ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸನಗಳ ರಾಜ ಶೀರ್ಷಾಸನ

Last Updated 15 ಜುಲೈ 2019, 12:51 IST
ಅಕ್ಷರ ಗಾತ್ರ

ಆಸನಗಳ ತಾಯಿ ಎಂದು ಪರಿಗಣಿಸಿರುವ ಸರ್ವಾಂಗಾಸನದ ಬಗ್ಗೆ ತಿಳಿದಿದ್ದೇವೆ. ಆಸನಗಳ ತಂದೆ ಅಥವಾ ರಾಜ ಎಂದು ಪರಿಗಣಿತವಾಗಿರುವ ಶೀರ್ಷಾಸನದ ಬಗ್ಗೆ ತಿಳಿಯೋಣ.

ತಲೆ ಕೆಳಗಾಗಿ, ಕಾಲು ಮೇಲಾಗಿ, ನೆತ್ತಿಯು ನೆಲಕ್ಕೊರಗಿದ್ದು, ಸಮತೋಲನ ಕಾಯ್ದು ನೆಲೆಸುವುದೇ ಶೀರ್ಷಾಸನ. ಸಾಲಂಬಶೀರ್ಷಾಸನ ಎಂತಲೂ ಕರೆಯಲ್ಪಡುತ್ತದೆ. ಶೀರ್ಷಾಸನ ಒಳಗೊಂಡ ಮುಂದುವರಿದ ಹಲವು ಹಂತಗಳಿದ್ದು, ಸಾಲಂಬಶೀರ್ಷಾಸನ ಎಲ್ಲದಕ್ಕೂ ಮೂಲ ಎನಿಸಿದೆ. ಆಸನಗಳ ಕಲಿಕೆಯಲ್ಲಿ ತೊಡಗಿರುವವರು ಶೀರ್ಷಾಸನವನ್ನು ಯಾವುದೇ ನೆರವಿಲ್ಲದೆ ಸ್ವತಂತ್ರವಾಗಿ ಅಭ್ಯಾಸಿಸಲು ಕಲಿತಿದ್ದೇ ಆದರೆ ಅವರಲ್ಲಿ ತಾಳ್ಮೆ, ಆತ್ಮವಿಶ್ವಾಸ ಹಾಗೂ ದೇಹ ಮತ್ತು ಮಸ್ಸನ್ನು ನಿಗ್ರಹಿಸುವ ಶಕ್ತಿ ವೃದ್ಧಿಸಿದೆ ಎಂದರ್ಥ. ಆದ್ದರಿಂದ, ಕಲಿಕೆಯಲ್ಲಿ ಶೀರ್ಷಾಸನ ಮತ್ತು ಸರ್ವಾಂಗಾಸನಗಳಿಗೆ ಮೊದಲ ಪ್ರಾಮುಖ್ಯತೆ.

ಮಹತ್ವ ಏನು?

ಮಾನವನ ಎಲ್ಲಾ ಚಟುವಟಿಕೆಗಳು ನಡೆಯುವುದು ಸಿರಸ್ಸಿನಿಂದ. ಕೇಂದ್ರ ಸ್ಥಾನದಲ್ಲಿನ ಮೆದುಳಿನ ನಿಯಂತ್ರಣದಲ್ಲಿಯೇ ಎಲ್ಲವೂ ಚಲನಶೀಲವಾಗಿವೆ. ಮೆದುಳು ನಿಷ್ಕ್ರಿಯಗೊಂಡರೆ ಯಾವ ಪ್ರಯೋಜನವೂ ಇಲ್ಲ. ಮೆದುಳು ಕ್ರಿಯಾಶೀಲವಾಗಿದ್ದು, ಜ್ಞಾನವಾಹಿನಿ ಹಾಗೂ ಕ್ರಿಯಾವಾನಿಹಿಯಾಗಿರುವ ಸ್ನಾಯು ಮತ್ತು ನರಮಂಡಲವನ್ನು ಹತೋಟಿಯಲ್ಲಿಡುತ್ತದೆ. ಈ ಮೂಲಕ ಬುದ್ಧಿ, ವಿವೇಚನಾಶಕ್ತಿ, ತಿಳಿವಳಿಕೆ, ಶಕ್ತಿಗಳನ್ನು ಹೆಚ್ಚಿಸಿ ಇಡೀ ದೇಹಕ್ಕೆ ಚೈತನ್ಯ ತುಂಬುವ ಕೆಲಸ ಮಾಡುತ್ತದೆ.

ಆದ್ದರಿಂದ, ಹೆಚ್ಚು ಕೆಲಸ ನಿರ್ವಹಿಸುವ ತಲೆಗೆ ಹೆಚ್ಚು ಹೆಚ್ಚು ಶುದ್ಧರಕ್ತ ಪರಿಚಲನೆ, ಆ ಮೂಲಕ ಆಮ್ಲಜನಕ ಪೂಕೆಯ ಅಗತ್ಯವಿದೆ. ಈ ಕಾರ್ಯ ಎಲ್ಲರಲ್ಲಿ ಸಾಮಾನ್ಯವಾಗಿರುತ್ತದೆ. ಅದನ್ನು ಮತ್ತಷ್ಟು ಸಮರ್ಪಕವಾಗಿಸಲು ಶೀರ್ಷಾಸನ ನೆರವಾಗುತ್ತದೆ.

ಅಭ್ಯಾಸಪೂರ್ವ ಸೂಚನೆಗಳು

* ಸಾಮರ್ಥ್ಯಮೀರಿ ಹೆಚ್ಚು ಸಮಯ ತಲೆಕೆಳಗಾಗಿ(ಶೀರ್ಷಾಸನ) ನೆಲೆಸಬೇಡಿ.

* ನೆತ್ತಿಯ ಮೇಲೆ ಭಾರಹಾಕಬೇಕು; ಕೈಗಳಿಗೆ ಭಾರ ಹಾಕಬಾರದು(ಕೈಗಳು ಸಮತೋಲನ ಕಾಲಯಲು ನೆರವಿಗೆ ಮಾತ್ರ).

* ಕಣ್ಣಿನ ದೋಷ ಇದ್ದವರು, ಹೆಚ್ಚು ರಕ್ತದೊತ್ತಡ ಇದ್ದವರು ಗುರುಮುಖೇನೆ ಸಲಹೆ ಪಡೆದು ಅಭ್ಯಾಸಿಸಿ.

* ಕುತ್ತಿಗೆ ಸೂಕ್ಷ್ಮವಾದ್ದರಿಂದ ತಲೆಕೆಳಗಾಗಿ ನಿಂತಾಗ ಅತ್ತಿತ ತಿರುಗಿಸಬೇಡಿ. ನೆಲಕ್ಕೆ ನೆತ್ತಿಯನ್ನೂರುವಾಗ ಸರಿಯಾದ ಕ್ರಮದಲ್ಲಿ ಇರಿಸಿ ಅಭ್ಯಾಸಿಸಿ.

* ಹೊಸದಾಗಿ ಕಲಿಯುವವರು ಗೋಡೆಯ ಅಥವಾ ಬೆರೊಬ್ಬರ ನೆರವು ಪಡೆದು ಅಭ್ಯಾಸಿಸಿ. ಬಳಿಕ ಸ್ವತಂತ್ರವಾಗಿ ಅಭ್ಯಾಸ ನಡೆಸಿ. ಇಲ್ಲವಾದಲ್ಲಿ ಹಿಂದಕ್ಕೆ ದೊಪ್ಪೆಂದು ಬಿದ್ದು, ಕುತ್ತಿಗೆ ಅಥವಾ ಇನ್ನಾವುದೇ ಅಂಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಎಚ್ಚರಿಕೆ ಹಾಗೂ ಸೂಕ್ಷ್ಮತೆಯಿಂದ ಅಭ್ಯಾಸಿಸಿ.

ನೆಲಹಾಸು

ಸಮತಟ್ಟಾದ ನೆಲದ ಮೇಲೆ ಅಭ್ಯಾಸಿಸಿ. ಅಭ್ಯಾಸಕ್ಕೆ ಅಗತ್ಯ ನೆಲಹಾಸು ಹಾಕಿಕೊಳ್ಳಿ. ಜಮಖಾನ, ಕಂಬಳಿ, ಇತ್ಯಾದಿ ಬಳಸಬಹುದು(ಅಭ್ಯಾಸ ವೇಳೆ ಅತ್ತಿತ್ತ ಜರುಗಬಾರದು). ನೆತ್ತಿಗೆ ಒತ್ತಡ ಉಂಟಾಗುತ್ತದೆ ಎಂದು ಅತಿ ದಪ್ಪವಾದ ಹಾಸಿಗೆ(ಬೆಡ್) ಬಳಸಿದರೆ ಸಮತೋಲನ ಕಾಯಲು ತೊಂದರೆ ಆಗುತ್ತದೆ. ಆದ್ದರಿಂದ, ನಾಲ್ಕಾರು ಮಡಿಕೆಯ ಜಮಖಾನ, ಚಾಪೆ ಇತ್ಯಾದಿ ಬಳಸಿ.

ಸಾಲಂಬ ಶೀರ್ಷಾಸನ

ತಲೆ ದೇಹದ ಮುಖ್ಯ ಅಂಗವಾದ್ದರಿಂದ ಅತ್ಯಂತ ಜಾಗರೂಕತೆ ಹಾಗೂ ಸೂಕ್ಷ್ಮವಾಗಿ ಅಭ್ಯಾಸಿಸಬೇಕು ಎಂಬುದನ್ನು ಮತ್ತೊಮ್ಮೆ ಮಗದೊಮ್ಮೆ ಮನನ ಮಾಡುತ್ತಾ ಮುಂದುವರಿಯಿರಿ.

ಅಭ್ಯಾಸಕ್ರಮ

ನೆಲಹಾಸಿನ ಮೇಲೆ ಮಂಡಿಯೂರಿ ಕುಳಿತು, ಮುಂದೆ ಬಾಗಿ ಮೊಳಕೈಗಳನ್ನು ನೆಲಕ್ಕೂರಿ(ಮೊಳಕೈಗಳ ನಡುವಿನ ಅಂತರ ಭುಜಗಳ ನಡುವಿನ ಅಂತರದಷ್ಟೇ ಇರಲಿ). ಬೆರಳುಗಳನ್ನು ಹೆಣೆದು ಕಿರುಬೆರಳುಗಳು ನೆಲಕ್ಕೆ ತಾಗುವಂತೆ ಬಟ್ಟಲಿನಾಕಾರದ ಅಂಗೈಯನ್ನು ನೆಲಕ್ಕೂರಿಡಿ. ಬೆರಳಿನ ಹಿಡಿತವನ್ನು ಸಡಿಲಿಸಬಾರದು.

ಬಳಿಕ, ನೆತ್ತಿಯನ್ನು ನೆಲಕ್ಕೂರಿ. ಬೆರಳುಗಳನ್ನು ಹೆಣೆದ ಅಂಗೈಬಟ್ಟಲು ತಲೆಯ ಹಿಂಬದಿಗೆ ತಾಗಿರಬೇಕು(ನೆತ್ತಿಯನ್ನಲ್ಲದೆ ಹಿಂದಲೆ, ಮುಂದಲೆ ಅಥವಾ ಅತ್ತಿತ್ತ ಪಕ್ಕಕ್ಕೆ ಹೊರಳಿಸಿ ತಲೆಯನ್ನು ನೆಲಕ್ಕೂರಬಾರದು). ಉಸಿರನ್ನು ಹೊರಹಾಕುತ್ತಾ ಮುಂಡದ ಭಾರವನ್ನು ನೆತ್ತಿಗೆ ವಹಿಸುತ್ತಾ, ಪಾದಗಳನ್ನು ಕೂಡಿಸಿ ನೆಲಕ್ಕೊತ್ತಿ ಮಂಡಿಗಳನ್ನು ನೆಲದಿಂದ ಬಿಡಿಸಿ. ಮುಂಡವು ನೆತ್ತಿಯ ಮೇಲೆ ನೆಲೆಸಿದೆ ಎನಿಸುತ್ತಿದ್ದಂತೆ ಪಾದಗಳನ್ನು ನೆಲದಿಂದ ಮೇಲೆತ್ತಿ ಮಡಿಚಿ ಹಿಮ್ಮಡಿಗಳು ಪೃಷ್ಠಕ್ಕೆ ತಾಗುವಂತೆ ಮೇಲಕ್ಕೆ ತನ್ನಿ.

ನಂತರ, ಬೆನ್ನನ್ನು ನೇರವಾಗಿಸಿ, ಈ ಹಂತದಲ್ಲಿ ಸೊಂಟ, ತೊಡೆ, ಮಂಡಿ, ಮೀನಖಂಡಗಳನ್ನು ತುಸು ಬಿಗಿಗೊಳಿಸಿ, ಪಾದಗಳನ್ನು ಜೋಡಿಸಿ ಬಿಗಿಯಾಗಿಸಿ. ಸೊಂಟವನ್ನು ನೇರ ಮಾಡುತ್ತಾ ತೊಡೆಯನ್ನು ಮೇಲಕ್ಕೆತ್ತಿ ಮಂಡಿಯನ್ನು ಮೇಲ್ಮೊಗವಾಗಿರಿಸಿ. ಈ ಹಂತದಲ್ಲಿ ದೇಹದ ಸಮತೋಲನ ಕಾಯ್ದುಕೊಳ್ಳುತ್ತಾ ಮಂಡಿಯನ್ನು ನೇರವಾಗಿಸುತ್ತಾ ಹಿಂದಕ್ಕೆ ಮಡಿಚಿದ್ದ ಕಾಲನ್ನು ನಿಧಾನವಾಗಿ ಮೇಲಕ್ಕೆತ್ತಿ. ಪಾದಗಳು ಕೂಡಿದ್ದು, ಕಾಲ್ಬೆರಳುಗಳು ಚೂಪಾಗಿ ಆಗಸದತ್ತ ಮೊಗಮಾಡಿರಲಿ.

ನೆತ್ತಿಯ ಮೇಲೆಯೇ ಭಾರವಿದ್ದು, ಕುತ್ತಿಗೆ, ಬೆನ್ನು, ಸೊಂಟ, ತೊಡೆ, ಮಂಡಿ, ಪಾದ ಒಂದೇ ನೇರದಲ್ಲಿ ನೆಲಸಿವೆಯೇ ಎಂಬುದನ್ನು ನಿಮ್ಮದೇ ಲೆಕ್ಕಾಚಾರದಲ್ಲಿ ಸೂಕ್ಷ್ಮವಾಗಿ ಗಮನಿಸಿ. ದೇಹ ಹಿಂದೆ-ಮುಂದೆ ಅಕ್ಕ-ಪಕ್ಕ ತೂಗಾಡದಂತೆ ದೇಹವನ್ನು ತುಸು ಬಿಗಿಗೊಳಿಸಿ ನೇರವಾಗಿ ನಿಲ್ಲಿಸಿ.

ಅಂತಿಮ ಸ್ಥಿತಿಯಲ್ಲಿ ಮೂಗಿನ ತುದಿಯ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿ, ಸರಳ ಉಸಿರಾಟ ನಡೆಸುತ್ತಾ 20ರಿಂದ 30 ಸೆಕೆಂಡು ನೆಲೆಸಿ. ನಂತರದ ದಿನಗಳಲ್ಲಿ ಸಾಮರ್ಥ್ಯ ಮತ್ತು ಅಗತ್ಯಕ್ಕೆ ಅನುಗುಣವಾಗಿ 5ರಿಂದ 10 ನಿಮಿಷವರೆಗೆ ಅಭ್ಯಾಸಿಸಬಹುದು.

ಫಲಗಳು

* ಮೆದುಳನ್ನೊಳಗೊಂಡ ತಲೆಗೆ ಹೆಚ್ಚಿ ಒತ್ತು ನೀಡಿ ಅಭ್ಯಾಸ ನಡೆಯುವ ಮೂಲಕ ಮೆದುಳಿನ ಕಾರ್ಯವನ್ನು ಚುರುಕುಗೊಳಿಸಿ, ಮಾನವನಲ್ಲಿ ಸತ್ವಗುಣಗಳನ್ನು ವೃದ್ಧಿಸುತ್ತದೆ.

* ನೆನಪಿನ ಶಕ್ತಿ ವೃದ್ಧಿಸುತ್ತದೆ.

* ನಿತ್ಯ ಅಭ್ಯಾಸಕ್ಕೆ ಸೂಚಿಸಿರುವ ಆಸನ ಇದಾಗಿದ್ದು, ಮೆದುಳಿನ ಜೀವಕೋಶಗಳಿಗೆ ಶುದ್ಧರಕ್ತ ಒದಗಿಸಲು ನೆರವಾಗುತ್ತದೆ. ಇದರಿಂದ ಮೆದುಳು ತಾರುಣ್ಯ ಪಡೆಯುತ್ತದೆ.

* ಇಡೀ ದೇಹಕ್ಕೆ ಸರಿಯಾದ ರಕ್ತ ಪರಿಚಲನೆ ಒದಗಿಸುತ್ತದೆ.

* ಮೆದುಳಿನ ಶಕ್ತಿ ಬಹುಬೇಗ ಕುಂದುವುದನ್ನು ತಡೆಯುತ್ತದೆ.

* ಮಾನವನ ಬೆಳವಣಿಗೆ, ಆರೋಗ್ಯ ಹಾಗೂ ಪ್ರಾಣಧಾರಣಶಕ್ತಿ/ಚೈತನ್ಯಗಳು ಮೆದುಳಿನ ಕೆಳಭಾಗದ ಕಫಸ್ರಾವಕಗ್ರಂಥಿ ಮತ್ತು ಹಿಂಬದಿಯ ರಸಗ್ರಂಥಿಗಳ ಕಾರ್ಯವನ್ನು ಅವಲಂಬಿಸಿದ್ದು, ಶೀರ್ಷಾಸನ ಈ ಗ್ರಂಥಿಗಳ ಸಮರ್ಪಕ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.

* ಕಣ್ಣಿನ ಆರೋಗ್ಯ ಕಾಪಾಡುತ್ತದೆ.

* ಜ್ಞಾನಪಕ ಶಕ್ತಿ, ನಿದ್ರೆ ಹಾಗೂ ಚೈತನ್ಯದ ಕೊರತೆಯುಳ್ಳವರು ನಿತ್ಯ ಅಭ್ಯಾಸಿಸಿ ತೊಂದರೆಯಿಂದ ಮುಕ್ತರಾಗಬಹುದು.

* ಶ್ವಾಸಕೋಶಗಳು ಶಕ್ತಿಯುತವಾಗುತ್ತವೆ.

* ಕೆಂಪುರಕ್ತ ಕಣಗಳ ವೃದ್ಧಿಗೆ ನೆರವಾಗುತ್ತದೆ.

* ದೇಹದ ಬೆಳವಣಿಗೆಯನ್ನು ಹೆಚ್ಚಿಸಿ, ಮನಸ್ಸಿನ ಸಮತೋಲನಕ್ಕೆ ನೆರವಾಗಿ ಸ್ಥಿತಪ್ರಜ್ಞೆಯನ್ನು ವೃದ್ಧಿಸುತ್ತದೆ.

* ಶೀರ್ಷಾಸನ ಈ ಎಲ್ಲಾ ಪ್ರಯೋಜನಗಳ ಜತೆಗೆ ಇನ್ನೂ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ರೂಪದಲ್ಲಿ ಔಧವಾಗಿಯೂ ಕಾರ್ಯನಿರ್ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT