ಭಾನುವಾರ, ಮಾರ್ಚ್ 7, 2021
32 °C

ಒವೈಸಿಯ ಎಐಎಂಐಎಂ ಬಿಜೆಪಿಯ 'ಬಿ' ಟೀಂ, ಬಿಹಾರ ಚುನಾವಣೆಯೇ ಅದಕ್ಕೆ ಸಾಕ್ಷಿ: ಮಮತಾ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವು 'ಬಿಜೆಪಿಯ ಬಿ ಟೀಂ' ಎಂಬುದು ಬಹಿರಂಗಗೊಂಡಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಮುಸ್ಲಿಂ ಸಮುದಾಯದ ಪ್ರಾಬಲ್ಯವಿರುವ ಮುರ್ಷಿದಾಬಾದ್‌ನಲ್ಲಿ ಶುಕ್ರವಾರ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಮಮತಾ ಮಾತನಾಡಿದ್ದಾರೆ. ಬಿಜೆಪಿ ಮತ್ತು ಇತರ ವಿಭಜಕ ಶಕ್ತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವಂತೆ ಪಕ್ಷದ ಮುಖಂಡರಿಗೆ ಅವರು ಕರೆ ನೀಡಿದ್ದಾರೆ.

'ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೇಲೆ ಒವೈಸಿ ನೇತೃತ್ವದ ಎಐಐಎಂಐಎಂ ಪಕ್ಷವು ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ. ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಎಐಐಎಂಐಎಂ ಪಕ್ಷವು ಬಿಜೆಪಿಯ ಬಿ ಟೀಂ ಎಂಬುದು ಬಹಿರಂಗಗೊಂಡಿದೆ' ಎಂದು ಮಮತಾ ತಿಳಿಸಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯು 22 ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ.

ಬಿಹಾರ ಚುನಾವಣೆಯ ಫಲಿತಾಂಶದಿಂದ ಉತ್ಸಾಹದಲ್ಲಿರುವ ಒವೈಸಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರಗಳನ್ನು ಗೆದ್ದಿರುವ ಎಐಐಎಂಐಎಂ ಪಶ್ಚಿಮ ಬಂಗಾಳದಲ್ಲಿ ಹೊಸ ರಾಜಕೀಯ ಲೆಕ್ಕಾಚಾರವನ್ನು ಹುಟ್ಟುಹಾಕಿದೆ.

ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಅವರು ಭಾನುವಾರ ಪಶ್ಚಿಮ ಬಂಗಾಳದ ವಿವಿಧ ಮುಸ್ಲಿಂ ಮುಖಂಡರನ್ನು ಭೇಟಿಯಾಗಿದ್ದು, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ.

ಪಶ್ಚಿಮ ಬಂಗಾಳದ ಮತದಾರರಲ್ಲಿ ಶೇ. 30ರಷ್ಟು ಮತದಾರರು ಮುಸ್ಲಿಮರೇ ಆಗಿದ್ದಾರೆ. ಅತಿ ಹೆಚ್ಚು ಮುಸ್ಲಿಂ ಮತಗಳನ್ನು ಹೊಂದಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಜಮ್ಮು ಕಾಶ್ಮೀರದ ನಂತರದ ಸ್ಥಾನದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು