ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್ ಬಗ್ಗೆ ಗೊತ್ತಿಲ್ಲ | ನನಗೆ ನ್ಯಾಯಾಲಯ, ದೇವರ ಮೇಲೆ ನಂಬಿಕೆ ಇದೆ: ರೇವಣ್ಣ

Published 22 ಮೇ 2024, 7:18 IST
Last Updated 22 ಮೇ 2024, 7:18 IST
ಅಕ್ಷರ ಗಾತ್ರ

ಹೊಳೆನರಸೀಪುರ (ಹಾಸನ): ‘ನಾನು ಬದುಕಿರುವವರೆಗೆ ಜಿಲ್ಲೆಯ ಜನರ ಸಹಕಾರಕ್ಕೆ ಋಣಿಯಾಗಿರುತ್ತೇನೆ. ನಮ್ಮ ಕಾರ್ಯಕರ್ತರ ಸಂಕಷ್ಟಕ್ಕೆ ಜೊತೆಯಾಗಿ ನಿಲ್ಲುತ್ತೇನೆ’ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನ್ಯಾಯಾಲಯದ ಬಗ್ಗೆ ನನಗೆ ಗೌರವವಿದೆ‌. ನಾನು ದೇವರ ಮೇಲೆ ನಂಬಿಕೆ ಇಟ್ಟಿರುವವ’ ಎಂದರು.

‘ರಾಜ್ಯದ, ಜಿಲ್ಲೆಯ ಹಾಗೂ ಹೊಳೆನರಸೀಪುರದ‌ ಜನರು ದೇವೇಗೌಡರಿಗೆ 60 ವರ್ಷದಿಂದ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ನನಗೆ ಶಕ್ತಿ ಕೊಟ್ಟಿದ್ದಾರೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ’ ಎಂದರು.

‘ಹೊಳೆನರಸೀಪುರ ತಾಲ್ಲೂಕಿನ ಜನರು, ಜಿಲ್ಲೆಯ ಜನರ ಜೊತೆ ನಾನು ಬದುಕಿರುವವರೆಗೂ ಇರುತ್ತೇನೆ. ನಿಮ್ಮ ಜೊತೆ ನಾನು, ದೇವೇಗೌಡರು, ಕುಮಾರಸ್ವಾಮಿ ಹಾಗೂ ನಮ್ಮ ಕುಟುಂಬ ಇರುತ್ತದೆ. ಯಾರೂ ಧೃತಿಗೆಡಬೇಕಾದ ಪ್ರಮೇಯವಿಲ್ಲ. ಜಿಲ್ಲೆಯ ಜನ ನನಗೆ ಸಹಕಾರ ಕೊಟ್ಟಿದ್ದಾರೆ. ಆ ಸಹಕಾರಕ್ಕೆ ನಾನು ಋಣಿಯಾಗಿರುತ್ತೇನೆ’ ಎಂದರು.

ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ಇರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ‘ಅದು ನನಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ’ ಎಂದಷ್ಟೇ ಹೇಳಿದರು.

ಮಂಗಳವಾರ ರಾತ್ರಿ ಮೈಸೂರಿನಿಂದ ಬಂದು ಹರದನಹಳ್ಳಿಯಲ್ಲಿ ವಾಸ್ತವ್ಯ ಮಾಡಿದ್ದ ಎಚ್.ಡಿ. ರೇವಣ್ಣ, ಬುಧವಾರ ಬೆಳಿಗ್ಗೆ ಮನೆ ದೇವರು, ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಹಾಸನಕ್ಕೆ ಭೇಟಿ ನೀಡಿ, ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‌ ಕಾರ್ಯಕರ್ತರು, ಮುಖಂಡರ ಸಭೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT