ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಸಾರ್ವತ್ರಿಕ ಚುನಾವಣೆ; ಐಪಿಎಲ್ ಭಾರತದಲ್ಲೇ ನಡೆಯಲಿದೆ: ಧುಮಾಲ್

Published 20 ಫೆಬ್ರುವರಿ 2024, 10:39 IST
Last Updated 20 ಫೆಬ್ರುವರಿ 2024, 10:39 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ, ಭಾರತದಲ್ಲೇ ನಡೆಯಲಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಐಪಿಎಲ್ ಟೂರ್ನಿ ವಿದೇಶದಲ್ಲಿ ಜರಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.

ಲೋಕಸಭೆಗೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಈ ಕಾರಣಕ್ಕಾಗಿ ಐಪಿಎಲ್ 17ನೇ ಆವೃತ್ತಿಯ ವೇಳಾಪಟ್ಟಿಯನ್ನು ಇದುವರೆಗೆ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.

'ಮಾರ್ಚ್ 22ರಂದು ಟೂರ್ನಿ ಆರಂಭವಾಗಲಿದೆ. ಮೊದಲ 15 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಸಾರ್ವತ್ರಿಕ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಟೂರ್ನಿಯ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಘೋಷಿಸಲಾಗುವುದು' ಎಂದು ಅವರು ವಿವರಿಸಿದರು.

ಲೋಕಸಭೆ ಚುನಾವಣೆಯ ದಿನಾಂಕ ಮುಂದಿನ ತಿಂಗಳಲ್ಲಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

'ಮಾರ್ಚ್ 22ರಂದು ಟೂರ್ನಿ ಆರಂಭಿಸಲಿದ್ದೇವೆ. ಈ ಸಂಬಂಧ ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಆರಂಭಿಕ ವೇಳಾಪಟ್ಟಿಯನ್ನು ನಾವು ಬಿಡುಗಡೆಗೊಳಿಸಲಿದ್ದೇವೆ. ಸಂಪೂರ್ಣ ಟೂರ್ನಿಯು ದೇಶದಲ್ಲೇ ನಡೆಯಲಿದೆ' ಎಂದು ಧುಮಾಲ್ ಹೇಳಿದರು.

ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ 2009ರಲ್ಲಿ ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. 2014ರಲ್ಲಿ ಟೂರ್ನಿಯನ್ನು ಭಾಗಶಃ ಯುಎಇನಲ್ಲಿ ಆಯೋಜಿಸಲಾಗಿತ್ತು. ಆದರೆ 2019ರಲ್ಲಿ ಸಂಪೂರ್ಣ ಟೂರ್ನಿಯು ಭಾರತದಲ್ಲೇ ನಡೆದಿತ್ತು.

ಜೂನ್ ತಿಂಗಳಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿ ಆರಂಭವಾಗಲಿರುವುದರಿಂದ ಐಪಿಎಲ್ 2024 ಫೈನಲ್ ಪಂದ್ಯವು ಮೇ 26ರಂದು ನಡೆಯುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT