ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಮಾಸ್‌ ಪರಮೋಚ್ಚ ನಾಯಕ ಹನಿಯೆಗೆ ಅಯಾತೊಲ್ಲ ಅಂತಿಮ ನಮನ

Published : 1 ಆಗಸ್ಟ್ 2024, 15:40 IST
Last Updated : 1 ಆಗಸ್ಟ್ 2024, 15:40 IST
ಫಾಲೋ ಮಾಡಿ
Comments

ಬೈರೂತ್‌: ಈಚೆಗೆ ಮೃತಪಟ್ಟ ಹಮಾಸ್‌ ಪರಮೋಚ್ಚ ನಾಯಕ ಇಸ್ಮಾಯಿಲ್‌ ಹನಿಯೆ ಮತ್ತು ಅವರ ಅಂಗರಕ್ಷಕನ ಪಾರ್ಥಿವ ಶರೀರಕ್ಕೆ ಇರಾನ್‌ ಸರ್ವೋಚ್ಚ ನಾಯಕ ಅಯಾತೊಲ್ಲ ಆಲಿ ಖಮೇನಿ ಅವರು ಗುರುವಾರ ನಮನ ಸಲ್ಲಿಸಿದರು.

ಟೆಹರಾನ್ ವಿಶ್ವವಿದ್ಯಾಲಯದ ಆವರಣದಲ್ಲಿ ಹನಿಯೆ ಮತ್ತು ಅವರ ಅಂಗರಕ್ಷನ ಮೃತದೇಹಗಳಿದ್ದ ಶವಪೆಟ್ಟಿಗೆಗಳನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಶವಪೆಟ್ಟಿಗೆಗಳನ್ನು ಟ್ರಕ್‌ ಮೂಲಕ ಆಜಾದಿ ಸ್ಕ್ವೇರ್‌ಗೆ ತರಲಾಯಿತು. ಜನರು ಪುಷ್ಪನಮನ ಸಲ್ಲಿಸಿದರು. ಈ ದೃಶ್ಯಗಳನ್ನು ಅಲ್ಲಿಯ ಸರ್ಕಾರಿ ವಾಹಿನಿ ಬಿತ್ತರಿಸಿದೆ.

ಟೆಹರಾನ್‌ನಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿದ ಬಳಿಕ ಹನಿಯೆ ಅವರ ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕಾಗಿ ಕತಾರ್‌ಗೆ ಶುಕ್ರವಾರ ಕಳುಹಿಸಲಾಗುವುದು ಎನ್ನಲಾಗಿದೆ.

ಈಚೆಗೆ ಟೆಹರಾನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ ಹನಿಯೆ ಅವರು ತಮ್ಮ ನಿವಾಸಕ್ಕೆ ತೆರಳಿದ್ದರು. ಆಗ ನಡೆದ ವಾಯುದಾಳಿಯಲ್ಲಿ ಅವರು ಮೃತಪಟ್ಟರು. ಇಸ್ರೇಲ್‌ ಈ ದಾಳಿ ನಡೆಸಿದೆ ಎಂದು ಇರಾನ್‌ ಆರೋಪಿಸಿದೆ. ಈ ಸಾವಿನಿಂದ ಇರಾನ್‌– ಹಮಾಸ್‌ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಹಮಾಸ್‌ ನಾಯಕ ಡೀಫ್‌ ಸಾವು: ಖಚಿತಪಡಿಸಿದ ಇಸ್ರೇಲ್‌

ಜೆರುಸಲೇಂ: ಕಳೆದ ಜುಲೈನಲ್ಲಿ ತಾನು ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಸೇನಾ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಡೀಫ್‌ ಹತರಾಗಿದ್ದಾರೆ ಎಂದು ಇಸ್ರೇಲಿ ಸೇನೆ ಗುರುವಾರ ದೃಢಪಡಿಸಿದೆ. 

ಡೀಫ್‌ ಅವರನ್ನು ಗುರಿಯಾಗಿಸಿ ಜುಲೈ 13ರಂದು ದಕ್ಷಿಣ ಗಾಜಾದ ಖಾನ್‌ ಯೂನಿಸ್ ನಗರದ ಹೊವಲಯದಲ್ಲಿನ ಕಾಂಪೌಂಡ್‌ವೊಂದರ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು. ಆದರೆ ಈ ದಾಳಿಯಲ್ಲಿ ಡೀಫ್‌ ಸಾವಿಗೀಡಾಗಿದ್ದಾರೆಯೋ ಇಲ್ಲವೋ ಎನ್ನುವುದನ್ನು ಇಸ್ರೇಲ್ ಖಚಿತಪಡಿಸಿರಲಿಲ್ಲ.

ದಾಳಿಯಲ್ಲಿ ಡೀಫ್‌ ಮೃತಪಟ್ಟಿಲ್ಲವೆಂದೇ ಹಮಾಸ್‌ ಹೇಳಿತ್ತು. ಆ ದಾಳಿಯಲ್ಲಿ ಒಟ್ಟು 90 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯಾಧಿಕಾರಿಗಳು ತಿಳಿಸಿದ್ದರು. 

ಗುರುವಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಇಸ್ರೇಲಿ ಸೇನೆಯು, ‘ಗುಪ್ತಚರ ಮಾಹಿತಿಯನ್ನು ಆಧರಿಸಿ, ದಾಳಿಯಲ್ಲಿ ಮೊಹಮ್ಮದ್‌ ಡೀಫ್‌ ಸಾವಿಗೀಡಾಗಿದ್ದಾರೆ ಎನ್ನಬಹುದು’ ಎಂದಿದೆ. ತಕ್ಷಣಕ್ಕೆ ಈ ಬಗ್ಗೆ ಹಮಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT