ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ: ಮೋದಿ ಪುನರುಚ್ಚಾರ

ವಿಪಕ್ಷಗಳ ಖಂಡನೆ, ದೂರಿನ ನಡುವೆಯೂ ಮೋದಿ ಸಮರ್ಥನೆ
Published 22 ಏಪ್ರಿಲ್ 2024, 16:32 IST
Last Updated 22 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಅಲೀಗಢ: ಸಂಪತ್ತಿನ ಹಂಚಿಕೆಗೆ ಸಂಬಂಧಿಸಿದ ತಮ್ಮ ಹೇಳಿಕೆ ಬಗ್ಗೆ ವಿರೋಧ ಪಕ್ಷಗಳ ಖಂಡನೆ, ಟೀಕೆ, ದೂರುಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಮಾಡಿದ್ದ ಆರೋಪವನ್ನು ಪುನರುಚ್ಚರಿಸಿದ್ದಾರೆ. 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ, ಮಂಗಳಸೂತ್ರವನ್ನೂ ಒಳಗೊಂಡಂತೆ ಜನರ ಚಿನ್ನವನ್ನು ಕಸಿದುಕೊಳ್ಳುತ್ತದೆ ಎಂದು ಸೋಮವಾರವೂ ಹೇಳಿಕೆ ನೀಡಿದರು. ಆದರೆ, ಸಂಪತ್ತು ಮುಸ್ಲಿಮರಿಗೆ ಹೋಗುತ್ತದೆ ಎನ್ನುವುದನ್ನು ಈ ಬಾರಿ ಅವರು ಪ್ರಸ್ತಾಪಿಸಲಿಲ್ಲ.

ರಾಜಸ್ಥಾನದ ಚುನಾವಣಾ ರ್‍ಯಾಲಿಯಲ್ಲಿ ಭಾನುವಾರ ಮಾತನಾಡಿದ್ದ ಮೋದಿ, ಕಾಂಗ್ರೆಸ್ ಪಕ್ಷವು ಜನರ ಕಷ್ಟದ ದುಡಿಮೆಯ ಫಲವನ್ನು ನುಸುಳುಕೋರರಿಗೆ ಮತ್ತು ಹೆಚ್ಚು ಮಕ್ಕಳು ಇರುವವರಿಗೆ ನೀಡಲು ಯೋಜಿಸಿದೆ ಎಂದು ಆರೋಪಿಸಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರ 2006ರ ಹೇಳಿಕೆಯೊಂದನ್ನು ಪ್ರಸ್ತಾಪಿಸಿದ್ದರು.

ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು. ಪ್ರಧಾನಿ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಬಿಜೆಪಿಯು ಪ್ರಧಾನಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ‘ಅವರು ಜನರ ಮನಸ್ಸಿನಲ್ಲಿರುವುದನ್ನೇ ಹೇಳಿದ್ದಾರೆ’ ಎಂದಿದೆ.

ಮುಸ್ಲಿಂ ಬಾಹುಳ್ಯದ ಪಶ್ಚಿಮ ಉತ್ತರ ಪ್ರದೇಶದ ಅಲೀಗಢದಲ್ಲಿ ಸೋಮವಾರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಎಷ್ಟು ದುಡಿಯುತ್ತಾರೆ, ಎಷ್ಟು ಸಂಪತ್ತು ಹೊಂದಿದ್ದಾರೆ ಎನ್ನುವುದನ್ನು ತನಿಖೆ ಮಾಡಿಸುತ್ತೇವೆ ಎಂದು ಕಾಂಗ್ರೆಸ್ ಶಹಜಾದೆ (ರಾಜಕುಮಾರ) ಹೇಳುತ್ತಾರೆ. ಅದಷ್ಟೇ ಅಲ್ಲ, ಸರ್ಕಾರವು ಸಂಪತ್ತನ್ನು ವಶಪಡಿಸಿಕೊಂಡು, ಮರುಹಂಚಿಕೆ ಮಾಡುತ್ತದೆ ಎಂದೂ ಹೇಳಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಅವರು ಇದನ್ನೇ ಹೇಳಿದ್ದಾರೆ’ ಎಂದು ತಿಳಿಸಿದರು.

‘ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಓಲೈಕೆ ನೀತಿಯಲ್ಲಿ ತೊಡಗಿದ್ದು, ಸಮುದಾಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ’ ಎಂದು ಆರೋಪಿಸಿದರು.

‘ಸುಮ್ಮನೆ ಯೋಚಿಸಿ, ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳ ಬಳಿ ಚಿನ್ನ ಇದೆ. ಅದು ‘ಸ್ತ್ರೀಧನ’. ಅದನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಕಾನೂನಿನ ರಕ್ಷಣೆಯೂ ಇದೆ. ಈಗ ಅವರು ಕಾನೂನು ಬದಲಾಯಿಸಲು ಹೊರಟಿದ್ದು, ನಮ್ಮ ತಾಯಂದಿರು ಮತ್ತು ಸಹೋದರಿಯರ ಆಸ್ತಿ ಕಿತ್ತುಕೊಳ್ಳಲು ಹೊರಟಿದ್ದಾರೆ’ ಎಂದು ಹೇಳಿದರು.

‘ವಿರೋಧ ಪಕ್ಷವು ಸಂಬಳದಾರರ ಆಸ್ತಿ ಸಮೀಕ್ಷೆಗೆ ಚಿಂತನೆ ನಡೆಸಿದ್ದು, ನಿಮ್ಮ ಬಳಿ ಎರಡು ಮನೆ ಇದ್ದರೆ, ಅದು ಒಂದನ್ನು ಕಿತ್ತುಕೊಳ್ಳುತ್ತದೆ. ಕಾಂಗ್ರೆಸ್ ಅಷ್ಟು ದೂರ ಹೋಗಲಿದೆ’ ಎಂದು ಹೇಳಿದರು. ಇದು ಮಾವೊವಾದಿ ಚಿಂತನೆ, ಇದು ಕಮ್ಯುನಿಸ್ಟ್ ಚಿಂತನೆ. ಹೀಗೆ ಮಾಡುವ ಮೂಲಕ ಕಮ್ಯುನಿಸ್ಟರು ಅನೇಕ ರಾಷ್ಟ್ರಗಳನ್ನು ನಾಶ ಮಾಡಿದರು. ಈಗ ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟ ಅದನ್ನು ಭಾರತದಲ್ಲಿ ಅನುಷ್ಠಾನಕ್ಕೆ ತರಲು ಹೊರಟಿದೆ’ ಎಂದು ಆರೋಪಿಸಿದರು.

ಅಧಿಕಾರಕ್ಕಾಗಿ ಸುಳ್ಳು ಹೇಳುವುದು ವಿಷಯಗಳ ಬಗ್ಗೆ ತಪ್ಪು ಉಲ್ಲೇಖ ಮಾಡುವುದು ವಿರೋಧಿಗಳ ಬಗ್ಗೆ ಸುಳ್ಳು ಆರೋಪ ಮಾಡುವುದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ತರಬೇತಿಯ ವೈಶಿಷ್ಟ್ಯ
-ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

ಪ್ರತಿಕ್ರಿಯೆಗೆ ನಕಾರ

ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಚುನಾವಣಾ ಆಯೋಗವು ಸೋಮವಾರ ನಿರಾಕರಿಸಿದೆ. ‘ನಾವು ಪ್ರತಿಕ್ರಿಯೆಗೆ ನಿರಾಕರಿಸುತ್ತೇವೆ’ ಎಂದು ಆಯೋಗದ ವಕ್ತಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT