ನವದೆಹಲಿ: ತೆಲುಗು ಚಲನಚಿತ್ರ ‘ಆರ್‌ಆರ್‌ಆರ್’ನ ಹಾಡು ‘ನಾಟು–ನಾಟು’ ಮತ್ತು ತಮಿಳು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಇದು ಭಾರತೀಯ ಚಿತ್ರರಂಗಕ್ಕೆ ಮಹತ್ವದ ದಿನವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ, ಭಾರತೀಯ ಚಿತ್ರರಂಗಕ್ಕೆ ಒಂದು ಹೆಗ್ಗುರುತಿನ ದಿನ. ‘ನಾಟು–ನಾಟು’ ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಈ ಹಾಡು ಭಾರತೀಯರು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಸಂಗೀತ ಪ್ರೇಮಿಗಳ ಬಾಯಲ್ಲಿತ್ತು. ಸಾಧನೆಗಾಗಿ ಇಡೀ ತಂಡಕ್ಕೆ, ಚಿತ್ರದ ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಕೀರವಾಣಿ ಅವರಿಗೆ ಅಭಿನಂದನೆಗಳು ಎಂದು ಶಾ ಹೇಳಿದ್ದಾರೆ.
ರಾಜಮೌಳಿ ನಿರ್ದೇಶನದ ತೆಲುಗು ಆಕ್ಷನ್ ಚಿತ್ರ ‘ಆರ್‌ಆರ್‌ಆರ್’ನ ಹಾಡು ‘ನಾಟು–ನಾಟು’ ಗೀತೆ ‘ಅತ್ಯುತ್ತಮ ಮೂಲ ಗೀತೆ’ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಗೀತೆಯಾಗಿದೆ. ತಮಿಳಿನ ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’‘ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್’ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಸಾಕ್ಷ್ಯಚಿತ್ರವಾಗಿದೆ.
ಮತ್ತೊಂದು ಟ್ವೀಟ್‌ನಲ್ಲಿ, ಗೃಹ ಸಚಿವರು, ‘ದಿ ಎಲಿಫೆಂಟ್ ವಿಸ್ಪರರ್ಸ್’ತಂಡಕ್ಕೆ ಅಭಿನಂದನೆಗಳು. ಈ ಚಲನಚಿತ್ರವು ಆನೆಗಳನ್ನು ಉಳಿಸುವಲ್ಲಿ ಭಾರತದ ಪ್ರಯತ್ನಗಳನ್ನು ವಿವರಿಸುತ್ತದೆ. ಪ್ರಶಸ್ತಿಯು ಭಾರತೀಯ ಚಲನಚಿತ್ರೋದ್ಯಮ ಸಾಮರ್ಥ್ಯವನ್ನು ತೋರಿಸುತ್ತದೆ ಮತ್ತು ಯುವ ಚಲನಚಿತ್ರ ನಿರ್ಮಾಪಕರನ್ನು ಪ್ರೇರೇಪಿಸುತ್ತದೆ ಎಂದು ಶಾ ಬರೆದುಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.