<p>ಕರ್ನಾಟಕ ಸಹಕಾರ ಸಂಘಗಳ (ಕೆಸಿಎಸ್) ಕಾಯ್ದೆ–1959 ಮತ್ತು ಸಹಕಾರ ಸಂಘಗಳ ನಿಯಮಗಳು–1960ರಲ್ಲಿರುವ ಹಲವು ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ‘ಕಾಯ್ದೆಯನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿ ತುರ್ತಾಗಿ ಸಮಗ್ರ ತಿದ್ದುಪಡಿಯನ್ನು ತರುವ ಅಗತ್ಯವಿದೆ’ ಎಂದು ಹೇಳಿರುವುದು ಸ್ವಾಗತಾರ್ಹ ಹಾಗೂ ಸಕಾಲಿಕ ನಡೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ರಿಟ್ ಅರ್ಜಿಯೊಂದರ ವಿಚಾರಣೆ ಕಾಲಕ್ಕೆ ಕೆಸಿಎಸ್ ಕಾಯ್ದೆಯಲ್ಲಿನ ದೋಷಗಳನ್ನು ನಿಕಷಕ್ಕೆ ಒಳಪಡಿಸಿದೆ. ಓಬಿರಾಯನ ಕಾಲದ ಈ ಕಾಯ್ದೆಗೆ ಇದುವರೆಗೆ ಆಡಳಿತ ನಡೆಸಿದ ಸರ್ಕಾರಗಳು ಹಲವು ತಿದ್ದುಪಡಿಗಳನ್ನು ತಂದಿದ್ದರೂ ಅಸ್ಪಷ್ಟತೆಗಳು ಇನ್ನೂ ಉಳಿದಿರುವುದನ್ನು ಪೀಠ ಗಮನಿಸಿದೆ. ‘ಕಾಯ್ದೆಯ ಅಡಿಯಲ್ಲಿ ಬರುವ ಸದಸ್ಯತ್ವದ ಹಕ್ಕುಗಳು, ಅನರ್ಹತೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಕಾಲಕಾಲಕ್ಕೆ ಚುನಾವಣೆ ನಡೆಸುವುದು, ಲೆಕ್ಕ ಪರಿಶೋಧನೆ ಮತ್ತು ಆಡಳಿತಾಧಿಕಾರಿ ನೇಮಕಾತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಂಘರ್ಷದ ಅಂಶಗಳಿವೆ. ಎಲ್ಲ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಸಿಎಸ್ ಕಾಯ್ದೆಗೆ ತಾರ್ಕಿಕವಾಗಿ ಸಮಗ್ರ ತಿದ್ದುಪಡಿಯನ್ನು ಮಾಡಬೇಕಿದೆ’ ಎಂಬುದಾಗಿ ಕೋರ್ಟ್ ಒತ್ತಿ ಹೇಳಿದೆ. ಹಣಕಾಸು, ವಸತಿ, ಕೃಷಿ, ಹೈನುಗಾರಿಕೆ, ಸಕ್ಕರೆ ವಲಯಗಳಲ್ಲಿನ ಸಹಕಾರ ಸಂಘಗಳು ಸಮಾಜದಲ್ಲಿ ಹಾಸುಹೊಕ್ಕಾಗಿ, ಅವುಗಳು ಬೀರುತ್ತಿರುವ ಪರಿಣಾಮವನ್ನು ಗಮನಿಸಿದಾಗ ಕೋರ್ಟ್ನ ಕಳಕಳಿ ಅರ್ಥವಾಗುತ್ತದೆ. ಯಾವುದೇ ಕಾಯ್ದೆ ಇರಲಿ, ಕಾಲದ ಅಗತ್ಯಗಳಿಗೆ ಸ್ಪಂದಿಸದೆ ಹೋದರೆ ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಆ ಕಾಯ್ದೆಯನ್ನು ರೂಪಿಸಿದ ಉದ್ದೇಶ ವ್ಯರ್ಥವಾಗುತ್ತದೆ. ಹೀಗಾಗಿ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಕಾಯ್ದೆಗೆ ಮಾರ್ಪಾಡು ತರುವುದು ಅತ್ಯಗತ್ಯ. ಕೆಸಿಎಸ್ ಕಾಯ್ದೆ ಮತ್ತು ಸಂಬಂಧಿತ ನಿಯಮಗಳು ರಚನೆಯಾದ ಸಮಯದಿಂದಲೂ ಅವುಗಳಲ್ಲಿ ಹಲವು ಸಮಸ್ಯೆಗಳಿವೆ ಎನ್ನುವುದು ತಜ್ಞರ ಅಭಿಮತ. ಈ ಕಾಯ್ದೆಯನ್ನು ರಾಜ್ಯಗಳ ಪುನರ್ರಚನೆಯ ಹೊಸತರಲ್ಲಿ ತುರ್ತಾಗಿ ರೂಪಿಸಲಾಗಿತ್ತು. ಕಾಯ್ದೆಯೊಂದಿಗೆ ಅಡಕವಾಗಿರುವ ಅಂಶಗಳು ಸಮಗ್ರ ಮತ್ತು ಸಾವಧಾನದ ಪರಿಶೀಲನೆಗೆ ಒಳಪಡದ ಕಾರಣ, ತಪ್ಪಿತಸ್ಥರು ಶಿಕ್ಷೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಅನುವಾಗುವಂತೆ ನಿಯಮಾವಳಿಗಳು ಸಡಿಲವಾಗಿದ್ದವು. ಶಿಕ್ಷೆ ಮತ್ತು ದಂಡದ ಪ್ರಮಾಣ ಸಹ ದುರ್ಬಲವಾಗಿದ್ದರಿಂದ ಸಹಕಾರ ಸಂಘಗಳಲ್ಲಿ ಅಪನಂಬಿಕೆ ಮತ್ತು ಅಕ್ರಮಗಳು ಹೆಚ್ಚಾದವು. ಸಹಕಾರ ಸಂಘಗಳಲ್ಲಿ ಅವ್ಯವಹಾರಗಳು, ಅಕ್ರಮಗಳು, ಹಗರಣಗಳು ಹೆಚ್ಚಾಗುತ್ತಾ ಬರಲು ಕಾಯ್ದೆಯಲ್ಲಿನ ಇಂತಹ ಲೋಪ ದೋಷಗಳೇ ಕಾರಣವಾಗಿವೆ ಎಂದೂ ವಿಶ್ಲೇಷಿಸಲಾಗುತ್ತದೆ. ಕೋರ್ಟ್ ಕೂಡ ಈ ಕಾಯ್ದೆಯು ಹಳೆಯದು ಮತ್ತು ಆಧುನಿಕ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗೆ ಸರಿಹೊಂದದು ಎಂದು ಸ್ಪಷ್ಟವಾಗಿಯೇ ಹೇಳಿದೆ.</p>.<p>1959ರ ಕೆಸಿಎಸ್ ಕಾಯ್ದೆ ಮತ್ತು 1960ರ ಕೆಸಿಎಸ್ ನಿಯಮಗಳನ್ನು ದಶಕಗಳಿಂದಲೂ ಹಲವು ತಿದ್ದುಪಡಿಗಳಿಗೆ ಒಳಪಡಿಸಲಾಗಿದೆ. ದುರದೃಷ್ಟವಶಾತ್, ಅಂತಹ ತಿದ್ದುಪಡಿಗಳನ್ನು ಮಾಡುವಾಗ, ಅಸ್ತಿತ್ವದಲ್ಲಿರುವ ನಿಬಂಧನೆಗಳ ಮೇಲಿನ ಪರಸ್ಪರ ಕ್ರಿಯೆ ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇಂತಹ ತಿದ್ದುಪಡಿಗಳನ್ನು ‘ಆಧುನಿಕ, ಸಾಮಾಜಿಕ, ಆರ್ಥಿಕ ಪರಿಸರಕ್ಕೆ ಹೊಂದಿಕೆಯಾಗದಿರುವ ಸಂಘರ್ಷಯುಕ್ತ ನಿಬಂಧನೆಗಳನ್ನು ಜೋಡಿಸುವ ತೇಪೆ ಕೆಲಸ’ ಎಂದು ಕೋರ್ಟ್ ಹೇಳಿರುವುದು ಸರಿಯಾಗಿಯೇ ಇದೆ. ಆದಾಯ ತೆರಿಗೆ ಕಾಯ್ದೆ–1961ಅನ್ನು ಆಮೂಲಾಗ್ರವಾಗಿ ಬದಲಾಯಿಸಿ ಹೊಸ ಕಾಯ್ದೆ ಜಾರಿಗೆ ತಂದಿರುವುದನ್ನೂ ಕೋರ್ಟ್ ಉದಾಹರಿಸಿದೆ. ಸಹಕಾರಿ ಸಂಸ್ಥೆಗಳ ಸ್ವಾಯತ್ತತೆಯನ್ನು ಹಾಗೂ ಆ ಸಂಸ್ಥೆಗಳಲ್ಲಿ ಸಾಂವಿಧಾನಿಕ ತತ್ವಗಳೊಂದಿಗೆ ದಕ್ಷತೆ, ಪಾರದರ್ಶಕತೆ ಮತ್ತು ಹೊಂದಾಣಿಕೆಯನ್ನು ಖಾತರಿಪಡಿಸಿಕೊಳ್ಳಲು ಅನುವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಇಡೀ ದೇಶದಲ್ಲಿ ಮೊತ್ತಮೊದಲ ಸಹಕಾರ ಸಂಘವನ್ನು ಸ್ಥಾಪಿಸಿದ ಹೆಮ್ಮೆಯ ಪರಂಪರೆ ನಮ್ಮದು. ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ಹಲವು ಏರಿಳಿತ ಕಂಡಿದ್ದ ಸಹಕಾರಿ ಸಂಘಗಳು, ನಂತರದ ದಿನಗಳಲ್ಲಿ ಚೇತರಿಕೆಯ ಹಾದಿಯಲ್ಲಿದ್ದವು. ಆದರೆ, ಕಾಯ್ದೆಯ ಲಗಾಮು ಬಿಗಿಗೊಳ್ಳದ ಕಾರಣ ಅವ್ಯವಹಾರಗಳು ಹೆಚ್ಚಾದವು ಎನ್ನುವುದು ವ್ಯಥೆಯ ಸಂಗತಿ. ಹೈಕೋರ್ಟ್ನ ಅಭಿಪ್ರಾಯ ಹೊರಬೀಳುವ ಮೊದಲೇ ರಾಜ್ಯ ಸರ್ಕಾರವು ಇದೇ ವರ್ಷ ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2025’ಯನ್ನು ರೂಪಿಸಿ, ಅದಕ್ಕೆ ಎರಡೂ ಸದನಗಳಿಂದ ಅಂಗೀಕಾರವನ್ನೂ ಪಡೆದಿದೆ. ಆದರೆ, ಆ ಮಸೂದೆಯಲ್ಲಿ ಮಾಡಿರುವ ತಿದ್ದುಪಡಿಗಳು ಕೆಲವೇ ಕೆಲವು ಅಂಶಗಳಿಗೆ ಸೀಮಿತವಾಗಿವೆಯೇ ಹೊರತು ಕೋರ್ಟ್ ಹೇಳಿರುವಂತೆ, ಕಾಯ್ದೆಯನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿ ಸಮಗ್ರ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಹೈಕೋರ್ಟ್ನ ಶಿಫಾರಸುಗಳನ್ನು ಕಾನೂನು ಇಲಾಖೆಯು ಮುಕ್ತ ಮನಸ್ಸಿನಿಂದ ಪರಾಮರ್ಶಿಸಬೇಕು. ಕಾಯ್ದೆಯ ಸಮಗ್ರ ಪರಿಷ್ಕರಣೆಗೆ ತಜ್ಞರ ಸಮಿತಿ ನೇಮಕ ಮಾಡಬೇಕು. ಸಹಕಾರ ತತ್ವವನ್ನು ಬಲಪಡಿಸುವಂತಹ ಸಶಕ್ತ ಮತ್ತು ಸಮಗ್ರವಾದ ಕಾಯ್ದೆಯನ್ನು ರೂಪಿಸಬೇಕು. ಕೊಳೆತು ನಾರುವ ವ್ಯವಸ್ಥೆಯಿಂದ ಸಹಕಾರಿ ಕ್ಷೇತ್ರವನ್ನು ಹೊರತರಬೇಕು. ಸಹಕಾರ ಚಳವಳಿಗೆ ಕಾರಣವಾದ ನಾಡಿನಲ್ಲಿ ಸಹಕಾರ ಸಂಘಗಳು ಗತವೈಭವವನ್ನು ಮರಳಿ ಪಡೆಯುವಂತೆ ನೋಡಿಕೊಳ್ಳಬೇಕು.</p>