿ ಮತ್ತು ಸಂತೋಷವನ್ನು ನಾಶಪಡಿಸುವಂತಹ ಸಂಕೀರ್ಣತೆಗಳು, ಪ್ರತಿಕ್ರಿಯೆಗಳು ಮತ್ತು ಭಾವೋದ್ವೇಗಗಳಿಂದ ಅದು ಕ್ಷೋಭೆಗೊಳ್ಳುವುದಿಲ್ಲ.

ಅಂತಹ ಶಾಂತಿಯುತ ಸ್ಥಿತಿಯಲ್ಲಿ ವಿವೇಕ ಅರಳುತ್ತದೆ. ವಿವೇಕದಲ್ಲಿ, ನಾವು ನಮ್ಮ ಎಲ್ಲಾ ಸಹಜ ಸಾಮರ್ಥ್ಯಗಳನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುತ್ತೇವೆ. ಕನಿಷ್ಠ ಆದಾನದಿಂದ ನಾವು ಗರಿಷ್ಠ ಉತ್ಪಾದನೆಯನ್ನು ಪಡೆಯುತ್ತೇವೆ. ಕನಿಷ್ಠ ಕ್ರಿಯೆಯಿಂದ, ನಾವು ಗರಿಷ್ಠ ಫಲಿತಾಂಶವನ್ನು ಪಡೆಯುತ್ತೇವೆ. ನಮ್ಮ ದಿನನಿತ್ಯದ ಜೀವನದಲ್ಲಿ ಅಂತಹ ಧ್ಯಾನಸ್ಥ ಮನಸ್ಸಿನಲ್ಲಿ ಎಲ್ಲವನ್ನೂ ಮಾಡುವುದರಿಂದ, ನಾವು ಉತ್ಕೃಷ್ಟರಾಗಬಹುದು ಮತ್ತು ನಮಗೆ ಸಾಧ್ಯವಾದಷ್ಟು ಅತ್ಯುತ್ತಮ ವ್ಯಕ್ತಿಗಳಾಗಬಹುದು.

ಲೇಖಕರು: ಕಮಲೇಶ್ ಪಟೇಲ್ (ದಾಜಿ) ಹಾರ್ಟ್‌ಫುಲ್‌ನೆಸ್ ಸಂಸ್ಥೆಯ ಮಾರ್ಗದರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT