ಮೈಸೂರು: ಒಂದೇ ದಿನದಲ್ಲಿ ಖಾತೆ ನೋಂದಣಿ ಅಥವಾ ವರ್ಗಾವಣೆಯಾಗಬೇಕೆ, ಹಾಗಿದ್ರೆ ಬರೀ ₹15 ಸಾವಿರ. ಟೈಟಲ್ ಡೀಡ್ ಬೇಕಿದ್ರೆ ₹ 25ಸಾವಿರದಿಂದ ₹50 ಸಾವಿರ. ‘ಸಿಆರ್’ ಆದ್ರೆ ₹20–30 ಸಾವಿರ!
ಮುಡಾದಲ್ಲಿ ವಿವಿಧ ಸೇವೆಗಳಿಗೆ ಚಾಲ್ತಿಯಲ್ಲಿರುವ ‘ದರ’ಗಳಿವು. ಇದೇನು ಸರ್ಕಾರದ ದರವಲ್ಲ, ಮಧ್ಯವರ್ತಿಗಳ ಜೊತೆ ಸೇರಿ ಕೆಲವು ಸಿಬ್ಬಂದಿ ನಿಗದಿ ಮಾಡಿರುವ ‘ಖಾಸಗಿ ದರ’. ನಿವೇಶನ ಅಥವಾ ಮನೆಯ ವಿಸ್ತೀರ್ಣ ಹೆಚ್ಚಿದಂತೆಲ್ಲ ಇದೂ ಹೆಚ್ಚುತ್ತದೆ ಎಂಬುದು ಸಾರ್ವಜನಿಕರ ಆರೋಪ.
‘ಮಧ್ಯವರ್ತಿಗಳಿಗೆ ಪ್ರವೇಶವಿಲ್ಲ’ ಎಂದು ಮುಡಾ ಕಚೇರಿ ಮುಂದೆ ದೊಡ್ಡ ಫಲಕ ಹಾಕಲಾಗಿದೆ. ಆದರೆ, ಒಳಗಿನ ವ್ಯವಹಾರಗಳೆಲ್ಲ ಬಹುಪಾಲು ‘ದಲ್ಲಾಳಿ’ಗಳ ಮೂಲಕವೇ ನಡೆಯುತ್ತದೆ. ಆಸ್ತಿ ತೆರಿಗೆ ಪಾವತಿಯಂತಹ ಸಾಮಾನ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಸೇವೆಗಳಿಗೂ ಇಂತಿಷ್ಟು ‘ಋಣ ಸಂದಾಯ’ ಮಾಡಿದರಷ್ಟೇ ಕೆಲಸ ಸಲೀಸು ಎಂಬ ಮಾತಿದೆ.
‘ಮುಡಾದ ಕೆಲವು ಸಿಬ್ಬಂದಿ 15–20 ವರ್ಷದಿಂದಲೂ ಬೀಡು ಬಿಟ್ಟಿದ್ದಾರೆ. ಅವರಲ್ಲಿ ಕೆಲವರಿಗೆ ಇಂತಹ ವಿದ್ಯೆ ಕರಗತವಾಗಿದೆ. ಯಾವುದಕ್ಕೆ ಎಷ್ಟು ಲಂಚ ಎಂಬುದು ಮೊದಲೇ ನಿಗದಿಯಾಗಿರುತ್ತದೆ. ಪರಿಚಯ ಇದ್ದರೆ ಚೌಕಾಸಿಗೆ ಅವಕಾಶ. ಲಂಚವಿಲ್ಲದಿದ್ದರೆ ಯಾವ ಕೆಲಸವೂ ಆಗದು’ ಎಂದು ನಗರದ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರು ಹೇಳುತ್ತಾರೆ.
‘ಮುಡಾ ಕಚೇರಿಯಲ್ಲಿ ಗುತ್ತಿಗೆ ನೌಕರರೊಂದಿಗೆ ಮಧ್ಯವರ್ತಿಗಳೂ ಕಾಣಸಿಗುತ್ತಾರೆ. ನೇರವಾಗಿ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿಗೆ ತಿಂಗಳ ಕಾಲ ಸತಾಯಿಸಿದರೆ, ಮಧ್ಯವರ್ತಿಗಳ ಮೂಲಕ ಬಂದರೆ ಅಷ್ಟೇ ವೇಗದಲ್ಲಿ ವಿಲೇವಾರಿಯಾಗುತ್ತವೆ. ಕೆಲವರು ಅರ್ಜಿ ತಮ್ಮ ಕಡೆಯವರದ್ದೆಂದು ಗುರುತಾಗಿ ಪೆನ್ಸಿಲ್‌ನಲ್ಲಿ ಬರೆದೂ ಗುರುತು ಮಾಡಿರುತ್ತಾರೆ’ ಎಂದು ಅವರು ವಿವರಿಸುತ್ತಾರೆ.
ಬೇರುಬಿಟ್ಟ ಸಿಬ್ಬಂದಿ: ‘ಮುಡಾದಲ್ಲಿ ಟೈಪಿಸ್ಟ್, ಎಸ್‌ಡಿಎ, ಎಫ್‌ಡಿಎ ಆಗಿ ಸೇರಿದ ಕೆಲವರು ಮ್ಯಾನೇಜರ್ ಹುದ್ದೆಗೇರಿದರೂ ಅಲ್ಲಿಯೇ ಬೇರು ಬಿಟ್ಟಿದ್ದಾರೆ. ಇಲಾಖೆಗಳಲ್ಲಿ ನಡೆಯುವಂತೆ ಇಲ್ಲಿಯೂ ನಾಲ್ಕೈದು ವರ್ಷಗಳಿಗೊಮ್ಮೆ ಎಲ್ಲ ಅಧಿಕಾರಿ–ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. ಹೊರಗುತ್ತಿಗೆ ನೌಕರರಿಗೆ ಯುನಿಫಾರ್ಮ್ ವ್ಯವಸ್ಥೆ ಜಾರಿಗೆ ಬರಬೇಕು. ಮಧ್ಯವರ್ತಿಗಳು ಮುಡಾ ಪ್ರವೇಶಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು’ ಎಂಬ ಆಗ್ರಹಕ್ಕೆ ಕಿಮ್ಮತ್ತಿಲ್ಲವಾಗಿದೆ.
ಇಲ್ಲಿ ಕೆಲಸ ಮಾಡುವುದು ಹಣ ಮಾತ್ರ!
‘50:50 ಅನುಪಾತದಲ್ಲಿ ಮುಡಾ ನಿವೇಶನಗಳ ಹಂಚಿಕೆ ಒಂದು ಭಾಗವಾದರೆ ಖಾಸಗಿ ಬಡಾವಣೆಗಳಿಗೆ ನಕ್ಷೆ ಅನುಮೋದನೆಯಿಂದ ಹಿಡಿದು ನಿವೇಶನಗಳ ಬಿಡುಗಡೆವರೆಗೂ ಪ್ರತಿ ಹಂತದಲ್ಲೂ ಹಣವೇ ಕೆಲಸ ಮಾಡುತ್ತದೆ’ ಎಂಬುದು ಇಲ್ಲಿನ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳ ದೂರು. ಮುಡಾ ಈವರೆಗೆ 800ಕ್ಕೂ ಹೆಚ್ಚು ಬಡಾವಣೆಗಳಿಗೆ ಅನುಮೋದನೆ ನೀಡಿದೆ. 2010ರ ಬಳಿಕ ಒಂದು ಬಡಾವಣೆಯನ್ನೂ ಸ್ವಂತವಾಗಿ ನಿರ್ಮಿಸಿಲ್ಲ. ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡುವುದಕ್ಕೆ ಸೀಮಿತವಾಗಿದೆ. ‘ಖಾಸಗಿ ಬಡಾವಣೆಗಳಿಗೆ ಎಕರೆ ಇಲ್ಲವೇ ನಿವೇಶನಗಳ ಲೆಕ್ಕದಲ್ಲಿ ಹಣದ ನಿರ್ಧಾರವಾಗುತ್ತದೆ. ಋಣ ಸಂದಾಯ ಆದಷ್ಟೂ ಸಲೀಸಾಗಿ ನಿವೇಶನಗಳು ಬಿಡುಗಡೆಯಾಗುತ್ತವೆ. ಇಲ್ದಿದ್ದರೆ ನಿಯಮಗಳನ್ನು ಮುಂದಿಟ್ಟು ಸತಾಯಿಸುವುದೇ ಹೆಚ್ಚು’ ಎಂಬುದು ಉದ್ಯಮಿಗಳ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.