ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕಮರಿದ ಮಹಾರಾಷ್ಟ್ರ ಕಾರ್ಮಿಕರ ಮಕ್ಕಳ ಅಕ್ಷರದ ಕನಸು!

Published 8 ನವೆಂಬರ್ 2023, 3:15 IST
Last Updated 8 ನವೆಂಬರ್ 2023, 3:15 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಈಗ ಕಬ್ಬು ಕಟಾವು ಪ್ರಕ್ರಿಯೆ ಆರಂಭವಾಗಿದೆ. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ತಂಡೋಪತಂಡವಾಗಿ ಬಂದಿರುವ ಕಾರ್ಮಿಕರ ತಂಡಗಳು, ರೈತರ ಹೊಲದಲ್ಲಿ ಬೀಡುಬಿಟ್ಟಿವೆ. ಅವರು ತಮ್ಮೊಂದಿಗೆ ಮಕ್ಕಳನ್ನೂ ಕರೆತಂದಿದ್ದೇವೆ. ಆ ಮಕ್ಕಳ ಶಿಕ್ಷಣಕ್ಕೆ ಇಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡದ್ದರಿಂದ ಅವರು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ಜಿಲ್ಲೆಯಲ್ಲಿ 27 ಸಕ್ಕರೆ ಕಾರ್ಖಾನೆಗಳಿವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 2.97 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ. ಬಹುತೇಕ ಕಾರ್ಖಾನೆಗಳು ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಿದ್ದು, ಮಹಾರಾಷ್ಟ್ರದ ಲಾತೂರ, ಸೊಲ್ಲಾಪುರ, ಬೀಡ್‌ ಮತ್ತಿತರ ಕಡೆಯಿಂದ ಬಂದ ಕಾರ್ಮಿಕರು ಕಬ್ಬು ಕಡಿಯುತ್ತಿದ್ದಾರೆ. ಅವರ ಮಕ್ಕಳು ಇಡೀದಿನ ಹೊಲದಲ್ಲೇ ಆಟವಾಡುತ್ತ ಸಮಯ ಕಳೆಯುತ್ತಿದ್ದಾರೆ. ಅಕ್ಷರ ಕಲಿಯಬೇಕೆಂಬ ಅವರ ಕನಸು ಕಮರುತ್ತಿದೆ.

ಅನುಕೂಲವಾಗುತ್ತದೆ: ‘ಲಾತೂರಿನ ಮರಾಠಿ ಮಾಧ್ಯಮ ಶಾಲೆಯಲ್ಲಿ ಪುತ್ರ ಕಾರ್ತಿಕ 1ನೇ ತರಗತಿಯಲ್ಲಿ ಓದುತ್ತಿದ್ದ. ದುಡಿಮೆ ಅರಸಿ ಕುಟುಂಬದವರೆಲ್ಲ ಬಂದಿದ್ದರಿಂದ ಅವನೂ ಬೆಳಗಾವಿಗೆ ಬಂದಿದ್ದಾನೆ. ನಾಲ್ಕು ತಿಂಗಳು ನಾವು ಇಲ್ಲಿಯೇ ಇರುತ್ತೇವೆ. ರಾಜ್ಯ ಸರ್ಕಾರ ಟೆಂಟ್‌ ಶಾಲೆ ತೆರೆದು, ಮರಾಠಿ ಮಾಧ್ಯಮದಲ್ಲೇ ಶಿಕ್ಷಣ ಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಬೆಳಗಾವಿಯ ಅಲಾರವಾಡ ಕ್ರಾಸ್‌ ಬಳಿ ಭಾನುವಾರ ಕಬ್ಬು ಕಡಿಯುವಲ್ಲಿ ನಿರತವಾಗಿದ್ದ ಕಾರ್ಮಿಕ ಲಕ್ಷ್ಮಣ ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪಕ್ಕದಲ್ಲೇ ನಿಂತಿದ್ದ ಮತ್ತೊಬ್ಬ ಕಾರ್ಮಿಕ ತಾನಾಜಿ ಕಾಂಬಳೆ, ‘ನನ್ನ ಮಗ ಮಲ್ಹಾರಿಯೂ ಎರಡನೇ ತರಗತಿಯಲ್ಲಿದ್ದಾನೆ. ನಾವೆಲ್ಲರೂ ಕೆಲಸದಲ್ಲಿ ನಿರತವಾದರೆ, ಆತ ಅಲ್ಲಿಲ್ಲಿ ಓಡಾಡುತ್ತ ದಿನಕಳೆಯುತ್ತಾನೆ. ನಾವು ಊರಿಗೆ ಹೋದ ನಂತರವೇ, ಅವನು ಶಾಲೆಯತ್ತ ಮುಖಮಾಡುವುದು. ತಾತ್ಕಾಲಿಕವಾಗಿ ಅವನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು’ ಎಂದರು.

‘ನನಗೆ ಶಾಲೆಗೆ ಹೋಗಬೇಕೆಂಬ ಆಸೆಯಿದೆ. ಆದರೆ, ಇಲ್ಲಿ ವ್ಯವಸ್ಥೆ ಇಲ್ಲವಲ್ಲ’ ಎಂದು ಮಲ್ಹಾರಿ ಹೇಳಿದ ಮಾತು, ಅಸಹಾಯಕವಾಗಿ ನುಡಿದಂತಿತ್ತು.

‘ಪುತ್ರಿ ದಿವ್ಯಾ ಐದನೇ ತರಗತಿಯಲ್ಲಿದ್ದಾಳೆ. ಮತ್ತೊಬ್ಬ ಪುತ್ರಿ ರಾಗಿಣಿಗೆ ಈಗ 4 ವರ್ಷ ವಯಸ್ಸು. ನಮ್ಮಂತೆ ಹಲವು ಕಾರ್ಮಿಕರ ನೂರಾರು ಮಕ್ಕಳು ಶಾಲೆ ಬಿಟ್ಟು, ಬೆಳಗಾವಿ ಜಿಲ್ಲೆಯತ್ತ ಬಂದಿದ್ದಾರೆ. ಇಲ್ಲಿ ಟೆಂಟ್‌ ಶಾಲೆಗಳು ತಲೆ ಎತ್ತದ್ದರಿಂದ ಅಕ್ಷರದಿಂದ ವಂಚಿತರಾಗುತ್ತಿದ್ದಾರೆ’ ಎಂದು ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿದ್ದ ಬೀಡ್‌ನ ಕಾರ್ಮಿಕ ನಿಲೇಶ್‌ ಕಾನಾಡೆ ಬೇಸರಿಸಿದರು.

ಸಮೀಕ್ಷೆ ಮಾಡಿ

‘ಯಾವುದೇ ಮಗುವಿಗೆ ಆರೋಗ್ಯ ಶಿಕ್ಷಣ ಸೌಕರ್ಯ ಕಡ್ಡಾಯವಾಗಿ ಸಿಗಬೇಕು. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಕಬ್ಬು ಕಡಿಯಲು ಬಂದ ಮಕ್ಕಳಿಗೆ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಸಹಭಾಗಿತ್ವದಲ್ಲಿ ಸಮೀಕ್ಷೆ ಕೈಗೊಳ್ಳಬೇಕು. ಮಕ್ಕಳು ಇಚ್ಛಿಸುವ ಭಾಷೆಯಲ್ಲೇ ಶಿಕ್ಷಣ ನೀಡಬೇಕು’ ಎಂದು ಭಾರತೀಯ ಕೃಷಿಕ ಸಮಾಜ(ಸಂಯುಕ್ತ) ರೈತ ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಗಳ ಸಹಯೋಗದಲ್ಲಿ ಮಹಾರಾಷ್ಟ್ರದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ ಶಿಕ್ಷಕರನ್ನೂ ನಿಯೋಜಿಸಲಾಗುವುದು
ಮೋಹನಕುಮಾರ್‌ ಹಂಚಾಟೆ, ಡಿಡಿಪಿಐ, ಚಿಕ್ಕೋಡಿ
ಇತ್ತೀಚೆಗೆ ನಡೆದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಸೂಚಿಸಲಾಗಿದೆ. ಪರಿಶೀಲಿಸಿ ಕ್ರಮ ವಹಿಸಲಾಗುವುದು
ನಿತೇಶ್‌ ಪಾಟೀಲ , ಜಿಲ್ಲಾಧಿಕಾರಿ, ಬೆಳಗಾವಿ
ಮಹಾರಾಷ್ಟ್ರದ ಲಾತೂರಿನಿಂದ ಕಬ್ಬು ಕಡಿಯಲು ಬೆಳಗಾವಿಗೆ ಬಂದಿರುವ ಕಾರ್ಮಿಕರು ಮತ್ತು ಅವರ ಮಕ್ಕಳು– ಪ್ರಜಾವಾಣಿ ಚಿತ್ರ:ಇಮಾಮ್‌ಹುಸೇನ್‌ ಗೂಡುನವರ
ಮಹಾರಾಷ್ಟ್ರದ ಲಾತೂರಿನಿಂದ ಕಬ್ಬು ಕಡಿಯಲು ಬೆಳಗಾವಿಗೆ ಬಂದಿರುವ ಕಾರ್ಮಿಕರು ಮತ್ತು ಅವರ ಮಕ್ಕಳು– ಪ್ರಜಾವಾಣಿ ಚಿತ್ರ:ಇಮಾಮ್‌ಹುಸೇನ್‌ ಗೂಡುನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT