ಬುಧವಾರ, ಮೇ 25, 2022
29 °C

ಅಮಿತ್‌ ಶಾ ಇಂದು ಅಯೋಧ್ಯೆಗೆ; ಉತ್ತರ ಪ್ರದೇಶದಲ್ಲಿ 3 ಸಾರ್ವಜನಿಕ ಸಭೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಲಖನೌ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು ಅಯೋಧ್ಯೆಯ ರಾಮ ಲಲ್ಲಾ ಮತ್ತು ಹನುಮಾನಗಢಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಉತ್ತರ ಪ್ರದೇಶದಲ್ಲಿ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಬಿಜೆಪಿಯ ಜನ ವಿಶ್ವಾಸ ಯಾತ್ರೆಯ ಭಾಗವಾಗಿ ನಡೆಯುತ್ತಿರುವ ಸಾರ್ವಜನಿಕ ಸಭೆಗಳಲ್ಲಿ ಅಮಿತ್‌ ಶಾ ಭಾಗಿಯಾಗಲಿದ್ದಾರೆ.

ಉತ್ತರ ಪ್ರದೇಶ ಬಿಜೆಪಿ ಘಟಕವು ಅಮಿತ್‌ ಶಾ ಕಾರ್ಯಕ್ರಮದ ಕುರಿತು ವೇಳಾ ಪಟ್ಟಿ ಪ್ರಕಟಿಸಿದ್ದು, ಇಂದು ಬೆಳಿಗ್ಗೆ 10:30ಕ್ಕೆ ಅಯೋಧ್ಯೆಯ ಹನುಮಾನಗಢಿ ದೇವಾಲಯಕ್ಕೆ ಭೇಟಿ, 11ಕ್ಕೆ ರಾಮ ಲಲ್ಲಾದಲ್ಲಿ ದರ್ಶನ ಪಡೆದು 12ಕ್ಕೆ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಸಂತ ಕಬೀರ್‌ ನಗರದಲ್ಲಿ ಮತ್ತೊಂದು ಸಾರ್ವಜನಿಕ ಸಭೆ ನಡೆಯಲಿದೆ. ಬರೇಲಿಯಲ್ಲಿ 3:30ಕ್ಕೆ ಅಮಿತ್‌ ಶಾ ಅವರು ರೋಡ್‌ ಶೋ ಮೂಲಕ ತೆರಳಿ ಸಂಜೆ 4ಕ್ಕೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಹಿನ್ನೆಯಲ್ಲಿ ಅಮಿತ್‌ ಶಾ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 403 ಕ್ಷೇತ್ರಗಳ ಪೈಕಿ ಬಿಜೆಪಿಯು 312 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಅದೇ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ (ಎಸ್‌ಪಿ) 47 ಸ್ಥಾನಗಳು, ಬಿಎಸ್‌ಪಿ 19 ಸ್ಥಾನಗಳು ಹಾಗೂ ಕಾಂಗ್ರೆಸ್‌ ಕೇವಲ 7 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು.

 

ಕೋವಿಡ್ ಪ್ರಕರಣಗಳಲ್ಲಿ ಎರಡು ವಾರಗಳಿಂದ ದಿಢೀರ್ ಏರಿಕೆ ಕಂಡುಬಂದಿದ್ದು, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಗುರುವಾರ ಎಚ್ಚರಿಕೆಯನ್ನೂ ನೀಡಿದೆ. ಬುಧವಾರ ಒಂಬತ್ತು ಸಾವಿರ ಇದ್ದ ಪ್ರಕರಣಗಳ ಸಂಖ್ಯೆ 24 ಗಂಟೆಯಲ್ಲಿ 13 ಸಾವಿರಕ್ಕೆ ಏರಿಕೆಯಾಗಿದೆ. ಈ ನಡುವೆಯೂ ರಾಜಕೀಯ ಪಕ್ಷಗಳು ರ್‍ಯಾಲಿಗಳು, ಸಾರ್ವಜನಿಕ ಸಭೆಗಳನ್ನು ಮುಂದುವರಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು