ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗುವುದೇ ಗರ್ಭಾವಸ್ಥೆಯ ಮಧುಮೇಹ (ಜಿಡಿಎಂ– ಜೆಸ್ಟೇಶನಲ್ ಡಯಾಬಿಟಿಸ್ ಮೆಲ್ಲಿಟಸ್). ಇದು ಗರ್ಭಿಣಿಯರ ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ಜಾಸ್ತಿ ಮಾಡುವುದಲ್ಲದೇ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ಪಥ್ಯಾಹಾರ, ವ್ಯಾಯಾಮ ಹಾಗೂ ಔಷಧಗಳಿಂದ ಇದನ್ನು ನಿಯಂತ್ರಿಸುವುದರಿಂದ ಯಾವುದೇ ಸಮಸ್ಯೆಗಳಿಂದ ಪಾರಾಗಬಹುದು.

ಈ ಬಗೆಯ ಮಧುಮೇಹವು ಸಾಮಾನ್ಯವಾಗಿ ಮಗುವಿನ ಜನನದ ನಂತರ ಕಣ್ಮರೆಯಾಗುತ್ತದೆ. ಆದರೆ ಹಲವರಲ್ಲಿ ಮುಂದೆ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಇರುವುದರಿಂದ ಮಹಿಳೆಯರು ಎಚ್ಚರಿಕೆ ವಹಿಸುವುದು ಅಗತ್ಯ. ಗರ್ಭಾವಸ್ಥೆಯ ಮಧುಮೇಹ ಯಾವುದೇ ಸಮಯದಲ್ಲಿ ಸಂಭವಿಸಬಹುದು, ಗರ್ಭಧಾರಣೆಯ ದ್ವಿತೀಯಾರ್ಧದಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಆದರೆ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲವಾದ್ದರಿಂದ ರಕ್ತ ಪರೀಕ್ಷೆಯ ಮೂಲಕವೆ ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಗರ್ಭಿಣಿಯರ ರಕ್ತವು ಮಗುವಿಗೆ ಪೂರೈಕೆಯಾಗುವುದು ಪ್ಲಾಸೆಂಟಾ ಮೂಲಕ. ಇದು ಹಲವು ಬಗೆಯ ಹಾರ್ಮೋನ್ಗಳನ್ನು ಉತ್ಪಾದಿಸುತ್ತದೆ. ಹೆಚ್ಚು ಕಡಿಮೆ ಎಲ್ಲಾ ಬಗೆಯ ಹಾರ್ಮೋನ್ಗಳು ಇನ್ಸುಲಿನ್ ಮೇಲೆ ಪರಿಣಾಮ ಬೀರುತ್ತವೆ. ಅಂದರೆ ಇನ್ಸುಲಿನ್ ಕೆಲಸವನ್ನು ತಡೆಗಟ್ಟುತ್ತದೆ. ಹೀಗಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಪ್ರಮಾಣ ಹೆಚ್ಚಾಗುತ್ತದೆ. ಮಗು ಬೆಳೆದಂತೆ ಇನ್ಸುಲಿನ್ ಅನ್ನು ಕ್ರಿಯಾಹೀನಗೊಳಿಸುವಂತಹ ಹಾರ್ಮೋನ್ಗಳ ಉತ್ಪಾದನೆಯೂ ಜಾಸ್ತಿಯಾಗುತ್ತದೆ. ಇದು ಮಗುವಿನ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಬಹುದು.

ಯುವತಿಗೆ ಪ್ರೀ ಡಯಾಬಿಟಿಸ್ ಅಂದರೆ ರಕ್ತದಲ್ಲಿರುವ ಸಕ್ಕರೆ ಅಥವಾ ಗ್ಲುಕೋಸ್ ಮಟ್ಟ ಅಲ್ಪ ಏರಿಕೆಯಾಗಿದ್ದರೆ, ಗರ್ಭಾವಸ್ಥೆಯಲ್ಲಿ ಮಧುಮೇಹ ಬರಬಹುದು. ಕುಟುಂಬದಲ್ಲಿ ತಂದೆ– ತಾಯಿಗೆ ಮಧುಮೇಹವಿದ್ದರೆ ಇದರ ಸಾಧ್ಯತೆ ಜಾಸ್ತಿ. ತೂಕ ಜಾಸ್ತಿಯಿದ್ದರೂ ಬರಬಹುದು. ಕೆಲವೊಮ್ಮೆ ಇದ್ಯಾವ ಕಾರಣಗಳು ಇಲ್ಲದಿದ್ದರೂ ಬರಬಹುದು.

ಗರ್ಭಾವಸ್ಥೆಯ ಮಧುಮೇಹವು ಹೆರಿಗೆಯಾಗುವಾಗ ಶಸ್ತ್ರಚಿಕಿತ್ಸೆ, ಹೆರಿಗೆ ನಂತರದ ಖಿನ್ನತೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಸ್ತನ್ಯಪಾನ, ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆಯೂ ದುಷ್ಪರಿಣಾಮ ಬೀರಬಹುದು. ಮಹಿಳೆಯು ಎರಡನೇ ಬಾರಿ ಗರ್ಭಿಣಿಯಾಗುವಾಗ ಮತ್ತು ನಂತರದ ದಿನಗಳಲ್ಲಿ ಮಧುಮೇಹದ ತೊಂದರೆಗೆ ಒಳಗಾಗುವ ಸಂಭವವೂ ಜಾಸ್ತಿ. ಮಗುವಿನ ತೂಕ ಜಾಸ್ತಿ ಇರಬಹುದು. ಮುಂದೆ ಬೆಳೆದು ದೊಡ್ಡವರಾದಾಗ ಟೈಪ್ 2 ಮಧುಮೇಹ ಬರಬಹುದು.

ಮಗುವಿನ ಮೇಲೆ ಪರಿಣಾಮ

ಗರ್ಭಾವಸ್ಥೆ ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರಿಗೆ ಜನಿಸಿದ ಮಕ್ಕಳು 10– 14 ವರ್ಷ ವಯಸ್ಸಿನಲ್ಲಿ ಪೂರ್ವ-ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲಬಹುದು ಎಂದು ಅಧ್ಯಯನವು ದೃಢಪಡಿಸಿದೆ. ತಾಯಿಗೆ ಬೊಜ್ಜಿದ್ದರೆ ಮಕ್ಕಳಿಗೂ ಆನುವಂಶೀಯವಾಗಿ ಬೊಜ್ಜು ಬರಬಹುದು. ಆದರೆ ಗರ್ಭಾವಸ್ಥೆ ಮಧುಮೇಹವಿದ್ದರೆ, ತಾಯಿಯು ಹೆಚ್ಚು ತೂಕವನ್ನು ಹೊಂದಿಲ್ಲದಿದ್ದರೂ ದಪ್ಪ ಇರುವ ಮಗು ಜನಿಸಬಹುದು.

ತಾಯಿಯ ರಕ್ತದಲ್ಲಿನ ಸಕ್ಕರೆಯ ಮಟ್ಟ ಮತ್ತು ಚಯಾಪಚಯ ಕ್ರಿಯೆಯು ಮಗುವಿನ ಚಯಾಪಚಯ ಮತ್ತು ಗ್ಲುಕೋಸ್ ಸಹಿಷ್ಣುತೆ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯ ಮಧುಮೇಹ ಶುರುವಾಗುವ ಅಪಾಯವನ್ನು ಕಡಿಮೆ ಮಾಡಲು, ಹಾಗೆಯೇ ಮಗುವಿನ ಮೇಲಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಲು ಇಂತಹ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಬೇಕಾಗುತ್ತದೆ.

ಗರ್ಭಾವಸ್ಥೆ ಮಧುಮೇಹವನ್ನು ಆರೋಗ್ಯಕರವಾಗಿ ತಿನ್ನುವುದು ಮತ್ತು ಸಾಮಾನ್ಯ ದೈಹಿಕ ಚಟುವಟಿಕೆ ಮಾಡುವುದರ ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಇದನ್ನು ನಿಯಂತ್ರಿಸಲು ಇನ್ಸುಲಿನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಲು ಸಹ ವೈದ್ಯರು ಸಲಹೆ ನೀಡಬಹುದು. ಮಗುವಿನ ಜನನದ ನಂತರ ಗರ್ಭಾವಸ್ಥೆಯ ಮಧುಮೇಹವು ಸಾಮಾನ್ಯವಾಗಿ ನಿಯಂತ್ರಣಕ್ಕೆ ಬರುವುದರಿಂದ ಇನ್ಸುಲಿನ್ ಚುಚ್ಚುಮದ್ದು ಅಗತ್ಯವಿರುವುದಿಲ್ಲ.

ಹೆಚ್ಚು ವ್ಯಾಯಾಮ

ಗರ್ಭಿಣಿಯರಿಗೆ ಮತ್ತು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ವ್ಯಾಯಾಮ ಉತ್ತಮ. ದೈನಂದಿನ ದಿನಚರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಲು ಪ್ರಯತ್ನಿಸಬೇಕು ಮತ್ತು ಈ ಅವಧಿಯನ್ನು ಸುಮಾರು 30 ನಿಮಿಷಗಳವರೆಗೆ ಕ್ರಮೇಣ ಹೆಚ್ಚಿಸಬಹುದು.

ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ

ವ್ಯಾಯಾಮ ಮತ್ತು ಆಹಾರಕ್ರಮದ ಬದಲಾವಣೆಗಳು ರಕ್ತದ ಸಕ್ಕರೆ ಪ್ರಮಾಣಗಳ ಮೇಲೆ ಪರಿಣಾಮ ಬೀರುತ್ತದೆಯೆ ಎಂದು ಖಚಿತಪಡಿಸಿಕೊಳ್ಳಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.

ಆಹಾರದಲ್ಲಿ ಪಥ್ಯ ಇರಲಿ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪಥ್ಯಾಹಾರ ಸೇವಿಸಬೇಕಾಗುತ್ತದೆ. ಹಾಗೆಯೇ ಮಗುವಿನ ಸರಿಯಾದ ಬೆಳವಣಿಗೆಗಾಗಿ ಸಾಕಷ್ಟು ಪೋಷಕಾಂಶಗಳು ಮತ್ತು ಕ್ಯಾಲೊರಿಗಳು ಬೇಕಾಗುತ್ತವೆ. ಆಹಾರದಲ್ಲಿ ಹೆಚ್ಚಿನ ನಾರಿನಂಶ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಆಹಾರಗಳು ಇರಬೇಕು. ಹಣ್ಣು, ತರಕಾರಿ, ಬೇಳೆಕಾಳು ತಿನ್ನಿ. ಸಕ್ಕರೆ, ಸಿಹಿ ಪದಾರ್ಥಗಳು, ಕಾರ್ಬೊಹೈಡ್ರೇಟ್ ಇರುವ ಪದಾರ್ಥಗಳನ್ನು ಸಂಪೂರ್ಣ ತ್ಯಜಿಸಿ. ಪ್ರೊ ಬಯಾಟಿಕ್, ವಿಟಮಿನ್ ಡಿ ತೆಗೆದುಕೊಂಡರೆ ಒಳಿತು.

ನಿಯಮಿತವಾಗಿ ಔಷಧಿಗಳನ್ನು ಸೇವಿಸಿ

ಮೇಲೆ ತಿಳಿಸಿದ ಬದಲಾವಣೆಗಳ ಹೊರತಾಗಿಯೂ ರಕ್ತದ ಸಕ್ಕರೆ ಪ್ರಮಾಣವು ಇನ್ನೂ ಹೆಚ್ಚಿದ್ದರೆ ವೈದ್ಯರು ಕೆಲವು ಔಷಧಿಗಳನ್ನು ಸೂಚಿಸಬಹುದು, ಇದು ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇನ್ಸುಲಿನ್ ಚುಚ್ಚುಮದ್ದನ್ನು ಕೂಡ ಶಿಫಾರಸು ಮಾಡಬಹುದು.

(ಲೇಖಕಿ ಸಲಹೆಗಾರರು, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಅಪೊಲೊ ಕ್ರೆಡೆಲ್, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.