ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯುಕ್ತ ಅಶೋಕ್ ಲವಾಸ ರಾಜೀನಾಮೆ

Last Updated 18 ಆಗಸ್ಟ್ 2020, 18:31 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಆಯುಕ್ತ ಅಶೋಕ್‌ ಲವಾಸಾ ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಅವರು ಶೀಘ್ರದಲ್ಲೇ ಏಷ್ಯನ್‌ ಡೆವಲಪ್‌ಮೆಂಟ್‌‌ ಬ್ಯಾಂಕ್‌ನ(ಎಡಿಬಿ) ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯ ಸರದಿಯಲ್ಲಿ ಅಶೋಕ್‌ ಎರಡನೇ ಸ್ಥಾನದಲ್ಲಿದ್ದರು. ‘ರಾಷ್ಟ್ರಪತಿ ಭವನಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿರುವ ಅವರು, ಆಗಸ್ಟ್‌ 31ಕ್ಕೆ ತಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಫಿಲಿಪ್ಪಿನ್ಸ್‌ ಮೂಲದ ಎಡಿಬಿಗೆ ಕಳೆದ ತಿಂಗಳಷ್ಟೇ ಅವರನ್ನು ಉಪಾಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಅವರು ಎಡಿಬಿ ಸೇ‌ರ್ಪಡೆಗೊಳ್ಳಲಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

1980ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ಆಗಿರುವ ಅಶೋಕ್‌, ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.ಮುಖ್ಯ ಚುನಾವಣಾ ಆಯುಕ್ತರಾಗಿ ಅಶೋಕ್‌ ಅವರು ಅಧಿಕಾರ ಸ್ವೀಕರಿಸಿದ್ದರೆ 2022 ಅಕ್ಟೋಬರ್‌ನಲ್ಲಿ ಅವರು ನಿವೃತ್ತಿ ಹೊಂದುತ್ತಿದ್ದರು. ಸೇವಾ ಅವಧಿ ಪೂರ್ಣಗೊಳ್ಳುವ ಮೊದಲೇ ರಾಜೀನಾಮೆ ನೀಡಿದ ಎರಡನೇ ಚುನಾವಣಾ ಆಯುಕ್ತರು ಇವರಾಗಿದ್ದಾರೆ. ಹೇಗ್‌ನಲ್ಲಿ ಇರುವ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ನೇಮಕ ಹೊಂದಿದ್ದ ಕಾರಣ, 1973ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ನಾಗೇಂದ್ರ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸುನಿಲ್‌ ಅರೋರ ಅವರ ಬಳಿಕ ಸುಶೀಲ್‌ ಚಂದ್ರ ಮುಖ್ಯ ಚುನಾವಣಾ ಆಯುಕ್ತರ ಹುದ್ದೆ ವಹಿಸಲಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ವಿವಾದ
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಕೇಳಿ ಬಂದಿದ್ದ ನೀತಿಸಂಹಿತೆ ಉಲ್ಲಂಘನೆ ಆರೋಪಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಈ ಕುರಿತು ಆಯೋಗದ ನಿಲುವಿಗೆ ಅಶೋಕ್‌ ಭಿನ್ನಾಭಿಪ್ರಾಯ ಹೊಂದಿದ್ದರು.

ಲವಾಸಾ ಅವರ ಪತ್ನಿ ಸೇರಿದಂತೆ ಕುಟುಂಬದ ಮೂವರು ಸದಸ್ಯರು ಆಸ್ತಿ ಘೋಷಣೆ ಮಾಡಿಲ್ಲ ಎನ್ನುವ ಆರೋಪಗಳಿದ್ದು, ಆದಾಯ ತೆರಿಗೆ ಇಲಾಖೆ ಈ ಕುರಿತು ಪರಿಶೀಲನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT