ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳತನ ಆರೋಪ ಹೊರಿಸಿ ಅಪಮಾನ: ಪೊಲೀಸ್‌ ಅಧಿಕಾರಿ ವಿರುದ್ಧ ಕೋರ್ಟ್‌ಗೆ ಹೋದ ಬಾಲಕಿ

Last Updated 18 ನವೆಂಬರ್ 2021, 14:08 IST
ಅಕ್ಷರ ಗಾತ್ರ

ತಿರುವನಂತಪುರ: ‘ಮೊಬೈಲ್‌ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ನನ್ನನ್ನು ಮತ್ತು ನನ್ನ ತಂದೆಯನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಇದಕ್ಕೆ ಪರಿಹಾರವಾಗಿ ₹50 ಲಕ್ಷ ಕೊಡಿಸಿಕೊಡಬೇಕು,’ ಎಂದು 8 ವರ್ಷದ ಬಾಲಕಿಯೊಬ್ಬಳು ಗುರುವಾರ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದಾಳೆ.

ಹಲವು ಬಾರಿ ದೂರಿದರೂ, ಮನವಿ ಮಾಡಿದರೂ ತನ್ನನ್ನು ಅಪಮಾನ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೋರ್ಟ್‌ ನ್ಯಾಯ ದೊರಕಿಸಿಕೊಡಬೇಕು ಎಂದು ಬಾಲಕಿ ತನ್ನ ಅರ್ಜಿಯಲ್ಲಿ ವಿನಂತಿಸಿದ್ದಾಳೆ.

ಮೊಬೈಲ್‌ ಕಳ್ಳತನ ಮಾಡಿರುವುದಾಗಿ ಸಾರ್ವಜನಿಕವಾಗಿ ಅಪಮಾನಿಸಿದ ನಂತರ, ನಾನು ಆಘಾತಕ್ಕೊಳಗಾಗಿದ್ದೆ. ಇದರ ಪರಿಹಾರಕ್ಕಾಗಿ ನಾನು ಆಪ್ತ ಸಮಾಲೋಚನೆಗೆ ಒಳಗಾಗಬೇಕಾಯಿತು. ಘಟನೆಯು ನನ್ನನ್ನು ಈಗಲೂ ಕಾಡುತ್ತಲೇ ಇದೆ ಎಂದು ಆಕೆ ತನ್ನ ಅರ್ಜಿಯಲ್ಲಿ ವಾದಿಸಿದ್ದಾಳೆ.

ಇಸ್ರೋಕ್ಕೆ ಸಾಗಿಸಲಾಗುತ್ತಿದ್ದ ಬೃಹತ್‌ ಸರಕುಗಳನ್ನು ನೋಡಲೆಂದು ಅತ್ತಿಂಗಲ್‌ ಪ್ರದೇಶಕ್ಕೆ ಬಾಲಕಿ ಮತ್ತು ಆಕೆ ತಂದೆ ಜಯಚಂದ್ರ ಅವರು ಹೋಗಿದ್ದರು ಎನ್ನಲಾಗಿದ್ದು, ಆ ವೇಳೆ ಘಟನೆ ನಡೆದಿದೆ ಎಂದು ಹೈಕೋರ್ಟ್‌ಗೆ ದಾಖಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

‘ಇಸ್ರೋಕ್ಕೆ ಸರಕುಗಳನ್ನು ಸಾಗಿಸುತ್ತಿರುವುದನ್ನು ನೋಡುತ್ತಾ ನಿಂತಿದ್ದ ನಮ್ಮ ಮೇಲೆ ಮಹಿಳಾ ಪೊಲೀಸ್‌ ಅಧಿಕಾರಿ ರೆಜಿತಾ ಏಕಾಏಕಿ ಮೊಬೈಲ್‌ ಕಳ್ಳತನದ ಆರೋಪ ಹೊರಿಸಿದರು. ಪೊಲೀಸ್‌ ಗಸ್ತು ವಾಹನದ ಪಕ್ಕದಲ್ಲಿ ನಿಂತಿದ್ದ ನನ್ನ ತಂದೆಯು ಮೊಬೈಲ್‌ ಕದ್ದಿರುವುದಾಗಿಯೂ, ಅದನ್ನು ನನಗೆ ಕೊಟ್ಟಿರುವುದಾಗಿಯೂ ಅವರು ಆಪಾದಿಸಿದರು. ನಮ್ಮಿಬ್ಬರನ್ನು ಸಾರ್ವಜನಿಕವಾಗಿ ನಿಂದಿಸಿದ ಪೊಲೀಸ್‌ ಅಧಿಕಾರಿ, ಅಪಮಾನಿಸಿದರು. ಭಾರಿ ಸಂಖ್ಯೆಯ ಜನ ಇದಕ್ಕೆ ಸಾಕ್ಷಿಯಾದರು. ಕೆಲವೇ ಕ್ಷಣಗಳಲ್ಲಿ ಪೊಲೀಸ್‌ ಅಧಿಕಾರಿ ರೆಜಿತಾ ಅವರ ಫೋನ್‌ ಅವರ ವಾಹನದಲ್ಲೇ ಸಿಕ್ಕಿತು. ಆದರೆ, ನಮ್ಮನ್ನು ಅಪಮಾನಿಸುತ್ತಿದ್ದ ಘಟನೆಯನ್ನು ವ್ಯಕ್ತಿಯೊಬ್ಬ ಚಿತ್ರೀಕರಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ಅದು ವೈರಲ್‌ ಆಗಿದೆ,’ ಎಂದು ಬಾಲಕಿ ತನ್ನ ಅರ್ಜಿಯಲ್ಲಿ ಹೇಳಿದ್ದಾಳೆ

‘ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೆ. ತಂದೆ ಜಯಚಂದ್ರನ್‌ ಅವರು ಆ. 31ರಂದು ಪೊಲೀಸ್‌ ಮುಖ್ಯಸ್ಥ ಅನಿಲ್‌ ಕಾಂತ್‌ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದರು. ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಕಾಂತ್‌, ಘಟನೆ ಬಗ್ಗೆ ವಿಚಾರಣೆ ನಡೆಸುವಂತೆ ಕೇರಳ ದಕ್ಷಿಣ ವಲಯ ಐಜಿ ಅರ್ಷಿತಾ ಅತ್ತಲುರಿ ಅವರಿಗೆ ಸೂಚಿಸಿದ್ದರು. ರೆಜಿತಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ರೆಜಿತಾ ಅವರನ್ನು ಮೊದಲಿಗಿಂತಲೂ ಆಯಕಟ್ಟಿನ ಸ್ಥಳಕ್ಕೆ ವರ್ಗಮಾಡಲಾಗಿತ್ತು. ಆಕೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ,’ ಎಂದು ಬಾಲಕಿ ಹೇಳಿದ್ದಾಳೆ.

ಪೊಲೀಸ್‌ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬಾಲಕಿ ಮತ್ತು ಆಕೆಯ ಕುಟುಂಬಸ್ಥರು ಸೆಪ್ಟೆಂಬರ್‌ನಲ್ಲಿ ಕೇರಳ ಸಚಿವಾಲಯದ ಬಳಿ ಒಂದು ದಿನದ ಧರಣಿ ನಡೆಸಿದ್ದರು. ಧರಣಿ ನಂತರವೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬಾಲಕಿ ನ್ಯಾಯಾಂಗದ ಮೊರೆ ಹೋಗಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT