ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಮೈಸೂರು: ಕೈ, ಕಮಲಕ್ಕೆ ‘ಕ್ರಮ ಸಂಖ್ಯೆ’ ತಲೆನೋವು!

ಎರಡು ಇವಿಎಂಗಳನ್ನು ಬಳಸುವುದರಿಂದ ಜಾಗೃತಿ ಮೂಡಿಸುವ ಅನಿವಾರ್ಯತೆ
Published 20 ಏಪ್ರಿಲ್ 2024, 23:27 IST
Last Updated 20 ಏಪ್ರಿಲ್ 2024, 23:27 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ 18 ಮಂದಿ ಉಳಿದಿರುವುದು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ, ‘ಕ್ರಮ ಸಂಖ್ಯೆ’ಯ ವಿಚಾರದಲ್ಲಿ ಮತದಾರರಲ್ಲಿ ಗೊಂದಲ ಉಂಟಾದರೆ ಮತ ಕೈತಪ್ಪುವ ಆತಂಕ ಅವರದ್ದಾಗಿದೆ.

ಇಲ್ಲಿ ಕಾಂಗ್ರೆಸ್‌ನ ಎಂ.ಲಕ್ಷ್ಮಣ, ಬಿಜೆಪಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೇರಿದಂತೆ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಿಂದಾಗಿ, ಈ ಬಾರಿ ಪ್ರತಿ ಮತಗಟ್ಟೆಯಲ್ಲೂ ಎರಡೆರಡು ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಲಾಗುತ್ತಿದೆ.

ಒಂದು ಇವಿಎಂನಲ್ಲಿ 16 ಅಭ್ಯರ್ಥಿಗಳ ಹೆಸರನ್ನು ಅಳವಡಿಸಬಹುದು. ಉಳಿದ ಇಬ್ಬರ ಹೆಸರು ಹಾಗೂ ‘ನೋಟಾ’ ಚಿಹ್ನೆಯನ್ನು ಮತ್ತೊಂದು ಇವಿಎಂನಲ್ಲಿ ಹಾಕಲಾಗುತ್ತದೆ. ಇದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ಮತ್ತು ಯಾವ ಬಟನ್‌ ಒತ್ತಬೇಕು ಎಂಬುದನ್ನು ತಿಳಿಸಿಕೊಡಲು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮತ್ತು ಆಯಾ ಪಕ್ಷದವರು ಒತ್ತು ನೀಡುತ್ತಿದ್ದಾರೆ.

ಮೊದಲಿಗೆ ಪ್ರಮುಖ ಪಕ್ಷ: ಚುನಾವಣಾ ಆಯೋಗದವರು ನೀಡಿರುವ ಕ್ರಮ ಸಂಖ್ಯೆ ಪ್ರಕಾರ, ಇವಿಎಂನ ಕ್ರಮ ಸಂಖ್ಯೆ–1ರಲ್ಲಿ ಯದುವೀರ್‌ ಅವರ ಹೆಸರು ಹಾಗೂ ಕಮಲದ ಚಿಹ್ನೆ ಮತ್ತು ಕ್ರಮ ಸಂಖ್ಯೆ–2ರಲ್ಲಿ ಲಕ್ಷ್ಮಣ ಅವರ ಹೆಸರು ಹಾಗೂ ಹಸ್ತದ ಚಿಹ್ನೆ ಇರುತ್ತದೆ. ಇವರಿಗೆ ಮತ ಚಲಾಯಿಸಬೇಕು ಎಂದು ಬಯಸಿದವರು ಮೊದಲ ಇವಿಎಂನಲ್ಲಿರುವ ಕ್ರಮ ಸಂಖ್ಯೆ 1 ಅಥವಾ 2ರ ಬದಲಿಗೆ ಪಕ್ಕದಲ್ಲಿ ಇಡಲಾಗುವ ಮತ್ತೊಂದು ಇವಿಎಂನ ಕ್ರಮ ಸಂಖ್ಯೆ–1 ಅಥವಾ ಕ್ರಮ ಸಂಖ್ಯೆ–2ರ ಬಟನ್ ಒತ್ತಿದರೆ ಮತ ಬೇರೆಯವರ ಪಾಲಾಗಲಿದೆ ಎನ್ನುವುದು ಆ ಪಕ್ಷದವರ ಚಿಂತೆಗೆ ಕಾರಣವಾಗಿದೆ.

ಅಭ್ಯರ್ಥಿಗಳು ತಮ್ಮ ‘ಕ್ರಮ ಸಂಖ್ಯೆ’ ಬಗ್ಗೆ ವ್ಯಾಪಕ ಪ್ರಚಾರಕ್ಕೆ ಒತ್ತು ಕೊಡುತ್ತಿದ್ದಾರೆ; ಚಿಹ್ನೆಯ ಬಗ್ಗೆಯೂ ತಿಳಿಸುತ್ತಿದ್ದಾರೆ. ಸೋಲು–ಗೆಲುವು ನಿರ್ಧರಿಸಲು ಒಂದು ಮತದ ಪಾತ್ರವೂ ನಿರ್ಣಾಯಕ. ಆದ್ದರಿಂದ, ಮತವು ಬೇರೆಯವರ ಪಾಲಾಗದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಆದರೆ, ಮತದಾರರಲ್ಲಿ ಗೊಂದಲ ಉಂಟಾದರೆ ಮತ ಕಳೆದುಕೊಳ್ಳುವ ಭೀತಿ ಅವರದ್ದಾಗಿದೆ.

ಒಂದು ವೇಳೆ ಮತದಾರರೇನಾದರೂ, ಮತಯಂತ್ರದ ಕೆಳಭಾಗದಿಂದ ಕ್ರಮಸಂಖ್ಯೆಯನ್ನು ಪರಿಗಣಿಸಿದರೆ ತೊಂದರೆ ಆಗುತ್ತದೆ ಎನ್ನುವುದು ಅವರಲ್ಲಿ ಕಳವಳ ಮೂಡಿಸಿದೆ. ಒಂದು ಇವಿಎಂನಲ್ಲಿ ಕೆಳಭಾಗದ ಕ್ರಮ ಸಂಖ್ಯೆಗಳು ಬೇರೆ ಅಭ್ಯರ್ಥಿಗಳದಾಗಿದ್ದರೆ, ಇನ್ನೊಂದು ಇವಿಎಂನಲ್ಲಿ ‘ನೋಟಾ’ ಇರಲಿದೆ. ಈ ಕಾರಣದಿಂದಲೇ, ಪ್ರಚಾರದ ವೇಳೆ ಅಭ್ಯರ್ಥಿಗಳು ‘ಕ್ರಮ ಸಂಖ್ಯೆ ಸ್ಪಷ್ಟಪಡಿಸಲು’ ಶ್ರಮಿಸುತ್ತಿದ್ದಾರೆ.

ಒಂದೆಡೆ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ, ಜಿಲ್ಲಾಡಳಿತದಿಂದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇನ್ನೊಂದೆಡೆ, ತಮ್ಮ ಮತದಾನ ಪ್ರಮಾಣ ಹೆಚ್ಚಿಸಿಕೊಳ್ಳಲು ಅಭ್ಯರ್ಥಿಗಳು ಕೂಡ ಜಾಗೃತಿ ಮೂಡಿಸುತ್ತಿದ್ದಾರೆ. ಮತದಾನದ ಪ್ರಮಾಣ ಹೆಚ್ಚಾಗುವುದೇ, ಇಲ್ಲವೇ ಎನ್ನುವುದು ಏ.26ರಂದು ಹೊರಬೀಳಲಿದೆ.

ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಆತಂಕ ಕಣದಲ್ಲಿ ಒಟ್ಟು 18 ಅಭ್ಯರ್ಥಿಗಳು ‘ನೋಟಾ’ ಚಲಾವಣೆಗೂ ಇದೆ ಅವಕಾಶ

ಜೆಡಿಎಸ್‌ ಚಿಹ್ನೆ ಇಲ್ಲ

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್‌ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಜಿ.ಡಿ. ಹರೀಶ್‌ ಗೌಡ ಪ್ರಮುಖವಾಗಿ ಕ್ರಮ ಸಂಖ್ಯೆಯ ವಿಷಯಕ್ಕೆ ಒತ್ತು ನೀಡಿದರು. ‘ಈ ಬಾರಿ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿಲ್ಲವಾದ್ದರಿಂದ ಇವಿಎಂನಲ್ಲಿ ‘ತೆನೆ ಹೊತ್ತ ಮಹಿಳೆ’ ಚಿಹ್ನೆ ಇರುವುದಿಲ್ಲ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಯದುವೀರ್ ಅವರಿಗೆ ನಾವು ಮತ ಚಲಾಯಿಸಬೇಕು. ಕಮಲದ ಗುರುತನ್ನು ಮರೆಯಬಾರದು’ ಎಂದು ಹೇಳಿದರು. ಈ ಮೂಲಕ ಜೆಡಿಎಸ್‌ನ ಸಾಂಪ್ರದಾಯಿಕ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತೆಯೇ ಕಾಂಗ್ರೆಸ್‌ ನಾಯಕರು ಕೂಡ ‘ಮತಗಟ್ಟೆಗೆ ಹೋದಾಗ ಮೊದಲನೇ ಇವಿಎಂನಲ್ಲಿರುವ ಕ್ರಮಸಂಖ್ಯೆ–2ರ ಮುಂದಿರುವ ಬಟನ್ ಒತ್ತಬೇಕು. ಆಗ ಮಾತ್ರ ನಿಮ್ಮ ಮತ ನಮಗೆ ಬರುತ್ತದೆ’ ಎಂದು ತಿಳಿಸಿಕೊಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT