ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯನ್‌ ಖಾನ್‌ ಬಂಧನ: ಎನ್‌ಸಿಬಿ ತಂಡದಲ್ಲಿ ಹೊರಗಿನವರು- ಎನ್‌ಸಿಪಿ ಆರೋಪ

Last Updated 6 ಅಕ್ಟೋಬರ್ 2021, 18:13 IST
ಅಕ್ಷರ ಗಾತ್ರ

ಮುಂಬೈ: ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿ, ಡ್ರಗ್ಸ್‌ ಸೇವನೆ ಆರೋಪದ ಮೇಲೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಮತ್ತು ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್‌ನನ್ನು ವಶಕ್ಕೆ ತೆಗೆದುಕೊಂಡು ಕರೆದೊಯ್ದವರು ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆಗೆ (ಎನ್‌ಸಿಬಿ) ಸೇರಿದವರೇ ಅಲ್ಲ ಎಂದು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಬುಧವಾರ ಆರೋಪಿಸಿದೆ.

ಎನ್‌ಸಿಪಿ ವಕ್ತಾರ ಮತ್ತು ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್‌ ಮಲಿಕ್‌ ಈ ಆರೋಪ ಮಾಡಿದ್ದಾರೆ. ಅವರಿಬ್ಬರನ್ನು ಹಡಗಿನಿಂದ ಎನ್‌ಸಿಬಿ ಕಚೇರಿಗೆ ಕರೆದೊಯ್ದವರನ್ನು ಕೆ. ಪಿ. ಗೋಸವಿ ಮತ್ತು ಮನೀಶ್‌ ಭಾನುಶಾಹಿ ಎಂದು ಮಲಿಕ್‌ ಗುರುತಿಸಿದ್ದಾರೆ. ಆರ್ಯನ್‌ ಖಾನ್‌ನನ್ನು ಕರೆದುಕೊಂಡು ಹೋದವರು ಮತ್ತು ಎನ್‌ಸಿಬಿ ಕಚೇರಿಯಲ್ಲಿ ಆರ್ಯನ್‌ ಜೊತೆ ಸೆಲ್ಫಿ ತೆಗೆದುಕೊಂಡವರು ಗೋಸವಿ. ಮರ್ಚೆಂಟ್‌ನನ್ನು ಕರೆದುಕೊಂಡು ಹೋದವರು ಭಾನುಶಾಹಿ ಎಂದು ಅವರು ಹೇಳಿದ್ದಾರೆ.

ಗೋಸವಿ ಅವರು ಕೌಲಾಲಂಪುರದ ಖಾಸಗಿ ಪತ್ತೇದಾರಿ ಸಂಸ್ಥೆಯ ಉದ್ಯೋಗಿ. ಭಾನುಶಾಹಿಗೆ ಬಿಜೆಪಿ ಜೊತೆ ಸಂಪರ್ಕವಿದೆ ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರ ಜೊತೆಗೆ ಭಾನುಶಾಹಿ ಇರುವ ಹಲವಾರು ಫೋಟೊಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ.

ಆ ಇಬ್ಬರು ವ್ಯಕ್ತಿಗಳು ಯಾರು ಮತ್ತು ಹಡಗಿನ ಮೇಲಿನ ದಾಳಿ ವೇಳೆ ಅವರು ಏಕೆ ಇದ್ದರು? ಅವರಿಬ್ಬರ ಜೊತೆ ಬಿಜೆಪಿಗೆ ಇರುವ ಸಂಪರ್ಕ ಯಾವ ರೀತಿಯದ್ದು ಎಂದು ಬಿಜೆಪಿ ಮತ್ತು ಎನ್‌ಸಿಬಿ ಸ್ಪಷ್ಟಪಡಿಸಲಿ. ಇದೊಂದು ದುರುದ್ದೇಶಪೂರ್ವಕ ದಾಳಿ.ಇದೊಂದು ನಕಲಿ ಕಾರ್ಯಾಚರಣೆ ಎಂದು ಅವರು ಹೇಳಿದ್ದಾರೆ.

ಈ ಆರೋಪಗಳಿಗೆ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕರಾದ ಸಮೀರ್‌ ವಾಂಖೆಡೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಮುಂದ್ರಾ ಪ್ರಕರಣ ಮರೆಮಾಚುವ ಯತ್ನ? ಕಾಂಗ್ರೆಸ್‌ ಆರೋಪ

ಮುಂದ್ರಾ ಬಂದರಿನಲ್ಲಿ ಭಾರಿ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾರ್ಡೀಲಿಯಾ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಲಾಗಿದೆಯೇ ಎಂಬ ಕುರಿತು ತಿಳಿದುಕೊಳ್ಳಬೇಕಿದೆ. ಇದಕ್ಕಾಗಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮಹಾರಾಷ್ಟ್ರದ ಮಹಾ ವಿಕಾಸ ಅಗಾಡಿ ನೇತೃತ್ವದ ಸರ್ಕಾರವನ್ನು ಕಾಂಗ್ರೆಸ್‌ ಒತ್ತಾಯಿಸಿದೆ.

ಡ್ರಗ್ಸ್‌ ಜಾಲದ ಜತೆಗೆ ಬಿಜೆಪಿಯ ಸಂಪರ್ಕವನ್ನು ಈ ಮೊದಲೂ ಗೋವಾದಲ್ಲಿ, ಸ್ಯಾಂಡಲ್‌ವುಡ್‌ ಡ್ರಗ್‌ ರಾಕೆಟ್‌ನಲ್ಲಿ ಮತ್ತು ಸುಶಾಂತ್‌ ಸಿಂಗ್‌ ರಜಪೂತ್‌ ಕೊಲೆ ಪ್ರಕರಣಗಳಲ್ಲಿ ನೋಡಿದ್ದೇವೆ. ಹಾಗಾಗಿ ಮುಂದ್ರಾ ಪ್ರಕರಣವನ್ನು ಮರೆ ಮಾಚಲು ಬಿಜೆಪಿ ಪ್ರಯತ್ನಿಸುತ್ತಿದೆಯೇ ಎಂದು ತಿಳಿಯಬೇಕು. ಇದು ದೇಶದ ವಿರುದ್ಧ ಮಾಡುತ್ತಿರುವ ಗಂಭೀರ ಸಂಚು ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ವಕ್ತಾರ ಸಚಿನ್‌ ಸಾವಂತ್ ಹೇಳಿದ್ದಾರೆ. ಜೊತೆಗೆ, ಸಚಿವ ನವಾಬ್‌ ಮಲಿಕ್‌ ಅವರು ಮಾಡಿರುವ ಆರೋಪಗಳ ಕುರಿತೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಎನ್‌ಸಿಬಿಯ ದಾಳಿಯಲ್ಲಿ ಹೊರಗಿನ ವ್ಯಕ್ತಿಗಳು ಹೇಗೆ ಪಾಲ್ಗೊಂಡರು. ಅವರಿಗೆ ಯಾವ ಅಧಿಕಾರ ಇದೆ. ಬಿಜೆಪಿಯ ಜತೆ ನಂಟು ಇರುವ ವ್ಯಕ್ತಿ ಮತ್ತು ಎನ್‌ಸಿಬಿ ಉದ್ಯೋಗಿ ಅಲ್ಲದ ಇನ್ನೊಬ್ಬ ವ್ಯಕ್ತಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಹೇಗೆ? ಅವರ ವಾಹನದ ಮೇಲೆ ‘ಪೊಲೀಸ್‌’ ಎಂದು ಏಕೆ ಬರೆದಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಮತ್ತು ಎನ್‌ಸಿಬಿಯಿಂದ ನಮಗೆ ಉತ್ತರ ಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು, ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು 3,000 ಕೇಜಿ ಅಫ್ಗನ್‌ ಹೆರಾಯಿನ್ಅನ್ನು ವಶಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT