ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ: ನಿವೇಶನ ಖರೀದಿದಾರರಿಗೆ ಆತಂಕ

50:50 ಅನುಪಾತ, ಬದಲಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
Published : 23 ಜುಲೈ 2024, 5:03 IST
Last Updated : 23 ಜುಲೈ 2024, 5:03 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣವು ನಿವೇಶನ ಖರೀದಿದಾರರನ್ನು ಆತಂಕಕ್ಕೆ ದೂಡಿದೆ.

ಮುಡಾ ವ್ಯಾಪ್ತಿಯಲ್ಲಿ ಶೇ 50: 50 ಅನುಪಾತದಲ್ಲಿ ಹಾಗೂ ಬದಲಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದು ಖಾತ್ರಿಯಾದ ಹಿನ್ನೆಲೆಯಲ್ಲಿ 2020 ಹಾಗೂ ನಂತರದಲ್ಲಿ ಈ ಯೋಜನೆಗಳ ಅಡಿ ಹಂಚಿಕೆ ಆಗಿರುವ ಎಲ್ಲ ನಿವೇಶನಗಳ ಹಕ್ಕುಸ್ವಾಮ್ಯವನ್ನು ತಡೆ ಹಿಡಿದಿರುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಪ್ರಕರಣ ಬೆಳಕಿಗೆ ಬಂದು ತಿಂಗಳೇ ಕಳೆದಿದ್ದರೂ ಸ್ಪಷ್ಟ ಆದೇಶ ಹೊರಬಿದ್ದಿಲ್ಲ.

2020ರ ನಂತರದಲ್ಲಿ ಸುಮಾರು 4–5 ಸಾವಿರ ನಿವೇಶನಗಳು ಮುಡಾದಿಂದ ಹಂಚಿಕೆಯಾಗಿವೆ ಎನ್ನಲಾಗಿದೆ. ಹೀಗೆ ಬದಲಿ ನಿವೇಶನ ಪಡೆದವರಲ್ಲಿ ಸಾಕಷ್ಟು ಮಂದಿ ಉತ್ತಮ ಬೆಲೆಗೆ ಮಾರಿಕೊಂಡಿದ್ದಾರೆ. ಅಂಥ‌ಹವರಿಂದ ನಿವೇಶನ ಕೊಂಡವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರದ ಮುಂದಿನ ಆದೇಶದವರೆಗೂ ಈ ನಿವೇಶನಗಳ ನೋಂದಣಿ ಸ್ಥಗಿತಗೊಂಡಿದ್ದು, ಮಾರಾಟಕ್ಕೆ ಅವಕಾಶ ಇಲ್ಲ.

‘ವಾಮ ಮಾರ್ಗದಲ್ಲಿ ನಿವೇಶನಗಳನ್ನು ಪಡೆದ ಜಾಲವು ಅದನ್ನು ಅಷ್ಟೇ ಜರೂರಾಗಿ ಅನ್ಯರಿಗೆ ಮಾರಿ ದುಡ್ಡು ಮಾಡಿಕೊಂಡಿರುವ ಸಾಧ್ಯತೆ ಇದೆ. ಮುಡಾವೇ ಅಧಿಕೃತವಾಗಿ ಹಂಚಿರುವ ನಿವೇಶನಗಳಾದ್ದರಿಂದ ಗ್ರಾಹಕರು ಅನುಮಾನಿಸದೆ ನಿವೇಶನ ಖರೀದಿಸಿದ್ದಾರೆ. ಈಗ ಅಂತಹ ಎಲ್ಲ ನಿವೇಶನಗಳ ಕೊಡು–ಕೊಳ್ಳುವಿಕೆಗೆ ತಡೆಬಿದ್ದಿದೆ. ಹೀಗಾಗಿ ಅಕ್ರಮ ಎಸಗಿದವರ ಜೊತೆಗೆ ಮುಗ್ಧ ಗ್ರಾಹಕರೂ ವಂಚನೆ ಜಾಲದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಸರ್ಕಾರ ಅಂಥವರ ನೆರವಿಗೆ ಧಾವಿಸಬೇಕು’ ಎನ್ನುವುದು ಜನರ ಒತ್ತಾಯ.

ಪಟ್ಟಿ ಬಿಡುಗಡೆಗೆ ಒತ್ತಾಯ: ‘ಮುಡಾದಲ್ಲಿ 2020ರ ನಂತರ ಎಷ್ಟು ನಿವೇಶನಗಳನ್ನು ಹಂಚಲಾಗಿದೆ. ವಿವಾದಿತ ನಿವೇಶನಗಳೆಷ್ಟು? ಅವುಗಳ ವಿವರಗಳನ್ನು ಸರ್ವೆ ಸಂಖ್ಯೆ ಹಾಗೂ ಮಾಲೀಕರ ಹೆಸರಿನ ಸಮೇತ ಮುಡಾ ಕಚೇರಿಯಲ್ಲಿ ಪ್ರಕಟಿಸಬೇಕು. ಅಂತಹ ನಿವೇಶನಗಳನ್ನು ಖರೀದಿ ಮಾಡಿದ್ದಲ್ಲಿ ಮುಂದಿನ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಬೇಕು. ಇದರಿಂದ ಸಾರ್ವಜನಿಕರಲ್ಲಿರುವ ಗೊಂದಲ ನಿವಾರಣೆಯಾಗುತ್ತದೆ’ ಎಂಬ ಆಗ್ರಹವೂ ಇದೇ ವೇಳೆ ಮೂಡಿದೆ.

ಮುಡಾದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಆಗಿರುವ ಲೋಪದ ಕುರಿತು ಸರ್ಕಾರ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಅಂಥ ನಿವೇಶನಗಳ ಕೊಡು–ಕೊಳ್ಳುವಿಕೆ ಬಗ್ಗೆ ಮಾರ್ಗಸೂಚಿ ಪ್ರಕಟಿಸಬೇಕು
ಹರಿಶಂಕರ್‌, ಮೈಸೂರು ನಿವಾಸಿ
ಮುಡಾ ಪ್ರಕರಣದ ಬಳಿಕ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ ಚಟುವಟಿಕೆ ಕೊಂಚ ಕಳೆಗುಂದಿದೆ. ಅದರಲ್ಲೂ ಮುಡಾ ನಿವೇಶನಗಳಿಗೆ ಇದ್ದ ಬೇಡಿಕೆ ತಗ್ಗುತ್ತಿದೆ
ಉಮೇಶ್‌ ರಿಯಲ್ ಎಸ್ಟೇಟ್‌ ಉದ್ಯಮಿ

ಖರೀದಿ: ಕಾದುನೋಡುವ ತಂತ್ರ

‘ಮುಡಾ ಹಗರಣವು ಸಾಂಸ್ಕೃತಿಕ ನಗರಿ ಮೈಸೂರಿನ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತಿದೆ. ನಿವೇಶನ ಕೊಳ್ಳಲು ಆಸಕ್ತಿ ತೋರಿದ್ದವರು ಈಗ ಕಾದು ನೋಡುವ ತಂತ್ರ ಅನುಸರಿಸತೊಡಗಿದ್ದಾರೆ’ ಎನ್ನುತ್ತಾರೆ ರಿಯಲ್ ಎಸ್ಟೇಟ್‌ ಉದ್ಯಮಿಗಳು. ‘ಮುಡಾ ಹಂಚಿರುವ ನಿವೇಶನಗಳಿಗೆ ಈ ಮೊದಲು ಭಾರಿ ಬೇಡಿಕೆ ಇದ್ದು ಗ್ರಾಹಕರು ಸಿದ್ಧರಿದ್ದರೂ ಅದಕ್ಕೆ ತಕ್ಕಷ್ಟು ನಿವೇಶನಗಳು ಮರು ಮಾರಾಟಕ್ಕೆ ಲಭ್ಯವಿರಲಿಲ್ಲ. ಆದರೆ ಈಗ ಮುಡಾ ನಿವೇಶನಗಳನ್ನೇ ಜನ ಅನುಮಾನದಿಂದ ನೋಡುವಂತೆ ಆಗಿದೆ. ಆತಂಕದಲ್ಲಿ ಕೆಲವರು ತ್ವರಿತವಾಗಿ ನಿವೇಶನ ಮಾರಾಟಕ್ಕೆ ಆಸಕ್ತಿ ತೋರುತ್ತಿದ್ದರೆ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಬಡಾವಣೆಗಳಲ್ಲಿರುವ ನಿವೇಶನಗಳ ಮಾರಾಟದ ಮೇಲೂ ಇದು ಪರಿಣಾಮ ಬೀರಿದೆ. ಬೆಂಗಳೂರು ಭಾಗದ ಗ್ರಾಹಕರಿಂದ ಬೇಡಿಕೆ ಕಡಿಮೆ ಆಗಿದೆ’ ಎಂದು ಉದ್ಯಮಿಯೊಬ್ಬರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT