ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ಜನರ ಬಳಿಗೆ ತೆರಳಿ ಸಮಸ್ಯೆ ಬಗೆಹರಿಸಿ: ಸಚಿವ ಕೆ.ಜೆ.ಜಾರ್ಜ್

Published 1 ಆಗಸ್ಟ್ 2023, 5:52 IST
Last Updated 1 ಆಗಸ್ಟ್ 2023, 5:52 IST
ಅಕ್ಷರ ಗಾತ್ರ

ಕಡೂರು:‘ಕೇವಲ ಕಚೇರಿಯಲ್ಲಿ ಕುಳಿತರೆ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಡೂರಿನಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಧಿಕಾರಿಗಳು ಸಮಸ್ಯೆಯ ಕುರಿತು ಕೇವಲ ಪತ್ರ ವ್ಯವಹಾರ ನಡೆಸಿದರೆ ಪರಿಹಾರವಾಗದು. ಅದಕ್ಕೆ ಏನು ಮಾಡಬೇಕು ಎಂಬುದನ್ನು ಚಿಂತನೆ ನಡೆಸಿ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತಂದರೆ  ಕ್ರಮ ಕೈಗೊಳ್ಳಲಾಗುವುದು. ಆಂಬುಲೆನ್ಸ್ ಸಮಸ್ಯೆ ರಾಜ್ಯವ್ಯಾಪಿಯಾಗಿದೆ. ಕಡೂರು ಆಸ್ಪತ್ರೆಗೆ ವೈಯುಕ್ತಿಕವಾಗಿ ಆಂಬುಲೆನ್ಸ್‌ ಒಂದನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.

ಕಡೂರು ಹಳೆ ತಾಲ್ಲೂಕು ಕಚೇರಿಗೆ ನೂತನ ಕಟ್ಟಡ ಅಗತ್ಯವಿದೆ ಎಂದು ಶಾಸಕ ಕೆ.ಎಸ್.ಆನಂದ್ ಸಚಿವರ ಗಮನಕ್ಕೆ ತಂದರು.  ಈ ಕುರಿತು ಪ್ರಸ್ತಾವನೆ ಸಲ್ಲಿಸಿದರೆ ಹಳೆ ತಾಲ್ಲೂಕು ಕಚೇರಿ ಕಟ್ಟಡ ತೆರವುಗೊಳಿಸಿ ಅಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.

ಕೇಂದ್ರ ಸರ್ಕಾರದಿಂದ ಕಡೂರು ಪುರಸಭೆಗೆ ₹38 ಕೋಟಿ ಮತ್ತು ಬೀರೂರು ಪುರಸಭೆಗೆ ₹20 ಕೋಟಿ ಮಂಜೂರಾಗಿದೆ. ಈ ಹಣದಲ್ಲಿ ಪಟ್ಟಣಕ್ಕೆ ಅಗತ್ಯವಾದ ಯುಜಿಡಿ ಮುಂತಾದ ಕಾರ್ಯಗಳಿಗೆ ಕ್ರಿಯಾಯೋಜನೆ ತಯಾರಾಗಿದ್ದು ಹೆಚ್ಚುವರಿ ಹಣದ ಅಗತ್ಯವಿದೆ. ಕಡೂರು ಪುರಸಭೆಗೆ 15ನೇ ಹಣಕಾಸು ಯೋಜನೆಯಡಿ ₹1.12 ಕೋಟಿ ಬಿಡುಗಡೆಯಾಗಿದೆ. ₹28 ಲಕ್ಷ ಇನ್ನೂ ಬರಬೇಕಿದೆ’ ಎಂದು ಮುಖ್ಯಾಧಿಕಾರಿ ರುದ್ರೇಶ್ ಹೇಳಿದರು.

‘ಪಟ್ಟಣಕ್ಕೆ ಯುಜಿಡಿ ಮತ್ತು ಕಸ ವಿಲೇವಾರಿ ಎರಡೂ ಕಾರ್ಯಗಳು ಬಹುಮುಖ್ಯವಾಗಿದೆ. ಪುರಸಭೆಗೆ ಹೆಚ್ಚುವರಿಯಾಗಿ ಏನು ಬೇಕಾಗಿದೆ ಎಂಬುದನ್ನು ಶಾಸಕರ ಜೊತೆ ಸಮಾಲೋಚಿಸಿ ಸರಿಯಾಗಿ ಹೋಂ ವರ್ಕ್ ಮಾಡಿಕೊಂಡು ಬನ್ನಿ’ ಎಂದು ಸಚಿವರು ಸೂಚನೆ ನೀಡಿದರು. ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ನೀಡುವಂತೆ ಸಿಡಿಪಿಒ ಶಿವಪ್ರಕಾಶ್ ಅವರಿಗೆ ಸೂಚಿಸಿದರು.

ಪಿಂಚಣಿ ಪಡೆಯುತ್ತಿರುವ ಕೆಲವರಿಗೆ ಸೂಕ್ತ ಮಾಹಿತಿ ದೊರೆಯುತ್ತಿಲ್ಲ. ಇ–ಕೆವೈಸಿ ಮುಂತಾದ ನಿಯಮಗಳನ್ನು ಪೂರೈಸಲು ಅವರಿಗೆ ಸೂಕ್ತ ಮಾಹಿತಿ ದೊರಕಿಸಲು ಮುಂದಾಗಬೇಕು ಎಂದು ಶಾಸಕ ಕೆ‌.ಎಸ್.ಆನಂದ್ ತಹಶೀಲ್ದಾರ್ ಕವಿರಾಜ್ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗೋಪಾಲಕೃಷ್ಣ, ತಹಶೀಲ್ದಾರ್ ಎಂ.ಪಿ.ಕವಿರಾಜ್, ಇ.ಒ. ಪ್ರಶಾಂತ್ ವ್ಯವಸ್ಥಾಪಕ ವಿಜಯ್ ಕುಮಾರ್ ಇದ್ದರು.

50 ನಿಮಿಷದಲ್ಲಿ ಪ್ರಗತಿ ಪರಿಶೀಲನೆ

‘ತುರ್ತು ಮತ್ತು ಮುಖ್ಯವಾದ ವಿಷಯಗಳನ್ನು ಮಾತ್ರ ಚರ್ಚಿಸಿ  ಎಲ್ಲವನ್ನೂ ಚರ್ಚಿಸಲು ಸಮಯವಿಲ್ಲ ಎಂದು ಸಚಿವ ಜಾರ್ಜ್ ಅಧಿಕಾರಿಗಳ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ತೋರಲಿಲ್ಲ. ಪ್ರತಿ ಸಮಸ್ಯೆಗೂ ನೀವು ನಿಮ್ಮ ಮೇಲಧಿಕಾರಿಗಳು ಮತ್ತು ಶಾಸಕ ಕೆ.ಎಸ್.ಆನಂದ್ ಅವರೊಡನೆ ಚರ್ಚಿಸಿ ಅವರು ಫಾಲೋ ಅಪ್ ಮಾಡ್ತಾರೆ ಎಂಬುದೇ ಸಚಿವರ ಸಾಮಾನ್ಯ ಪ್ರತಿಕ್ರಿಯೆಯಾಗಿತ್ತು. ಕೇವಲ ಕಂದಾಯ ರಾಷ್ಟ್ರೀಯ ಹೆದ್ದಾರಿ ಮತ್ತು ಪುರಸಭೆಗೆ ಸಂಬಂಧಿಸಿದ ಕೆಲವೇ ಅಂಶಗಳನ್ನು ಕೇಳಿದ ಸಚಿವರು ಇಡೀ ತಾಲ್ಲೂಕಿನ ಪ್ರಗತಿ ಪರಿಶೀಲನೆಯನ್ನು 50 ನಿಮಿಷದಲ್ಲಿ ಮುಗಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT