ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ವಿಶೇಷ | ‘ಅಭಿವೃದ್ಧಿ’ಗಾಗಿ 79,702 ಎಕರೆ ಕಾಡು

ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಯಾದ ಬಳಿಕ 771 ಪ್ರಸ್ತಾವಗಳಿಗೆ ಒಪ್ಪಿಗೆ
Last Updated 13 ನವೆಂಬರ್ 2022, 19:53 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ‘ಅರಣ್ಯ ಸಂರಕ್ಷಣೆ ಕಾಯ್ದೆ 1980’ಗೆ ತಿದ್ದುಪಡಿ ತರಲು ಉಮೇದು ತೋರುತ್ತಿರುವ ಹೊತ್ತಿನಲ್ಲಿಕರ್ನಾಟಕದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಗಣಿಗಾರಿಕೆ, ರಾಷ್ಟ್ರೀಯ ಹೆದ್ದಾರಿ, ವಿದ್ಯುತ್‌ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ‘ಅಭಿವೃದ್ಧಿ’ ಯೋಜನೆಗಳಿಗೆ31,881 ಹೆಕ್ಟೇರ್ (79,702 ಎಕರೆ) ಅರಣ್ಯ ಭೂಮಿಯನ್ನು ಬಳಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

ಕೇಂದ್ರ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿ ತಂದು ಅರಣ್ಯ ಕಾನೂನನ್ನು ಉದಾರಗೊಳಿಸಲು ಮುಂದಾಗಿದೆ. ರಕ್ಷಣೆ, ಗಡಿಯಲ್ಲಿ ಮೂಲಸೌಕರ್ಯ, ಹೆದ್ದಾರಿ ಅಭಿವೃದ್ಧಿ ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಪೂರ್ವಾನುಮತಿ ಪಡೆಯದೆ ಅರಣ್ಯ ಭೂಮಿಯ ಮುಕ್ತ ಬಳಕೆಗೆ ಅವಕಾಶ ನೀಡುವುದು ಇದರ ಉದ್ದೇಶ. ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ಆಕ್ಷೇಪಣೆ ಆಹ್ವಾನಿಸಿತ್ತು. ಇದಕ್ಕೆ ಪರಿಸರವಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪ್ರಭಾವಿ ಕಂಪನಿಗಳು ಹಾಗೂ ಖಾಸಗಿ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ,ಆಕ್ಷೇಪಣೆಗಳನ್ನು ಸಮಗ್ರ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲು ಸರ್ಕಾರ ನಿರ್ಧರಿಸಿದೆ ಎಂದು ಪರಿಸರ ಸಚಿವಾಲಯದ ಮೂಲಗಳು ತಿಳಿಸಿವೆ.

1980ರಿಂದ 2000ರ ಅವಧಿಯಲ್ಲಿ ಸಲ್ಲಿಕೆಯಾದ ಪ್ರಸ್ತಾವನೆಗಳ ಸಂಖ್ಯೆ ಕಡಿಮೆ. 2000ರ ಬಳಿಕ ಹೆಚ್ಚಿನ ಸಂಖ್ಯೆಯ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಅವಧಿಯಲ್ಲಿ ಗಣಿಗಾರಿಕೆ ಉದ್ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲಾಗಿದೆ.ಬಳ್ಳಾರಿ, ಚಿತ್ರದುರ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಸುಮಾರು 5 ಸಾವಿರ ಹೆಕ್ಟೇರ್‌ನಷ್ಟು ಅರಣ್ಯವನ್ನು ಗಣಿಗಾರಿಕೆಗೆ ಬಳಸಲಾಗಿದೆ. ಅಂಕಿ ಅಂಶಗಳ ಪ್ರಕಾರ, ಅರಣ್ಯ ಪ್ರದೇಶದಲ್ಲಿ ಗಣಿ ಚಟುವಟಿಕೆಗಾಗಿ ಒಪ್ಪಿಗೆ ಪಡೆದ ಕಂಪನಿಗಳ ಸಂಖ್ಯೆ 50 ದಾಟುತ್ತದೆ.

ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿ1980ರಿಂದ ಇಲ್ಲಿಯವರೆಗೆ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಸಲ್ಲಿಕೆಯಾದ 771 ಪ್ರಸ್ತಾವನೆಗಳಿಗೆ ಅನುಮತಿ ನೀಡಲಾಗಿದೆ. ನೀರಾವರಿ, ರಸ್ತೆ, ವಿದ್ಯುದ್ದೀಕರಣ, ಗಣಿಗಾರಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅರಣ್ಯ ಭೂಮಿಯನ್ನು ಬಳಸಲು ಅನುಮೋದನೆ ಕೋರಿರುವ 79 ಪ್ರಸ್ತಾವನೆಗಳು ಪರಿಸರ ಸಚಿವಾಲಯದ ಮುಂದೆ ಇದೆ.

ಅರಣ್ಯ ಸಂರಕ್ಷಣೆ ಕಾಯ್ದೆ 1980ರಡಿ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಕೇಂದ್ರ ಅರಣ್ಯ, ಪರಿಸರ ಮತ್ತು ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸ್ತಾವನೆಗಳ ಸಾಧಕ–ಬಾಧಕಗಳನ್ನು ಪರಿಶೀಲಿಸಿ ಸಚಿವಾಲಯ ಅನುಮೋದನೆ ನೀಡುತ್ತದೆ. ಕಳೆದ ಮೂರು ವರ್ಷಗಳಲ್ಲಿ 1,865 ಎಕರೆ ಅರಣ್ಯ ಬಳಕೆಗೆ (48 ಪ್ರಸ್ತಾವನೆಗಳು) ಪೂರ್ವಾನುಮೋದನೆ ನೀಡಲಾಗಿದೆ.

ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವ ವೇಳೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಆದ್ಯತೆ ನೀಡಬೇಕು ಎಂದು 2016ರಲ್ಲಿ ಆದೇಶ ಹೊರಡಿಸಲಾಗಿದೆ. ಬದಲಿಯಾಗಿ ಕಂದಾಯ ಭೂಮಿಯನ್ನು ನೀಡಬೇಕು ಎಂಬ ಷರತ್ತು ಇದೆ. ಕಳೆದ ಮೂರು ವರ್ಷಗಳಲ್ಲಿ 25 ಪ್ರಕರಣಗಳಲ್ಲಿ 425 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT