ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತ 50 ಕಿ.ಮೀ.ವ್ಯಾಪ್ತಿಯಲ್ಲಿ ಗಣಿಗಾರಿಕೆಯ ಬ್ಲಾಸ್ಟಿಂಗ್ ನಡೆಸಬಾರದು ಎಂದು ಆಗ್ರಹಿಸಿ ನಗರದ ಜೆ.ಸಿ. ವೃತ್ತದಲ್ಲಿ ವಿವಿಧ ಸಂಘಟನೆಯ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಕನ್ನಡ ಸೇನೆ ಸಂಘಟನೆ ಸೇರಿದಂತೆ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣರಾಜಸಾಗರ ಜಲಾಶಯಕ್ಕೆ ಮಾರಕವಾಗಿರುವ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡಬಾರದು. ಕೆಆರ್‌ಎಸ್ ಅಚ್ಚುಕಟ್ಟ ಪ್ರದೇಶದ ಕೃಷಿಕರಿಗೆ ಜಲಾಶಯ ಬದುಕು ನೀಡಿದೆ. ಇದೀಗ ಜನರ ಬದುಕನ್ನು ಕಸಿಯಲು ಮುಂದಾಗಿರುವ ಆಳುವ ವರ್ಗದ ರೈತ ವಿರೋಧಿ ನೀತಿ ಸರಿಯಲ್ಲ ಎಂದು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್, ‘ಕೆಆರ್‌ಎಸ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿದೆ. ಈಗಾಗಲೇ ಐದು ಕಡೆ ಗುಂಡಿ ತೋಡಿ ಸಿದ್ಧತೆ ಮಾಡಿಕೊಂಡಿದೆ. ನ್ಯಾಯಾಲಯದ ಆದೇಶದಂತೆ ಟ್ರಯಲ್ ಬ್ಲಾಸ್ಟ್ ನಡೆಯುತ್ತಿದೆ ಎಂದು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ, ಜಲಾಶಯಕ್ಕೆ ಮಾರಕವಾಗಿದ್ದರೂ ಯಾವ ಕಾರಣಕ್ಕೆ ಅವಕಾಶ ಮಾಡಿಕೊಡಲಾಗಿದೆ’ ಎಂದು ಪ್ರಶ್ನಿಸಿದರು.
ವಿವಿಧ ಸಂಘಟನೆಯ ಮುಖಂಡರಾದ ಕೆ.ಬೋರಯ್ಯ, ಚಂದ್ರಶೇಖರ್, ಮುದ್ದೇಗೌಡ, ಸುಧೀರ್ ಕುಮಾರ್, ಮಂಜುನಾಥ್, ಎಂ.ಎಲ್ ತುಳಸೀಧರ್, ಕೃಷ್ಣಪ್ರಕಾಶ್ ಭಾಗವಹಿಸಿದ್ದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಟ್ರಯಲ್ ಬ್ಲಾಸ್ಟ್ ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಬೇಕು. ಆ ಮೂಲಕ ರೈತರ ಬದುಕಿನ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಕೃಷಿ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳ ರಕ್ಷಣೆ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಆಳುವ ವರ್ಗ ಯೋಚಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಬೇಡಿಕೆಗಳನ್ನು ಆಲಿಸಿದರು. ನಂತರ ಈ ಸಂಬಂಧವಾಗಿ ಮಾತನಾಡಿ ರೈತರಿಗೆ ತೊಂದರೆ ಆಗದ ರೀತಿ ಕ್ರಮ ವಹಿಸುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.