ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾಕ್ಕೆ ಶಸ್ತ್ರಾಸ್ತ್ರ ಪೂರೈಕೆ: ಚೀನಾ, ಯುಎಇ ಕಂಪನಿಗಳಿಗೆ ಅಮೆರಿಕ ನಿರ್ಬಂಧ

Published 13 ಡಿಸೆಂಬರ್ 2023, 15:06 IST
Last Updated 13 ಡಿಸೆಂಬರ್ 2023, 15:06 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಕಾರಣಕ್ಕೆ ರಷ್ಯಾ, ಚೀನಾ, ಟರ್ಕಿ ಮತ್ತು ಸಂಯುಕ್ತ ಅರಬ್‌ ಸಂಸ್ಥಾನಕ್ಕೆ (ಯುಎಇ) ಸೇರಿದ ನೂರಾರು ವ್ಯಕ್ತಿಗಳು ಮತ್ತು ಕಂಪನಿಗಳ ಮೇಲೆ ಅಮೆರಿಕ ಹೊಸದಾಗಿ ಆರ್ಥಿಕ ಮತ್ತು ರಾಜತಾಂತ್ರಿಕ ನಿರ್ಬಂಧಗಳನ್ನು ಹೇರಿದೆ.

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಅಮೆರಿಕ ಭೇಟಿಗಾಗಿ ವಾಷಿಂಗ್ಟನ್‌ಗೆ ಬಂದಿಳಿದ ಬೆನ್ನಲ್ಲೇ, ಅಧ್ಯಕ್ಷ ಜೋ ಬೈಡನ್‌ ಅವರ ಆಡಳಿತ ನಿರ್ಬಂಧ ಹೇರಿರುವ ಈ ಹೊಸ ಬೆಳವಣಿಗೆ ನಡೆದಿದೆ.

ರಷ್ಯಾ ನಡೆಸುತ್ತಿರುವ ಆಕ್ರಮಣವು ಬರುವ ಫೆಬ್ರುವರಿಗೆ ಮೂರನೇ ವರ್ಷಕ್ಕೆ ಕಾಲಿಡಲಿದ್ದು, ರಷ್ಯಾ ದಾಳಿ ಹಿಮ್ಮೆಟ್ಟಿಸಲು ಮತ್ತಷ್ಟು ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರ ಒದಗಿಸುವಂತೆ ಅಮೆರಿಕದ ನೆರವು ಕೋರಲು ಝೆಲೆನ್‌ಸ್ಕಿ ವಾಷಿಂಗ್ಟನ್‌ಗೆ ಭೇಟಿ ಕೊಟ್ಟಿದ್ದಾರೆ.

ಚೀನಾದ ರಾಷ್ಟ್ರೀಯ ಹು ಷಿಯಾಕ್ಸನ್ ನೇತೃತ್ವದ ಬಹುರಾಷ್ಟ್ರೀಯ ಶಸ್ತ್ರಾಸ್ತ್ರಗಳ ಖರೀದಿ ಜಾಲ, ಚೀನಾ ಮೂಲದ ಖಾಸಗಿ ರಕ್ಷಣಾ ಕಂಪನಿ ಜಾರ್ವಿಸ್ ಎಚ್‌ಕೆ ಕಂಪನಿಯನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡು ಈ ನಿರ್ಬಂಧ ವಿಧಿಸಲಾಗಿದೆ. ಚೀನಾ ತಯಾರಿಸಿದ ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳನ್ನು ರಷ್ಯಾಕ್ಕೆ ಮಾರಾಟ ಮಾಡುವ ಪ್ರಕ್ರಿಯೆಯನ್ನು ಈ ಜಾಲವು ನಿರ್ವಹಿಸುತ್ತಿದೆ.

‘ವಾಷಿಂಗ್ಟನ್‌ನ ಇತ್ತೀಚಿನ ನಡೆ ಖಂಡನೀಯ. ಇಂತಹ ಏಕಪಕ್ಷೀಯ ನಿರ್ಬಂಧಗಳು ಮತ್ತು ಅಮೆರಿಕದ ದಬ್ಬಾಳಿಕೆ ನೀತಿಯನ್ನು ಚೀನಾ ದೃಢವಾಗಿ ವಿರೋಧಿಸಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ಪ್ರತಿಕ್ರಿಯಿಸಿದ್ದಾರೆ.

ರಷ್ಯಾಕ್ಕಾಗಿ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ತೊಡಗಿರುವ ಟರ್ಕಿ, ಯುಎಇ ಮತ್ತು ಮಾಲ್ಡೀವ್ಸ್ ಮೂಲದ ಸಂಸ್ಥೆಗಳ ಗುಂಪುಗಳನ್ನು ಆರ್ಥಿಕ ನಿರ್ಬಂಧಗಳಿಗೆ ಗುರಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT