ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸರಪಳಿ ಕತ್ತರಿಸುವುದು ಹೇಗೆ? ಮಾದರಿಯಾದ ಮಹಾರಾಷ್ಟ್ರದ ಭೋಸಿ ಗ್ರಾಮ

Last Updated 21 ಮೇ 2021, 5:33 IST
ಅಕ್ಷರ ಗಾತ್ರ

ನಾಂದೇಡ್: 6,000 ಜನರನ್ನು ಹೊಂದಿರುವ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಭೋಸಿ ಗ್ರಾಮ, ಕೋವಿಡ್ -19 ಸರಪಳಿಯನ್ನು ಕತ್ತರಿಸುವ ವಿಚಾರದಲ್ಲಿ ಮಾದರಿಯಾಗಿದೆ.

2 ತಿಂಗಳ ಹಿಂದೆ ನಡೆದ ಒಂದು ಮದುವೆ ಕಾರ್ಯಕ್ರಮದ ಬಳಿಕ ಗ್ರಾಮದ ಹುಡುಗಿಯೊಬ್ಬಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಇನ್ನೂ ಐವರಿಗೆ ಸೋಂಕು ತಗುಲಿರುವುದು ಗೊತ್ತಾಯಿತು. ಈ ಸಂದರ್ಭ, ಜಿಲ್ಲಾ ಪರಿಷತ್ ಸದಸ್ಯ ಪ್ರಕಾಶ್ ದೇಶಮುಖ್ ಮುಂಚೂಣಿಯಲ್ಲಿ ನಿಂತು ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೋವಿಡ್ ಟೆಸ್ಟ್ ಕ್ಯಾಂಪ್ ಏರ್ಪಡಿಸಿದರು.

ರ್‍ಯಾಪಿಡ್ ಆ್ಯಂಟಿಜೆನ್ ಮತ್ತು ಆರ್‌ಟಿ–ಪಿಸಿಆರ್ ಟೆಸ್ಟ್‌ಗಳಲ್ಲಿ 119 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತು.

ಬಳಿಕ, ಸೋಂಕಿತರಿಂದ ಮತ್ತಷ್ಟು ಜನರಿಗೆ ಸೋಂಕು ಹರಡುವುದನ್ನು ತಡೆಯಲು ದೈಹಿಕ ಅಂತರವೊಂದೇ ಸೂಕ್ತ ಮಾರ್ಗವೆಂದು ಅರಿತ ದೇಶ್‌ಮುಖ್, ಸೋಂಕಿತರನ್ನು 15–17 ದಿನಗಳ ಕಾಲ ಹೊಲದಲ್ಲಿ ಹೋಗಿ ವಾಸಿಸುವಂತೆ ಸೂಚಿಸಿದರು. ಜಮೀನಿಲ್ಲದ ಜನರಿಗೆ ತಮ್ಮದೇ (40X60) ಜಾಗದಲ್ಲಿ ಶೆಡ್ ನಿರ್ಮಿಸಿ ಪ್ರತ್ಯೇಕಿಸುವ ವ್ಯವಸ್ಥೆ ಮಾಡಿದರು.

ಅಂಗನವಾಡಿಯ ಆರೋಗ್ಯ ಕಾರ್ಯಕರ್ತರೊಬ್ಬರು ನಿತ್ಯ ಸೋಂಕಿತರು ವಾಸವಿದ್ದ ಹೊಲಗಳಿಗೆ ತೆರಳಿ, ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಅಲ್ಲಿಯೇ, ಆಹಾರ ಮತ್ತು ಔಷಧವನ್ನು ಪೂರೈಕೆ ಮಾಡಲಾಯಿತು. 15–20 ದಿನಗಳ ಬಳಿಕ ಕೋವಿಡ್ ನೆಗೆಟಿವ್ ಬಂದ ಹಲವರು ಮನೆಗೆ ವಾಪಸ್ ಆದರು.

‘ಹಳ್ಳಿಗರನ್ನು ಸೋಂಕಿನಿಂದ ರಕ್ಷಿಸಲು ಪ್ರತ್ಯೇಕಿಸುವುದು ಏಕೈಕ ಮಾರ್ಗವಾಗಿದೆ’ ಎಂದು 15 ದಿನ ಹೊಲದಲ್ಲಿ ಕ್ವಾರಂಟೈನ್ ಆಗಿದ್ದ ಲಕ್ಷ್ಮಿಬಾಯಿ ಅಕೆಮ್ವಾಡ್ ಹೇಳುತ್ತಾರೆ.

ಪಿಐಬಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಭೋಸಿ ಗ್ರಾಮದ ಮಾದರಿಯು ಗ್ರಾಮಸ್ಥರು, ಜನ ಪ್ರತಿನಿಧಿಗಳು ಮತ್ತು ಆಡಳಿತದ ನಡುವಿನ ಜಂಟಿ ಸಮನ್ವಯಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಜಿಲ್ಲೆಯ ಇತರ ಗ್ರಾಮಗಳಲ್ಲಿ ಮತ್ತು ಇತರೆಡೆಗಳಲ್ಲಿ ಅನುಷ್ಠಾನಕ್ಕೆ ಅರ್ಹವಾಗಿದೆ ಎಂದು ನಾಂದೇಡ್ ಜಿಲ್ಲಾ ಪರಿಷತ್ ಸಿಇಒ ವರ್ಷಾ ಠಾಕೂರ್ ಘುಗೆ ಹೇಳಿದ್ದಾರೆ.

‘ಸಾಮೂಹಿಕ ಸೋಂಕು ಪತ್ತೆಯಾಗಿ ಒಂದೂವರೆ ತಿಂಗಳು ಕಳೆದಿದೆ. ಅಂದಿನಿಂದ, ಹಳ್ಳಿಯಲ್ಲಿ ಯಾವುದೇ ಹೊಸ ರೋಗಿಗಳು ಕಂಡುಬಂದಿಲ್ಲ. ಪ್ಲೇಗ್‌ನ ದಿನಗಳಲ್ಲಿ ಮಾಡುತ್ತಿದ್ದಂತೆ ಹಳ್ಳಿಗಳಲ್ಲಿ ಕೋವಿಡ್‌ ಸೋಂಕು ತೊಡೆದುಹಾಕಲು ಹಳೆಯ ಪ್ರತ್ಯೇಕತೆಯ ಮಾದರಿಯನ್ನು ಅಳವಡಿಸಿಕೊಂಡರೆ, ಸಾಂಕ್ರಾಮಿಕದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು’ ಎಂದು ದೇಶ್‌ಮುಖ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT