ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶ: ನಿಲ್ಲದ ಹಿಂಸಾಚಾರ, 25 ಜನ ಸಾವು

ಮೀಸಲಾತಿ ವಿರೋಧಿಸಿ ಪ್ರತಿಭಟನೆ: ಸೇನೆ ನಿಯೋಜನೆ, ಮಾತುಕತೆಗೆ ಆಹ್ವಾನ ನೀಡಿದ ಸರ್ಕಾರ
Published : 18 ಜುಲೈ 2024, 15:45 IST
Last Updated : 18 ಜುಲೈ 2024, 15:45 IST
ಫಾಲೋ ಮಾಡಿ
Comments

ಢಾಕಾ: ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಗುರುವಾರ ಢಾಕಾ ಸೇರಿ ದೇಶದ ವಿವಿಧೆಡೆ ಸಂಭವಿಸಿದ ಹಿಂಸಾಚಾರದಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಾಲು ರಾಜಧಾನಿ ಸೇರಿದಂತೆ ದೇಶದಾದ್ಯಂತ ಗಡಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಕೆಲವು ದಿನಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಹಿಂಸಾಚಾರ ತೀವ್ರಗೊಂಡ ಬೆನ್ನಲ್ಲೇ ಪ್ರತಿಭಟನಾನಿರತ ವಿದ್ಯಾರ್ಥಿಗಳ ಜತೆಗೆ ಮಾತುಕತೆಗೆ ಸಿದ್ಧ ಎಂದು ಬಾಂಗ್ಲಾದೇಶದ ಸರ್ಕಾರ ತಿಳಿಸಿದೆ.

ಪ್ರತಿಭಟನೆಗಳನ್ನು ನಿಯಂತ್ರಿಸಲು ಬಾಂಗ್ಲಾದೇಶದ ಹಲವೆಡೆ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಢಾಕಾದಲ್ಲಿ ಕೋಲು, ದೊಣ್ಣೆ ಮತ್ತು ಕಲ್ಲುಗಳೊಂದಿಗೆ ರಸ್ತೆಗಿಳಿದು ಹೆದ್ದಾರಿ ಗಳನ್ನು ತಡೆದರು. ಸರ್ಕಾರಿ ಕಟ್ಟಡಗಳನ್ನು ಹಾನಿಗೊಳಿಸಿ, ಸಶಸ್ತ್ರ ಪೊಲೀಸರ ಜತೆ ಘರ್ಷಣೆಗಿಳಿದರು.

ಪ್ರತಿಭಟನಕಾರರು ಬಾಂಗ್ಲಾದೇಶದ ಸರ್ಕಾರಿ ವಾಹಿನಿ ಬಿಟಿವಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಚೇರಿಯೊಳಗೆ ಹಲವರು ಸಿಕ್ಕಿಬಿದ್ದು, ತೊಂದರೆ ಅನುಭವಿಸಿದರು. ಏಕಾಏಕಿ ನೂರಾರು ಪ್ರತಿಭಟನಕಾರರು ಕಚೇರಿಯ ಆವರಣದೊಳಗೆ ನುಗ್ಗಿ ಕನಿಷ್ಠ 60ಕ್ಕೂ ಹೆಚ್ಚು ವಾಹನಗಳು ಮತ್ತು ಕಚೇರಿಯ ಕಟ್ಟಡಕ್ಕೆ ಬೆಂಕಿ ಹಚ್ಚಿದರು.

ರಬ್ಬರ್‌ ಬುಲೆಟ್‌, ಅಶ್ರುವಾಯು: ಢಾಕಾ ವಿಶ್ವವಿದ್ಯಾಲಯದ ಆವರಣ ಸೇರಿದಂತೆ ವಿವಿಧೆಡೆ ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ರಬ್ಬರ್‌ ಬುಲೆಟ್‌ಗಳು, ಅಶ್ರುವಾಯುಗಳನ್ನೂ ಸಿಡಿಸಿದರು. ಇದರ ಪರಿಣಾಮ ಹಲವರು ಗಾಯಗೊಂಡರು.

ಪ್ರತಿಭಟನೆ ಪರಿಣಾಮ ಪ್ರಮುಖ ನಗರಗಳಲ್ಲಿನ ಶಾಪಿಂಗ್‌ ಮಾಲ್‌ಗಳು ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಢಾಕಾದಲ್ಲಿನ ಅಮೆರಿಕ ರಾಯಭಾರಿ ಕಚೇರಿ ಸೇರಿದಂತೆ ವಿವಿಧ ದೇಶಗಳ ರಾಯಭಾರಿ ಕಚೇರಿಗಳು ಮುಚ್ಚಿದ್ದವು.

ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಗುರುವಾರ ಸುದ್ದಿಗೋಷ್ಠಿ ನಡೆಸಿದ ಕಾನೂನು ಸಚಿವ ಅನಿಸುಲ್‌ ಹಕ್‌, ‘ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಕಾರ್ಯಕ್ಕಾಗಿ ಸರ್ಕಾರ ನನ್ನನ್ನು ಮತ್ತು ಶಿಕ್ಷಣ ಸಚಿವ ಮೊಹಿಬುಲ್‌ ಹಸನ್‌ ಚೌಧರಿ ಅವರನ್ನು ನಿಯೋಜಿಸಿದೆ’ ಎಂದು
ತಿಳಿಸಿದರು. 

ಪ್ರತಿಭಟನೆ ಏಕೆ?

ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ, ಸರ್ಕಾರಿ ಉದ್ಯೋಗಗಳಲ್ಲಿನ ಶೇ 56ರಷ್ಟನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಯುದ್ಧದ ಹೋರಾಟಗಾರರ ಕುಟುಂಬದವರಿಗೆ ಶೇ 30, ಹಿಂದುಳಿದ ಜಿಲ್ಲೆಗಳವರಿಗೆ ಶೇ 10, ಮಹಿಳೆಯರಿಗೆ ಶೇ 10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ 5 ಹಾಗೂ ಅಂಗವಿಕಲರಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬದವರಿಗೆ ಕಲ್ಪಿಸಿರುವ ಶೇ 30ರಷ್ಟು ಮೀಸಲಾತಿಯನ್ನು ರದ್ದುಪಡಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹ. ಈ ಬೇಡಿಕೆಗಳನ್ನು ಪ್ರಧಾನಿ ಶೇಖ್‌ ಹಸೀನಾ ತಿರಸ್ಕರಿಸಿದ್ದರಿಂದ ಪ್ರತಿಭಟನೆ ತೀವ್ರಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT