ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ನೀರಿನ ಅಭಾವ ನಿಯಂತ್ರಿಸಲು ಹಲವು ಕ್ರಮ: ರಾಕೇಶ್ ಸಿಂಗ್

ಜಲಮಂಡಳಿ, ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ
Published 24 ಫೆಬ್ರುವರಿ 2024, 15:43 IST
Last Updated 24 ಫೆಬ್ರುವರಿ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರಿನ ಅಭಾವ ಉದ್ಭವವಾಗದಂತೆ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರಿನ ಅಭಾವ ಕುರಿತು ಶನಿವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂಬುದನ್ನು ಪಟ್ಟಿ ಮಾಡಿಕೊಂಡು, ಅಲ್ಲಿ ಸಮಸ್ಯೆ ಬಗೆಹರಿಸಬೇಕು. ನೀರಿನ ಅಭಾವ ಹೆಚ್ಚಿರುವ ಕಡೆ ಜಲಮಂಡಳಿ ಅಧಿಕಾರಿಗಳ ಜೊತೆ ಸಮನ್ವಯ ಮಾಡಿಕೊಂಡು ನಾಗರಿಕರಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ, ಎಷ್ಟು ಅನುದಾನದ ಅಗತ್ಯವಿದೆ ಎಂಬ ಮಾಹಿತಿ ನೀಡಿದರೆ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ವಲಯ ಆಯುಕ್ತರಿಗೆ ಹೇಳಿದ ರಾಕೇಶ್‌ ಸಿಂಗ್, 110 ಹಳ್ಳಿಗಳಿಗೆ ನೀರಿನ ಸಮಸ್ಯೆ ಬಗೆಹರಿಸಲು ಜಲಮಂಡಳಿಯ ಅಧಿಕಾರಿ/ ಸಿಬ್ಬಂದಿ, ಬಿಬಿಎಂಪಿ ವಲಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಬೇಕೆಂದು ಆದೇಶಿಸಿದರು.

₹131 ಕೋಟಿ ಅನುದಾನ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಮಹದೇವಪುರ, ಆರ್.ಆರ್.ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ ಹಾಗೂ ಯಲಹಂಕ ವಲಯಗಳಲ್ಲಿ (110 ಹಳ್ಳಿಗಳು ಸೇರಿದಂತೆ) ಕೊಳವೆಬಾವಿ ಕೊರೆಯಲು ₹131 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅಗತ್ಯವಿರುವ ಕಡೆ ಕೊಳವೆಬಾವಿಗಳನ್ನು ಕೊರೆಯಬೇಕು ಎಂದು ಸೂಚಿಸಿದರು.

ಶುದ್ಧನೀರಿನ ಘಟಕಗಳಲ್ಲಿ ನೀರಿಲ್ಲದಿದ್ದರೆ, ಹೊಸದಾಗಿ ಕೊಳವೆಬಾವಿ ಕೊರೆಯಬೇಕು. ಅಲ್ಲದೆ, ತಾತ್ಕಾಲಿಕವಾಗಿ ನೀರಿನ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು  ಅಧಿಕಾರಿಗಳಿಗೆ ಹೇಳಿದರು.

ಜಲಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ‘ಬೆಂಗಳೂರು ವ್ಯಾಪ್ತಿಯಲ್ಲಿ ವಾರ್ಷಿಕವಾಗಿ 19 ಟಿಎಂಸಿ ಅಡಿಯಷ್ಟು ನೀರನ್ನು ಹಂಚಿಕೆ ಮಾಡಲಾಗುತ್ತಿದೆ. ಸುಮಾರು 1,472 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಫೆಬ್ರುವರಿಯಿಂದ ಜುಲೈವರೆಗೆ ಅಂದಾಜು 9.48 ಟಿಎಂಸಿ ಅಡಿ ನೀರಿನ ಅವಶ್ಯಕತೆಯಿದೆ’ ಎಂದು ಹೇಳಿದರು.

ನಗರದಲ್ಲಿ 10.84 ಲಕ್ಷ ನೀರಿನ ಸಂಪರ್ಕಗಳಿವೆ. 10,955 ಕೊಳವೆ ಬಾವಿಗಳಲ್ಲಿ 1,214 ಕೊಳವೆ ಬಾವಿಗಳು ಬತ್ತಿದ್ದು, 3,700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸರಿಪಡಿಸಬಹುದಾದ ಕೊಳವೆ ಬಾವಿಗಳನ್ನು ಗುರುತಿಸಿ ಅಂತಹವುಗಳನ್ನು ಫ್ಲಷಿಂಗ್ ಹಾಗೂ ರೀಡ್ರಿಲ್ ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌, ಪಾಲಿಕೆ- ಜಲಮಂಡಳಿ ಅಧಿಕಾರಿಗಳು ಹಾಜರಿದ್ದರು.

110 ಹಳ್ಳಿಗಳಲ್ಲಿ ಸಮಗ್ರ ವ್ಯವಸ್ಥೆ

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು ಅಲ್ಲಿ ಸಮಗ್ರ ವ್ಯವಸ್ಥೆ ಮಾಡಲಾಗುತ್ತಿದೆ. ಹಳ್ಳಿಗಳಿಗೆ ಹೆಚ್ಚು ಒತ್ತು ನೀಡಿ ನೀರಿನ ಸಮಸ್ಯೆ ಬಗೆಹರಿಸಬೇಕಿದೆ. ಅಗತ್ಯವಿರುವ ಕಡೆ ಆದ್ಯತೆ ಮೇರೆಗೆ ಕೊಳವೆಬಾವಿಗಳನ್ನು ಕೊರೆಯಬೇಕು. ಜೊತೆಗೆ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿಕೊಂಡು ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. 110 ಹಳ್ಳಿಗಳಿಗೆ ಜಲಮಂಡಳಿಯಿಂದ 40000 ಸಂಪರ್ಕ ನೀಡಲಾಗಿದ್ದು 110 ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ಜಲಮಂಡಳಿಯ ಅಧಿಕಾರಿ/ಸಿಬ್ಬಂದಿ ಪಾಲಿಕೆ ವಲಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್‌ ಹೇಳಿದರು.

257 ಸ್ಥಳಗಳಲ್ಲಿ ನೀರಿನ ಸಮಸ್ಯೆ

ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಿರುವ 257 ಸ್ಥಳಗಳನ್ನು ಗುರುತಿಸಲಾಗಿದೆ. ಆ ಪ್ರದೇಶಗಳಿಗೆ ನೀರಿನ ಸರಬರಾಜು ಮಾಡಲು 68 ಟ್ಯಾಂಕರ್‌ಗಳ ಜೊತೆಗೆ 18 ಹೊಸ ಟ್ಯಾಂಕರ್‌ಗಳನ್ನು ಖರೀದಿಸಲು ಮತ್ತು 200 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಕ್ರಮವಹಿಸಲಾಗಿದೆ. ಜೊತೆಗೆ ಕಾವೇರಿ 5ನೇ ಹಂತದ ಕಾಮಗಾರಿ ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಟ್ಯಾಂಕ್‌ ಮೂಲಕ ನೀರು:  ಆರ್.ಆರ್. ನಗರ ವಲಯದಲ್ಲಿ ಪ್ರಮುಖ ಸ್ಥಳದಲ್ಲಿ ಟ್ಯಾಂಕ್‌ಗಳನ್ನು ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಎಲ್ಲಾ ವಲಯಗಳಲ್ಲಿಯೂ ಪ್ರಮುಖ ಸ್ಥಳ ಕೊಳೆಗೇರಿ ಪ್ರದೇಶ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಟ್ಯಾಂಕ್‌ಗಳನ್ನು ಅಳವಡಿಸಿ ಜಲಮಂಡಳಿಯಿಂದ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು. 58 ಕಡೆ ಕೊರತೆ: ನಗರದಲ್ಲಿ 58 ಕಡೆ ನೀರಿನ ಸಮಸ್ಯೆಯಿದೆ. ಮಹದೇವಪುರ– 16 ಆರ್.ಆರ್ ನಗರ– 25 ಬೊಮ್ಮನಹಳ್ಳಿ– 5 ಕಡೆ ಯಲಹಂಕ ಹಾಗೂ ದಾಸರಹಳ್ಳಿ ತಲಾ 3 ಕಡೆ ನೀರಿನ ಅಭಾವ ಅತಿ ಹೆಚ್ಚಿದೆ. ಕೊಳವೆಬಾವಿಗಳನ್ನು ಕೊರೆಯಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಬೆಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT