ಅಮ್ಮ ಎಂದರೆ ಅಮ್ಮ, ಅಮ್ಮನ ಜಾಗಕ್ಕೆ ಬದಲಿ ಇಲ್ಲವೇ ಇಲ್ಲ. ಹಾಗಿದ್ದರೂ, ನವಯುಗದ ಉದ್ಯೋಗಸ್ಥ ಅಮ್ಮಂದಿರು ಮಕ್ಕಳ ಜೀವನದಲ್ಲಿ ತಮ್ಮ ಅನುಪಸ್ಥಿತಿಯನ್ನು, ಸಮಯದ ಅಭಾವವನ್ನು ಸರಿದೂಗಿಸಲು ಭೌತಿಕ ಸೌಕರ್ಯಗಳನ್ನು, ಅನುಕೂಲಗಳನ್ನು ತುಂಬಿಕೊಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಸರ್ವೆಸಾಮಾನ್ಯವಾದರೂ ಅಸಹಜವಾದುದು. ಮಕ್ಕಳ ಭಾವನಾತ್ಮಕ, ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ಇದು ಪ್ರಭಾವಿಸುತ್ತದೆ ಎನ್ನುತ್ತಾರೆ ತಜ್ಞರು.

ಹೌದು, ಭೌತಿಕ, ಐಷಾರಾಮಿ ಸೌಕರ್ಯಗಳ ಅತಿಯಾದ ಹಾಗೂ ಅನಗತ್ಯ ಲಭ್ಯತೆ ಮಕ್ಕಳಲ್ಲಿ ಮಾನಸಿಕ ಹಾಗೂ ವರ್ತನೆಯ ಅಸಮತೋಲವನ್ನು ಸೃಷ್ಟಿಸುತ್ತದೆ. ಸಂಬಂಧಗಳ ಜಾಗಗಳಲ್ಲಿ ಐಷಾರಾಮಿ ವಸ್ತುಗಳು ಹಾಗೂ ಆತ್ಮೀಯತೆ, ಸ್ನೇಹ, ಮಮಕಾರಗಳಂತಹ ಭಾವ ಬೆಸುಗೆಯ ಜಾಗಗಳಲ್ಲಿ ಗ್ಯಾಜೆಟ್ಗಳು ಆಕ್ರಮಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಂತೂ ಅಲ್ಲ. ಈ ಅನುಕೂಲಗಳು, ಅವಕಾಶಗಳು ಅವರನ್ನು ಸಂತುಷ್ಟರನ್ನಾಗಿಯಂತೂ ಮಾಡುತ್ತಿಲ್ಲ. ಮತ್ತಷ್ಟು ಅತೃಪ್ತಿ, ಜಡತ್ವ, ಖಾಲಿತನ, ಹಪಾಹಪಿ, ಕೊಳ್ಳುಬಾಕುತನವನ್ನು ಹೆಚ್ಚಿಸುತ್ತಿದೆ. ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಅಸಮತೋಲನಗಳನ್ನು ಸೃಷ್ಟಿಸುತ್ತಿದೆ. ಪೋಷಕರು, ಅದರಲ್ಲೂ ದುಡಿಯುವ ಅಮ್ಮಂದಿರು ಈ ಬಗ್ಗೆ ಹೆಚ್ಚು ಎಚ್ಚರಿಕೆಯ, ಮುತುವರ್ಜಿಯ ಹೆಜ್ಜೆಗಳನ್ನಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಒಬ್ಬ ತಾಯಿಯಾಗಿ ತಾನು ಸರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿಲ್ಲ, ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿಲ್ಲ ಎನ್ನುವ ಆತಂಕ, ಸಾಮಾಜಿಕ ಒತ್ತಡ, ಔದ್ಯೋಗಿಕ ಅನಿವಾರ್ಯತೆಗಳು ಹಾಗೂ ಭಾವನಾತ್ಮಕ ಜಿಜ್ಞಾಸೆ ಉದ್ಯೋಗಸ್ಥ ತಾಯಂದಿರಲ್ಲಿ ತಪ್ಪಿತಸ್ಥ ಭಾವನೆಗಳನ್ನು ಉಳಿಸುತ್ತವೆ. ಈ ಅಪರಾಧಿ ಭಾವದಿಂದ ತಪ್ಪಿಸಿಕೊಳ್ಳಲು ಮಕ್ಕಳಿಗೆ ಎಲ್ಲಾ ರೀತಿಯ ಭೌತಿಕ, ಜಡವಾದ ಹಾಗೂ ಪ್ರಾಪಂಚಿಕ ವಸ್ತುಗಳನ್ನು ತುಂಬಿಕೊಡುತ್ತಾಳೆ. ಅದು ಮಗುವಿನ ಬೆಳವಣಿಗೆಗೆ ಎಷ್ಟು ಪೂರಕ, ಎಷ್ಟು ಅಗತ್ಯ ಎನ್ನುವುದನ್ನೂ ವಿಶ್ಲೇಷಿಸದೆ... ಇದರಿಂದಾಗಿ ಮಕ್ಕಳು ಸಂಬಂಧಗಳಿಗಿಂತ ವಸ್ತುಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ; ಮನೆಮಂದಿಯ ಜಾಗಗಳಲ್ಲಿ, ಸಹಜ ಮಾತು-ಸಂವಹನ, ಒಡನಾಟಗಳ ಜಾಗಗಳಲ್ಲಿ ಐಷಾರಾಮಿ ವಸ್ತುಗಳನ್ನು, ಸವಲತ್ತುಗಳನ್ನು, ಗ್ಯಾಜೆಟ್ ಗಳನ್ನು ಭರ್ತಿಮಾಡುವ ಅಪಾಯಕಾರಿ ಪ್ರವೃತ್ತಿಗೆ ಒಳಗಾಗುತ್ತಾರೆ.

ಎಲ್ಲಾ ರೀತಿಯ ವ್ಯವಸ್ಥೆಗಳು, ಸೌಕರ್ಯಗಳು ಹಾಗೂ ಅನುಕೂಲಗಳೊಂದಿಗೆ ಬೆಳೆಯುವ ಮಕ್ಕಳು ಯಾವುದೇ ಸಣ್ಣ ಕೊರತೆ, ಅಲಭ್ಯತೆ ಅಥವಾ ಅನಾನುಕೂಲವನ್ನು ಎದುರಿಸುವ ದೃಢತೆಯನ್ನು ಕಲಿಯದೇ ಹೋಗಬಹುದು. ನಾಳಿನ ಅನಿರೀಕ್ಷಿತ ಬೆಳವಣಿಗೆಗಳನ್ನು ಎದುರುಗೊಳ್ಳುವ ಮನೋಬಲವನ್ನು ಬೆಳೆಸಿಕೊಳ್ಳದೇ ಇರಬಹುದು. ಇಂದಿನ ಮಕ್ಕಳು ಐದು ನಿಮಿಷ ವಿದ್ಯುತ್ ಕಡಿತಗೊಂಡರೂ ಕಂಗಾಲಾಗುತ್ತಾರೆ, ಹತ್ತು ನಿಮಿಷ ನೆಟ್ವರ್ಕ್ ಲಭಿಸದಿದ್ದರೆ ಆತಂಕಗೊಳ್ಳುತ್ತಾರೆ. ತಮಗೆ ಬೇಕಾದ ಗೇಮ್ ಸಿಗದೇ ಹೋದರೆ ಉದ್ವಿಗ್ನರಾಗುತ್ತಾರೆ. ಶಾಲೆಯ ಗೇಟಿನಿಂದ ಹೊರಗೆ ಬರುಷ್ಟರಲ್ಲಿ ಶಾಲೆಯ ಅಥವಾ ವೈಯಕ್ತಿಕ ವಾಹನ ಕಣ್ಣಿಗೆ ಕಾಣದಿದ್ದರೆ ಕಕ್ಕಾಬಿಕ್ಕಿಯಾಗುತ್ತಾರೆ, ಕೇಳಿದ್ದು, ಕೇಳಿದಾಕ್ಷಣ ಸಿಗದೇ ಹೋದರೆ ಖಿನ್ನರಾಗುತ್ತಾರೆ, ಪ್ರತಿಭಟಿಸುತ್ತಾರೆ...

ಇಂತಹ ವರ್ತನೆಗಳನ್ನು ಹತೋಟಿಯಲ್ಲಿಡಲು ಮನೋವೈದ್ಯರ, ತಜ್ಞರ ನೆರವು ಬೇಕು ಅಂತೇನೂ ಇಲ್ಲ. ಪೋಷಕರು ಮೊದಲು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು, ನಂತರ ಮಕ್ಕಳ ಮನೋಭಾವವನ್ನು ರೂಪಿಸಬೇಕು. ತಾವು ಮಕ್ಕಳಿಗೆ ಎಷ್ಟು ಸಮಯ ನೀಡುತ್ತೇವೆ ಎನ್ನುವುದು ಮುಖ್ಯವಲ್ಲ. ಹೇಗೆ ಮತ್ತು ಎಷ್ಟು ಮೌಲ್ಯಯುತ ಕ್ಷಣಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ ಎನ್ನುವುದರತ್ತ ಗಮನ ಹರಿಸಬೇಕು ಎನ್ನುತ್ತಾರೆ ಮಕ್ಕಳ ಮಾನಸಿಕ ತಜ್ಞೆ ಡಾ. ಆಶಾ ಎಚ್.ಎನ್. ಮಕ್ಕಳು ಕೇಳಲಿ ಬಿಡಲಿ, ಅವರಿಗೆ ಅಗತ್ಯವಿರಲಿ, ಇಲ್ಲದೇ ಇರಲಿ ಭೌತಿಕ ವಸ್ತುಗಳನ್ನು ಒದಗಿಸಿಕೊಡುವುದೊಂದೇ ಆಯ್ಕೆಯಲ್ಲ. ಅವರಿಗೆ ನಿಮ್ಮ ಪರಿಸ್ಥಿತಿಯನ್ನು, ಜವಾಬ್ದಾರಿಗಳನ್ನು, ವಾಸ್ತವ ಸಂಗತಿಯನ್ನು ಮನದಟ್ಟು ಮಾಡಿ. ಅವರ ಜವಾಬ್ದಾರಿಯನ್ನೂ ಅವರಿಗೆ ತಿಳಿಸಿಕೊಡಿ. ವಸ್ತುಗಳ ಮೌಲ್ಯಗಳನ್ನು ಅರ್ಥಮಾಡಿಸಿ, ಸಾಧ್ಯವಾದಷ್ಟೂ ಸರಳವಾಗಿ, ಸ್ವಾಭಾವಿಕವಾಗಿ ಬದುಕುವುದನ್ನು ರೂಢಿಸಿ. ಅವರ ಚಟುವಟಿಕೆಗಳ ಮೇಲೆ, ಬೆಳವಣಿಗೆಗಳ ಮೇಲೆ, ನಡವಳಿಕೆಗಳ ಮೇಲೆ ಕಣ್ಣಿಡಿ ಹಾಗೂ ಅದನ್ನೆಲ್ಲಾ ನೀವು ಗಮನಿಸುತ್ತಿರುವಿರಿ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿ. ಅಗತ್ಯವಿದ್ದಾಗ ಅವರೊಂದಿಗಿರಲು ಪ್ರಯತ್ನಿಸಿ. ನಿಮ್ಮ ಉದ್ಯೋಗ-ಭವಿಷ್ಯ ಎಷ್ಟು ಮುಖ್ಯವೊ, ಅವರ ಬೆಳವಣಿಗೆ ಹಾಗೂ ಭವಿಷ್ಯವೂ ಅಷ್ಟೇ ಮುಖ್ಯ. ಇಲ್ಲಿ ಪಾಪಪ್ರಜ್ಞೆ, ತಪ್ಪಿತಸ್ಥ ಭಾವನೆಗಿಂತಲೂ ಪ್ರಾಯೋಗಿಕ, ವಾಸ್ತವ, ಕಾರ್ಯಸಾಧ್ಯವಾದ ಕ್ರಮಗಳತ್ತ ಗಮನಹರಿಸಿ. ಇದನ್ನೇ ಉದ್ಯೋಗ-ಕುಟುಂಬ ಸಮತೋಲನ ಎನ್ನುವುದು ಎನ್ನುತ್ತಾರೆ ಡಾ. ಆಶಾ.

ಅತಿಯಾದ ಭೌತಿಕ ಸೌಕರ್ಯಗಳಿಂದ ಮಕ್ಕಳಲ್ಲಿ ಸಾಮಾಜಿಕ ಮತ್ತು ಆಕ್ರಮಣಕಾರಿ ನಡವಳಿಕೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಲ್ಲಿ ಭಾವನಾತ್ಮಕ ಅಸಮತೋಲನ, ಆತ್ಮವಿಶ್ವಾಸದ ಕೊರತೆ, ಸಾಮಾಜಿಕ ಸಂವಹನದಲ್ಲಿ ಸಮಸ್ಯೆ ಹಾಗೂ ಬೆಳವಣಿಗೆಯ ತೊಡಕುಗಳಿಗೂ ಇದು ಕಾರಣವಾಗುತ್ತದೆ ಎನ್ನುತ್ತಾರೆ ಅವರು.

ಕೇಳಿದ ಅಥವಾ ಬೇಕಿರುವ ವಸ್ತುಗಳು ದೊರಕದೇ ಇರುವ ಅನುಭವವೂ ಆಗಬೇಕು. ಅಂತಹ ಸಂದರ್ಭವನ್ನು ಎದುರಿಸುವ ಮನಸ್ಥಿತಿ ಬೆಳೆಯಬೇಕು. ಅಂತಹ ವಸ್ತುಗಳು ಅಥವಾ ಅನುಕೂಲಗಳು ಇಲ್ಲದೆಯೂ ಜೀವನ ಸಾಗುತ್ತದೆ ಎನ್ನುವ ವಾಸ್ತವ ಅರಿವಾಗಬೇಕು. ಇಲ್ಲದೇ ಇರುವುದು ಸಹ ಜೀವನದ ಒಂದು ಭಾಗ ಎನ್ನುವುದನ್ನು ಮನದಟ್ಟು ಮಾಡಬೇಕು. ಆ ಸೌಕರ್ಯ ಅಥವಾ ವಸ್ತು ಸಿಗದೇ ಇರುವಾಗಿನ ಸಂದರ್ಭವನ್ನು ಎದುರಿಸುವಂತಹ ಮನಸ್ಥಿತಿಗೆ ಅವರನ್ನು ಸಿದ್ಧಗೊಳಿಸುವುದು ಮುಖ್ಯ.

ಮಕ್ಕಳಿಗೆ ಬೇಕಾಗಿರುವುದು ದುಬಾರಿ ಹಾಗೂ ಐಷಾರಾಮಿ ವಸ್ತುಗಳಲ್ಲ, ಸೌಕರ್ಯಗಳಲ್ಲ, ಅನಗತ್ಯ ಗಿಫ್ಟ್ ಗಳೂ ಅಲ್ಲ... ಅಮ್ಮನ ಬೊಗಸೆ ಪ್ರೀತಿ, ಹಿಡಿಯಷ್ಟಾದರೂ ಅಕ್ಕರೆ-ಆರೈಕೆ... ನಿಮ್ಮೊಂದಿಗಿನ ಸವಿ ಸವಿ ಕ್ಷಣಗಳ ನೆನಪಿನ ಬುತ್ತಿ. ಪಾಪಪ್ರಜ್ಞೆಯನ್ನು ಪಕ್ಕಕ್ಕಿಡಿ, ನೀವು ಅವರಿಗೆ ಎಷ್ಟು ಸಮಯ ನೀಡುತ್ತೀರಿ ಎನ್ನುವುದಕ್ಕಿಂತ, ಎಷ್ಟು ಮಹತ್ವದ ಗಳಿಗೆಗಳನ್ನು ಕಳೆಯುತ್ತೀರಿ ಎನ್ನುವುದೇ ಮುಖ್ಯ.

ದುಡಿಯುವ ತಾಯಂದಿರು ತಮ್ಮ ಅನುಪಸ್ಥಿತಿ ಹಾಗೂ ಸಮಯದ ಅಭಾವವನ್ನು ಸರಿದೂಗಿಸಲು ಮಕ್ಕಳಿಗೆ ಭೌತಿಕ ಐಷಾರಾಮಿ ವಸ್ತುಗಳನ್ನು ಹಾಗೂ ಸೌಕರ್ಯಗಳನ್ನು ದಂಡಿಯಾಗಿ ಸುರಿಯುತ್ತಿದ್ದಾರೆ. ಬೇಡಿದೊಡನೆಯೇ ಬೇಡಿದ್ದೆಲ್ಲ ಸಿಗುವುದು ಮಕ್ಕಳ ಬೆಳವಣಿಗೆಗೆ ಪೂರಕವಲ್ಲ. ಅಮ್ಮ-ಅಪ್ಪನ ಜಾಗದಲ್ಲಿ ಗ್ಯಾಜೆಟ್ ಗಳನ್ನು ತುಂಬಿಕೊಡುವುದು ಪರಿಹಾರವೂ ಅಲ್ಲ. ಮಕ್ಕಳಿಗೆ ನಿಮ್ಮ ಮೌಲ್ಯಯುತ ಕ್ಷಣಗಳನ್ನು ಮೀಸಲಿಡಿ, ಮಮಕಾರ ನೀಡಿ, ಮಾನವೀಯ ಗುಣಗಳನ್ನು ಬೆಳೆಸಿ. ನಿಮ್ಮ ಕಂದ ಬೇಬಿಡಾಲ್ ಆಗುವುದು ಬೇಡ, ಸಮಾಜದ, ಕುಟುಂಬದ ಜವಾಬ್ದಾರಿಯುತ ಹಾಗೂ ವಿಚಾರವಂತ ಸದಸ್ಯನಾಗಿ ಬೆಳೆಯಲಿ...

ಸೌಕರ್ಯಗಳನ್ನು ಒದಗಿಸಿಕೊಡುವ ಮುನ್ನ

ಮಕ್ಕಳಿಗೆ ಅಗತ್ಯವಿದೆಯೋ ಇಲ್ಲವೊ ಚಿಂತಿಸಿ

ಅವರಿಗೆ ಅದರಿಂದ ಏನು ಪ್ರಯೋಜನ ಎನ್ನುವುದನ್ನು ಯೋಚಿಸಿ

ಜನರೊಂದಿಗೆ ಬೆರೆಯಲು ಬಿಡಿ. ವ್ಯವಹರಿಸಲು ಬಿಡಿ

ಮನೆಯ ಕೆಲ ಜವಾಬ್ದಾರಿಗಳನ್ನು ಅವರಿಗೆ ವಹಿಸಿ

ನಿಮ್ಮ ಉದ್ಯೋಗ ಹಾಗೂ ಭವಿಷ್ಯ ನಿಮಗೆ ಹಾಗೂ ಕುಟುಂಬಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿ

ಅವರ ಎಲ್ಲಾ ಅಗತ್ಯಗಳನ್ನು ನೀವೇ ಪೂರೈಸಬೇಡಿ

ನಿರ್ಧಾರಗಳನ್ನು ಅವರಿಗೇ ತೆಗೆದುಕೊಳ್ಳಲು ಬಿಡಿ

- ಡಾ. ಆಶಾ ಎಚ್.ಎನ್., ಮಕ್ಕಳ ಮಾನಸಿಕ ತಜ್ಞೆ ಎಸ್.ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.