ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ:ಅಡ್ವಾಣಿ, ಜೋಷಿಗೆ ವಿಎಚ್‌ಪಿ ಆಹ್ವಾನ

ಅಯೋಧ್ಯೆ: ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ * ಟ್ರಸ್ಟ್‌ನಿಂದ ಆಗಮಿಸದಂತೆ ಮನವಿ
Published 19 ಡಿಸೆಂಬರ್ 2023, 16:11 IST
Last Updated 19 ಡಿಸೆಂಬರ್ 2023, 16:11 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ ಮತ್ತು ಮುರಳಿಮನೋಹರ್‌ ಜೋಷಿ ಅವರಿಗೆ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆಹ್ವಾನ ನೀಡಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ನಡೆದಿದ್ದ ಆಂದೋಲನದಲ್ಲಿ ಈ ಇಬ್ಬರೂ ನಾಯಕರು ಮುಂಚೂಣಿಯಲ್ಲಿದ್ದರು. ಆದರೆ, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರತಿನಿಧಿಗಳು ಕೋರಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ವಿಎಚ್‌ಪಿ ಮುಂದಾಗಿದ್ದು, ಈ ಇಬ್ಬರು ನಾಯಕರಿಗೂ ಆಹ್ವಾನ ನೀಡಿದೆ. 

‘ಇಬ್ಬರು ನಾಯಕರನ್ನೂ ಮಂಗಳವಾರ ಭೇಟಿ ಮಾಡಿ, ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಲು ಪ್ರಯತ್ನಿಸುವುದಾಗಿ ಅವರಿಬ್ಬರೂ ಹೇಳಿದ್ದಾರೆ’ ಎಂದು ವಿಎಚ್‌ಪಿ ಅಧ್ಯಕ್ಷ ಅಲೋಕ್‌ ಕುಮಾರ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. 

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ್ದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಅವರು, ‘ವಯಸ್ಸನ್ನು ಗಮನದಲ್ಲಿ ಇರಿಸಿಕೊಂಡು ಕಾರ್ಯಕ್ರಮಕ್ಕೆ ಆಗಮಿಸದಂತೆ ಅಡ್ವಾಣಿ ಮತ್ತು ಜೋಷಿ ಅವರನ್ನು ಕೋರಲಾಗಿದೆ’ ಎಂದಿದ್ದರು.

‘ಎಲ್‌.ಕೆ.ಅಡ್ವಾಣಿ ಅವರಿಗೆ 96 ವರ್ಷ, ಮುರಳಿಮನೋಹರ್‌ ಜೋಷಿ ಅವರಿಗೆ 90 ವರ್ಷ ಆಗಿದೆ. ಅವರ ವಯಸ್ಸು ಮತ್ತು ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಂಡು ನಾವು ಈ ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಅವರಿಬ್ಬರೂ ಒಪ್ಪಿಕೊಂಡಿದ್ದಾರೆ’ ಎಂದೂ ಅವರು ಹೇಳಿದ್ದರು.

‘ಇಬ್ಬರೂ ನಾಯಕರನ್ನು ಆಹ್ವಾನಿಸಲಾಗಿದೆ. ಆದರೆ, ಅವರಿಗೆ ಬಾರದಂತೆ ಟ್ರಸ್ಟ್‌ ಮನವಿ ಮಾಡಿದೆ. ಆ ದಿನ (ಜನವರಿ 22) ವಿಪರೀತ ಚಳಿ ಇರುತ್ತದೆ. ಅದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ರೈ ತಿಳಿಸಿದ್ದರು.

ಮುರಳಿಮನೋಹರ್‌ ಜೋಷಿ
ಮುರಳಿಮನೋಹರ್‌ ಜೋಷಿ

1990ರಲ್ಲಿ ಅಡ್ವಾಣಿ ಅವರು ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಕೋರಿ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಕೈಗೊಂಡಿದ್ದರು. ಈ ಯಾತ್ರೆಯು ದೇಶದ ಕೆಲವು ಭಾಗಗಳಲ್ಲಿ ಕೋಮುಗಲಭೆಯನ್ನು ಪ್ರಚೋದಿಸಿತ್ತು. ಅವರ ಯಾತ್ರೆಯು ಬಿಹಾರದಲ್ಲಿದ್ದಾಗ, ಆಗಿನ ಲಾಲು ಪ್ರಸಾದ್‌ ನೇತೃತ್ವದ ಸರ್ಕಾರ ಅವರನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT