ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒತ್ತಡ ಹಾಕಿ ತನಿಖಾ ವರದಿ ತರಿಸಿಕೊಳ್ಳುವುದರಲ್ಲಿ ತಪ್ಪೇನಿದೆ?: ಪ್ರಿಯಾಂಕ್‌ ಖರ್ಗೆ

Published : 2 ಸೆಪ್ಟೆಂಬರ್ 2024, 6:29 IST
Last Updated : 2 ಸೆಪ್ಟೆಂಬರ್ 2024, 6:29 IST
ಫಾಲೋ ಮಾಡಿ
Comments

ಬೆಂಗಳೂರು: ‘ಒತ್ತಡ ಹಾಕಿ ತನಿಖಾ ವರದಿ ತರಿಸಿಕೊಳ್ಳುವುದರಲ್ಲಿ ತಪ್ಪೇನಿದೆ. ತನಿಖಾ ಸಂಸ್ಥೆಗಳಿಗೆ ಬೇಗ ತನಿಖೆ ಮುಗಿಸಿ ಎಂದು ಹೇಳಿದರೆ ತಪ್ಪೇನು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

‘ಒತ್ತಡ ಹಾಕಿ ಕೋವಿಡ್ ಹಗರಣ ವರದಿ ತರಿಸಿಕೊಂಡಿದ್ದಾರೆ’ ಎಂಬ ಮಾಜಿ ಆರೋಗ್ಯ ಸಚಿವ ಡಾ. ಸುಧಾಕರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌, ‘ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ. ಯಾರೊ ವಿಡಿಯೊ ಇದೆ ಅಂದಾಕ್ಷಣ ಯಾಕೆ ತಡೆಯಾಜ್ಞೆ ತರುತ್ತಾರೆ. ವರದಿ ಬಂದ ತಕ್ಷಣ ಕಾನೂನು ಹೋರಾಟ ಮಾಡುತ್ತೇವೆ ಎಂದು ಯಾಕೆ ಹೇಳುತ್ತಾರೆ’ ಎಂದರು. 

‘ಅಷ್ಟಕ್ಕೂ ನಾವು ಮಧ್ಯಂತರ ವರದಿ ಕೊಡಿ ಎಂದು ತನಿಖಾ ಆಯೋಗಕ್ಕೆ ಒತ್ತಡ ಹಾಕಿಲ್ಲ. ನಾವು ಮಾಜಿ ಮುಖ್ಯಮಂತ್ರಿ, ಸಚಿವರ ಹೆಸರು ಹೇಳಿದ್ದೇವೆಯೇ ? ವರದಿಯಲ್ಲಿ ಏನಿದೆ ಎಂದು ನಮಗೆ ಗೊತ್ತಿಲ್ಲ. ಏನಿದೆ ಎಂದು ಅವರಿಗೆ ಹೇಗೆ ಗೊತ್ತಾಗುತ್ತದೆ’ ಎಂದೂ ಪ್ರಶ್ನಿಸಿದರು. 

‘ಸದನದಲ್ಲಿ ಮುಖ್ಯಮಂತ್ರಿ ಹೇಳಿದ 21 ಹಗರಣಗಳದ್ದು ಕೇವಲ ಟ್ರೈಲರ್. ಎಲ್ಲ ಹಗರಣಗಳನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಕೆಲವು ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಏಜೆನ್ಸಿಗಳು ಬಂದು ಕೈಯಾಡಿಸುತ್ತಿವೆ. ಕಾನೂನಾತ್ಮಕವಾಗಿ ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಬಿಜೆಪಿಯವರಿಗೂ ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದರು.

‘ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ನ್ಯಾಯಮೂರ್ತಿ ಡಿ ಕುನ್ಹಾ ಆಯೋಗ ನೀಡಿದೆ. ಮೇಲ್ನೋಟಕ್ಕೆ ಬಹಳಷ್ಟು ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದು ವರದಿಯಲ್ಲಿದೆ. ಅಧಿಕಾರಿಗಳಿಂದಲೂ ಕೂಡ ಲೋಪ ಆಗಿದೆ. ಅಕ್ರಮ ನಡೆದಿದೆ ಎಂದು ವರದಿಯಲ್ಲಿ ಇದೆ. ಸಹಜವಾಗಿ ಮಾತನಾಡುವಾಗ ವರದಿ ತಯಾರಿಸಿದವರು ಈ ವಿಷಯ ಹೇಳಿದ್ದಾರೆ. ಮಧ್ಯಂತರ ವರದಿಯಲ್ಲಿ ಏನಿದೆ ಎಂಬ ಮಾಹಿತಿ ಅಧಿಕೃತವಾಗಿ ಇಲ್ಲ. ಮಧ್ಯಂತರ ವರದಿಯ ಬಗ್ಗೆ ಸಚಿವ ಸಂಪುಟದ ಮುಂದೆ ಇಟ್ಟಾಗ ಎಲ್ಲ ಗೊತ್ತಾಗುತ್ತದೆ’ ಎಂದರು.

ರಾಜ್ಯಪಾಲರ ವಿರುದ್ಧ ವಾಗ್ದಾಳಿ: 

‘ರಾಜ್ಯಪಾಲರು ನಮ್ಮ ವಿಚಾರದಲ್ಲಿ ತರಾತುರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ನವರ ಪ್ರಕರಣದಲ್ಲಿ ಅವರ ನಡೆ ಆಮೆ ಗತಿ. ನಮ್ಮ ವಿಚಾರದಲ್ಲಿ ಮಾತ್ರ ಬೆಳಕಿನ ವೇಗದಲ್ಲಿ ವಿವರಣೆ ಕೇಳುತ್ತಾರೆ’ ಎಂದು ಪ್ರಿಯಾಂಕ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT