ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ವರ್ಷ ವಾಯು ಮಾಲಿನ್ಯದಿಂದಾಗಿ 17 ಲಕ್ಷ ಜನ ಸಾವು, ಶೇ 1.4 ಜಿಡಿಪಿ ನಷ್ಟ

Last Updated 23 ಡಿಸೆಂಬರ್ 2020, 7:16 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ವಾಯುಮಾಲಿನ್ಯದೊಂದಿಗೆ ಸೆಣಸುತ್ತಿರುವಾಗಲೇ ಹೊಸ ಅಧ್ಯಯನವೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಕಳೆದ ವರ್ಷ 17 ಲಕ್ಷ ಭಾರತೀಯರು ವಿಷಕಾರಿ ಗಾಳಿಯಿಂದಾಗಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಕಲುಷಿತ ಗಾಳಿಯಿಂದಾಗುವ ಸಾವುಗಳು ಮತ್ತು ಕಾಯಿಲೆಗಳಿಂದಾಗಿ ಭಾರತದ ಜಿಡಿಪಿಯ ಶೇ 1.4 ರಷ್ಟು ನಷ್ಟಕ್ಕೆ ಕಾರಣವಾಗಿದೆ ಎಂದಿದೆ.

ಲಾನ್ಸೆಟ್ ಪ್ಲಾನಿಟರಿ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 2019 ರಲ್ಲಿ ವಾಯುಮಾಲಿನ್ಯದಿಂದ ಭಾರತದಲ್ಲಿ ಅಂದಾಜು 17 ಲಕ್ಷ ಜನರು ಮೃತಪಟ್ಟಿದ್ದರೆ, ಇದು ದೇಶದ ಒಟ್ಟು ಸಾವುಗಳಲ್ಲಿ ಶೇ 18 ರಷ್ಟಿದೆ. ಅಕಾಲಿಕ ಮರಣದಿಂದ ಉಂಟಾಗುವ ಆರ್ಥಿಕ ಕೊರತೆ ಮತ್ತು ವಾಯುಮಾಲಿನ್ಯದಿಂದ ಉಂಟಾಗುವ ಕಾಯಿಲೆಯಿಂದಾಗುವ ನಷ್ಟವು ₹ 2,60,000 ಕೋಟಿಗೆ ಸಮವಾಗಿದೆ.

ಒಟ್ಟಾರೆಯಾಗಿ ದೇಶಕ್ಕೆ ಜಿಡಿಪಿಯಲ್ಲಿನ ಆರ್ಥಿಕ ನಷ್ಟವು ಉತ್ತರಪ್ರದೇಶದಲ್ಲಿ (ಜಿಡಿಪಿಯ ಶೇ 2.15) ಮತ್ತು ಬಿಹಾರದಲ್ಲಿ (ಶೇ 1.95) ಗರಿಷ್ಠವಾಗಿದೆ. ಆದರೆ, ದಕ್ಷಿಣ ಭಾರತದ ಕರ್ನಾಟಕ (ಶೇ 1.22) ಮೊದಲ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ (ಶೇ 1.09) ಮತ್ತು ತಮಿಳುನಾಡು (ಶೇ 1.06) ನಂತರದ ಸ್ಥಾನದಲ್ಲಿವೆ.

ಕಳೆದ ಎರಡು ದಶಕಗಳಲ್ಲಿ ಮನೆಗಳಿಂದ ಉಂಟಾಗುವ ವಾಯುಮಾಲಿನ್ಯ ಪ್ರಮಾಣವು ಕಡಿಮೆಯಾಗುತ್ತಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದರ ಪರಿಣಾಮವಾಗಿ 1990 ರಿಂದ 2019 ರವರೆಗೆ ಸಾವಿನ ಪ್ರಮಾಣ ಶೇ 64 ರಷ್ಟು ಕಡಿಮೆಯಾಗಿದೆ. ಆದರೆ, ಹೊರಗೆ ಸುತ್ತುವರಿದಿರುವ ವಾಯುಮಾಲಿನ್ಯದಿಂದಾಗಿ ಈ ಅವಧಿಯಲ್ಲಿ ಸಾವಿನ ಪ್ರಮಾಣವು ಶೇ 115ರಷ್ಟು ಹೆಚ್ಚಾಗಿದೆ.

ವಾಯು ಮಾಲಿನ್ಯದಿಂದ ಉಂಟಾಗುವ ರೋಗದ ಹೊರೆಯು ಹೇಗೆ ಮನೆಯ ಮಾಲಿನ್ಯದಿಂದ ತ್ಯಾಜ್ಯ ಸುಡುವಿಕೆ, ಕೈಗಾರಿಕಾ, ವಾಹನ ಮತ್ತು ಧೂಳು ಮಾಲಿನ್ಯದಿಂದ ಉಂಟಾಗುವ ಹೊರಾಂಗಣ ವಾಯುಮಾಲಿನ್ಯಕ್ಕೆ ಬದಲಾಗಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

ಆರ್ಥಿಕ ನಷ್ಟವನ್ನು ಲೆಕ್ಕಾಚಾರ ಮಾಡುವಾಗ ಸಂಶೋಧಕರು, ರಾಜ್ಯಗಳನ್ನು ಅದರ ಜಿಡಿಪಿಗೆ ಅನುಗುಣವಾಗಿ ಮತ್ತು ತಲಾದಾಯ ಆರ್ಥಿಕ ಕುಸಿತದ (per capita economic loss) ದೃಷ್ಟಿಯಿಂದ ಹೋಲಿಕೆ ಮಾಡಿದ್ದಾರೆ.

ಬಡ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಮತ್ತು ಛತ್ತೀಸಗಡಗಳನ್ನು ಜಿಡಿಪಿ ಪರಿಭಾಷೆಗೆ ಹೋಲಿಸಿದರೆ ಹೆಚ್ಚು ತೊಂದರೆಯನ್ನು ಅನುಭವಿಸುತ್ತಿವೆ. ಅಲ್ಲದೆ ವಾಯುಮಾಲಿನ್ಯದಿಂದಾಗಿ ದೆಹಲಿಯಲ್ಲಿ ಅತಿ ಹೆಚ್ಚು ತಲಾದಾಯ ಆರ್ಥಿಕ ನಷ್ಟವಾಗಿದ್ದರೆ, ನಂತರದ ಸ್ಥಾನದಲ್ಲಿ ಹರಿಯಾಣ ರಾಜ್ಯವಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಪ್ರಾಧ್ಯಾಪಕ ಮತ್ತು ಅಧ್ಯಯನದ ಪ್ರಮುಖ ತನಿಖಾಧಿಕಾರಿ ಲಲಿತ್ ದಾಂಡೋನಾ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ವಾಯುಮಾಲಿನ್ಯ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಾಗಿ ಜಿಡಿಪಿಯ ಶೇ 0.4ರಷ್ಟು ಅಂದಾಜು ವೆಚ್ಚವಿದೆ.2024 ರ ವೇಳೆಗೆ ಭಾರತದ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್‌ಗೆ ತಲುಪುವ ಆಕಾಂಕ್ಷೆಯನ್ನು ಹೊಂದಿರುವುದರಿಂದಾಗಿ ನಿರ್ದಿಷ್ಟ ವಾಯುಮಾಲಿನ್ಯ ನಿಯಂತ್ರಣ ತಂತ್ರಗಳಲ್ಲಿ ಹೂಡಿಕೆ ಮಾಡುವುದರಿಂದಾಗಿ ಭಾರತವು ಲಾಭ ಪಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಅಧ್ಯಯನವು ಸುಧಾರಿತ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ 2019 ವಿಧಾನಗಳ ಆಧಾರದ ಮೇಲೆ ಪ್ರತಿ ರಾಜ್ಯದಲ್ಲಿ ವಾಯುಮಾಲಿನ್ಯದಿಂದ ಉಂಟಾದ ಸಾವುಗಳು ಮತ್ತು ಕಾಯಿಲೆಯ ನವೀಕೃತ ಅಂದಾಜುಗಳನ್ನು ಒದಗಿಸುತ್ತದೆ, ಈ ಹೊರೆಯು ಈ ಹಿಂದೆ ಅಂದಾಜಿಸಿದ್ದಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿದೆ.

ಭಾರತದಲ್ಲಿನ ವಾಯುಮಾಲಿನ್ಯದಿಂದಾಗುವ ಹೆಚ್ಚಿನ ಹೊರೆ ಮತ್ತು ಉತ್ಪಾದನೆಯ ಮೇಲಿನ ಅದರ ಗಣನೀಯ ವ್ಯತಿರಿಕ್ತ ಪರಿಣಾಮವು ಭಾರತದ ಒಟ್ಟಾರೆ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಡ್ಡಿಯಾಗಬಹುದು ಎಂದು ಅಧ್ಯಯನ ತಿಳಿಸಿದೆ.

ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶಕ್ಕೆ ಸಂಬಂಧಿತ ಶೇ 40ರಷ್ಟು ರೋಗಗಳು ಉಂಟಾದರೆ, ಇನ್ನುಳಿದ ಶೇ 60ರಷ್ಟು ರಕ್ತಕೊರತೆ ಹೃದ್ರೋಗ, ಪಾರ್ಶ್ವವಾಯು, ಮಧುಮೇಹ ಮತ್ತು ಪ್ರಸವಪೂರ್ವ ಜನನಕ್ಕೆ ಸಂಬಂಧಿಸಿದ ನವಜಾತ ಶಿಶುಗಳ ಸಾವುಗಳು ಮಾನವನ ಆರೋಗ್ಯದ ಮೇಲೆ ಉಂಟಾಗುತ್ತಿರುವ ವಾಯುಮಾಲಿನ್ಯದ ವ್ಯಾಪಕ ಪರಿಣಾಮವನ್ನು ತೋರಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT