ಗುರುವಾರ , ಜೂನ್ 30, 2022
22 °C

ರೈತರ ಸಮಸ್ಯೆ ಬಗೆಹರಿಯದಿದ್ದರೆ ಉಪವಾಸ: ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ತಮ್ಮ ಬೇಡಿಕೆಯನ್ನು ಮುಂದಿನ ಜನವರಿ ಒಳಗಾಗಿ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸೋಮವಾರ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಇದು ತಮ್ಮ 'ಅಂತಿಮ ಹೋರಾಟ'ವಾಗಲಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಹುಟ್ಟೂರು, ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಳೆಗಣಸಿದ್ಧಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರೆ, 'ಕಳೆದ ಮೂರು ವರ್ಷಗಳಿಂದ ನಾನು ಕೃಷಿಕರಿಗಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ. ಆದರೆ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಏನೂ ಮಾಡಿಲ್ಲ,' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

'ಸರ್ಕಾರವು ಕೇವಲ ಖಾಲಿ ಭರವಸೆಗಳನ್ನು ನೀಡುತ್ತಿದೆ. ಇದರಿಂದಾಗಿ ನನಗೆ ಯಾವುದೇ ನಂಬಿಕೆ ಉಳಿದಿಲ್ಲ (ಸರ್ಕಾರದ ಮೇಲೆ). ನನ್ನ ಬೇಡಿಕೆಗಳ ಕುರಿತಂತೆ ಕೇಂದ್ರವು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡೋಣ. ಅವರು ಒಂದು ತಿಂಗಳ ಸಮಯ ಕೋರಿದ್ದಾರೆ. ಹಾಗಾಗಿ ನಾನು ಜನವರಿ ಅಂತ್ಯದವರೆಗೆ ಅವರಿಗೆ ಸಮಯ ನೀಡಿದ್ದೇನೆ. ನನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ, ನಾನು ಉಪವಾಸ ಸತ್ಯಾಗ್ರಹವನ್ನು ಪುನರಾರಂಭಿಸುತ್ತೇನೆ. ಇದು ನನ್ನ ಅಂತಿಮ ಪ್ರತಿಭಟನೆಯಾಗಲಿದೆ,' ಎಂದು 83 ವರ್ಷದ ಹಜಾರೆ ಹೇಳಿದರು.

ಡಿಸೆಂಬರ್ 14 ರಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಅವರಿಗೆ ಪತ್ರ ಬರೆದಿದ್ದ ಅಣ್ಣಾ ಹಜಾರೆ, ಎಂಎಸ್ ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಮತ್ತು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗಕ್ಕೆ (ಸಿಎಸಿಪಿ) ಸ್ವಾಯತ್ತತೆ ನೀಡಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹದ ನಡೆಸುವ ಎಚ್ಚರಿಕೆ ನೀಡಿದ್ದರು.

ಈ ಮಧ್ಯೆ ಹಜಾರೆ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದ ಮಹಾರಾಷ್ಟ್ರದ ಬಿಜೆಪಿ ಹಿರಿಯ ಮುಖಂಡ, ವಿಧಾನಸಭೆ ಮಾಜಿ ಸ್ಪೀಕರ್ ಹರಿಭೌ ಬಾಗಡೆ, ಕೇಂದ್ರವು ಜಾರಿಗೆ ತರುತ್ತಿರುವ ಮೂರು ಕೃಷಿ ಕಾನೂನುಗಳ ಕುರಿತು ವಿವರಣೆ ನೀಡಿದ್ದರು.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶದ ರೈತರು ದೆಹಲಿ ಹೊರ ವಲಯದಲ್ಲಿ ಕಳೆದೊಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಮತ್ತು ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಎಂಬುದು ಅವರ ಮುಖ್ಯ ಬೇಡಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು