ಭಾನುವಾರ, ಜೂನ್ 26, 2022
26 °C

ಬಿಕೆಯು ಒಡಕಿನ ಬಳಿಕ ಟಿಕಾಯತ್ ಸಹೋದರರಿಗೆ ಸಂಕಷ್ಟ: ಸರ್ಕಾರಿ ಜಾಗ ಒತ್ತುವರಿ ಆರೋಪ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಮುಜಾಫರ್‌ನಗರ: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಇಬ್ಭಾಗವಾದ ಬಳಿಕ ಟಿಕಾಯತ್ ಸಹೋದರರಿಗೆ ಸಂಕಷ್ಟ ಹೆಚ್ಚಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಆರೋಪ ಅವರ ವಿರುದ್ಧ ಕೇಳಿಬಂದಿದೆ.

ನರೇಶ್ ಟಿಕಾಯತ್ ಹಾಗೂ ಅವರ ಸಹೋದರ ರಾಕೇಶ್ ಟಿಕಾಯತ್ ಅವರು ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಸಿಸೌಲಿ ಗ್ರಾಮದ ನಿವಾಸಿ ರಾಹುಲ್ ಮುಖಿಯಾ ಆರೋಪಿಸಿದ್ದಾರೆ.

‘ಸಿಸೌಲಿಯಲ್ಲಿ ಕೊಳ ನಿರ್ಮಾಣಕ್ಕೆಂದು ದಶಕದ ಹಿಂದೆ ಸರ್ಕಾರದಿಂದ ಜಮೀನು ಮಂಜೂರು ಮಾಡಲಾಗಿತ್ತು. ಕೊಳವನ್ನು ಮಣ್ಣುಹಾಕಿ ಮುಚ್ಚಿಸಿದ್ದ ಟಿಕಾಯತ್ ಸಹೋದರರು ಆ ಜಾಗದಲ್ಲಿ ಅಕ್ರಮವಾಗಿ ವಸತಿ ಕಟ್ಟಡ ಕಟ್ಟಿಸಿದ್ದಾರೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದೆ. ಈ ವಿಚಾರ ಕೇಂದ್ರ ಕೃಷಿ ಮತ್ತು ಆಹಾರ ಸಂಸ್ಕರಣೆ ಇಲಾಖೆಯ ರಾಜ್ಯ ಖಾತೆ ಸಚಿವ ಡಾ. ಸಂಜೀವ ಬನ್ಸಲ್ ಅವರ ಗಮನಕ್ಕೂ ಬಂದಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ರಾಹುಲ್ ಮುಖಿಯಾ ಹೇಳಿದ್ದಾರೆ.

‘ದೂರು ದಾಖಲಾದರೆ ಅದರಂತೆ ತನಿಖೆ ನಡೆಸಲಾಗುವುದು. ತನಿಖೆ ನಡೆಸಿ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬುಢಾನ ಪ್ರದೇಶದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಡಳಿತವು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವುದಾಗಿ ಮುಖಿಯಾ ಎಚ್ಚರಿಕೆ ನೀಡಿದ್ದಾರೆ.

ಆದರೆ, ತಮ್ಮ ವಿರುದ್ಧದ ಆರೋಪ ಆಧಾರರಹಿತ ಎಂದು ನರೇಶ್ ಟಿಕಾಯತ್ ಹಾಗೂ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ತನಿಖೆಗೆ ಸಿದ್ಧವಿರುವುದಾಗಿಯೂ ಅವರು ಹೇಳಿದ್ದಾರೆ.

‘ಈ ಜನ ನಮ್ಮ ಮೇಲೆ ಯಾಕೆ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ. ನಾವು ಸರ್ಕಾರಿ ಜಾಗ ಒತ್ತುವರಿ ಮಾಡಿಲ್ಲ. ಎಲ್ಲ ಆರೋಪಗಳೂ ಆಧಾರರಹಿತ ಎಂದು’ ನರೇಶ್ ಟಿಕಾಯತ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷ ಕಾಲ ದೆಹಲಿಯ ಗಡಿಗಳಲ್ಲಿ ನಡೆದಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಕೆಯು ಇತ್ತೀಚೆಗೆ ಇಬ್ಭಾಗವಾಗಿತ್ತು. ‘ಯೂನಿಯನ್‌’ನ ಒಂದು ತಂಡವು ‘ರಾಜಕೀಯೇತರ ಭಾರತೀಯ ಕಿಸಾನ್ ಯೂನಿಯನ್’ ಎಂಬ ಹೊಸ ಸಂಘಟನೆ ಹುಟ್ಟುಹಾಕಿರುವುದಾಗಿ ತಿಳಿಸಿತ್ತು. ಅಧ್ಯಕ್ಷ ಸ್ಥಾನದಿಂದ ನರೇಶ್ ಟಿಕಾಯತ್ ಮತ್ತು ರಾಷ್ಟ್ರೀಯ ವಕ್ತಾರನ ಸ್ಥಾನದಿಂದ ರಾಕೇಶ್ ಟಿಕಾಯತ್ ಅವರನ್ನು ತೆರವುಗೊಳಿಸಲಾಗಿದೆ ಎಂದು ‘ರಾಜಕೀಯೇತರ ಬಿಕೆಯು’ ನಾಯಕರು ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು