ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ರಾಜಧಾನಿಯಲ್ಲಿ ಅಂತ್ಯಸಂಸ್ಕಾರಕ್ಕಾಗಿ 20 ತಾಸು ಸರದಿ!

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ನಿಂದಾಗಿ ಸಾವಿನ ಸಂಖ್ಯೆ ಏರಿಕೆ
Last Updated 27 ಏಪ್ರಿಲ್ 2021, 15:02 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಕೋವಿಡ್‌–19ನಿಂದಾಗಿ ಸಾವಿಗೀಡಾಗುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೃತರ ಅಂತ್ಯಕ್ರಿಯೆಗಾಗಿ ಸಂಬಂಧಿಕರು 20 ತಾಸುಗಳ ಕಾಲ ಸರದಿಯಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ.

ಕೋವಿಡ್‌–19 ದೆಹಲಿಯ ಚೈತನ್ಯ ಮತ್ತು ಆತ್ಮವನ್ನೇ ಅಲುಗಾಡಿಸುವಂತಾಗಿದೆ. ಇಲ್ಲಿನ ಸ್ಮಶಾನಗಳಲ್ಲಿ ಪ್ರವಾಹದೋಪಾದಿಯಲ್ಲಿ ಮೃತ ಶರೀರಗಳು ಬರುತ್ತಿದ್ದು, ಅವುಗಳ ಅಂತ್ಯಸಂಸ್ಕಾರವನ್ನು ನಡೆಸುವುದೇ ದೊಡ್ಡ ಸವಾಲಾಗಿದೆ.

‘ನನ್ನ ಜೀವನದಲ್ಲಿ ಹಿಂದೆಂದೂ ಇಂತಹ ಕೆಟ್ಟ ಪರಿಸ್ಥಿತಿಯನ್ನು ನಾನು ನೋಡಿಲ್ಲ. ಜನರು ತಮ್ಮ ಪ್ರೀತಿಪಾತ್ರರ ಮೃತದೇಹಗಳೊಂದಿಗೆ ಅಲೆದಾಡಿ, ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ. ದೆಹಲಿಯ ಬಹುತೇಕ ಎಲ್ಲಾ ಶವಾಗಾರಗಳು ಮೃತದೇಹಗಳಿಂದ ತುಂಬಿಹೋಗಿವೆ’ ಎಂದು ಮ್ಯಾಸ್ಸಿ ಫರ್ನಲ್ಸ್‌ನ ಮಾಲೀಕರಾದ ವಿನೀತಾ ಮ್ಯಾಸ್ಸಿ ವಿಷಾದ ವ್ಯಕ್ತಪಡಿಸುತ್ತಾರೆ.

ಅಧಿಕೃತ ಮಾಹಿತಿಗಳ ಪ್ರಕಾರ ದೆಹಲಿಯಲ್ಲಿ ಏಪ್ರಿಲ್‌ನಲ್ಲಿ 3,601 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕಳೆದ ಏಳು ದಿನಗಳಲ್ಲೇ 2,267 ಮಂದಿ ಕೋವಿಡ್‌–19ನಿಂದಾಗಿ ಸಾವನ್ನಪ್ಪಿದ್ದಾರೆ. ಫೆಬ್ರುವರಿಯಲ್ಲಿ 57, ಮಾರ್ಚ್‌ 117 ಮಂದಿ ಸಾವನ್ನಪ್ಪಿದ್ದರು.

ಕೋವಿಡ್ ಸೋಂಕಿಲ್ಲದೆ ಮರಣ ಹೊಂದಿದವರ ಸಂಬಂಧಿಕರ ರೋದನವೂ ಕಡಿಮೆಯೇನಿಲ್ಲ. ಒಂದೆಡೆ ಸಾಂಕ್ರಾಮಿಕ ರೋಗದಿಂದ ಜನರು ಸಾವನ್ನಪ್ಪುತ್ತಿದ್ದರೆ, ಮತ್ತೊಂದೆಡೆ ಸಹಜವಾಗಿಯೋ ಅಥವಾ ಇತರ ಕಾಯಿಲೆಗಳಿಂದಲೋ ಮರಣಕ್ಕೀಡಾಗುತ್ತಿರುವವರ ಅಂತ್ಯಸಂಸ್ಕಾರಕ್ಕೂ ಪಡಿಪಾಟಲು ಪಡುವ ಸ್ಥಿತಿ ದೆಹಲಿಯ ಜನರಿಗೆ ಎದುರಾಗಿದೆ.

ಪಶ್ಚಿಮ ದೆಹಲಿಯ ಅಶೋಕ ನಗರದ ಯುವ ಉದ್ಯಮಿ ಅಮನ್ ಅರೋರಾ ಅವರ ತಂದೆ ಎಂ.ಎಲ್. ಅರೋರಾ ಅವರಿಗೆ ಸೋಮವಾರ ಮಧ್ಯಾಹ್ನ ಹೃದಯಾಘಾತವಾಗಿತ್ತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದಾಗ ಆಸ್ಪತ್ರೆಯವರು ಕೋವಿಡ್ ನೆಗೆಟಿವ್ ವರದಿ ತರಲು ಸೂಚಿಸಿದರು.

‘ತಕ್ಷಣವೇ ಚಿಕಿತ್ಸೆ ಸಿಗದೇ ನನ್ನ ತಂದೆಯನ್ನು ಕಳೆದುಕೊಳ್ಳಬೇಕಾಯಿತು. ತಂದೆಯ ಅಂತ್ಯಸಂಸ್ಕಾರ ಮಾಡಲು ಸುಭಾಷ್‌ ನಗರದ ಸ್ಮಶಾನಕ್ಕೆ ತೆರಳಿದರೆ ಅಲ್ಲಿ ಮಂಗಳವಾರ ಬೆಳಿಗ್ಗೆಯ ತನಕ ಕಾಯಬೇಕು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು’ ಎಂದು ಅಮನ್ ಅರೋರಾ ಬೇಸರಿಸಿದರು.‌

ಅಲ್ಲಿನ ಸಿಬ್ಬಂದಿಗೆ ಮನವಿ ಮಾಡುವ ಬದಲು ಸರದಿಯಲ್ಲಿ ಕಾಯುವುದು ಅನಿವಾರ್ಯ ಎಂದು ಮನಗಂಡ ಬಳಿಕ ಅಮನ್, ತಂದೆಯ ಮೃತಶರೀರ ಕೆಡದಂತೆ ಇಡಲು ರೆಫ್ರಿಜರೇಟರ್ ಹೊಂದಿಸಿದರು.

‘ಸ್ಥಳಾವಕಾಶವಿಲ್ಲದಿದ್ದಾಗ ನಾನು ಏನು ಮಾಡಬಹುದಿತ್ತು? ನಾವು ಮೃತದೇಹವನ್ನು ಬಾಡಿಗೆ ಫ್ರಿಜರ್‌ನಲ್ಲಿಟ್ಟುಕೊಂಡು ಮಂಗಳವಾರ ಮುಂಜಾನೆ ಇಲ್ಲಿಗೆ ಬಂದಿದ್ದೇವೆ’ ಎಂದು ಅಮನ್ ತಿಳಿಸಿದರು.

‘ಆಸ್ಪತ್ರೆಗಳಲ್ಲಿ ನಿಮಗೆ ರೋಗಿಗಳಿಗೆ ಆಮ್ಲಜನಕ ಒದಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಶವಾಗಾರದಲ್ಲಾದರೂ ಸ್ವಲ್ಪ ಜಾಗವನ್ನು ಒದಗಿಸಿ. ಮೃತರು ಈ ಜಗತ್ತಿನಿಂದ ಆರಾಮವಾಗಿ ನಿರ್ಗಮಿಸಲು ಅನುಕೂಲ ಮಾಡಿಕೊಡಿ’ ಎಂದು ಅಂತ್ಯಸಂಸ್ಕಾರಕ್ಕೆ ಬಂದಿದ್ದ ದೆಹಲಿಯ ನಾಗರಿಕ ಮನ್ಮೀತ್ ಹೇಳಿದರು.

ನಿಯಮಗಳ ಪ್ರಕಾರ, ‘ಆಸ್ಪತ್ರೆಯಲ್ಲಿ ಕೋವಿಡ್‌–19ನಿಂದ ಯಾರಾದರೂ ಸತ್ತರೆ ಜಿಲ್ಲಾಡಳಿತವು ಶವದ ಅಂತ್ಯಸಂಸ್ಕಾರಕ್ಕಾಗಿ ವ್ಯಾನ್ ವ್ಯವಸ್ಥೆ ಮಾಡಬೇಕು. ಮೃತದೇಹವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಆಸ್ಪತ್ರೆಯ ಸಿಬ್ಬಂದಿ ನಿಯೋಜಿಸಬೇಕು. ಆದರೆ, ಈಗಿನ ಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ಈ ರೀತಿ ಸಿಬ್ಬಂದಿ ಒದಗಿಸುವುದು ಅಸಾಧ್ಯ. ಹಾಗಾಗಿ, ಸಂಬಂಧಿಕರು ತಮ್ಮ ವಾಹನಗಳಲ್ಲೇ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

‘ಸ್ಮಶಾನದ ಹೊರಗೆ ಆಂಬುಲೆನ್ಸ್‌ಗಳು, ಕಾರುಗಳು ಪಾರ್ಕಿಂಗ್ ಸ್ಥಳಕ್ಕಾಗಿ ಪರದಾಡಿದರೆ, ಸ್ಮಶಾನದೊಳಗೆ ಹೆಣ ಸುಡಲು ಸರದಿಗಾಗಿ ಕಾಯುವ ಸ್ಥಿತಿ. ಚಿತೆಯಲ್ಲಿನ ಕಟ್ಟಿಗೆ ತುಂಡುಗಳು ಸೀಳಿ ಶಬ್ದ ಹೊರಡಿಸುತ್ತಿರುವ ನಡುವೆಯೇ ಸ್ಮಶಾನದ ಸಿಬ್ಬಂದಿ ಸರದಿಯಲ್ಲಿ ನಿಂತಿರುವವರಿಗೆ ನಿಮ್ಮ ಹೆಣಗಳನ್ನು ಸಿದ್ಧಪಡಿಸಿಕೊಳ್ಳಿ’ ಎಂದು ಸೂಚನೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT