ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾತ್ಕಾಲಿಕ ಗೇಟ್ ಅಳವಡಿಕೆ: ತುಂಗಭದ್ರಾ ಜಲಾಶಯದಲ್ಲಿ ಮತ್ತೆ ನೀರು ಸಂಗ್ರಹ ಆರಂಭ

ತಾತ್ಕಾಲಿಕ ಗೇಟ್ ಅಳವಡಿಕೆ ನಡೆದು 15 ಗಂಟೆ;  ಸ್ವಲ್ಪ ಸೋರಿಕೆಯಿಂದ ದೊಡ್ಡ ನಷ್ಟವಿಲ್ಲ
Published : 18 ಆಗಸ್ಟ್ 2024, 5:36 IST
Last Updated : 18 ಆಗಸ್ಟ್ 2024, 5:36 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್‌ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಪೂರ್ಣಗೊಂಡು 15 ಗಂಟೆ ಕಳೆದಿದ್ದು, ತಜ್ಞರ ನಿರೀಕ್ಷೆಯಂತೆಯೇ ನೀರು ಹೊರಹರಿಯುವಿಕೆ ಬಹುತೇಕ ನಿಂತುಹೋಗಿದೆ. ಈ ತಾತ್ಕಾಲಿಕ ಗೇಟ್‌ನಿಂದ ಸ್ವಲ್ಪ  ಮಟ್ಟಿನ ನೀರು ಸೋರಿಕೆ ಅನಿವಾರ್ಯ, ಅದರಿಂದ ದೊಡ್ಡ ನಷ್ಟವೇನೂ ಇಲ್ಲ ಎಂದು ಹೇಳಲಾಗುತ್ತಿದೆ.

‘ಕ್ರಸ್ಟ್‌ಗೇಟ್‌ ಆಗಿದ್ದರೆ ನೀರನ್ನು ಒಂದಿಷ್ಟು ಸೋರಿಕೆ ಇಲ್ಲದಂತೆ ತಡೆಗಟ್ಟುವುದು ಸಾಧ್ಯವಿರುತ್ತದೆ. ಆದರೆ ಇದು ತಾತ್ಕಾಲಿಕ ಸ್ಟಾಪ್‌ಲಾಗ್‌ ವ್ಯವಸ್ಥೆ. ಐದು ಗೇಟ್ ಎಲಿಮೆಂಟ್‌ಗಳನ್ನು ಒಂದರ ಮೇಲೆ ಒಂದರಂತೆ ಕೂರಿಸಿ ಮಾಡಿದಂತಹ ಗೇಟ್. ನಡುವಿನ ಸಂದಿಯಲ್ಲಿ ನೀರು  ಹರಿಯುವುದು ಸಹಜ. ಅದರೂ ರಬ್ಬರ್ ಬುಷ್‌ ಅಳವಡಿಸಿ ನೀರು ಸೋರಿಕೆ ಪ್ರಮಾಣವನ್ನು ಕಡಿಮೆಗೊಳಿಸಲಾಗುತ್ತದೆ’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

ಆಗಸ್ಟ್ 10ರಂದು ರಾತ್ರಿ ಗೇಟ್‌ ಕೊಚ್ಚಿಕೊಂಡು ಹೋದ ಬಳಿಕ 36 ಟಿಎಂಸಿ ಅಡಿಗೂ ಅಧಿಕ ನೀರು ನದಿ ಪಾಲಾಗಿತ್ತು. ತಾತ್ಕಾಲಿಕ ಗೇಟ್ ನಿರ್ಮಾಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಿ,  ಧುಮ್ಮಿಕ್ಕುತ್ತಿರುವ ನೀರಿನಲ್ಲೇ ಗೇಟ್ ಎಲಿಮೆಂಟ್ ಇಳಿಸಿ ಯಶಸ್ವಿಯಾಗಿ ಜೋಡಿಸಿದ ಕಾರಣ ಇನ್ನಷ್ಟು ನೀರು (ಸುಮಾರು 30  ಟಿಎಂಸಿ ಅಡಿ) ನದಿ ಪಾಲಾಗುವುದು ತಪ್ಪಿಹೋಯಿತು. 

ಒಳಹರಿವು  ಹೆಚ್ಚಳ–ಭರವಸೆ: ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ  ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸದ್ಯ ಸರಾಸರಿ 44.038 ಕ್ಯುಸೆಕ್‌ನಷ್ಟು ಒಳಹರಿವು ಇದೆ. ಹೊರಹರಿವಿನ ಪ್ರಮಾಣ 10,692 ಕ್ಯುಸೆಕ್‌ನಷ್ಟಿದೆ. ಮುಖ್ಯವಾಗಿ ಈ ನೀರು ಹರಿಯುತ್ತಿರುವುದು  ಎಡದಂಡೆ, ಬಲದಂಡೆ ಮತ್ತು ವಿಜಯನಗರ ಕಾಲುವೆಗಳಿಗೆ. ಎಲ್ಲಾ ಗೇಟ್‌ಗಳನ್ನು ಬಂದ್‌ ಮಾಡಿರುವುದರಿಂದ ನದಿಗೆ ನೀರು ಹರಿಯುವುದನ್ನು  ಸಂಪೂರ್ಣ ತಡೆಗಟ್ಟಲಾಗಿದೆ. 19ನೇ ತಾತ್ಕಾಲಿಕ ಗೇಟ್‌ನಿಂದ ಗರಿಷ್ಠ 100 ಕ್ಯುಸೆಕ್‌ನಷ್ಟು ನೀರು ಸೋರಿಕೆ ಆಗುತ್ತಿರುವ ಕುರಿತು ಮಾಹಿತಿ ಇದ್ದು, ಮಂಡಳಿಯಿಂದ ಇನ್ನೂ ಅಧಿಕೃತ ಹೇಳಿಕೆ ಲಭಿಸಿಲ್ಲ.

72.79 ಟಿಎಂಸಿ ಅಡಿ ನೀರು ಸಂಗ್ರಹ: ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಈ ಪೈಕಿ ಸದ್ಯ 72.79 ಟಿಎಂಸಿ ಅಡಿ ನೀರಿನ  ಸಂಗ್ರಹವಿದೆ. ಒಳಹರಿವು ಇದೇ ಪ್ರಮಾಣದಲ್ಲಿ ಇದ್ದರೆ 10ರಿಂದ 15 ದಿನಗಳಲ್ಲಿ 90 ಟಿಎಂಸಿ ಅಡಿ ತಲುಪಲಿದ್ದು, ರೈತರ ಒಂದು ಬೆಳೆಗೆ ಹಾಗೂ ಕುಡಿಯುವ ನೀರಿಗೆ ಯಾವುದೇ  ದಕ್ಕೆ ಆಗುವುದಿಲ್ಲ ಎಂದು ಸ್ವತಃ ಕ್ರಸ್ಟ್‌ಗೇಟ್ ತಜ್ಞ ಕನ್ನಯ್ಯ ನಾಯ್ಡು ತಿಳಿಸಿದ್ದಾರೆ.

1623.85 ಅಡಿ: ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಡಿ. ಸದ್ಯ ನೀರಿನ ಮಟ್ಟ 1,623.85 ಅಡಿ ಇದೆ. ಈ ಮುಂಗಾರು ಕೊನೆಗೊಳ್ಳುವ ಮೊದಲು 1,629 ಅಡಿಗೆ ತಲುಪಿದರೆ 90 ಟಿಎಂಸಿ ಅಡಿ ನೀರು ಸಂಗ್ರಹವಾಗಿಬಿಡುತ್ತದೆ. ಹೀಗಾಗಿ  ಜತನದಿಂದ ನೀರನ್ನು ಕಾಪಾಡುವ ಕ್ರಮಗಳತ್ತ ಗಮನ ಹರಿಸಲಾಗಿದೆ.

ಇಂದು ಸನ್ಮಾನ: ತಾತ್ಕಾಲಿಕ ಗೇಟ್ ಅಳವಡಿಸಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ತಂತ್ರಜ್ಞರು, ಸಿಬ್ಬಂದಿಯನ್ನು ಭಾನುವಾರ ಮಧ್ಯಾಹ್ನ ಅಣೆಕಟ್ಟೆಯ ಆವರಣದಲ್ಲಿ ಸನ್ಮಾನಿಸಲು ಸಿದ್ಧತೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಅವರು 35 ಸಿಬ್ಬಂದಿಗೆ ತಲಾ ₹50 ಸಾವಿರ ಬಹುಮಾನ ಪ್ರಕಟಿಸಿದ್ದು, ಬಹುತೇಕ ಇಂದೇ ಅದನ್ನು ಶಾಸಕ ಕಂಪ್ಲಿ ಗಣೇಶ್ ಅವರ ಮೂಲಕ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT