ನವದೆಹಲಿ: ಭಯೋತ್ಪಾದನೆ ತಡೆ ಕಾಯ್ದೆ ಅಥವಾ ಅಪರಾಧ ತಡೆಯ ಇನ್ನಾವುದೇ ಕಾನೂನನ್ನು ಬಳಸಿಕೊಂಡುಭಿನ್ನಮತವನ್ನು ದಮನ ಮಾಡಲು ಯತ್ನಿಸಬಾರದು. ಒಂದೇ ಒಂದು ದಿನದ ಮಟ್ಟಿಗಾದರೂ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿಯುವುದು ಅತಿಯಾದ ನಡವಳಿಕೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ‘ರಕ್ಷಣೆಯ ಮೊದಲ ಹಂತ’ದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ– ಅಮೆರಿಕ ಕಾನೂನು ಬಾಂಧವ್ಯ ಕುರಿತು ನಡೆದ ಜಂಟಿ ಬೇಸಿಗೆ ಸಮಾವೇಶದಲ್ಲಿ ಅವರು ಮಾತನಾಡಿದರು. ಪೌರರಿಗೆ ಕಿರುಕುಳ ನೀಡಲು ಮತ್ತು ಅವರ ಸ್ವಾತಂತ್ರ್ಯವನ್ನು ಕಸಿಯಲು ಯಾವ ಕಾಯ್ದೆಯೂ ಬಳಕೆ ಆಗಬಾರದು ಎಂದು ಚಂದ್ರಚೂಡ್ ಪ್ರತಿಪಾದಿಸಿದರು.
‘ಜನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದರ ವಿರುದ್ಧ ನ್ಯಾಯಾಲಯಗಳು ಮೊದಲ ಹಂತದ ರಕ್ಷಣೆ ಆಗಿರಬೇಕು ಎಂದು ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿಯೇ ಸ್ಪಷ್ಟವಾಗಿ ಹೇಳಿದ್ಧೇನೆ’ ಎಂಬುದನ್ನು ಅವರು ನೆನಪಿಸಿದರು. ತಮ್ಮ ನಿರ್ಧಾರಗಳು ವ್ಯವಸ್ಥೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ ಎಂಬುದರ ಅರಿವು ನ್ಯಾಯಾಧೀಶರಿಗೆ ಇರಬೇಕು ಎಂದೂ ಅವರು ಹೇಳಿದರು.
ಬುಡಕಟ್ಟು ಜನರಪರ ಹೋರಾಟಗಾರ, 84 ವರ್ಷ ವಯಸ್ಸಿನ ಸ್ಟ್ಯಾನ್ ಸ್ವಾಮಿ ಅವರು ಸೆರೆಯಲ್ಲಿರುವಾಗಲೇ ಮೃತಪಟ್ಟ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವುದರ ನಡುವೆಯೇ ಚಂದ್ರಚೂಡ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ. ಎಲ್ಗರ್ ಪರಿಷತ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ಟ್ಯಾನ್ ಸ್ವಾಮಿ ಅವರನ್ನು ಭಯೋತ್ಪಾದನೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಜಾಮೀನು ಅರ್ಜಿಯು ವಿಚಾರಣೆ ಹಂತದಲ್ಲಿರುವಾಗಲೇ ಅವರು ಕಳೆದ ವಾರ ಮುಂಬೈನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯ ಸಂಬಂಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಅಸ್ಸಾಂನ ಹೋರಾಟಗಾರ ಮತ್ತು ಶಾಸಕ ಅಖಿಲ್ ಗೊಗೊಯಿ ಅವರು 17 ತಿಂಗಳ ಜೈಲುವಾಸದ ಬಳಿಕ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.