ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಣ್ಣ ವಿಧಾನಸಭೆ ಚುನಾವಣೆ ಖರ್ಚು ₹60 ಕೋಟಿ: ಸಿದ್ದರಾಮಯ್ಯ

Published 14 ಏಪ್ರಿಲ್ 2024, 15:09 IST
Last Updated 14 ಏಪ್ರಿಲ್ 2024, 15:09 IST
ಅಕ್ಷರ ಗಾತ್ರ

ತುಮಕೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದ ವಿ.ಸೋಮಣ್ಣ ₹50 ಕೋಟಿಯಿಂದ ₹60 ಕೋಟಿ, ಚಾಮರಾಜನಗರದಲ್ಲೂ ಅಷ್ಟೇ ಪ್ರಮಾಣದ ಹಣ ಖರ್ಚು ಮಾಡಿ ಸೋತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ ಬಳಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಸೋಮಣ್ಣ ಬಳಿ ಹಣವಿದೆ ಎಂದು ತುಮಕೂರಿಗೆ ಕರೆತಂದು ನಿಲ್ಲಿಸಿದ್ದಾರೆ. ವರುಣಾ, ಚಾಮರಾಜನಗರದಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಹಣ ಖರ್ಚು ಮಾಡಿದ್ದರು. ಚುನಾವಣೆ ನಡೆದು ಇನ್ನೂ ಹತ್ತು ತಿಂಗಳು ಕಳೆಯುವುದರ ಒಳಗೆ ಮತ್ತೊಂದು ಚುನಾವಣೆಗೆ ನಿಂತಿದ್ದಾರೆ. ಹಾಗಾದರೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಮಯದಲ್ಲಿ ಸೋಮಣ್ಣ ಇನ್ನೆಷ್ಟು ಭ್ರಷ್ಟಾಚಾರ ನಡೆಸಿ, ಹಣ ಮಾಡಿರಬಹುದು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೂಟಿ ಮಾಡಿದರು. ಆ ಹಣವನ್ನು ಖರ್ಚು ಮಾಡಲು ಇಲ್ಲಿಗೆ ಬಂದಿದ್ದಾರೆ. ಹಣ ಇದೆ ಎಂಬ ಒಂದೇ ಕಾರಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಸೋಮಣ್ಣ ಕೆಲಸಗಾರ, ವೋಟು ಕೋಡಿ ಎಂದು ಹೇಳುತ್ತಿದ್ದಾರೆ. ಅವರು ವಸತಿ ಸಚಿವರಾಗಿದ್ದ ಸಮಯದಲ್ಲಿ ಬಡವರಿಗೆ ಹೊಸದಾಗಿ ಒಂದೇ ಒಂದು ಮನೆಯನ್ನು ಕಟ್ಟಿಸಿಕೊಟ್ಟಿದ್ದರೆ ದಾಖಲೆ ತೋರಿಸಲಿ. ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ. ಮಾಡಿದ್ದರೆ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದರು.

ಮೈಸೂರು ಭಾಗದ ಜನರು ಸೋಮಣ್ಣ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದಂತೆ ತುಮಕೂರು ಜಿಲ್ಲೆಯ ಜನರು ಅಂತಹ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ವಿಧಾನಸಭೆ ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಆದರೆ ಈಗ ನಮ್ಮ ‘ಗ್ಯಾರಂಟಿ’ ಹೆಸರನ್ನೇ ನಕಲು ಮಾಡಿ ನರೇಂದ್ರ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT