ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಾಸ್ವಾಮಿ ಹತ್ಯೆ: ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ವಶಕ್ಕೆ

Published 11 ಜೂನ್ 2024, 5:20 IST
Last Updated 11 ಜೂನ್ 2024, 7:02 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಸ್ನೇಹಿತೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ (35) ಎಂಬವರನ್ನು ಕೊಲೆ ಮಾಡಿದ್ದ ಆರೋಪದಡಿ ನಟ ದರ್ಶನ್‌ ತೂಗುದೀಪ (47), ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿ 13 ಮಂದಿಯನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಹೆಚ್ಚಿನ ತನಿಖೆಗಾಗಿ ಆರು ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಸ್ಟೋನ್‌ ಬ್ರೂಕ್‌ ಹೋಟೆಲ್‌ ಮಾಲೀಕ ವಿ.ವಿನಯ್‌, ದರ್ಶನ್‌ ಅವರ ಮ್ಯಾನೇಜರ್ ಆರ್‌.ನಾಗರಾಜ್‌, ಆಪ್ತ ಲಕ್ಷ್ಮಣ್‌, ಹೋಟೆಲ್‌ ಉದ್ಯಮಿ ಎಸ್‌.ಪ್ರದೋಶ್‌, ಪವಿತ್ರಾ ಗೌಡ ಅವರ ಸ್ನೇಹಿತ ಕೆ.ಪವನ್‌, ದೀಪಕ್‌ಕುಮಾರ್‌, ನಂದೀಶ್‌, ದರ್ಶನ್‌ ಫ್ಯಾನ್ಸ್ ಅಸೋಸಿಯೇಷನ್‌ ಅಧ್ಯಕ್ಷ ಕಾರ್ತಿಕ್‌, ಬನ್ನೇರುಘಟ್ಟದ ನಿವಾಸಿ ನಿಖಿಲ್‌ ನಾಯಕ್‌, ಕೇಶವಮೂರ್ತಿ ಹಾಗೂ ದರ್ಶನ್‌ ಅಭಿ
ಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಅಲಿಯಾಸ್ ರಾಘು ಬಂಧಿತರು.

ಆರೋಪಿಗಳ ಮೊಬೈಲ್‌ ಜಪ್ತಿ ಮಾಡಿಕೊಳ್ಳಲಾಗಿದೆ. ಕೃತ್ಯ ನಡೆದ ಸ್ಥಳ ಹಾಗೂ ಮೃತದೇಹ ಎಸೆದ ಸ್ಥಳದಲ್ಲಿ ಲಭಿಸಿದ ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿನಿಮಾವೊಂದರ ಚಿತ್ರೀಕರಣಕ್ಕೆ ತೆರಳಿದ್ದ ದರ್ಶನ್‌ ಅವರು ಮೈಸೂರಿನ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ಬೆಳಿಗ್ಗೆ ಮೈಸೂರಿಗೆ ತೆರಳಿ ಪೊಲೀಸರು ದರ್ಶನ್‌ ಅವರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದರು. ನಂತರ, ದರ್ಶನ್‌ ಅವರ ಸ್ನೇಹಿತೆ ಪವಿತ್ರಾ ಗೌಡ ಅವರನ್ನು ಬಂಧಿಸಿದರು. ಆರೋಪಿಗಳನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳನ್ನು ಆರು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತು.

‘ಚಿತ್ರದುರ್ಗದ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪವಿತ್ರಾ ಗೌಡ ಅವರ ಬಗ್ಗೆ ನಿಂದನೆ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ. ಪವಿತ್ರಾ ಅವರಿಂದಾಗಿಯೇ ದರ್ಶನ್‌ ಕುಟುಂಬದಲ್ಲಿ ಬಿರುಕು ಮೂಡಿದೆ ಎಂದೂ ರೇಣುಕಾಸ್ವಾಮಿ ಬರೆದಿದ್ದರು. ಇದಕ್ಕೆ ಕೆಲವರು ಪ್ರತಿಕ್ರಿಯಿಸಿದ್ದರು. 

‘ರೇಣುಕಾಸ್ವಾಮಿ ಬರಹಕ್ಕೆ ಯಾರೂ ಪ್ರತಿಕ್ರಿಯಿಸುವುದು ಬೇಡ. ಸದ್ಯದಲ್ಲೇ ಉತ್ತರ ಸಿಗಲಿದೆ ಎಂದು ಪವಿತ್ರಾ ಗೌಡ ಪ್ರತಿಕ್ರಿಯಿಸಿದ್ದರು. ರೇಣುಕಾಸ್ವಾಮಿ ಬರಹದ ವಿಷಯವನ್ನು ಪವಿತ್ರಾ ಅವರು ದರ್ಶನ್‌ಗೆ ತಿಳಿಸಿದ್ದರು. ದರ್ಶನ್‌ ತಮ್ಮ ಆಪ್ತರಿಗೆ ಈ ವಿಷಯ ತಿಳಿಸಿದ್ದರು. ನಂತರ, ಸಿಟ್ಟಿಗೆದ್ದ ತಂಡವು ಕೊಲೆಗೆ ಸಂಚು ರೂಪಿಸಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜೂನ್‌ 8ರಂದು ರೇಣುಕಾಸ್ವಾಮಿ ಅವರನ್ನು ಆರೋಪಿ ರಾಘವೇಂದ್ರ ನೇತೃತ್ವದಲ್ಲಿ ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತರಲಾಗಿತ್ತು.

‘ಯಾರ ಕೊಲೆಗೂ ಸೂಚಿಸಿಲ್ಲ’

ದರ್ಶನ್‌ ಅವರನ್ನು ನಗರಕ್ಕೆ ಕರೆತಂದ ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ‘ನಾನು ಯಾರನ್ನೂ ಕೊಲೆ ಮಾಡಲು ಸೂಚಿಸಿಲ್ಲ. ಅಶ್ಲೀಲ ಸಂದೇಶ ಕಳುಹಿಸದಂತೆ ಬುದ್ಧಿಮಾತು ಹೇಳುವಂತೆ ಸ್ನೇಹಿತರಿಗೆ ತಿಳಿಸಿದ್ದೆ ಎಂದು ದರ್ಶನ್‌ ವಿಚಾರಣೆ ವೇಳೆ ಹೇಳಿದ್ದಾರೆ’ ಎಂಬುದು ಗೊತ್ತಾಗಿದೆ.

ಆರೋಪ ಪಟ್ಟಿಯಲ್ಲಿ ಎ1, ಎ2 ಉಲ್ಲೇಖ

‘ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಆಧರಿಸಿಯೇ ತನಿಖೆ ಮುಂದುವರಿಸಲಾಗಿದೆ. ಆ ಎಫ್‌ಐಆರ್‌ನಲ್ಲಿ ಯಾರ ಹೆಸರೂ ಉಲ್ಲೇಖಿಸಿಲ್ಲ. ಪ್ರಾಥಮಿಕ ಮಾಹಿತಿ ಆಧರಿಸಿ, ಸಂಚು ರೂಪಿಸಿದವರ ಹಾಗೂ ಹತ್ಯೆ ನಡೆಸಿದವರನ್ನು ಬಂಧಿಸಲಾಗಿದೆ. ಮುಂದಿನ ತನಿಖೆಯಲ್ಲಿ ಕಂಡುಬಂದ ಅಂಶಗಳನ್ನು ಆಧರಿಸಿ, ಆರೋಪಪಟ್ಟಿಯಲ್ಲಿ ಎ1, ಎ2 ಆರೋಪಿಗಳು ಯಾರು ಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.

‘ದರ್ಶನ್ ಅಭಿಮಾನಿ ರೇಣುಕಾ’

‘ರೇಣುಕಾಸ್ವಾಮಿ ದರ್ಶನ್‌ನ ಕಟ್ಟಾ ಅಭಿಮಾನಿ. ‘ಎಕ್ಸ್‌’ನಲ್ಲಿ ರೆಡ್ಡಿ 2205 ಎಂಬ ಖಾತೆ ತೆರೆದು, ‘ನಮ್ಮ ಡಿ ಬಾಸ್ ಮತ್ತು ಅತ್ತಿಗೆ ವಿಜಯಲಕ್ಷ್ಮಿ ಅವರಿಂದ ದೂರ ಇರಬೇಕು. ಅವರ ಕುಟುಂಬಕ್ಕೆ ತೊಂದರೆ ಕೊಡಬೇಡಿ ಪ್ಲೀಸ್‌’ ಎಂದು ನಿರಂತರವಾಗಿ ಪವಿತ್ರಾ ಗೌಡ ಜತೆ ಚಾಟ್ ಮಾಡಿದ್ದಾನೆ. ಜತೆಗೆ, ಅಶ್ಲೀಲವಾಗಿಯೂ ಚಾಟ್ ಮಾಡಿದ್ದಾನೆ’ ಎನ್ನಲಾಗಿದೆ.

ಮರ್ಮಾಂಗಕ್ಕೆ ಒದ್ದು ಹತ್ಯೆ

ಆರೋಪಿ ವಿನಯ್ ಅವರ ಮಾವ ಜಯಣ್ಣ ಅವರಿಗೆ ಸೇರಿದ ಪಟ್ಟಣಗೆರೆಯ ಶೆಡ್‌ನಲ್ಲಿ ಆರೋಪಿಗಳು, ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

‘ಆರೋಪಿಗಳು ಮರ್ಮಾಂಗಕ್ಕೆ ಒದ್ದಿದ್ಧಾರೆ. ಸಿಗರೇಟ್‌ನಿಂದ ಮೈ, ಕೈ ಮತ್ತು ಕಾಲುಗಳಿಗೆ ಸುಟ್ಟಿದ್ದಾರೆ. ನಂತರ, ಬೆಲ್ಟ್‌, ಮರದ ತುಂಡು ಹಾಗೂ ಆಯುಧಗಳಿಂದ ಹಲ್ಲೆ ನಡೆಸಿದ ಪರಿಣಾಮ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಒಂದು ವಾರದಿಂದ ರೇಣುಕಾಸ್ವಾಮಿ ಅವರನ್ನು ನಗರಕ್ಕೆ ಕರೆ ತರುವ ಪ್ರಯತ್ನ ಮಾಡಿದ್ದರು. ಯುವತಿ ಸೋಗಿನಲ್ಲಿ ಸಂಚು ರೂಪಿಸಿ ಸಂದೇಶ ಕಳುಹಿಸುತ್ತಿದ್ದರು. ಅದು ಸಾಧ್ಯವಾಗದಿದ್ದಾಗ ಜೂನ್‌ 8ರಂದು ಚಿತ್ರದುರ್ಗಕ್ಕೆ ರಾಘವೇಂದ್ರ ನೇತೃತ್ವದಲ್ಲಿ ತೆರಳಿದ್ದ ತಂಡ, ರೇಣುಕಾಸ್ವಾಮಿ ಅವರನ್ನು ನಗರಕ್ಕೆ ಕರೆತಂದಿತ್ತು. ಅದೇ ದಿನ ಮಧ್ಯಾಹ್ನ 3ರ ಸುಮಾರಿಗೆ ಶೆಡ್‌ಗೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ಈ ಸಮಯದಲ್ಲಿ ದರ್ಶನ್‌ ಅವರಿಗೆ ಸೇರಿದ ಕೆಂಪು ಬಣ್ಣದ ಜೀಪು, ಮತ್ತೊಂದು ಸ್ಕಾರ್ಪಿಯೊ ಶೆಡ್ ಆವರಣಕ್ಕೆ ತೆರಳಿರುವುದು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೃತ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವು ಕಡೆ ದರ್ಶನ್‌, ಪವಿತ್ರಾ ಗೌಡ ಇರುವ ದೃಶ್ಯಾವಳಿ ಲಭಿಸಿದೆ’ ಎಂದು ಪೊಲೀಸರು ಹೇಳಿದರು.

ಜಯಣ್ಣ ಅವರು ತಮ್ಮ ಸ್ಥಳವನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದ್ದರು. ಸಾಲ ಮರುಪಾವತಿಸದ ಮಾಲೀಕರಿಂದ ಜಪ್ತಿ ಮಾಡಿಕೊಂಡ ವಾಹನಗಳನ್ನು ಫೈನಾನ್ಸ್‌ ಕಂಪನಿಯವರು ಈ ಸ್ಥಳದಲ್ಲಿ ನಿಲುಗಡೆ ಮಾಡುತ್ತಿದ್ದರು. ಈ ಸ್ಥಳಕ್ಕೆ ವಿನಯ್‌ ಜತೆಗೆ ದರ್ಶನ್‌ ಆಗಾಗ್ಗೆ ಬರುತ್ತಿದ್ದರು ಎಂದು ಹೇಳಲಾಗಿದೆ.

ಮೊದಲು ನಾಲ್ವರು ಆರೋಪಿಗಳು ಶರಣು: ‘ಮೊಬೈಲ್‌ ಲೊಕೇಶನ್‌ ಹಾಗೂ ದೃಶ್ಯಾವಳಿ ಆಧರಿಸಿ ಭಾನುವಾರ ಮಧ್ಯಾಹ್ನ ಕೆಲವರಿಗೆ ಕರೆ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಲಾಯಿತು. ಅವರು ನೀಡಿದ ಮಾಹಿತಿ ಆಧರಿಸಿ ಏಳು ಮಂದಿಯನ್ನು ಬಂಧಿಸಲಾಯಿತು. ಅವರು ದರ್ಶನ್‌ ಹಾಗೂ ಪವಿತ್ರಾ ಗೌಡ ಹೆಸರು ಬಾಯ್ಬಿಟ್ಟಿದ್ದರು. ಎಲ್ಲರೂ ಸೇರಿಕೊಂಡು ಅಪಹರಿಸಿ ಕೊಲೆಗೆ ಸಂಚು ರೂಪಿಸಿದ್ದರು’ ಎಂದು ಪೊಲೀಸರು ಹೇಳಿದರು.

ನಟನ ವಿರುದ್ಧದ ಪ್ರಕರಣಗಳು

  • ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ದರ್ಶನ್ ವಿರುದ್ಧ 2011ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್‌ ಅವರು 28 ದಿನ ಜೈಲಿನಲ್ಲಿದ್ದರು

  • 2019ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಸಹ ನಟನ ಮೇಲೆ ದರ್ಶನ್‌ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ದೂರು ದಾಖಲಾಗಿರಲಿಲ್ಲ

  • 2021ರಲ್ಲಿ ಸಾಲ ಹಾಗೂ ವಂಚನೆ ಸಂಬಂಧ ನಿರ್ಮಾಪಕರೊಬ್ಬರು ಹಾಗೂ ದರ್ಶನ್ ನಡುವೆ ಆರೋಪ– ಪ್ರತ್ಯಾರೋಪ ನಡೆದಿತ್ತು

  • ಮೈಸೂರಿನ ಹೋಟೆಲ್‌ ಸಿಬ್ಬಂದಿಯ ಮೇಲೆ ದರ್ಶನ್‌ ಅವರು ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕರೊಬ್ಬರು ಆರೋಪಿಸಿದ್ದರು. ಪೊಲೀಸರು ಹೋಟೆಲ್‌ಗೆ ತೆರಳಿ ತನಿಖೆ ನಡೆಸಿದ್ದರು

  • ‘ಕಾಟೇರ’ ಸಿನಿಮಾ ಯಶಸ್ಸಿಗೆ ಸಂಬಂಧಿಸಿ ಬೆಂಗಳೂರಿನ ಜೆಟ್‌ಲ್ಯಾಗ್‌ ಪಬ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ದರ್ಶನ್‌ ಸೇರಿ ಹಲವರು ನಿಯಮ ಉಲ್ಲಂಘಿಸಿ ತಡರಾತ್ರಿ ವರೆಗೆ ಪಾರ್ಟಿ ನಡೆಸಿದ್ದ ಆರೋಪವಿತ್ತು. ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದರ್ಶನ್‌ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT