ಸೋಮವಾರ, ಸೆಪ್ಟೆಂಬರ್ 27, 2021
21 °C
ಅಮೆರಿಕದ ಬ್ರೌನ್ ಯೂನಿವರ್ಸಿಟಿ ಅಧ್ಯಯನದಲ್ಲಿ ಬಹಿರಂಗ

ಫೈಜರ್‌ ಲಸಿಕೆ ಪಡೆದವರಲ್ಲಿ 6 ತಿಂಗಳ ಬಳಿಕ ಪ್ರತಿಕಾಯ ಕ್ಷೀಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಫೈಜರ್ ಲಸಿಕೆಯಿಂದ ಉತ್ಪತ್ತಿಯಾಗುವ ಕೋವಿಡ್ -19 ಪ್ರತಿಕಾಯಗಳು ನರ್ಸಿಂಗ್ ಹೋಂನಲ್ಲಿರುವ ಹಿರಿಯ ನಿವಾಸಿಗಳಲ್ಲಿ ಮತ್ತು ಅವರ ಆರೈಕೆದಾರರಲ್ಲಿ ತಮ್ಮ ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಶೇಕಡ 80ಕ್ಕಿಂತಲೂ ಕಡಿಮೆಯಾಗಿವೆ ಎಂದು ಅಮೆರಿಕದ ಅಧ್ಯಯನವೊಂದು ಹೇಳಿದೆ.

ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ ಮತ್ತು ಅಮೆರಿಕದ ಬ್ರೌನ್ ಯೂನಿವರ್ಸಿಟಿ ನೇತೃತ್ವದಲ್ಲಿ 120 ಮಂದಿ ನರ್ಸಿಂಗ್ ಹೋಮ್ ನಿವಾಸಿಗಳು ಮತ್ತು 92 ಮಂದಿ ಆರೋಗ್ಯ ಕಾರ್ಯಕರ್ತರ ರಕ್ತದ ಮಾದರಿಗಳ ಅಧ್ಯಯನ ನಡೆಸಿ, ಈ ಸಂಶೋಧನಾ ವರದಿ ಸಿದ್ಧಪಡಿಸಲಾಗಿದೆ.

ನರ್ಸಿಂಗ್‌ ಹೋಂನಲ್ಲಿರುವ ಸರಾಸರಿ 75 ವಯಸ್ಸಿನ ಹಿರಿಯ ನಿವಾಸಿಗಳು, ಇವರನ್ನು ಕಾಳಜಿ ಮಾಡುವ ಸರಾಸರಿ 45ರ ವಯೋಮಾನದ ಆರೋಗ್ಯ ಕಾರ್ಯಕರ್ತರು ಹಾಗೂ ವಯಸ್ಸಾದವರ ದೇಹದಲ್ಲಿನ ಪ್ರತಿಕಾಯಗಳ ಮಟ್ಟವು ಆರು ತಿಂಗಳ ನಂತರ ಶೇ 80ಕ್ಕಿಂತಲೂ ಕಡಿಮೆಯಾಗಿರುವುದು ಕಂಡುಬಂದಿದೆ.

ಇನ್ನಷ್ಟೇ ಪ್ರಕಟವಾಗಬೇಕಿರುವ ಈ ಅಧ್ಯಯನ ವರದಿಯನ್ನು ಆರೋಗ್ಯ ವಿಜ್ಞಾನದ ವೆಬ್‌ಸೈಟ್‌ ಪ್ರಿಪ್ರಿಂಟ್ ಸರ್ವರ್ ಮೆಡ್‌ಆರ್‌ಎಕ್ಸ್‌ಐವಿಯಲ್ಲಿ ಪೋಸ್ಟ್ ಮಾಡಲಾಗಿದೆ.

ರೂಪಾಂತರಿ ಡೆಲ್ಟಾ ತಳಿಯ ಕೋವಿಡ್‌ ಹರಡುತ್ತಿದ್ದಂತೆ ಬೂಸ್ಟರ್‌ ಲಸಿಕೆಗಳನ್ನು ನೀಡುವುದು ಹೆಚ್ಚು ಮುಖ್ಯವೆಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.

ಕೋವಿಡ್ 19 ಸೋಂಕಿಗೆ ಕಾರಣವಾಗುವ ಸಾರ್ಸ್‌–ಕೋವ್‌-2 ವೈರಸ್ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯವನ್ನು ಅಳೆಯಲು ಸಂಶೋಧಕರು ನಿರ್ದಿಷ್ಟವಾಗಿ ಆ್ಯಂಟಿಬಾಡಿ-ಮೆಡಿಯೇಟೆಡ್ ಇಮ್ಯೂನಿಟಿ ಎಂದು ಕರೆಯುವ ಹ್ಯೂಮರಲ್ ಇಮ್ಯೂನಿಟಿ ಕೇಂದ್ರೀಕರಿಸಿ ಈ ಅಧ್ಯಯನ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು