ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌, ಅಮೆರಿಕದ ಮೇಲೆ ಪ್ರತೀಕಾರ: ಇರಾನ್‌ ಪ್ರತಿಜ್ಞೆ

ವೈಮಾನಿಕ ದಾಳಿಯಲ್ಲಿ ಹತರಾಗಿದ್ದ ಐಆರ್‌ಜಿಯ ಏಳು ಸಿಬ್ಬಂದಿ ಅಂತಿಮಯಾತ್ರೆ
Published 5 ಏಪ್ರಿಲ್ 2024, 12:31 IST
Last Updated 5 ಏಪ್ರಿಲ್ 2024, 12:31 IST
ಅಕ್ಷರ ಗಾತ್ರ

ಟೆಹರಾನ್‌: ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್‌ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್‌ ರೆವಲ್ಯೂಷನರಿ ಗಾರ್ಡ್‌ನ (ಐಆರ್‌ಜಿ) ಏಳು ಮಂದಿಯ ಪಾರ್ಥಿವ ಶರೀರಗಳ ಮೆರವಣಿಗೆ ಮತ್ತು ಭಾರಿ ಪ್ರತಿಭಟನೆ ಟೆಹರಾನ್‌ನಲ್ಲಿ ಶುಕ್ರವಾರ ನಡೆಯಿತು.

ಟೆಹರಾನ್‌ನ ವಿಶ್ವವಿದ್ಯಾಲಯದ ಬಳಿ ಪ್ರತಿಭಟನೆ ವೇಳೆ ಮಾತನಾಡಿದ ಐಆರ್‌ಜಿ ಕಮಾಂಡರ್‌ ಮೇಜರ್‌ ಜನರಲ್‌ ಹುಸೇನ್‌ ಸಲಾಮಿ, 'ಉನ್ನತ ಸೇನಾಧಿಕಾರಿಗಳ ಹತ್ಯೆ ಮಾಡಿರುವ ಇಸ್ರೇಲ್‌ ಮೇಲೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ' ಎಂದು ಪ್ರತಿಜ್ಞೆ ಮಾಡಿದರು.   

‘ಇದು ಬೆದರಿಕೆಯಲ್ಲ, ನಾವು ಉತ್ತರ ನೀಡುತ್ತೇವೆ. ಜಿಯೋನಿಸ್ಟ್ ಆಡಳಿತ ಪತನ ಹತ್ತಿರವಾಗಿದೆ. ನಮಗೆ ದೇವರ ಅನುಗ್ರಹವಿದೆ. ಅಮೆರಿಕವು ವಿಶ್ವದಲ್ಲಿ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯದ ದೇಶಗಳ ತೀವ್ರ ದ್ವೇಷ ಕಟ್ಟಿಕೊಂಡಿದೆ’ ಎಂದು ಸಲಾಮಿ ಗುಡುಗಿದರು.

ಏಳು ಸೇನಾಧಿಕಾರಿಗಳ ಶವಗಳನ್ನು ಅಂತ್ಯಸಂಸ್ಕಾರ ನಡೆಸಲು ಟ್ರಕ್‌ನಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಇರಾನಿಗರು, ಇಸ್ರೇಲ್‌ ಮತ್ತು ಅಮೆರಿಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ಎರಡೂ ದೇಶಗಳಿಗೆ ವಿನಾಶ ಕಾದಿದೆ ಎಂದು ಕಿಡಿಕಾರಿದರು.  

ಇಸ್ರೇಲ್‌ ಸೋಮವಾರ ನಡೆಸಿದ ವೈಮಾನಿಕ ದಾಳಿಗೆ, ಇರಾನ್‌ ಸೇನೆಯ ಇಬ್ಬರು ಬ್ರಿಗೇಡಿಯರ್‌ ಜನರಲ್‌ಗಳು ಮತ್ತು ಐವರು ರೆವಲ್ಯೂಷನರಿ ಗಾರ್ಡ್‌ಗಳು, ಸಿರಿಯಾದ ನಾಲ್ವರು ನಾಗರಿಕರು ಮತ್ತು ಲೆಬನಾನಿನ ಉಗ್ರಗಾಮಿ ಹಿಜ್ಬುಲ್ಲಾ ಗುಂಪಿನ ಸದಸ್ಯ ಸೇರಿ 12 ಮಂದಿ ಹತರಾಗಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT