ಶನಿವಾರ, ನವೆಂಬರ್ 28, 2020
20 °C
ಮಧ್ಯಂತರ ಜಾಮೀನು ಸೇರಿದಂತೆ ಎಫ್‌ಐಆರ್‌ ರದ್ದತಿಗೆ ಕೋರಿಕೆ

ಬಾಂಬೆ ಹೈಕೋರ್ಟ್‌ನಲ್ಲಿ ಶುಕ್ರವಾರ ಅರ್ನಬ್‌ ಅರ್ಜಿ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: 2018ರಲ್ಲಿ ಅನ್ವಯ್‌ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಂಧನಕ್ಕೊಳಗಾಗಿರುವ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಮಧ್ಯಂತರ ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ (ಇಂದು) ಶುಕ್ರವಾರ ನಡೆಯಲಿದೆ.

‘ನನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ’ ಎಂದು ಆರೋಪಿಸಿರುವ ಅರ್ನಬ್‌, ಎಫ್‌ಐಆರ್‌ ರದ್ದು ಪಡಿಸುವ ಜೊತೆಗೆ ತನಿಖೆಗೆ ತಡೆ ನೀಡಬೇಕು. ತಮ್ಮನ್ನು ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಮತ್ತು ಇತರೆ ಪ್ರತಿವಾದಿಗಳ ವಾದ ಕೇಳದೆಯೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್‌.ಎಸ್‌.ಶಿಂಧೆ ಮತ್ತು ಎಂ.ಎಸ್‌.ಕರ್ಣಿಕ್‌ ಅವರನ್ನು ಒಳಗೊಂಡ ನ್ಯಾಯಪೀಠವು ಗುರುವಾರ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲಿಬಾಗ್‌ ನ್ಯಾಯಾಲಯದಲ್ಲೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಅರ್ನಬ್‌ ಪರ ವಕೀಲ ಆಬಾದ್ ಪೊಂಡಾ ತಿಳಿಸಿದ್ದಾರೆ.

‘ಬಂಧನ: ಮೇಲ್ನೋಟಕ್ಕೆ ಕಾನೂನು ಬಾಹಿರ’

‘ಅರ್ನಬ್‌ ಗೋಸ್ವಾಮಿ ಅವರ ಬಂಧನ ಮೇಲ್ನೋಟಕ್ಕೆ ಕಾನೂನು ಬಾಹಿರದ್ದಂತೆ ತೋರುತ್ತಿದೆ’ ಎಂದು ಅಲಿಬಾಗ್‌ ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಅರ್ನಬ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಲು ನಿರಾಕರಿಸಿದೆ.

ಮೃತರು ಮತ್ತು ಆರೋಪಿಗಳ ನಡುವಿನ ಸಂಬಂಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಸುನೈನಾ ಪಿಂಗಲ್‌ ತಿಳಿಸಿದ್ದಾರೆ.

ಮುಂಬೈನಲ್ಲಿರುವ ಅರ್ನಬ್‌ ಅವರ ನಿವಾಸದಲ್ಲಿ ಕಳೆದ ಬುಧವಾರ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅಲಿಬಾಗ್‌ ನ್ಯಾಯಾಲಯವು ಗೋಸ್ವಾಮಿ ಅವರನ್ನು ನವೆಂಬರ್‌ 18ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಕೋವಿಡ್‌ ಕೇಂದ್ರದಲ್ಲಿ ಅರ್ನಬ್

ಅರ್ನಬ್‌ ಗೋಸ್ವಾಮಿ ಅವರು ಬುಧವಾರ ರಾತ್ರಿ ಅಲೀಭಾಗ್‌ ಜೈಲಿನ ಕೋವಿಡ್‌–19 ಕೇಂದ್ರವಾದ ಸ್ಥಳೀಯ ಶಾಲೆಯಲ್ಲಿ ರಾತ್ರಿ ಕಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ರಾತ್ರಿ ಗೋಸ್ವಾಮಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆರೋಗ್ಯ ತಪಾಸಣೆ ಬಳಿಕ ಅಲಿಭಾಗ್‌ ಜೈಲಿನ ಕೋವಿಡ್‌ –19 ಕೇಂದ್ರವಾದ ಅಲಿಬಾಗ್‌ ನಗರ ಪರಿಷತ್‌ ಶಾಲೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಫಿರೋಜ್‌ ಮಹಮ್ಮದ್‌ ಶೇಖ್‌ ಹಾಗೂ ನಿತೀಶ್‌ ಸರ್ದಾ ಅವರನ್ನೂ ನವೆಂಬರ್‌ 18ರವರೆಗೆ ಕೋರ್ಟ್‌ ನ್ಯಾಯಾಂಗ ವಶಕ್ಕೆ ನೀಡಿದೆ.

ಕ್ರಮಕ್ಕೆ ಆಗ್ರಹ:  ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್ ಅವರು ಗುರುವಾರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿಯಾಗಿ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ‌ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು